ಬೀದಿನಾಯಿಗಳ ಭಯದಿಂದ ಯುವತಿಯೊಬ್ಬಳು ಕೇವಲ 180 ಮೀಟರ್ ದೂರಕ್ಕೆ ಓಲಾ ಬೈಕ್ ಬುಕ್ ಮಾಡಿದ್ದಾಳೆ. ಈ ವಿಚಾರವನ್ನು ಓಲಾ ಚಾಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.
ಬೀದಿನಾಯಿಗಳ ಹಾವಳಿ ಅಷ್ಟಿಷ್ಟಲ್ಲ, ಕೆಲವೊಮ್ಮ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಹೋಗಿ ಮನುಷ್ಯರ ಜೀವ ಹೋಗಿದ್ದು, ಇದೆ. ವಾಹನಕ್ಕೆ ಅಡ್ಡ ಬಂದ ನಾಯಿಯನ್ನು ಉಳಿಸಲು ಹೋಗಿ ಬೈಕ್ ಸವಾರರು ಸಾವನಪ್ಪಿದ ಹಲವು ಘಟನೆಗಳು ಈ ಹಿಂದೆ ಜರುಗಿವೆ. ಕೆಲವು ಬೀದಿ ನಾಯಿಗಳಿಗೆ ನೀವು ಏನೋ ಮಾಡಬೇಕು ಎಂದೇನಿಲ್ಲ, ಸುಮ್ಮನೇ ಸಾಗುತ್ತಿರುವಾಗ ಹಿಂದಿನಿಂದ ಓಡಿಸಿಕೊಂಡು ಬಂದು ದಾಳಿ ಮಾಡಿ ಬಿಡುತ್ತವೆ. ಇದರಿಂದ ಕೆಲವು ರಸ್ತೆಗಳಲ್ಲಿ ರಸ್ತೆಗಿಳಿಯುವುದೇ ಭಯ ಎನಿಸುತ್ತದೆ. ಪುಟ್ಟ ಮಕ್ಕಳು ಶಾಲೆಗೆ ಹೋಗುವ ಮಕ್ಕಳು ಇರುವಂತಹ ಗಲ್ಲಿಗಳಲ್ಲಿ ಈ ರೀತಿ ಬೀದಿ ನಾಯಿಗಳ ಹಾವಳಿಗಳಿದ್ದರೆ ಪೋಷಕರು ಮಕ್ಕಳು ಶಾಲೆಯಿಂದ ಬರುವವರೆಗೆ ಚಿಂತೆ ಇಂದ ಕಾಯುವಂತಹ ಸ್ಥಿತಿ ಇರುತ್ತದೆ. ಇಂತಹ ಪರಿಸ್ಥಿತಿ ಹಲವು ಸ್ಥಳಗಳಲ್ಲಿ ಇವೆ. ಆದರೆ ಇಲ್ಲೊಬ್ಬಳು ಯುವತಿ ಬೀದಿ ನಾಯಿಯ ಹಾವಳಿಯಿಂದ ಪಾರಾಗಲು ಹೊಸ ಉಪಾಯ ಕಂಡುಕೊಂಡಿದ್ದಾಳೆ. ಅದೇನು ಅಂತ ನೋಡೋಣ ಬನ್ನಿ.
ಯುವತಿಯೊಬ್ಬಳು ಈ ಬೀದಿನಾಯಿಗಳ ಹಾವಳಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಓಲಾ ಬುಕ್ ಮಾಡಿದ್ದಾಳೆ. ಈ ವಿಚಾರವನ್ನು ಸ್ವತಃ ವ್ಲಾಗರ್ ಆಗಿರುವ ಓಲಾ ಡ್ರೈವರ್ ಒಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೀಡಿಯೋ ಸಖತ್ ವೈರಲ್ ಆಗಿದೆ. ಅಲ್ಲದೇ ಜನರು ಕೂ ಯುವತಿಯ ಈ ಎಕ್ಟ್ರಾರ್ಡಿನರಿ ತಂತ್ರಕ್ಕೆ ಮನಸೋತಿದ್ದು, ಹಲವು ಕಾಮೆಂಟ್ ಮಾಡಿದ್ದಾರೆ. ರೋಹಿತ್ ವ್ಲಾಗ್‌ಸ್ಟರ್ ಎಂಬ ಇನ್ಸ್ಟಾ ಖಾತೆಯಿಂದ ಈ ವೀಡಿಯೋ ಪೋಸ್ಟ್ ಆಗಿದೆ. ಕೇವಲ 180 ಮೀಟರ್ ದೂರ ಸಾಗಲು ಯುವತಿ ಓಲಾ ಬೈಕ್ ಬುಕ್ ಮಾಡಿದ್ದಾಳೆ.
ವೀಡಿಯೋದಲ್ಲಿ ಕಾಣಿಸುವಂತೆ ಬೈಕ್ ರೈಡರ್ ಕೇವಲ 180 ಕಿಲೋ ಮೀಟರ್ ದೂರ ಸಾಗಲು ಓಲಾ ಬುಕ್ ಮಾಡಿದ್ರಲ್ಲ ಎಂದು ಕೇಳುತ್ತಾನೆ. ಅದಕ್ಕೆ ಆ ಯುವತಿ ಪಕ್ಕದ ಬೀದಿಯಲ್ಲಿ ಬೀದಿ ನಾಯಿ ಇದೆ ಅವುಗಳನ್ನು ದಾಟಿ ಹೋಗಲಾಗದು. ಇದಕ್ಕಾಗಿ ಇಷ್ಟು ಹತ್ತಿರಕ್ಕೆ ಓಲಾ ಗಾಡಿ ಬುಕ್ ಮಾಡಿದ್ದಾಗಿ ಆಕೆ ಹೇಳಿದ್ದಾರೆ. ನಂತರ ಓಲಾ ರೈಡರ್ ಆಕೆಯನ್ನು ಆಕೆಯ ಪ್ರದೇಶಕ್ಕೆ ಬಿಟ್ಟು ಹೋಗಿದ್ದು, ಈ ರೈಡ್‌ಗೆ 19 ರೂಪಾಯಿ ಬಿಲ್ ಆಗಿದೆ.
ನಾಯಿ ಕಚ್ಚಿಸಿಕೊಂಡು ಇಂಜೆಕ್ಷನ್ ಪಡೆಯುವುದಕ್ಕಿಂತ ಇದು ಬೆಸ್ಟ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದರ ಬದಲು ನೀವು 10 ರೂಪಾಯಿ ಬಿಸ್ಕೆಟ್ ನೀಡಿದ್ದರೆ ಅವು ಜೆಡ್ ಪ್ಲಸ್ ಭದ್ರತೆ ಒದಗಿಸುತ್ತಿದ್ದವರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಕೂಡ ಕೆಲವೊಮ್ಮೆ ಹೀಗೆ ಮಾಡುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆಕೆಯ ಭಯ ಏನು ಎಂಬುದು ನನಗೆ ಅರ್ಥವಾಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾಯಿ ನನ್ನನ್ನು ಆಗಾಗ ಓಡಿಸಿಕೊಂಡು ಬರುತ್ತದೆ. ನಾನು ಕೂಡ ಮುಂದೆ ಹೀಗೆಯೇ ಮಾಡುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಗರ ಪ್ರದೇಶದಲ್ಲಿ ಹೀಗೆ ಮಾಡಬಹುದು. ಆದರೆ ಹಳ್ಳಿ ಕಡೆ ಏನು ಮಾಡುವುದು ಎಂದು ಒಬ್ಬರು ಕೇಳಿದ್ದಾರೆ. ಮತ್ತೊಬ್ಬರು ಇದೊಂದು 19 ರೂಪಾಯಿಯ ಜೀವವಿಮಾ ಯೋಜನೆ ಎಂದು ತಮಾಷೆ ಮಾಡಿದ್ದಾರೆ.
