ದೆಹಲಿ ಮೆಟ್ರೋದಲ್ಲಿ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ. ನಿದ್ದೆಯಲ್ಲಿದ್ದ ಯುವಕನಿಗೆ ಮಹಿಳೆಯೊಬ್ಬರು ಆಸರೆಯಾಗಿ ನಿಂತಿದ್ದಾರೆ. ಈ ದೃಶ್ಯವನ್ನು ಪ್ರಯಾಣಿಕರು ಸೆರೆಹಿಡಿದಿದ್ದಾರೆ. ಕೆಲವರು ಇದನ್ನು ತಾಯ್ತನದ ಗುಣವೆಂದರೆ, ಮತ್ತೆ ಕೆಲವರು ಬೇಕಂತಲೇ ಮಾಡಿದ ರೀಲ್ಸ್ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ, ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

ನೀವು ಸೋಶಿಯಲ್ ಮಿಡಿಯಾ ಬಳಕೆ ಮಾಡುವವರಾಗಿದ್ದರೆ ಒಮ್ಮೆಯಾದರೂ ಈ ವಿಡಿಯೋ ನೋಡಿರುತ್ತೀರಿ. ಈ ವಿಡಿಯೋದಲ್ಲಿ ನಿದ್ದೆ ಮಾಡುವ ಯುವಕನೇ ಪುಣ್ಯವಂತೆ ಎಂದುಕೊಂಡವರು ನೂರಕ್ಕೆ 80ಕ್ಕಿಂತ ಹೆಚ್ಚಿನ ಜನರಿದ್ದಾರೆ. ಇದೀಗ ಈ ವೈರಲ್ ವಿಡಿಯೋದ ಅಸಲಿಯತ್ತು ಹೊರಬಿದ್ದಿದೆ ನೋಡಿ...

ಈ ಘಟನೆ ನಡೆದಿರುವುದು ದೆಹಲಿ ಮೆಟ್ರೋದಲ್ಲಿ. ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದ ಯುವಕ ನಿದ್ದೆಯ ಮಂಪರಿನಲ್ಲಿರುತ್ತಾನೆ. ಯಾವುದೋ ಹಳ್ಳಿಯಿಂದ ಬಂದಿರುವ ಅಥವಾ ಮಧ್ಯಮ ವರ್ಗದ ಕುಟುಂಬದವನಂತೆ ಕಾಣುವ ಈ ಯುವಕ ಜನಸಂದಣಿ ಇರುವ ಮೆಟ್ರೋದಲ್ಲಿ ನಿದ್ದೆ ತಾಳಲಾರದೇ ತೂಕಡಿಸಲು ಮುಂದಾಗಿದ್ದಾನೆ. ಆಗ ಯುವಕನ ಮುಂದೆ ಸೀಟು ಸಿಗದೇ ನಿಂತಿದ್ದ ಯುವತಿಯೊಬ್ಬಳು ನಿದ್ರೆಯಲ್ಲಿ ತೂಕಡಿಸುತ್ತಾ ಮುಂದೆ ಬೀಳುತ್ತಿದ್ದ ಯುವಕನ ತಲೆಗೆ ಆಸರೆಯಾಗಿ ತನ್ನ ಸೊಂಟವನ್ನು ಒರಗಿಸಿಕೊಂಡು ನಿಲ್ಲುತ್ತಾಳೆ. ಇದು ಹೃದಯಸ್ಪರ್ಶಿ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಬೇಕಂತಲೇ ಇದನ್ನು ವಿಡಿಯೋ ಮಾಡಿ ವೈರಲ್ ಮಾಡಲಾಗಿದೆ ಎಂದು ಹೇಳಲಾಗುತ್ತದೆ. 

ಇನ್ನು ನಿದ್ದೆ ಮಾಡುವ ಯುವಕನ ತಲೆಯನ್ನು ತನ್ನ ಸೊಂಟದ ಮೇಲೆ ಒರಗಿಸಿಕೊಂಡರೂ, ನಂತರ ಮಹಿಳೆ ಅವನನ್ನು ಬೀಳದಂತೆ ನಿಧಾನವಾಗಿ ಹಿಡಿದು ಅವನ ತಲೆಯನ್ನು ಮೃದುವಾಗಿ ತಟ್ಟುತ್ತಾಳೆ. ಯುವಕನ ತಲೆಯನ್ನು ನೇವರಿಸುತ್ತಾ ಒಂದಷ್ಟು ನಿಮಿಷಗಳ ನಂತರ ಅವನ ತಲೆಯನ್ನು ಎತ್ತುತ್ತಾ ಎಚ್ಚರಿಸಲು ಮುಂದಾಗುತ್ತಾಳೆ. ಆಗ ಎಚ್ಚರಗೊಂಡ ಯುವಕ ಇವರನ್ನು ನೋಡಿ ನಿದ್ದೆಯಲ್ಲಿಯೇ ಸ್ವಲ್ಪ ಸಂಕೋಚಕ್ಕೆ ಒಳಗಾಗುತ್ತಾನೆ. ಆಗ ಮಹಿಳೆಯೇ ಅವನಿಗೆ ಸ್ಮೈಲ್ ಮಾಡಿದಾಗ ಪುಣ್ಯಕ್ಕೆ ತನ್ನಿಂದ ತಪ್ಪಾಗಿಲ್ಲ, ನನಗೆ ಧರ್ಮದೇಟು ಬೀಳುವುದಿಲ್ಲ ಎಂದು ನಿಟ್ಟುಸಿರು ಬಿಡುತ್ತಾ ಕ್ಷಮಿಸಿ ಎಂದು ಕೈ ಸನ್ನೆಯಲ್ಲಿಯೇ ಕೇಳುತ್ತಾನೆ. ಆಗ ಮಹಿಳೆಯೂ ಕೂಡ ಸರಿ ಹೋಗಲಿ ಬಿಡಿ ಎನ್ನುವಂತೆ ಕಣ್ಸನ್ನೆಯಲ್ಲಿಯೇ ತಿಳಿಸುತ್ತಾಳೆ.

ಇದನ್ನೂ ಓದಿ: ಕಾಕ್‌ಟೈಲ್ ಪಾರ್ಟಿಗೆ ಗೋಲ್ಡನ್ ಡ್ರೆಸ್: ಸ್ಲಿಮ್ ಹುಡುಗಿಯರಿಗೆ ಈ ಆಯ್ಕೆ

ಈ ದೃಶ್ಯವನ್ನು ನೋಡಿದರೆ ಇವರಿಬ್ಬರೂ ಅಪರಿಚಿತರು ಎಂಬುದು ಗೋಚರ ಆಗುತ್ತದೆ. ಪ್ಲಾಸ್ಟಿಕ್ ಕವರ್ ತೊಡೆ ಮೇಲೆ ಇಟ್ಟುಕೊಂಡು ಪ್ರಯಾಣ ಮಾಡುತ್ತಲೇ ನಿದ್ದೆಯಲ್ಲಿ ತೂಕಡಿಸುತ್ತಿದ್ದ ಯುವಕನಿಗೆ ಫುಲ್ ಸ್ಟೈಲಿಶ್ ಆಗಿರುವ ಮಧ್ಯಮ ವಯಸ್ಕ ಮಹಿಳೆಯ ತಾಯ್ತನದ ಗುಣವನ್ನು ಅಲ್ಲಿದ್ದ ಸಹ ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ. ಇದೀಗ ವಿಡಿಯೋ ಭಾರೀ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಇನ್‌ಸ್ಟಾಗ್ರಾಮ್, ಟ್ವಿಟರ್, ಫೇಸ್‌ಬುಕ್ ಸೇರಿ ವಿವಿದೆಡೆ ಹಂಚಿಕೊಳ್ಳಲಾಗಿದೆ.

ಇದೀಗ ವೈರಲ್ ಆಗಿರುವ ವಿಡಿಯೋವನ್ನು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ '@veejuparmar' ಎಂಬ ಖಾತೆ ಮೂಲಕ ಹಂಚಿಕೊಳ್ಳಲಾಗಿದೆ. ಪೋಸ್ಟ್‌ಗೆ 'ಮೂಮೆಂಟ್ ಹೈ ಭಾಯ್ ಬೆಸ್ ಮೂಮೆಂಟ್' ಎಂಬ ಶೀರ್ಷಿಕೆ ನೀಡಲಾಗಿದೆ. ಎರಡು ದಿನಗಳ ಹಿಂದೆ ಹಂಚಿಕೊಂಡ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರಿಂದ 2.3 ಮಿಲಿಯನ್ ವೀಕ್ಷಣೆಗಳು ಬಂದಿವೆ. ಅನೇಕ ಬಳಕೆದಾರರು ಮಹಿಳೆಯ ಸನ್ನೆಯನ್ನು ದಯೆ ಮತ್ತು ಚಿಂತನಶೀಲ ಎಂದು ಕರೆದರೆ, ಇತರರು ಈ ಕ್ಷಣವನ್ನು ಅಪರೂಪ ಮತ್ತು ಅನಿರೀಕ್ಷಿತ ಎಂದು ಕರೆದರು.

Scroll to load tweet…

ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಒಬ್ಬ ಬಳಕೆದಾರರು, 'ಅವಳು ಅವನನ್ನು ತಾಯಿಯಂತೆ ಅಪ್ಪಿಕೊಂಡಳು. ಪರಿಶುದ್ಧ ಮನಸ್ಸು' ಎಂದಿದ್ದಾರೆ. 'ಓಹ್ ನಿಜವಾಗಿಯೂ... ಅವರು ಆರಂಭದಿಂದಲೂ ಹೇಗೆ ವೀಡಿಯೊ ತೆಗೆದುಕೊಳ್ಳುತ್ತಿದ್ದಾರೆ. ಅವರು ಬೇಕಂತಲೇ ರೀಲ್ಸ್ ಮಾಡಿದ್ದಾರೆ' ಎಂದಿದ್ದಾರೆ. 'ಇಂದು ಈ ರೀತಿಯ ಮಹಿಳಾ ಪ್ರಯಾಣಿಕರಿಗೆ ಸಹಾಯ ಮಾಡಿದೆ ಮತ್ತು ಈಗ ನಾನು ಜೈಲಿನಿಂದ ಟ್ವೀಟ್ ಮಾಡುತ್ತಿದ್ದೇನೆ' ಎಂದು ಮೂರನೇ ಬಳಕೆದಾರರು ಸೇರಿಸಿದ್ದಾರೆ. 'ಅವಳು ನಿಜವಾಗಿಯೂ ಅದ್ಭುತ, ಬಹಳ ಅಪರೂಪದ ಕ್ಷಣ' ಎಂದು ನಾಲ್ಕನೇ ಬಳಕೆದಾರರು ಸೇರಿಸಿದ್ದಾರೆ.

ಇದನ್ನೂ ಓದಿ: Bengaluru: ಮೆಟ್ರೋ ನಿಲ್ದಾಣದಲ್ಲೇ ಯುವ ಜೋಡಿಯ ರೋಮ್ಯಾನ್ಸ್, ಇದೆಂಥಾ ಅಸಹ್ಯ ಎಂದ ನೆಟ್ಟಿಗರು!

ಇನ್ನು 'ಈ ವೀಡಿಯೊ ಮನರಂಜನಾ ಉದ್ದೇಶಕ್ಕಾಗಿ, ಇದನ್ನು ನಿಜ ಜಗತ್ತಿನಲ್ಲಿ ಪ್ರಯತ್ನಿಸಬೇಡಿ' ಎಂದು ಐದನೇ ಬಳಕೆದಾರರು ಸೇರಿಸಿದ್ದಾರೆ. ಇದು ಯುವಕನಿಗೆ ನೀಡಿದ ಕಿರುಕುಳ ಎಂದು ಹೇಳಿದರೆ, ಇಲ್ಲಿ ಅದೇ ಯುವತಿಗೆ ಒಬ್ಬ ಯುವಕ ಮಾಡಿದ್ದರೆ ದೊಡ್ ಅಪರಾಧ ಆಗುತ್ತಿತ್ತು ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಒಟ್ಟಾರೆಯಾಗಿ ಇದನ್ನು ಯಾವ ರೀತಿ ಸ್ವೀಕಾರ ಮಾಡಬೇಕು ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಬೇಕು.