ಕೊರಿಯರ್ ಡೆಲಿವರಿ ಸ್ಕ್ಯಾಮ್: 5 ರೂ ಪಾವತಿ ಮಾಡಿ 80 ಸಾವಿರ ಕಳೆದುಕೊಂಡ ಮಹಿಳೆ
ಇಲ್ಲೊಬ್ಬರು ಮಹಿಳೆ ಕೊರಿಯರ್ ಆನ್‌ಲೈನ್ ಡೆಲಿವರಿಗಾಗಿ 5 ರೂಪಾಯಿ ಪಾವತಿ ಮಾಡಿದ್ದು, ಅವರ ಖಾತೆಯಲ್ಲಿದ್ದ 80 ಸಾವಿರ ಹಣ ಗುಳುಂ ಆಗಿದೆ.
ಮೊಹಾಲಿ: ಕಾಲಕ್ಕೆ ತಕ್ಕಂತೆ ಕೋಲ ಎಂಬ ಆಡು ನುಡಿಯಂತೆ ಈ ಡಿಜಿಟಲ್ ಯುಗದಲ್ಲಿ ಕಳ್ಳರು ಆನ್‌ಲೈನ್‌ನಲ್ಲೇ ಬಲೆ ಬೀಸುತ್ತಿದ್ದು, ಜನ ಕಷ್ಟಪಟ್ಟು ದುಡಿದ ಹಣವನ್ನು ನಿಮಿಷದಲ್ಲಿ ಮಾಯ ಮಾಡುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬರು ಮಹಿಳೆ ಕೊರಿಯರ್ ಆನ್‌ಲೈನ್ ಡೆಲಿವರಿಗಾಗಿ 5 ರೂಪಾಯಿ ಪಾವತಿ ಮಾಡಿದ್ದು, ಅವರ ಖಾತೆಯಲ್ಲಿದ್ದ 80 ಸಾವಿರ ಹಣ ಗುಳುಂ ಆಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಶೆಫಾಲಿ ಚೌಧರಿ ಎಂಬುವವರೇ ಹೀಗೆ ಹಣ ಕಳೆದುಕೊಂಡು ಮೋಸ ಹೋದವರು. ಪಂಜಾಬ್‌ನ ಮೊಹಾಲಿಯವರಾದ ಈ ಮಹಿಳೆಗೆ ಈ ಆನ್‌ಲೈನ್ ದಂಧೆಕೋರರು ತಮ್ಮ ಡೆಲಿವರಿಯನ್ನು ಸ್ವೀಕರಿಸಲು 5 ರೂಪಾಯಿ ಪಾವತಿ ಮಾಡುವಂತೆ ಮೊದಲಿಗೆ ಹೇಳಿದ್ದಾರೆ. ನಾಜೂಕಾಗಿ ಮಾತಾಡಿ ಜನರನ್ನು ಬಲೆಗೆ ಬೀಳಿಸುವ ಈ ಆನ್‌ಲೈನ್ ಖದೀಮರು ಈ ಮಹಿಳೆಗೆ ತಮ್ಮ ಡೆಲಿವರಿ ಪೂರೈಕೆಯಾಗಬೇಕಾದರೆ ಮೊದಲಿಗೆ 5 ರೂಪಾಯಿ ಪಾವತಿ ಮಾಡಿ ಎಂದಿದ್ದಾರೆ. ಜೊತೆಗೆ ಆನ್‌ಲೈನ್‌ನಲ್ಲೇ ಆಕೆಯ ವಿಳಾಸವನ್ನು ಖಚಿತಪಡಿಸಿಕೊಂಡಿದ್ದಾರೆ. ಅಲ್ಲದೇ ಪೇ ಮಾಡಬೇಕಾದ 5 ರೂಪಾಯಿಗೆ ಲಿಂಕ್ ಕಳುಹಿಸಿದ್ದಾರೆ. ಈ ಖದೀಮರ ನಯವಾದ ಮಾತು ನಂಬಿದ ಆಕೆ ಅವರು ಕಳಿಸಿದ ಲಿಂಕ್ ಕ್ಲಿಕ್ ಮಾಡಿ 5 ರೂಪಾಯಿ ಪಾವತಿ ಮಾಡಿದ್ದು, ಇದಾದ ಸ್ವಲ್ಪ ಹೊತ್ತಿನಲ್ಲಿ 40 ಸಾವಿರ ರೂಪಾಯಿಯಂತೆ ಎರಡು ಬಾರಿ ಖಾತೆಯಿಂದ ಹಣ ಕಡಿತಗೊಂಡಿದೆ. ಒಟ್ಟು 80 ಸಾವಿರ ರೂಪಾಯಿಯನ್ನು ಅವರು ಕೆಲವೇ ನಿಮಿಷಗಳಲ್ಲಿ ಕಳೆದುಕೊಂಡಿದ್ದಾರೆ.
ಸ್ಕ್ಯಾಮ್ ಅಂತ ಮೇಲ್ ನಿರ್ಲಕ್ಷಿಸಿದವನಿಗೆ ಅಚ್ಚರಿ: ಗೆದ್ದ ಭರ್ಜರಿ ಮೊತ್ತದ ಲಾಟರಿ
ಇದಕ್ಕೂ ಮೊದಲು ಇದೇ ರೀತಿಯ ಹಗರಣವೊಂದು ಚಾಲ್ತಿಯಲ್ಲಿತ್ತು. ಇದರಲ್ಲಿ ಈ ಆನ್‌ಲೈನ್ ಖದೀಮರು ನೀವು ಆರ್ಡರ್ ಮಾಡದೇ ಇದ್ದ ಡೆಲಿವರಿ ಖಚಿತಪಡಿಸುವುದಕ್ಕಾಗಿ ಅಥವಾ ಕ್ಯಾನ್ಸಲ್ ಮಾಡುವುದಕ್ಕಾಗಿ ಒಟಿಪಿ ಕೇಳುತ್ತಿದ್ದರು. ಒಟಿಪಿ ನೀಡಿದ ಕೂಡಲೇ ನೀವು ಕಷ್ಟಪಟ್ಟು ದುಡಿದ ಹಣ ಖದೀಮರ ಪಾಲಾಗುತ್ತಿತ್ತು. ಇಂತಹ ಹಲವು ಆನ್ಲೈನ್ ಹಗರಣಗಳು ಈ ಹಿಂದೆಯೂ ಹಲವು ಬಾರಿ ನಡೆದಿವೆ. ವಾಟ್ಸಾಪ್ , ಟೆಲಿಗ್ರಾಮ್‌ಗಳಲ್ಲಿ ಉದ್ಯೋಗ ನೀಡುವುದಾಗಿ ಹೇಳಿ ಅನೇಕ ನಿರುದ್ಯೋಗಿಗಳಿಗೆ ಈ ಖದೀಮರು ಮೋಸ ಮಾಡಿದ್ದಾರೆ. ಇದಾದ ನಂತರ ಸೇನೆಯ ನಕಲಿ ಅಧಿಕಾರಿಯ ಹೆಸರಲ್ಲಿ ಉದ್ಯೋಗ ಕೊಡಿಸುವುದಾಗಿಯೂ ಹಲವು ಅಕ್ರಮ ನಡೆದಿದೆ.
ಆನ್‌ಲೈನ್ ವಂಚನೆ ಮಾಡ್ತಿದ್ದ 3 ವಿದೇಶಿ ಪ್ರಜೆಗಳ ಬಂಧನ: ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ...