ವಿಶ್ವದ 20 ಅತಿ ಕಲುಷಿತ ನಗರಗಳ ಪೈಕಿ 13 ಭಾರತದಲ್ಲಿವೆ. ಅಸ್ಸಾಂನ ಬರ್ನಿಹಾಟ್ ಮೊದಲ ಸ್ಥಾನದಲ್ಲಿದ್ದು, ದೆಹಲಿ ನಂತರದ ಸ್ಥಾನದಲ್ಲಿದೆ. ವಾಯು ಗುಣಮಟ್ಟದ ಬಗ್ಗೆ ಸ್ವಿಜರ್ಲೆಂಡ್‌ನ ಐಕ್ಯು ಏರ್ ವರದಿ ಬಿಡುಗಡೆ ಮಾಡಿದೆ.
ನವದೆಹಲಿ (ಮಾ.12): ವಿಶ್ವದ 20 ಅತಿ ಕಲುಷಿತ (ವಾಯುಮಾಲಿನ್ಯದಲ್ಲಿ) ನಗರಗಳ ಪೈಕಿ 13 ನಗರಗಳು ಭಾರತದಲ್ಲೇ ಇದ್ದು, ತುಂಬಾ ಖಾರ್ಖಾನೆಗಳು ಇರುವ ಅಸ್ಸಾಂನ ಬರ್ನಿಹಾಟ್ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ನಂತರದ ಸ್ಥಾನವನ್ನು ದೆಹಲಿ ಪಡೆದಿದೆ. ಸ್ವಿಜರ್ಲೆಂಡ್‌ನ ವಾಯು ಗುಣಮಟ್ಟ ತಂತ್ರಜ್ಞಾನ ಕಂಪನಿ ಐಕ್ಯು ಏರ್ ಬಿಡುಗಡೆ ಮಾಡಿದ ವಿಶ್ವ ವಾಯು ಗಣಮಟ್ಟ ವರದಿ 2024ರಲ್ಲಿ ಈ ಮಾಹಿತಿ ಬಹಿರಂಗವಾಗಿದೆ.ಅಸ್ಸಾಂನ ಬರ್ನಿಹಾಟ್, ದೆಹಲಿ ಮೊದಲ 2 ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಪಂಜಾಬ್‌ನ ಮುಲ್ಲನ್‌ಪುರ್, ಫರೀದಾಬಾದ್, ಲೋನಿ, ಗುರುಗ್ರಾಮ, ಗಂಗಾನಗರ, ಗ್ರೇಟರ್ ನೋಯ್ಡಾ, ಭಿವಾಡಿ, ಮುಜಫ್ಫರ್‌ನಗರ, ಹನುಮಾನ್‌ಗಢ, ನೋಯ್ಡಾ ಇವೆ. ಉಳಿದಂತೆ ನೆರೆಯ ಪಾಕಿಸ್ತಾನದ 4 ಹಾಗೂ ಚೀನಾದ 1 ನಗರ ಟಾಪ್ 20 ನಗರಗಳಲ್ಲಿ ಸ್ಥಾನ ಪಡೆದಿವೆ.
ಮಲಿನ ರಾಜಧಾನಿ- ದಿಲ್ಲಿ ನಂ.1: ದೆಹಲಿಯಲ್ಲಿ 2023ರಲ್ಲಿ 102.4 ಇದ್ದ ಪಿಎಂ2.5, 2024ರಲ್ಲಿ 108.3ಕ್ಕೇ ಏರಿಕೆಯಾಗಿದ್ದು, ಅದು ವಿಶ್ವದ ಅತಿ ಮಲಿನ ರಾಜಧಾನಿಯಾಗಿಯೇ ಮುಂದುವರೆದಿದೆ. ಇದಕ್ಕೆ ಮುಖ್ಯ ಕಾರಣ, ವಾಹನಗಳ ಹೊರಸೂಸುವಿಕೆ, ಕೃಷಿ ತ್ಯಾಜ್ಯ ಸುಡುವಿಕೆ, ಪಟಾಕಿ ಹಾಗೂ ಅನ್ಯ ಮಾಲಿನ್ಯಕಾರಕ ಚಟುವಟಿಕೆಗಳು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಗಾಳಿಯಲ್ಲಿ 5 ಮೈಕ್ರೋಗ್ರಾಂಗಳಷ್ಟು ಪಿಎಂ2.5 ಇದ್ದರೆ ಸೂಕ್ತ ಎನ್ನಲಾಗಿದ್ದು, ಭಾರತದ ಶೇ.35 ನಗರಗಳು ಇದಕ್ಕಿಂತ 10 ಪಟ್ಟು ಹೆಚ್ಚು ಪಿಎಂ2.5 ಹೊಂದಿವೆ.
ಈ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್, ‘ಭಾರತ ವಾಯು ಗುಣಮಟ್ಟದ ಡೇಟಾ ಸಂಗ್ರಹಣೆಯಲ್ಲಿ ಪ್ರಗತಿ ಸಾಧಿಸಿದರೂ, ಅದನ್ನು ನಿವಾರಿಸಲು ಕ್ರಮದ ಕೊರತೆಯಿದೆ. ಇದಕ್ಕೆ ಪ್ರೋತ್ಸಾಹ ಮತ್ತು ದಂಡ, ಎರಡೂ ಅಗತ್ಯ’ ಎಂದಿದ್ದಾರೆ.
ಭಾರತದ ಅತಿ ಮಲಿನ ನಗರಗಳು: ಅಸ್ಸಾಂನ ಬರ್ನಿಹಾಟ್, ದೆಹಲಿ, ಪಂಜಾಬ್‌ನ ಮುಲ್ಲನ್‌ಪುರ್, ಫರೀದಾಬಾದ್, ಲೋನಿ, ಗುರುಗ್ರಾಮ, ಗಂಗಾನಗರ, ಗ್ರೇಟರ್ ನೋಯ್ಡಾ, ಭಿವಾಡಿ, ಮುಝಾಪರ್‌ನಗರ, ಹನುಮಾನ್‌ಗಢ, ನೋಯ್ಡಾ
ವಿಶ್ವದ ಕಲುಷಿತ ಗಾಳಿ ದೇಶಗಳ ಪೈಕಿ ಭಾರತಕ್ಕೆ 5ನೇ ಸ್ಥಾನ; ದೆಹಲಿಗೆ ಎಷ್ಟನೇ ಸ್ಥಾನ?
ಮಲಿನ ದೇಶ: ಭಾರತ ನಂ.5: 2023ರಲ್ಲಿ ವಿಶ್ವದ 3ನೇ ಮಲಿನ ದೇಶವಾದ್ದ ಭಾರತದ ಪರಿಸ್ಥಿತಿ ಕೊಂಚ ಸುಧಾರಿಸಿದ್ದು, 2024ರಲ್ಲಿ 5ನೇ ಸ್ಥಾನಕ್ಕೆ ಇಳಿದಿದೆ. ಕಾರಣ, 2023ರಲ್ಲಿ ಗಾಳಿಯಲ್ಲಿ 2.5 ಮೈಕ್ರೋಮೀಟರ್ ಗಾತ್ರದ ಕಣಗಳು(ಪಿಎಂ2.5) ಪ್ರತಿ ಘನ ಮೀಟರ್‌ಗೆ 54.4 ಇದ್ದು, ಅದು 2024ರಲ್ಲಿ ಶೇ7ರಷ್ಟು(50.6) ಕಡಿಮೆ ಆಗಿವೆ.
ದೆಹಲಿಯಲ್ಲಿ 15ವರ್ಷ ಹಳೆಯ ವಾಹನಗಳಿಗೆ ಬ್ರೇಕ್, ಮಾಲಿನ್ಯ ತಡೆಯಲು ನೂತನ ಸರ್ಕಾರದ ಖಡಕ್ ರೂಲ್ಸ್
