ಯಾಸ್ ಚಂಡಮಾರುತ; 1,000 ಕೋಟಿ ರೂ. ತುರ್ತು ಪರಿಹಾರ ಘೋಷಿಸಿದ ಪ್ರಧಾನಿ ಮೋದಿ!
- ಯಾಸ್ ಚಂಡಮಾರುತ್ತೆ ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ತತ್ತರ
- ಹಾನಿಗೊಳಗಾದ ಪ್ರದೇಶಗಳಲ್ಲಿ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ
- ತುರ್ತು ಪರಿಹಾರವಾಗಿ 1,000 ಕೋಟಿ ರೂಪಾಯಿ ಘೋಷಣೆ
ನವದೆಹಲಿ(ಮೇ.28): ಯಾಸ್ ಚಂಡಮಾರುತಕ್ಕೆ ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್ ರಾಜ್ಯಗಳು ತೀವ್ರವಾಗಿ ನಷ್ಟ ಅನುಭವಿಸಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳ, ಒಡಿಶಾಗೆ ತೆರಳಿ ಚಂಡಮಾರುತಕ್ಕೆ ಹಾನಿಗೊಳಗಾದ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಬಳಿಕ ತುರ್ತು ಪರಿಹಾರಕ್ಕೆ 1,000 ಕೋಟಿ ರೂಪಾಯಿ ರೂಪಾಯಿ ಘೋಷಿಸಿದ್ದಾರೆ.
ಯಾಸ್ ಆರ್ಭಟ ಆರಂಭ: ಒಡಿಶಾ, ಬಂಗಾಳದಲ್ಲಿ ಭಾರೀ ಗಾಳಿ, ಮಳೆ!.
ಯಾಸ್ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಲ್ಲಿ ತಕ್ಷಣದ ಪರಿಹಾರ ಕಾರ್ಯಕ್ಕೆ ಪ್ರಧಾನಿ ಮೋದಿ ಈ ಹಣ ಬಿಡುಗಡೆ ಮಾಡಿದ್ದಾರೆ. ಒಡಿಶಾಗೆ 500 ಕೋಟಿ ರೂಪಾಯಿ ಹಾಗೂ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳಿಗೆ ತಲಾ 250 ಕೋಟಿ ರೂಪಾಯಿಯಂತೆ ಒಟ್ಟು 1,000 ಕೋಟಿ ರೂಪಾಯಿ ತುರ್ತು ಪರಿಹಾರ ಘೋಷಣೆ ಮಾಡಿದ್ದಾರೆ.
ಮೂರು ರಾಜ್ಯಗಳಲ್ಲಿ ಚಂಡಮಾರುತದಿಂದ ಉಂಟಾದ ಹಾನಿ ಹಾಗೂ ನಷ್ಟ ಪರಿಹಾರಕ್ಕಾಗಿ ಕೇಂದ್ರದ ತಂಡ ಭೇಟಿ ನೀಡಲಿದೆ. ಈ ತಂಡದ ವರದಿ ಆಧಾರದಲ್ಲಿ ಹೆಚ್ಚಿನ ಪರಿಹಾರ ನೀಡಲಿದೆ. ಬಂಗಾಳ, ಒಡಿಶಾ ಹಾಗೂ ಜಾರ್ಖಂಡ್ ರಾಜ್ಯಗಳ ಜೊತೆ ಕೇಂದ್ರ ನಿಕಟ ಸಂಪರ್ಕದಲ್ಲಿದೆ. ಎಲ್ಲಾ ನೆರವು ನೀಡಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ.
ಯಾಸ್ ರುದ್ರ ನರ್ತನ: ಹಾರಿ ಹೋಯ್ತು ಮನೆ ಛಾವಣಿ, ಹಳ್ಳಿಗಳೆಲ್ಲಾ ಸಮುದ್ರಮಯ!
ಚಂಡಮಾರುತದಿಂದ ಸಾವನ್ನಪ್ಪಿದ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50,000 ರೂಪಾಯಿ ನೀಡುವುದಾಗಿ ಮೋದಿ ಘೋಷಿಸಿದ್ದಾರೆ. ಮುಂದಿನ ತಿಂಗಳು ಕೇಂದ್ರದ ಪರಿಹಾಣ ಹಣ ಕುಟುಂಬಗಳಿಗೆ ತಲುಪಲಿದೆ.
ಪಶ್ಚಿಮ ಬಂಗಾಳದಲ್ಲಿ ಮೋದಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೇರೆ ಬೇರೆಯಾಗಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಇತ್ತ ಒಡಿಶಾದಲ್ಲಿ ಸಿಎಂ ನವೀನ್ ಪಟ್ನಾಯಕ್ ಜೊತೆ ಸೇರಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಎರಡೂ ರಾಜ್ಯಗಳಲ್ಲಿ ವೈಮಾನಿಕ ಸಮೀಕ್ಷೆ ಮೊದಲು ಸ್ಥಿತಿಗತಿ ಸಭೆ ನಡೆಸಿದ್ದಾರೆ.