ಮನುಷ್ಯರ ಮಿದುಳು ಬಗೆದು ಸೂಪ್ ಮಾಡ್ತಿದ್ದ ಡೆಡ್ಲಿ ಕಿಲ್ಲರ್: ಬೆಚ್ಚಿ ಬೀಳಿಸುವ ಮರ್ಡರ್ ಸ್ಟೋರಿ ಇದು
ವಿಚಿತ್ರವಾಗಿ ಮನುಷ್ಯರನ್ನು ಕೊಂದು ಅವರ ಮಿದುಳನ್ನು ಬಗೆದು ಸೂಪ್ ಮಾಡಿ ಕುಡಿಯುತ್ತಿದ್ದ ಸರಣಿ ಕೊಲೆ ಪಾತಕಿಯೋರ್ವನ ಬಗ್ಗೆ ನಿಮಗೆ ಗೊತ್ತೆ.. ಕೇಳಲು ವಿಚಿತ್ರ, ಭಯಾನಕ, ವಿಷಾದವೆನಿಸಿದರೂ ಕೂಡ ಈ ಘಟನೆಯೂ ನಡೆದಿರುವುದು ಭಾರತದಲ್ಲೇ. ಈತನ ಕುರಿತಾಗಿ ನೆಟ್‌ಫ್ಲಿಕ್ಸ್‌ನಲ್ಲಿ ವೆಬ್ ಸೀರಿಸ್ ಕೂಡ ಇದೆ
ನವದೆಹಲಿ: ದೇಶದಲ್ಲಿ ನಡೆದ ಕೆಲವು ಸೈಕೋಪಾತ್‌ಗಳ ಕರಾಳ ಕೃತ್ಯಗಳು ನಮ್ಮನ್ನು ಮತ್ತೆ ಮತ್ತೆ ಬೆಚ್ಚಿ ಬೀಳಿಸುವಂತೆ ಮಾಡುತ್ತದೆ. ಸೈನೆಡ್ ಮಲ್ಲಿಕಾ, ದಂಡುಪಾಳ್ಯ ಗ್ಯಾಂಗ್, ವಿಕೃತ ಕಾಮಿ ಉಮೇಶ್ ರೆಡ್ಡಿ ಸೇರಿದಂತೆ ವರ್ಷದ ಹಿಂದೆ ತನ್ನ ಬಾಯ್‌ಫ್ರೆಂಡ್‌ನಿಂದಲೇ ಹತ್ಯೆಯಾದ ಶ್ರದ್ಧ ವಾಕರ್ ಕೊಲೆಯೂ ಅತ್ಯಂತ ಭೀಬತ್ಸವಾಗಿ ನಡೆದಿತ್ತು. ಅದೇ ರೀತಿ ವಿಚಿತ್ರವಾಗಿ ಮನುಷ್ಯರನ್ನು ಕೊಂದು ಅವರ ಮಿದುಳನ್ನು ಬಗೆದು ಸೂಪ್ ಮಾಡಿ ಕುಡಿಯುತ್ತಿದ್ದ ಸರಣಿ ಕೊಲೆ ಪಾತಕಿಯೋರ್ವನ ಬಗ್ಗೆ ನಿಮಗೆ ಗೊತ್ತೆ.. ಕೇಳಲು ವಿಚಿತ್ರ, ಭಯಾನಕ, ವಿಷಾದವೆನಿಸಿದರೂ ಕೂಡ ಈ ಘಟನೆಯೂ ನಡೆದಿರುವುದು ಭಾರತದಲ್ಲೇ. ಈತನ ಕುರಿತಾಗಿ ನೆಟ್‌ಫ್ಲಿಕ್ಸ್‌ನಲ್ಲಿ ವೆಬ್ ಸೀರಿಸ್ ಕೂಡ ಇದೆ. " ಇಂಡಿಯನ್ ಪ್ರಿಡಿಯೇಟರ್ - ದ ಡೈರಿ ಆಫ್ ಎ ಸೀರಿಯಲ್ ಕಿಲ್ಲರ್" ಎಂಬ ಹೆಸರಿನಲ್ಲಿ ಈ ಸೀರಿಸ್ ಇದ್ದು, ವಿಕೃತ ಕೊಲೆ ಪಾತಕಿಯೋರ್ವನ ಕರಾಳ ಚರಿತ್ರೆ ಮೈ ಝುಮ್ಮೆನಿಸುತ್ತಿದೆ.
ರಾಜ ಕೊಲಂದರ್ ಎಂಬ ಈ ಕೊಲೆ ಪಾತಕಿ ಜನರನ್ನು ಕೊಂದು ಬಳಿಕ ಅವರ ಮಿದುಳನ್ನು ಬಗೆದು ಸೂಪ್ ಮಾಡಿ ಕುಡಿಯುತ್ತಿದ್ದ ಇದೇ ಕಾರಣಕ್ಕೆ ಅವನು ಬ್ರೈನ್ ಇಟರ್ ಅಥವಾ ಮಿದುಳು ತಿನ್ನುವವ ಎಂದೇ ಕುಖ್ಯಾತಿ ಗಳಿಸಿದ. ಇದೇ ರೀತಿ ಹಲವು ವರ್ಷಗಳಿಂದ 14 ಜನರನ್ನು ಕೊಂದು ಅವರ ಮಿದುಳ ಸೂಪ್ ಕುಡಿದಿದ್ದ ಈತ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ
ಕೃತ್ಯ ಬೆಳಕಿಗೆ ಬಂದಿದ್ದೇಗೆ?
2000ನೇ ಇಸವಿಯಲ್ಲಿ ಖ್ಯಾತ ಪತ್ರಕರ್ತ ಧೀರೇಂದ್ರ ಸಿಂಗ್ ಹತ್ಯೆಯಲ್ಲಿ ಈತ ಪ್ರಮುಖ ಶಂಕಿತ ಆರೋಪಿಯಾಗಿದ್ದು, ಹಿಂದಿ ಪತ್ರಿಕೆಯೊಂದಕ್ಕೆ ಪತ್ರಕರ್ತರಾಗಿ ಕೆಲ ಮಾಡುತ್ತಿದ್ದ ಧೀರೇಂದ್ರ ಸಿಂಗ್ ಅವರು ದಿಢೀರ್ ನಾಪತ್ತೆಯಾಗಿದ್ದರು. ತನ್ನ ಸೋದರ ಸಂಬಂಧಿಯ ನೆರವಿನೊಂದಿಗೆ ಕೊಲಂದರ್, ಪತ್ರಕರ್ತ ಧೀರೇಂದ್ರ ಸಿಂಗ್ ಅವರನ್ನು ತಲೆಗೆ ಗುಂಡಿಕ್ಕಿ ಒಂದೇ ಏಟಿನಲ್ಲಿ ಸಾಯಿಸಿದ್ದ, ಬಳಿಕ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಶವವನ್ನು ಮಧ್ಯಪ್ರದೇಶದ ರೇವಾದಲ್ಲಿ ಎಸೆದಿದ್ದ.
ಇತ್ತ ಪತ್ರಕರ್ತ ಸಿಂಗ್ ನಾಪತ್ತೆಯಾದ ಹಲವು ದಿನಗಳ ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಅವರ ಮೊಬೈಲ್ ಫೋನ್ ಅನ್ನು ಟ್ರ್ಯಾಕ್ ಮಾಡಲು ಶುರು ಮಾಡಿದ್ದರು. ಈ ವೇಳೆ ಈ ಫೋನ್‌ನಿಂದ ದೇವಿ ಹಾಗೂ ಕೊಲಂದರ್ ಒಡೆತನದ ಲ್ಯಾಂಡ್‌ಲೈನ್‌ನ ನಂಬರ್ ಒಂದಕ್ಕೆ ಕರೆ ಮಾಡಿರುವುದು ತಿಳಿದು ಬಂತು. ಈ ಲ್ಯಾಂಡ್ ಲೈನ್ ಉತ್ತರಪ್ರದೇಶದ ಪ್ರಯಾಗ್ ರಾಜ್‌ನ ಅವಳಿ ಸಿಟಿ ನೈನಿಯಲ್ಲಿ ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದರು.
ಮನೆ ಮೇಲೆ ದಾಳಿ ನಡೆಸಿದ್ದ ಪೊಲೀಸರಿಗೆ ಸಿಕ್ಕಿತ್ತು ಪಾತಕಿ ಬರೆದ ಡೈರಿ
ಇದಾದ ನಂತರ ಮನೆ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಅಲ್ಲಿ ಆರೋಪಿ ಬರೆದ ಡೈರಿ ಸಿಕ್ಕಿತ್ತು. ಈ ಡೈರಿ ಪರಿಶೀಲಿಸಿದ ಪೊಲೀಸರು ಬೆಚ್ಚಿ ಬಿದ್ದಿದ್ದರು. ಈತನ ಭೀಬತ್ಸ ಕೃತ್ಯಕ್ಕೆ ಬಲಿಯಾದ ಹಲವರ ಹೆಸರಿತ್ತು ಆ ಡೈರಿಯಲ್ಲಿ. ಈತನ ಈ ಅಮಾನುಷ ಕೃತ್ಯಕ್ಕೆ ಬಲಿಯಾದ ಒಬ್ಬರಲ್ಲಿ ಪತ್ರಕರ್ತ ಧೀರೇಂದ್ರ ಸಿಂಗ್ ಕೂಡ ಒಬ್ಬರು ಎಂಬುದನ್ನು ಪೊಲೀಸರು ಶಂಕಿಸಿದ್ದು, ನಂತರ ಆರೋಪಿ ಪತ್ನಿ ದೇವಿಯನ್ನು ಪೊಲೀಸರು ಬಂಧಿಸಿದ್ದರು. ಆಕೆಯನ್ನು ನಿರಂತರ ವಿಚಾರಿಸಿದಾಗ ಆಕೆ ತನ್ನ ಪತಿಯ ಪಾತಕ ಲೋಕವನ್ನು ವಿಸ್ತಾರವಾಗಿ ವಿವರಿಸಿದ್ದಳು, ಇದಾದ ನಂತರ ಕೊಲಂದರ್ ಕೂಡ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದ. ನಂತರ ಪತ್ರಕರ್ತ ಧೀರೇಂದ್ರ ಸಿಂಗ್ ಶವವನ್ನು ಗುರುತು ಪತ್ತೆ ಮಾಡಲಾಗಿತ್ತು.
ಸ್ನೇಹದಿಂದ ಸೆಳೆಯುತ್ತಿದ್ದ ಕೊಲೆ ಪಾತಕಿ
ಮೊದಲಿಗೆ ಅತೀ ವಿನಯದಿಂದ ಸ್ನೇಹ ಬೆಳೆಸುತ್ತಿದ್ದ ಆತ ತನ್ನ ಬೇಟೆಗೆ(ಸಂತ್ರಸ್ತರು) ತನ್ನ ಮೇಲೆ ವಿಶೇಷ ಗೌರವ ಭಾವನೆ ಮೂಡುವಂತೆ ಮಾಡುತ್ತಿದ್ದ. ಇದಾದ ನಂತರ ಅವರ ಸಂಪೂರ್ಣ ನಂಬಿಕೆ ಗಳಿಸಿದ ಆತ ಏಕಾಂತದಿಂದ ಕೂಡಿದ ನಿರ್ಜನ ರಸ್ತೆಗಳಲ್ಲಿ ಅಥವಾ ಹಂದಿಗೂಡುಗಳಲ್ಲಿ ಅವರನ್ನು ನಿರ್ದಯವಾಗಿ ಕೊಲೆ ಮಾಡುತ್ತಿದ್ದ. ದೇಹವನ್ನು ಹಲವು ಭಾಗಗಳನ್ನಾಗಿ ಮಾಡಿದ ಬಳಿಕ ಆತ ಅವರ ಮಿದುಳನ್ನು ಹೊರತೆಗೆದು ಪಾತ್ರೆಯಲ್ಲಿ ಹಾಕಿ ಬೇಯಿಸಿ ಅದರಿಂದ ಬಂದ ಸೂಪನ್ನು ಕುಡಿಯುತ್ತಿದ್ದ ಎಂಬುದು ಆತ ಬರೆದ ಡೈರಿಯಲ್ಲಿ ದಾಖಲಾಗಿತ್ತು. ತಲೆಬುರುಡೆ ಸಂಪೂರ್ಣ ಖಾಲಿಯಾದ ನಂತರ ಆತ ಅವುಗಳನ್ನು ಟ್ರೋಪಿಗಳಂತೆ ಇರಿಸಿ ಅವುಗಳೊಂದಿಗೆ ಮಾತನಾಡುತ್ತಿದ್ದ. ಇದೇ ರೀತಿ ಈತ 14 ಕೊಲೆಗಳನ್ನು ಮಾಡಿದ್ದಾನೆ ಎಂಬುದು ಸಾಬೀತಾಗಿದೆ.
ಕೊಲಂದರ್ ಈ ಪಾತಕ ಕೃತ್ಯಕ್ಕೆ ಮೊದಲು ಬಲಿಯಾಗಿದ್ದು, ಆತನ ಸ್ನೇಹಿತ ಹಾಗೂ ಸಹೋದ್ಯೋಗಿ ಕಾಳಿಚರಣ್ ಶ್ರೀವಾಸ್ತವ್, ಈ ಪ್ರಕರಣವನ್ನು ವಿಶ್ಲೇಷಿಸಿದ ಪೊಲೀಸರು ಈತ ಜನರ ಬುದ್ಧಿವಂತಿಕೆ, ಅಧಿಕಾರ ಮತ್ತು ಸವಲತ್ತುಗಳಿಂದ ಆಕರ್ಷಿತನಾಗಿ ಅವರನ್ನು ಹತ್ಯೆ ಮಾಡುತ್ತಿದ್ದ. ಉತ್ತರ ಭಾರತದಲ್ಲಿ ಕಾಯಸ್ಥ ಸಮುದಾಯ ಎಂದು ಕರೆಯಲ್ಪಡುವರು ಹಿಂದಿನ ಕಾಲದಲ್ಲಿ ಲೆಕ್ಕ ಪರಿಶೋಧನೆಯಂತಹ ಕೆಲಸದಲ್ಲಿ ಪರಿಣಿತರಾಗಿದ್ದರು. ಅವರು ತಮ್ಮ ಬುದ್ಧಿಮತ್ತೆಗೆ ಹೆಸರಾಗಿದ್ದರು. ಈ ಕಾಳಿಚರಣ್ ಕೂಡ ಅದೇ ಸಮುದಾಯಕ್ಕೆ ಸೇರಿದ್ದರು. ಆತನ ಮಿದುಳಿನಲ್ಲಿ ಅಪಾರವಾದ ಬುದ್ಧಿವಂತಿಕೆ ಇರಬಹುದು ಎಂದು ಭಾವಿಸಿದ್ದ ಕೊಲಂದರ್ ಆತನ ಹತ್ಯೆ ಮಾಡಿದ್ದ ಬಳಿಕ ಆತನ ಮೆದುಳನ್ನು ಸೂಪ್ ಮಾಡಿ ಕುಡಿದಿದ್ದ ಎಂದು ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ವಿಶ್ಲೇಷಿಸಿದ್ದರು.
ಅಲ್ಲದೇ ಈತ ತನ್ನ ಬಲೆಗೆ ಬಿದ್ದವರ ಜಾತಿಯ ಬಗ್ಗೆಯೂ ಅತೀವವಾದ ಆಸಕ್ತಿ ಹೊಂದಿದ್ದ, ತಾನು ಹತ್ಯೆಗೈದವರ ಬುರುಡೆಯನ್ನು ತೋಟದ ಮನೆಯ ಮರದ ಕೊಂಬೆಗಳಿಗೆ ದಾರ ಸಿಕ್ಕಿಸಿ ಸಾಲಾಗಿ ನೇತು ಹಾಕಿದ್ದ ಜೊತೆಗೆ ಅಲ್ಲಿ ಅವರ ಜಾತಿ ಹಾಗೂ ಉಪನಾಮವನ್ನು(ಸರ್‌ನೇಮ್) ಕೂಡ ಬರೆದಿದ್ದ ಎಂದು ತನಿಖಾ ತಂಡ ಹೇಳಿದೆ.