ಇಡಿ ಕಸ್ಟಡಿ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ
ಇಡಿ ವಶದಲ್ಲಿರುವ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ನಡುವೆ, ಈ ಹಗರಣದಲ್ಲಿ ಮತ್ತೊಬ್ಬರು ಮಹಿಳೆಯ ಪಾತ್ರದ ಬಗ್ಗೆಯೂ ಅನುಮಾನ ಮೂಡಿದ್ದು, ಇಡಿ ಕಣ್ಣಿಟ್ಟಿದೆ.
ಶಾಲಾ ಶಿಕ್ಷಕರ ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ದಿಂದ ಶನಿವಾರ ಬಂಧಿಸಲ್ಪಟ್ಟ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರು ಶನಿವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಇಡಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಬಂಗಾಳದ ಹಿರಿಯ ಸಚಿವರನ್ನು ಪಶ್ಚಿಮ ಬಂಗಾಳದ ಕೋಲ್ಕತ್ತದ ಸ್ಥಳೀಯ ನ್ಯಾಯಾಲಯವು ಎರಡು ದಿನಗಳ ಇಡಿ ಕಸ್ಟಡಿಗೆ ಒಪ್ಪಿಸಿದ ಗಂಟೆಗಳ ನಂತರ ಪಾರ್ಥ ಚಟರ್ಜಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿರುವ ಬಗ್ಗೆ ಚಟರ್ಜಿ ಅವರು ಹೇಳಿಕೊಂಡ ಹಿನ್ನೆಲೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಚಟರ್ಜಿ ಅವರನ್ನು ಸರ್ಕಾರಿ ಸ್ವಾಮ್ಯದ ಎಸ್‌ಎಸ್‌ಕೆಎಂ ಆಸ್ಪತ್ರೆಯ ಐಸಿಸಿಯುಗೆ ದಾಖಲಿಸಲಾಗಿತ್ತು ಎಂದು ತಿಳಿದುಬಂದಿದೆ. ಬಳಿಕ ಅವರ ಆರೋಗ್ಯ ಸ್ವಲ್ಪ ಸುಧಾರಿಸಿದ ನಂತರ ಅವರನ್ನು ‘ಕ್ಯಾಬಿನ್’ಗೆ ಸ್ಥಳಾಂತರಿಸಲಾಯಿತು ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಹೇಳು ಪಾರ್ಥ..' ಎಂದು ಚಟರ್ಜಿಗೆ ಗಂಟುಬಿದ್ದಿದ್ಯಾಕೆ ED, ಅಷ್ಟಕ್ಕೂ ಯಾರೀಕೆ ಅರ್ಪಿತಾ?
ಭಾನುವಾರ ಬೆಳಗ್ಗೆ 11 ಗಂಟೆಗೆ ಪಾರ್ಥ ಚಟರ್ಜಿ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಮಂಡಳಿ ಸಭೆ ಸೇರಲಿದೆ ಎಂದು ತಿಳಿದುಬಂದಿದೆ. ಸದ್ಯ, ಅವರನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಯ ಹೃದ್ರೋಗ ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ. ಅವರು ಆಸ್ಪತ್ರೆಗೆ ದಾಖಲಾದ ನಂತರ ಟಿಎಂಸಿ ಪ್ರಧಾನ ಕಾರ್ಯದರ್ಶಿ ಚಟರ್ಜಿ ಅವರ ಮೇಲೆ ಇಸಿಜಿ ಸೇರಿದಂತೆ ಹಲವಾರು ಪರೀಕ್ಷೆಗಳನ್ನು ನಡೆಸಲಾಯಿತು. "ಈ ಸಮಯದಲ್ಲಿ ಅವರು ಸ್ಥಿರವಾಗಿದ್ದಾರೆ. ವೈದ್ಯರ ತಂಡವು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ" ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇನ್ನು, ಸಚಿವರು ಆಸ್ಪತ್ರೆಯಲ್ಲಿರುವ ಕ್ಯಾಬಿನ್ ಹೊರಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ಸಚಿವರ ಮತ್ತೊಬ್ಬರು ಆಪ್ತ ಸಹಾಯಕಿಯ ಮೇಲೂ ಇಡಿ ಕಣ್ಣು..!
ಪಶ್ಚಿಮ ಬಂಗಾಳದ ಹಿರಿಯ ಸಚಿವರಾದ ಪಾರ್ಥ ಚಟರ್ಜಿಯವರ ಆಪ್ತ ಸಹಾಯಕಿಯಾಗಿರುವ ಇನ್ನೊಬ್ಬ ಮಹಿಳೆಯ ಪಾತ್ರದ ಮೇಲೂ ಜಾರಿ ನಿರ್ದೇಶನಾಲಯ ಕಣ್ಣಿಟ್ಟಿದೆ ಎಂದು ತಿಳಿದುಬಂದಿದೆ. ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಲ್ಲಿ (WBSSC) ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದ ಬಹುಕೋಟಿ ಹಣಕಾಸು ಹಗರಣದ ತನಿಖೆ ನಡೆಸುತ್ತಿದೆ.
ಇದಕ್ಕೂ ಮುನ್ನ ಶನಿವಾರ ಪ್ರಸ್ತುತ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿತ್ತು. ದಕ್ಷಿಣ ಕೋಲ್ಕತ್ತಾದಲ್ಲಿರುವ ಆಕೆಯ ನಿವಾಸದಿಂದ ಇಡಿ ಶನಿವಾರ ಸಂಜೆ ಬಂಧಿಸಿತ್ತು. ಬಳಿಕ ತನಿಖಾ ಸಂಸ್ಥೆಯು ಸಚಿವ ಚಟರ್ಜಿಯನ್ನು ಬಂಧಿಸಿತ್ತು.
ಇನ್ನು, ED ಕಣ್ಣಿಟ್ಟಿರುವ ಈ ಎರಡನೇ ಮಹಿಳೆಯ ಹೆಸರು ಮೊನಾಲಿಸಾ ದಾಸ್ ಎಂದು ತಿಳಿದುಬಂದಿದ್ದು, ಈಕೆ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಅಸನ್ಸೋಲ್‌ನಲ್ಲಿರುವ ಕಾಜಿ ನಜ್ರುಲ್ ವಿಶ್ವವಿದ್ಯಾಲಯದ ಬಂಗಾಳಿ ವಿಭಾಗದ ಮುಖ್ಯಸ್ಥೆ ಎಂದು ಹೇಳಲಾಗಿದೆ. ಅರ್ಪಿತಾ ಮುಖರ್ಜಿ ಅವರ ವಿಚಾರಣೆಯ ವೇಳೆ ಮೊನಾಲಿಸಾ ದಾಸ್ ಅವರ ಹೆಸರು ಬೆಳಕಿಗೆ ಬಂದಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ಹಣದ ಲೂಟಿ: ಸಚಿವ ರಾಜೀವ್ ಚಂದ್ರಶೇಖರ್ ವಾಗ್ದಾಳಿ
ತಪ್ಪಿತಸ್ಥರೆಂದು ಸಾಬೀತಾದರೆ ಕ್ರಮ: ಟಿಎಂಸಿ
ಶಾಲಾ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಪಾರ್ಥ ಚಟರ್ಜಿಯನ್ನು ಬಂಧಿಸಿದ ಬಳಿಕ ತೃಣಮೂಲ ಕಾಂಗ್ರೆಸ್ ಈ ವಿವಾದದ ಬಗ್ಗೆ ತನ್ನ ನಿಲುವನ್ನು ತಿಳಿಸಿದೆ. ನ್ಯಾಯಾಲಯದಲ್ಲಿ ಪಶ್ಚಿಮ ಬಂಗಾಳದ ಸಚಿವರು ತಪ್ಪಿತಸ್ಥರೆಂದು ಸಾಬೀತಾದರೆ ಅವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವುದಾಗಿಯೂ ಹೇಳಿದೆ.
ಸಚಿವರ ಬಂಧನ ನಂತರ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್, ‘’ಬಂಗಾಳದ ಎಲ್ಲರಿಗೂ ಈ (ವಂಚನೆ) ಬಗ್ಗೆ ತಿಳಿದಿತ್ತು. ನ್ಯಾಯಾಲಯದ ಮಧ್ಯಪ್ರವೇಶದ ನಂತರ, ತನಿಖಾ ಸಂಸ್ಥೆಗಳು ಆ ಬಗ್ಗೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದವು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ನಾವು ಬಯಸುತ್ತೇವೆ ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.