Redfort &women plea: ಬಹದ್ದೂರ್ ಷಾ ಜಾಫರ್ II ರ ಮೊಮ್ಮಗಳೆಂದು ಹೇಳಿಕೊಂಡ ಮಹಿಳೆಯೊಬ್ಬರು ಕೆಂಪು ಕೋಟೆಯ ಮೇಲೆ ಹಕ್ಕುದಾರಿಕೆ ಸಲ್ಲಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದಕ್ಕೆ ಸುಪ್ರೀಂಕೋರ್ಟ್ ನ್ಯಾಯಾಧೀಶರು ಏನ್ ಹೇಳಿದ್ರು ನೋಡಿ.
ಕೆಂಪು ಕೋಟೆ ದೇಶದ ಅತ್ಯಮೂಲ್ಯವಾದ ಸ್ಮಾರಕಗಳಲ್ಲಿ ಒಂದು. ಸ್ವಾತಂತ್ರ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ಸಮಯದಲ್ಲಿ ದೇಶದ ಪ್ರಧಾನ ಮಂತ್ರಿಯವರು ರಾಷ್ಟ್ರಧ್ವಜರೋಹಣ ಮಾಡುವ ಸ್ಥಳವಿದು. ಆದರೆ ಇಂತಹ ಐತಿಹಾಸಿಕ ಸ್ಥಳಕ್ಕೆ ತಾನು ಹಕ್ಕುದಾರಳು ಎಂದು ಹೇಳಿ ಮಹಿಳೆಯೊಬ್ಬರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಲ್ತಾನ್ ಬೇಗಂ ಎಂಬ ಮಹಿಳೆ, ತಾನು ಬಹಾದ್ದೂರ್ ಷಾ ಜಾಫರ್ II ಅವರ ವಿಧವೆ(ಪತ್ನಿ)ಯ ಮೊಮ್ಮಗಳು, ಹೀಗಾಗಿ ಐತಿಹಾಸಿಕ ಕೆಂಪುಕೋಟೆಯ ಹಕ್ಕುದಾರಳು ನಾನು ಎಂದು ಹೇಳಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಮಹಿಳೆಯ ಅರ್ಜಿಗೆ ಸುಪ್ರೀಂಕೋರ್ಟ್ ಹೇಳಿದ್ದೇನು?
ಈ ಅರ್ಜಿಯನ್ನು ವಿಚಾರಣೆಗ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಸಂಜೀವ್ ಖನ್ನಾ ಅವರು ಈ ಅರ್ಜಿಯ ಆಧಾರ ರಹಿತ ಹಾಗೂ ತಪ್ಪು ಕಲ್ಪನೆಯಿಂದ ಕೂಡಿದೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಈ ರಿಟ್ ಅರ್ಜಿಯೂ ತಪ್ಪು ಗೃಹಿಕೆಯಿಂದ ಕೂಡಿದೆ, ಇಂತಹವುಗಳನ್ನು ಪ್ರೋತ್ಸಾಹಿಸಲಾಗುವುದಿಲ್ಲ ಎಂದರು ಹಾಗೆಯೇ ಮಾತು ಮುಂದುವರೆಸಿದ ನ್ಯಾಯಾಧೀಶರು, ಕೇವಲ ಕೆಂಪು ಕೋಟೆ ಮಾತ್ರ ನಿಮ್ಮದು ಏಕೆ? ಆಗ್ರಾ, ಫತೇಪುರ್ ಸಿಕ್ರಿ, ಹಾಗೂ ಇತರ ಪ್ರದೇಶಗಳಲ್ಲಿರುವ ಕೋಟೆಗಳ ಮೇಲೆ ನಿಮ್ಮ ಹಕ್ಕುದಾರಿಕೆ ಏಕೆ ಇಲ್ಲ ಎಂದು ಪ್ರಶ್ನಿಸಿದ್ದಾರೆ.
ಮಹಿಳೆಯ ಅರ್ಜಿಯಲ್ಲಿ ಏನಿದೆ?
1857ರಲ್ಲಿ ನಡೆದ ಮೊದಲ ಸ್ವಾತಂತ್ರ ಸಂಗ್ರಾಮದ ನಂತರ ಬ್ರಿಟಿಷರು ಒತ್ತಾಯಪೂರ್ವಕವಾಗಿ ಕೆಂಪು ಕೋಟೆಯನ್ನು ತಮ್ಮ ಕುಟುಂಬದವರ ಸುಪರ್ದಿಯಿಂದ ವಶಕ್ಕೆ ಪಡೆದರು ಎಂದು ಅರ್ಜಿದಾರರಾದ ಸುಲ್ತಾನ್ ಬೇಗಂ ತಮ್ಮ ಅರ್ಜಿಯಲ್ಲಿ ವಿವರಿಸಿದ್ದಾರೆ. ಆಗಿನ ಆಡಳಿತಗಾರನಾಗಿದ್ದ ಬಹಾದ್ದೂರ್ ಶಾ ಜಾಫರ್ ಅವರು ತನ್ನ ಪೂರ್ವಜರು ಹಾಗೂ ಮೊಘಲ್ ಸಾಮ್ರಾಜ್ಯದ ಕೊನೆಯ ಆಡಳಿತಗಾರ, ಅವರನ್ನು ಅನ್ಯಾಯವಾಗಿ ಗಡೀಪಾರು ಮಾಡಿ ಈ ಕೆಂಪುಕೋಟೆಯನ್ನು ಕಾನೂನುಬಾಹಿರವಾಗಿ ವಶಕ್ಕೆ ಪಡೆಯಲಾಯ್ತು. ಹಾಗೂ ಬಹಾದ್ದೂರ್ ಶಾ ಜಾಫರ್ ಅವರ ವಿಧವೆ ಪತ್ನಿಯ ವಂಶಸ್ಥೆ ತಾನು ಆಗಿರುವುದರಿಂದ ತನಗೆ ಈ ಕೋಟೆಯ ಮೇಲೆ ಹಕ್ಕಿದೆ. ಭಾರತ ಸರ್ಕಾರವೂ ಇದನ್ನು ಅಕ್ರಮವಾಗಿ ತನ್ನ ವಶದಲ್ಲಿ ಇರಿಸಿಕೊಂಡಿದೆ. ಹೀಗಾಗಿ ಒಂದೋ ಈ ಕೆಂಪು ಕೋಟೆಯನ್ನು ನನಗೆ ಬಿಡಬೇಕು, ಅಥವಾ 1857ರಿಂದ ಇಲ್ಲಿಯವರೆಗೆ ಅದನ್ನು ಅಕ್ರಮವಾಗಿ ತನ್ನ ವಶದಲ್ಲಿ ಇಟ್ಟುಕೊಂಡಿದ್ದಕ್ಕಾಗಿ ಸರ್ಕಾರ ಪ್ರತಿಯಾಗಿ ಪರಿಹಾರ ನೀಡಬೇಕು ಎಂದು ಸುಲ್ತಾನ್ ಬೇಗಂ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದರು. ಅಲ್ಲದೇ ತನ್ನ ಮಗಳ ಸಾವು ಹಾಗೂ ಅನಾರೋಗ್ಯದ ಕಾರಣದಿಂದಾಗಿ ತಾನು ಈ ಬಗ್ಗೆ ಈ ಹಿಂದೆ ಅರ್ಜಿ ಸಲ್ಲಿಸಿರಲಿಲ್ಲ ಎಂದು ಅವರು ವಿವರಿಸಿದ್ದರು.
2021ರಲ್ಲಿ 164 ವರ್ಷ ತಡವಾಗಿ ಬಂದಿದ್ದೀರಾ ಎಂದಿದ್ದ ದೆಹಲಿ ಹೈಕೋರ್ಟ್
ಈ ಮಹಿಳೆ ಈ ಹಿಂದೆ ಅಂದರೆ 2021ರಲ್ಲಿಯೂ ಈ ವಿಚಾರವಾಗಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಈಕೆಯ ಅರ್ಜಿಯನ್ನು ಕಸದ ಬುಟ್ಟಿಗೆ ಎಸೆದಿತ್ತು. ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾದ ವಿಭು ಬಖ್ರು ಹಾಗೂ ಮತ್ತೊಬ್ಬ ನ್ಯಾಯಾಧೀಶ ತುಷಾರ್ ರಾವ್ ಗಡೆಲ್ ಈಕೆಯ ಅರ್ಜಿಯನ್ನು ವಜಾಗೊಳಿಸುವ ವೇಳೆ ಆಕೆಗೆ ನೀವು 164 ವರ್ಷ ತಡವಾಗಿ ಈ ಅರ್ಜಿ ಸಲ್ಲಿಸಲು ಬಂದಿದ್ದೀರಿ ಎಂದು ಹೇಳಿತ್ತು.
ಹೀಗಾಗಿ ಮಹಿಳೆ ಈಗ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅಲ್ಲಿಯೂ ಈಕೆಯ ಅರ್ಜಿ ವಜಾಗೊಂಡಿದೆ.


