Asianet Suvarna News Asianet Suvarna News

ಪಶ್ಚಿಮ ಬಂಗಾಳ ಮಾಜಿ ಸಚಿವ ಪಾರ್ಥ ಚಟರ್ಜಿಗೆ ಚಪ್ಪಲಿ ತೂರಿದ ಮಹಿಳೆ..!

ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರನ್ನು ಇಡಿ ಅಧಿಕಾರಿಗಳು ಆಸ್ಪತ್ರೆಗೆ ಕರೆದೊಯ್ದಾಗ ಮಹಿಲೆಯೊಬ್ಬರು ಮಾಜಿ ಸಚಿವರತ್ತ ಚಪ್ಪಲಿ ತೂರಿರುವ ಘಟನೆ ಬಂಗಾಳದ ರಾಜಧಾನಿ ಕೋಲ್ಕತ್ತದಲ್ಲಿ ನಡೆದಿದೆ.

woman hurls slippers at former west bengal minister partha chatterjee ash
Author
Bangalore, First Published Aug 2, 2022, 3:51 PM IST

ಶಾಲಾ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಇಡಿ ವಶದಲ್ಲಿರುವ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಮಹಿಳೆಯೊಬ್ಬರು ಚಪ್ಪಲಿ ಎಸೆಯಲು ಯತ್ನಿಸಿದ್ದಾರೆ. ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಪಾರ್ಥ ಮತ್ತು ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಜೋಕಾದಲ್ಲಿರುವ ಆಸ್ಪತ್ರೆಗೆ ಕರೆದೊಯ್ದಾಗ ಈ ಘಟನೆ ಸಂಭವಿಸಿದೆ. ಅಲ್ಲದೆ, ಮಾಜಿ ಸಚಿವ ಪಾರ್ಥ ಚಟರ್ಜಿಯವರ ವಿರುದ್ಧ ಮಹಿಲೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.

"ಅಂತಹ ನಾಯಕರು ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ಅದಕ್ಕಾಗಿಯೇ ನಾನು ಚಪ್ಪಲಿ ಎಸೆದಿದ್ದೇನೆ" ಎಂದು ಮಾಜಿ ಸಚಿವರತ್ತ ಚಪ್ಪಲಿ ಎಸೆದ ಮಹಿಳೆ ಹೇಳಿದ್ದಾರೆ. ಹಾಗೂ, "ನಾನು ಔಷಧಿ ಖರೀದಿಸಲು ಇಲ್ಲಿಗೆ ಬಂದಿದ್ದೆ. ಅವರು ಫ್ಲಾಟ್‌ಗಳು ಮತ್ತು ಎಸಿ ಕಾರುಗಳನ್ನು ಖರೀದಿಸಲು ಬಡವರನ್ನು ಲೂಟಿ ಮಾಡಿದರು. ಅವರನ್ನು ಕಟ್ಟಿಹಾಕಿ ಬೀದಿಯಲ್ಲಿ ಎಳೆಯಬೇಕು. ನಾನು ನನ್ನ ಬೂಟುಗಳಿಲ್ಲದೆ ಮನೆಗೆ ಹೋಗುತ್ತೇನೆ. ಇನ್ನು, ಪಾರ್ಥ ಚಟರ್ಜಿಗೆ ಚಪ್ಪಲಿ ತಗುಲಿದ್ದರೆ ನನಗೆ ಇನ್ನೂ ಖುಷಿಯಾಗುತ್ತಿತ್ತು’’ ಎಂದೂ ಆ ಮಹಿಳೆ ಹೇಳಿಕೊಂಡಿದ್ದಾರೆ.

ಇಡಿ ಕಸ್ಟಡಿ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ

ಕೋಟಿ ಕೋಟಿ ಹಣ ಇಟ್ಟ ಬಗ್ಗೆ ನನಗೆ ಗೊತ್ತಿರಲಿಲ್ಲ: ಅರ್ಪಿತಾ ಮುಖರ್ಜಿ
ಈ ಮಧ್ಯೆ, ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾದ ಕೋಟಿ ಕೋಟಿ ಹಣದ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಅರ್ಪಿತಾ ಮುಖರ್ಜಿ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಹೇಳಿಕೊಂಡಿದ್ದಾರೆ. ಅಲ್ಲದೆ, ಆ ಹಣ ನನ್ನದಲ್ಲ, ನನ್ನ ಅನುಪಸ್ಥಿತಿಯಲ್ಲಿ ಅದನ್ನು ಅಲ್ಲಿ ಇರಿಸಲಾಗಿದೆ ಎಂದೂ ತಿಳಿಸಿದ್ದಾರೆ. ಕೋಲ್ಕತ್ತಾದಲ್ಲಿರುವ ಆಕೆಯ ಮನೆಗಳಿಂದ ಜಾರಿ ನಿರ್ದೇಶನಾಲಯ (ಇಡಿ) ಈ ಹಿಂದೆ ಸುಮಾರು 50 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿತ್ತು. ಹಾಗೂ, ಕೆಜಿಗಟ್ಟಲೆ ಬಂಗಾರದ ಆಭರಣಗಳನ್ನು ಸಹ ಸೀಜ್‌ ಮಾಡಿತ್ತು.

ಪಶ್ಚಿಮ ಬಂಗಾಳದ ಎಸ್‌ಎಸ್‌ಸಿ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಇಬ್ಬರನ್ನೂ ಆಗಸ್ಟ್ 3 ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಲಾಗಿತ್ತು. ಅರ್ಪಿತಾ ಅವರ ಫ್ಲಾಟ್‌ಗಳಿಂದ ಸುಮಾರು 50 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿದ ನಂತರ, ತೃಣಮೂಲ ಕಾಂಗ್ರೆಸ್, ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿಯನ್ನು ಅಮಾನತುಗೊಳಿಸಿತು ಮತ್ತು ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿದ ನಂತರ ಅವರನ್ನು ಬಂಗಾಳ ಸಚಿವಾಲಯದಿಂದ ತೆಗೆದುಹಾಕಲಾಯಿತು. 

'ಹೇಳು ಪಾರ್ಥ..' ಎಂದು ಚಟರ್ಜಿಗೆ ಗಂಟುಬಿದ್ದಿದ್ಯಾಕೆ ED, ಅಷ್ಟಕ್ಕೂ ಯಾರೀಕೆ ಅರ್ಪಿತಾ?

ಪಾರ್ಥ ಚಟರ್ಜಿ ತನಿಖೆಗೆ ಸಹಕರಿಸುತ್ತಿಲ್ಲ: ಇಡಿ
ತನಿಖಾಧಿಕಾರಿಗಳ ಪ್ರಶ್ನೆಗಳ ಸುರಿಮಳೆಗೆ ಮಾಜಿ ಟಿಎಂಸಿ ನಾಯಕ ಮೊಂಡುತನದ ಉತ್ತರ ಕೊಡುತ್ತಿದ್ದು, ವಶಪಡಿಸಿಕೊಂಡ ಬೃಹತ್ ಮೊತ್ತದ ನಗದು ತನ್ನದಲ್ಲ ಎಂದೇ ಹೇಳುತ್ತಿದ್ದಾರಂತೆ. ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿಯವರ ನಿಲುವಿನ ನಂತರ ಬೆಲ್ಘಾರಿಯಾದ ಕ್ಲಬ್ ಟೌನ್ ಹೈಟ್ಸ್ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆಯುವುದು ಸೇರಿದಂತೆ ಅವರ ಇರುವಿಕೆಯ ಬಗ್ಗೆ ತನಿಖೆ ನಡೆಸಲು ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. 

ಅರ್ಪಿತಾ ಬ್ಯಾನರ್ಜಿ ಅವರ ಫ್ಲ್ಯಾಟ್‌ಗಳಲ್ಲಿ ದೊರೆತ 49.8 ಕೋಟಿ ರೂ. ನಗದು ದೊರೆತಿರುವ ಬಗ್ಗೆ ತನಗೆ ಅರಿವಿದೆ. ಆದರೆ, ಆ ಹಣ ತನ್ನದಲ್ಲ ಎಂದು ಮಾಜಿ ಸಚಿವ ಪಾರ್ಥ ಚಟರ್ಜಿ ಹೇಳಿಕೊಂಡಿದ್ದಾರೆ. ಅಲ್ಲದೆ, ಆ ಹಣ ಎಲ್ಲಿಂದ ಬಂತು ಅದು ಒಬ್ಬರದ್ದೋ ಅಥವಾ ಎಷ್ಟು ಜನರಿಗೆ ಸೇರಿದ್ದು ಎಂಬುದರ ಬಗ್ಗೆಯೂ ಪಾರ್ಥ ಚಟರ್ಜಿ ಸುಳಿವು ಬಿಟ್ಟುಕೊಟ್ಟಿಲ್ಲ. ಇನ್ನು, ಮಾಜಿ ಸಚಿವರ ಉತ್ತರದಿಂದ ಇಡಿ ಅಧಿಕಾರಿಗಳು ತೃಪ್ತರಾಗಿಲ್ಲ ಎಂದು ತಿಳಿದುಬಂದಿದೆ. 

Follow Us:
Download App:
  • android
  • ios