ಯೆಮೆನ್‌ನಲ್ಲಿ ಜು.16ಕ್ಕೆ ಮರಣದಂಡನೆಗೆ ಗುರಿಯಾಗಿದ್ದ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಗಲ್ಲುಶಿಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಭಾರತ ಸರ್ಕಾರದ ಮಧ್ಯಪ್ರವೇಶ ಮತ್ತು ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ ಈ ಬೆಳವಣಿಗೆ ನಡೆದಿದೆ. ನಿಮಿಷಾ ಪ್ರಿಯಾ ಉಳಿಸುವ ಪ್ರಯತ್ನ ಮುಂದುವರೆದಿದೆ.

ನವದೆಹಲಿ (ಜು.15): ‘ಯೆಮೆನ್‌ನಲ್ಲಿ ಜು.16ರಂದು ಗಲ್ಲುಶಿಕ್ಷೆಗೆ ಗುರಿಯಾಗಲಿದ್ದ ಕೇರಳ ಮೂಲದ ನರ್ಸ್‌ ನಿಮಿಷ ಪ್ರಿಯಾ ಮರಣದಂಡನೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ. ಈ ಮೂಲಕ ಮಲೆಯಾಳಿ ನರ್ಸ್ ಅನ್ನು ಉಳಿಸುವುದಕ್ಕೆ ಮಾಡಿದ ಪ್ರಯತ್ನಗಳು ಕೊನೆಗೂ ಫಲಿಸಿದಂತಾಗಿದೆ. ಮುಂದಿನ ಮಾತುಕತೆವರೆಗೂ ನರ್ಸ್ ನಿಮಿಷಾ ಪ್ರಿಯಾ ಜೀವಂತವಾಗಿ ಇರುತ್ತಾಳೆ ಎಂಬ ಧೈರ್ಯ ಆಕೆಯ ಕುಟುಂಬಸ್ಥರಿಗೆ ಬಂದಿದೆ.

ಯೆಮೆನ್ ಪ್ರಜೆಯನ್ನು ಕೊಲೆ ಮಾಡಿದ ಆರೋಪದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿ ಅದೇ ದೇಶದ ಜೈಲಿನಲ್ಲಿದ್ದ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಪ್ರಕರಣ ಭಾರತಕ್ಕೆ ಒಂದು ಸವಾಲಾಗಿತ್ತು. ಜಾಗತಿಕ ಮಟ್ಟದಲ್ಲಿ ಯಾವುದೇ ದೇಶದಲ್ಲಿರದ ವಿಶೇಷ ರಾಜತಾಂತ್ರಿಕ ವ್ಯವಸ್ಥೆಯನ್ನು ಹೊಂದಿದ್ದ ಹಾಗೂ ವಿಭಿನ್ನ ನ್ಯಾಯಾಲಯ ವ್ಯವಸ್ಥೆ ಹೊಂದಿದ ಯೆಮೆನ್ ದೇಶದೊಂದಿಗೆ ಭಾರತದ ನರ್ಸ್ ನಿಮಿಷಾ ಪ್ರಿಯಾಳನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿತ್ತು. ಈ ಬಗ್ಗೆ ವಿಚಾರಣೆ ಮಾಡಿದ್ದ ಕೋರ್ಟ್ ಕೂಡ ವಿಚಾರಣೆಯನ್ನು ಜು.18ರ ಶುಕ್ರವಾರಕ್ಕೆ ಮುಂದೂಡಿಕೆ ಮಾಡಿತ್ತು. ನಾಳೆ ಜು.16ಕ್ಕೆ ಗಲ್ಲು ಶಿಕ್ಷೆ ಆಗುತ್ತದೆ ಎಂಬ ಆತಂಕದಲ್ಲಿದ್ದ ನಿಮಿಷಾ ಪ್ರಿಯಾ ಕುಟುಂಬಸ್ಥರಿಗೆ ಇದೀಗ ಯೆಮೆನ್ ರಾಷ್ಟ್ರ ಗಲ್ಲುಶಿಕ್ಷೆ ಮುಂದೂಡಿಕೆ ಮಾಡಿರುವುದು ನಿಟ್ಟುಸಿರು ಬಿಡಲು ಕಾರಣವಾಗಿದೆ.

ನಮ್ಮಿಂದೇನೂ ಮಾಡಲು ಸಾಧ್ಯವಿಲ್ಲ ಎಂದಿದ್ದ ಸರ್ಕಾರ:

ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಹೆಚ್ಚಿನ ಅಧಿಕಾರ ಇಲ್ಲ. ಆದರೂ ಆಕೆಯ ಉಳಿವಿಗೆ ಸಾಧ್ಯವಾದ ಎಲ್ಲ ಗರಿಷ್ಠ ಪ್ರಯತ್ನ ಮಾಡಲಾಗುತ್ತಿದೆ. ಪ್ರಕರಣದ ಸಂತ್ರಸ್ತ ಕುಟುಂಬಕ್ಕೆ ಬ್ಲಡ್‌ ಮನಿ ನೀಡುವುದೊಂದೇ ಸದ್ಯಕ್ಕೆ ಆಕೆಯನ್ನು ಉಳಿಸಬಲ್ಲ ದಾರಿ ’ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಅಲ್ಲದೆ, ಇದೊಂದು ತೀರಾ ಸೂಕ್ಷ್ಮ ವಿಚಾರವಾಗಿದ್ದು, ಸರ್ಕಾರದ ಮುಂದಿರುವ ರಾಜತಾಂತ್ರಿಕ ಆಯ್ಕೆಗಳೂ ತೀರಾ ಕಡಿಮೆ ಎಂದು ತಿಳಿಸಿದೆ. ಇದನ್ನು ಪರಿಗಣಿಸಿದ ಕೋರ್ಟ್‌, ಕೈಗೊಮಡ ಕ್ರಮಗಳ ಬಗ್ಗೆ ಜು.18ಕ್ಕೆ ಮಾಹಿತಿ ನೀಡಲು ಸೂಚಿಸಿ ವಿಚಾರಣೆ ಮುಂದೂಡಿದೆ.

ಯೆಮೆನ್‌ ಪ್ರಜೆ ಹತ್ಯೆ ಪ್ರಕರಣದಲ್ಲಿ ಕೇರಳ ಮೂಲದ ನರ್ಸ್‌ ನಿಮಿಷ ಪ್ರಿಯಾರನ್ನು ಜು.16ರಂದು ಗಲ್ಲಿಗೇರಿಸಲು ಅಲ್ಲಿ ನಿರ್ಧರಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ಆಗ್ರಹಿಸಿ ಹಿರಿಯ ವಕೀಲ ರಜೆಂತ್‌ ಬಸಂತ್‌ ಅವರು ಸೇವ್‌ ನಿಮಿಷ ಪ್ರಿಯಾ ಆ್ಯಕ್ಷನ್‌ ಕೌನ್ಸಿಲ್‌ ಪರವಾಗಿ ಅರ್ಜಿ ಸಲ್ಲಿಸಿದ್ದರು.

ಸೋಮವಾರ ಇದರ ವಿಚಾರಣೆ ವೇಳೆ ವಾದ ಮಂಡಿಸಿದ ಕೇಂದ್ರ ಸರ್ಕಾರದ ವಕೀಲರು, ‘ಯೆಮೆನ್‌ನಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ಅವಕಾಶ ಇಲ್ಲ. ಸರ್ಕಾರವು ಯೆಮೆನ್‌ನ ಅಧಿಕಾರಿಗಳ ಜತೆಗೆ ನಾವು ಸಂಪರ್ಕದಲ್ಲಿದ್ದೇವೆ. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೂಡ ಸಂಪರ್ಕದಲ್ಲಿದ್ದಾರೆ. ಮಾತುಕತೆ ನಡೆಯುತ್ತಿರುವ ಈ ಹಂತದಲ್ಲಿ ನಿಮಿಷಾ ಪ್ರಿಯಾ ಅವರಿಗೆ ನೀಡಲಾಗಿರುವ ಗಲ್ಲು ಶಿಕ್ಷೆಯ ಜಾರಿ ಮುಂದೂಡಲು ಯತ್ನಿಸಲಾಗುತ್ತಿದೆ’ ಎಂದರು.

‘ನಿಮಿಷ ಪ್ರಿಯಾರನ್ನು ಉಳಿಸುವ ಏಕೈಕ ಮಾರ್ಗವೆಂದರೆ ಬ್ಲಡ್‌ ಮನಿ ಅಂದರೆ ಹಣ ನೀಡಿ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವುದಷ್ಟೇ ಆಗಿದೆ. ಪ್ರಕರಣದಲ್ಲಿ ಮೃತ ಯೆಮೆನ್ ಪ್ರಜೆಯ ಕುಟುಂಬ ಹಣ ಪಡೆಯಲು ಸಿದ್ಧವಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ವಸ್ತುಸ್ಥಿತಿ ಕಾಯ್ದುಕೊಳ್ಳುವಂತೆ ಅಲ್ಲಿನ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ’ ಎಂದು ಪೀಠಕ್ಕೆ ತಿಳಿಸಲಾಯಿತು. ಆ ಬಳಿಕ ಪೀಠವು ಮುಂದಿನ ವಿಚಾರಣೆಯನ್ನು ಜು.18ಕ್ಕೆ ನಿಗದಿ ಮಾಡಿತು.