ಹರಿಯಾಣದ ಪಾಣಿಪತ್‌ನಲ್ಲಿ, ಮದುವೆ ಸಮಾರಂಭವೊಂದರಲ್ಲಿ ತನ್ನ 6 ವರ್ಷದ ಸೊಸೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ. ತನಗಿಂತ ಯಾರೂ ಸುಂದರವಾಗಿ ಕಾಣಬಾರದು ಎಂಬ ಅಸೂಯೆಯೇ ಈ ಕೃತ್ಯಕ್ಕೆ ಕಾರಣವಾಗಿತ್ತು.
ನವದೆಹಲಿ (ಡಿ.3): ಹರಿಯಾಣದ ಪಾಣಿಪತ್‌ನ ಹಳ್ಳಿಯಲ್ಲಿ ಮದುವೆಯ ಸಂಭ್ರಮ ಆದರೆ, ಸಂಭ್ರಮದ ಡೋಲುಗಳು ಕೆಲವೇ ಹೊತ್ತಲ್ಲಿ ನಿಂತಿತು. ಅಲ್ಲಿ ಸೇರಿದ್ದ ಸಂಬಂಧಿಕರಲ್ಲಿ ಭೀತಿ ಆವರಿಸಿತ್ತು. ಮದುವೆಗಾಗಿ ರೆಡಿಯಾಗಿದ್ದ ಆರು ವರ್ಷದ ಬಾಲಕಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಳು. ಸಂಭ್ರಮದ ದಿನ ದುಃಸ್ವಪ್ನವಾಗಿ ಮಾರ್ಪಟ್ಟಿತ್ತು. ಕೆಲವೇ ಹೊತ್ತಿನಲ್ಲಿ ಈ ಹುಡುಕಾಟಕ್ಕೆ ಫಲ ಸಿಕ್ಕಿತ್ತು. ಆದರೆ, ಮಗು ಜೀವಂತವಾಗಿ ಸಿಗುವ ಬದಲು ಹೆಣವಾಗಿ ಸಿಕ್ಕಿದ್ದಳು. ದಿನದ ಅಂತ್ಯದ ವೇಳೆ ಇಡೀ ಮದುವೆ ಮನೆ ಅಪರಾಧದ ಸ್ಥಳವಾಗಿ ಮಾರ್ಪಟ್ಟಿತ್ತು. ಜರ್ಮನ್ ಕಾಲ್ಪನಿಕ ಕಥೆ ಸ್ನೋ ವೈಟ್‌ನ ದುಷ್ಟ ರಾಣಿಯನ್ನು ನೆನಪಿಸುವ ಪ್ರಮುಖ ಶಂಕಿತನೊಂದಿಗೆ ಪೊಲೀಸರು ಭಯಾನಕ ಕೊಲೆ ಪ್ರಕರಣವನ್ನು ಬಹಿರಂಗಪಡಿಸಿದರು.
ಪಾಣಿಪತ್‌ನಲ್ಲಿ ತನ್ನ ಪುಟ್ಟ ಸೊಸೆಯನ್ನು ಕೊಲೆ ಮಾಡಿದ್ದಕ್ಕಾಗಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಆಕೆಗೆ ಕೊಲೆ ಮಾಡಲು ಇದ್ದ ಏಕೈಕ ಉದ್ದೇಶ ಏನೆಂದರೆ, ಯಾವುದೇ ಕಾರ್ಯಕ್ರಮದಲ್ಲಿ ಯಾರೂ ಕೂಡ ತನಗಿಂತ ಸುಂದರವಾಗಿ ಕಾಣಿಸಬಾರದು ಎಂದು ಬಯಸಿದ್ದಳು. ಹೀಗೆ ಕಂಡವನ್ನು ಕೊಲೆ ಮಾಡುತ್ತಿದ್ದಳು.
ಇಡೀ ಕುಟುಂಬ ಸೋನಿಪತ್‌ನಲ್ಲಿ ಮದುವೆಯ ಕಾರ್ಯಕ್ರಮದಲ್ಲಿ ವ್ಯಸ್ಥರಾಗಿದ್ದಾಗ, ಆರೋಪಿಯಾಗಿರುವ ಪೂನಮ್ ತನ್ನ 6 ವರ್ಷದ ಸೊಸೆಯನ್ನು ಸೋಮವಾರ ವಾಟರ್ ಟಬ್‌ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ.
ಪೊಲೀಸರ ಪ್ರಕಾರ, ಪೂನಮ್ ಅದಕ್ಕೂ ಮುನ್ನ ಮೂರು ಮಂದಿ ಮಕ್ಕಳನ್ನು ಕೊಂದಿದ್ದಳು. 2023ರಲ್ಲಿ ತನ್ನ ಮಗನನ್ನೂ ಕೂಡ ಇದೇ ರೀತಿಯಾಗಿ ಟಬ್‌ನಲ್ಲಿ ಮುಳುಗಿಸಿ ಕೊಂದಿದ್ದಳು.
ಕೊಲೆಗಳು ನಡೆದಿದ್ದು ಹೇಗೆ?
ಸೋನಿಪತ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸವಿದ್ದ 6 ವರ್ಷದ ವಿಧಿ, ಸಂಬಂಧಿಯ ಮದುವೆಗಾಗಿ ತಮ್ಮ ಕುಟುಂಬದೊಂದಿಗೆ ಪಾಣಿಪತ್‌ನ ಇಸ್ರಾನಾ ಗ್ರಾಮ ನೌಲತಾ ಗ್ರಾಮಕ್ಕೆ ಬಂದಿದ್ದರು. ಆಕೆಯೊಂದಿಗೆ ಆಕೆಯ ಅಜ್ಜ ಪಾಲ್ ಸಿಂಗ್, ಅಜ್ಜಿ ಓಮ್‌ವತಿ, ತಂದೆ ಸಂದೀಪ್, ತಾಯಿ ಹಾಗೂ 10 ತಿಂಗಳ ಕಿರಿಯ ಸಹೋದರನೊಂದಿಗೆ ಬಂದಿದ್ದಳು.
ಮದುವೆಯ ಮೆರವಣಿಗೆ ನೌಲತಾ ಗ್ರಾಮಕ್ಕೆ ಬಂದ ಬೆನ್ನಲ್ಲಿಯೇ ಈ ಘಟನೆ ನಡೆದಿದೆ. ಸೋಮವಾರ ಮಧ್ಯಾಹ್ನ 1.30ರ ವೇಳೆಗೆ ವಿಧಿ ಸಾವು ಕಂಡಿದ್ದಾರೆ. ಕೆಲ ಹೊತ್ತಿನಲ್ಲಿ ವಿಧಿ ತಂದೆಗೆ ಕರೆ ಬಂದಿದ್ದು, ಮಗಳು ಎಲ್ಲೂ ಕಾಣಿಸುತ್ತಿಲ್ಲ ಎಂದು ತಿಳಿಸಲಾಗಿದೆ. ತಕ್ಷಣವೇ ಇಡೀ ಕುಟುಂಬ ಆಕೆಯನ್ನು ಹುಡುಕಲು ಆರಂಭಿಸಿತು. ಒಂದು ಗಂಟೆಯ ಬಳಿ, ಅಜ್ಜಿ ಓಮ್‌ವತಿ, ಸಂಬಂಧಿಯ ಮನೆಯ ಮೊದಲ ಮಹಡಿಯಲ್ಲಿರುವ ಸ್ಟೋರ್‌ರೂಮ್‌ಗೆ ತೆರಳಿ ಹುಡುಕಾಟ ನಡೆಸಿದ್ದರು. ಸ್ಟೋರ್‌ರೂಮ್‌ಅನ್ನು ಹೊರಗಡೆಯಿಂದ ಲಾಕ್ ಮಾಡಲಾಗಿತ್ತು. ಬಾಗಿಲನ್ನು ತೆರೆದು ನೋಡಿದಾಗ ವಿಧಿ, ವಾಟರ್‌ಟಬ್‌ನಲ್ಲಿ ಬಿದ್ದಿರುವುದು ಕಂಡಿತ್ತು. ಆದರೆ, ಆಕೆಯ ಕಾಲುಗಳು ಮಾತ್ರ ನೆಲಕ್ಕೆ ತಾಕಿದ್ದವು.
ತಕ್ಷಣವೇ ಮಗುವನ್ನು ಎನ್‌ಸಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತಾದರೂ, ವೈದ್ಯರು ಮಗು ಸಾವು ಕಂಡಿದೆ ಎಂದು ತಿಳಿಸಿದ್ದರು. ಅದಾದ ಬಳಿಕ ವಿಧಿಯ ತಂದೆ ಎಫ್‌ಐಆರ್ ದಾಖಲಿಸಿ ಇದು ಕೊಲೆ ಎಂದು ಆರೋಪ ಮಾಡಿದ್ದರು. ಪೊಲೀಸ್ ತನಿಖೆಯಲ್ಲಿ ಆರೋಪಿ ಪೂನಂ, ವಿಧಿಯ ತಂದೆಯ ಸಂಬಂಧಿ ಎನ್ನುವುದು ತಿಳಿದುಬಂದಿದೆ.
ಮಕ್ಕಳನ್ನು ಕೊಂದ ಮಾದರಿ
ಪೊಲೀಸರ ಪ್ರಕಾರ, ಪೂನಂ ತನಗಿಂತ ಸುಂದರವಾಗಿ ಯಾರೂ ಕಾಣಬಾರದು ಎಂದು ಬಯಸಿದ್ದರಿಂದ, ಅಸೂಯೆ ಮತ್ತು ಅಸಮಾಧಾನದಿಂದ ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಸಾಯಿಸುವ ವಿಷಕಾರಿ ಮನಸ್ಥಿತಿ ಹೊಂದಿದ್ದಳು ಎಂದು ತಿಳಿಸಿದ್ದಾರೆ. ಪೊಲೀಸರು ಹೇಳುವಂತೆ ಅವಳು ವಿಶೇಷವಾಗಿ ಚಿಕ್ಕ, ಸುಂದರ ಬಾಲಕಿಯರನ್ನು ಗುರಿಯಾಗಿಸಿಕೊಂಡಿದ್ದಳು. ಒಟ್ಟಾರೆಯಾಗಿ, ಪೂನಂ ನಾಲ್ಕು ಮಕ್ಕಳನ್ನು - ಮೂವರು ಹುಡುಗಿಯರು ಮತ್ತು ತನ್ನ ಸ್ವಂತ ಮಗ - ಇದೇ ರೀತಿಯ ಸಂದರ್ಭಗಳಲ್ಲಿ ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾಳೆ.
2023 ರಲ್ಲಿ, ಪೂನಂ ತನ್ನ ಅತ್ತಿಗೆಯ ಮಗಳನ್ನು ಕೊಂದಿದ್ದಳು. ಅದೇ ವರ್ಷ, ಅನುಮಾನ ಬರದಂತೆ ತನ್ನ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಂದಳು. ಈ ವರ್ಷದ ಆಗಸ್ಟ್‌ನಲ್ಲಿ, ಪೂನಂ ಸಿವಾ ಗ್ರಾಮದಲ್ಲಿ ಮತ್ತೊಬ್ಬ ಹುಡುಗಿಯನ್ನು ತನಗಿಂತ ಸುಂದರವಾಗಿ ಕಾಣುತ್ತಿದ್ದಳು ಎನ್ನುವ ಕಾರಣಕ್ಕೆ ಕೊಲೆ ಮಾಡಿದ್ದಳು.
ವಿಧಿ ಕೊಲೆ ಪ್ರಕರಣದಲ್ಲಿ ವಿಚಾರಣೆಯ ಸಮಯದಲ್ಲಿ ಪೂನಂ ಸತ್ಯವನ್ನು ಒಪ್ಪಿಕೊಳ್ಳುವವರೆಗೂ ಈ ಮಕ್ಕಳ ಸಾವುಗಳು ಆಕಸ್ಮಿಕವೆಂದು ಭಾವಿಸಲಾಗಿತ್ತು.

