ಯುಪಿಯಲ್ಲಿ 26 ಸೀಟುಗಳ ಆಫರ್ ನೀಡಿ, ಉತ್ತರಾಖಂಡದಲ್ಲಿ 30 ಸೀಟುಗಳಿಗೆ ಪಟ್ಟು ಹಿಡಿದ ಸಮಾಜವಾದಿ ಪಾರ್ಟಿ. ಮಹಾಮೈತ್ರಿ ಮುರಿಯಲು ಅಖಿಲೇಶ್ ಯಾದವ್ ಪರೋಕ್ಷ ದಾಳ ಉರುಳಿಸಿದರಾ? ಸೀಟು ಹಂಚಿಕೆ ಬಿಕ್ಕಟ್ಟಿನ ಪೂರ್ಣ ರಾಜಕೀಯ ವಿವರ ಇಲ್ಲಿದೆ.

ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಆರಂಭದಲ್ಲಿ 181 ಸೀಟುಗಳಿಗೆ ಬೇಡಿಕೆ ಇಟ್ಟಿತ್ತು. ನಂತರ ಅದನ್ನು 130ಕ್ಕೆ ಇಳಿಸಿದ್ದರೂ, ಸಮಾಜವಾದಿ ಪಾರ್ಟಿ ಕೇವಲ 26 ಸೀಟುಗಳ ಆಫರ್ ಮುಂದಿಟ್ಟು ಕಾಂಗ್ರೆಸ್‌ಗೆ ಶಾಕ್ ನೀಡಿದೆ. ಈ ನಿಟ್ಟಿನಲ್ಲಿ ಎಸ್‌ಪಿಯ ಈ ನಡೆಯ ವಿರುದ್ಧ ಉತ್ತರ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮತ್ತು ಸಂಸದ ಇಮ್ರಾನ್ ಮಸೂದ್ ಬಹಿರಂಗವಾಗಿಯೇ ಕಿಡಿಕಾರಿದ್ದಾರೆ. ನಮಗೆ 26 ಸೀಟುಗಳನ್ನು ಕೊಟ್ಟಿದ್ದಾರೆ, ನಾವೇನು ಭಿಕ್ಷುಕರೇ? ಎಂದು ಪ್ರಶ್ನಿಸುವ ಮೂಲಕ ಮೈತ್ರಿಕೂಟದ ಒಳಗಿನ ಅಸಮಾಧಾನವನ್ನು ಹೊರಹಾಕಿದ್ದಾರೆ.

ಏಕಪಕ್ಷೀಯ ಅಭ್ಯರ್ಥಿ ಘೋಷಣೆ!

ದೆಹಲಿಯಲ್ಲಿ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿರುವಾಗಲೇ, ಎಸ್‌ಪಿ 5 ಕ್ಷೇತ್ರಗಳಿಗೆ ಏಕಪಕ್ಷೀಯವಾಗಿ ಅಭ್ಯರ್ಥಿಗಳನ್ನು ಘೋಷಿಸಿದೆ. ಮಾಧ್ಯಮಗಳ ಮೂಲಕ ಸೀಟುಗಳ ಪಟ್ಟಿ ಕಳುಹಿಸುವುದು ಕಾಂಗ್ರೆಸ್‌ಗೆ ಮಾಡಿದ ಅವಮಾನ ಎಂದು ಮಸೂದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಮೈತ್ರಿ ಗೊಂದಲಕ್ಕೆ ತೆರೆ ಬಿದ್ದಿಲ್ಲ. ಮುಂದೆ ಈ ಘಟಬಂಧನ ಏನಾಗುತ್ತೋ ಎನ್ನುವುದನ್ನು ಕಾದು ನೋಡಬೇಕಿದೆ.

ಉತ್ತರಾಖಂಡದಲ್ಲಿ ಎಸ್‌ಪಿ ಒತ್ತಡ ತಂತ್ರ!

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಕಡಿಮೆ ಸೀಟು ನೀಡಲು ಮುಂದಾಗಿರುವ ಎಸ್‌ಪಿ, ಉತ್ತರಾಖಂಡದ ಒಟ್ಟು 70 ಕ್ಷೇತ್ರಗಳ ಪೈಕಿ ತನಗೆ 30 ಸೀಟುಗಳನ್ನು ಬಿಟ್ಟುಕೊಡಲೇಬೇಕು ಎಂದು ಕಾಂಗ್ರೆಸ್ ಮುಂದೆ ಬೇಡಿಕೆ ಇಟ್ಟಿದೆ. ಒಂದು ವೇಳೆ ಕಾಂಗ್ರೆಸ್ 30 ಸೀಟುಗಳನ್ನು ನೀಡಲು ಒಪ್ಪದಿದ್ದರೆ, ಮೈತ್ರಿ ಮುರಿದುಕೊಂಡು ಉತ್ತರಾಖಂಡದ ಎಲ್ಲಾ 70 ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಎಸ್‌ಪಿ ಎಚ್ಚರಿಕೆ ನೀಡಿದೆ. 2022ರ ಉತ್ತರಾಖಂಡ ಚುನಾವಣೆಯಲ್ಲಿ ಎಸ್‌ಪಿ ಒಂದೇ ಒಂದು ಸೀಟು ಗೆದ್ದಿರಲಿಲ್ಲ ಮತ್ತು ಕೇವಲ ಶೇ. 0.29ರಷ್ಟು ಮತ ಪಡೆದಿತ್ತು. ಹೀಗಿದ್ದರೂ 30 ಸೀಟುಗಳಿಗೆ ಬೇಡಿಕೆ ಇಟ್ಟಿರುವುದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ.

ಎರಡೂ ರಾಜ್ಯಗಳಲ್ಲಿ 'ಕೈ' ಪಾಳಯಕ್ಕೆ 'ಮಗ್ಗಲು ಮುಳ್ಳಾದ' ದೋಸ್ತಿ!

ಹೆಚ್ಚು ಬಲವಿರುವ ಉತ್ತರ ಪ್ರದೇಶದಲ್ಲಿ ಎಸ್‌ಪಿ ಸೀಟು ಬಿಟ್ಟುಕೊಡಲು ಹಿಂದೇಟು ಹಾಕುತ್ತಿದೆ. ಆದರೆ ತನಗೆ ನೆಲೆಯೇ ಇಲ್ಲದ ಉತ್ತರಾಖಂಡದಲ್ಲಿ ದೊಡ್ಡ ಪಾಲು ಕೇಳುತ್ತಿದೆ. ಬಿಜೆಪಿಯನ್ನು ಎದುರಿಸಲು ಒಂದಾಗಿದ್ದ ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷಗಳ ನಡುವೆಯೇ ಈಗ ಸೀಟು ಹಂಚಿಕೆ ಗೊಂದಲ ತಾರಕಕ್ಕೇರಿದ್ದು, ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆಕ್ಕೆ ಪೆಟ್ಟು ಬಿದ್ದಂತಾಗಿದೆ.

ಅವಮಾನಕಾರಿ ಆಫರ್ ಮೂಲಕ ಕಾಂಗ್ರೆಸ್‌ಗೆ ಹೊರದಾರಿ!

ಉತ್ತರ ಪ್ರದೇಶದ 403 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗೆ ಕೇವಲ 26 ಸೀಟುಗಳ ಆಫರ್ ನೀಡುವ ಮೂಲಕ, ಮೈತ್ರಿ ಮುಂದುವರಿಸಲು ಅಸಾಧ್ಯವಾದ ವಾತಾವರಣವನ್ನು ಎಸ್‌ಪಿ ಸೃಷ್ಟಿಸಿದೆ. ನೇರವಾಗಿ ಮೈತ್ರಿ ಮುರಿದುಕೊಂಡರೆ 'ಮೈತ್ರಿ ಧರ್ಮ ಮುರಿದ' ಅಪವಾದ ಬರುತ್ತದೆ ಎಂಬ ಕಾರಣಕ್ಕೆ, ಕಾಂಗ್ರೆಸ್ ತಾನಾಗಿಯೇ ಮೈತ್ರಿಯಿಂದ ಹೊರನಡೆಯುವಂತೆ ಎಸ್‌ಪಿ ಒತ್ತಡ ಹೇರುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ತನಗೆ ನೆಲೆಯೇ ಇಲ್ಲದ ಉತ್ತರಾಖಂಡದಲ್ಲಿ ಬರೋಬ್ಬರಿ 30 ಸೀಟುಗಳನ್ನು ಕೇಳುತ್ತಿರುವುದು ಎಸ್‌ಪಿಯ ಪೂರ್ವನಿಯೋಜಿತ ತಂತ್ರದಂತಿದೆ. ಕಾಂಗ್ರೆಸ್ ಈ ಬೇಡಿಕೆಗೆ ಒಪ್ಪುವುದಿಲ್ಲ ಎಂದು ತಿಳಿದೇ, ಅದನ್ನೇ ನೆಪವಾಗಿಟ್ಟುಕೊಂಡು ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ಎಸ್‌ಪಿ ವೇದಿಕೆ ಸಿದ್ಧಪಡಿಸಿಕೊಂಡಂತಿದೆ. ದೆಹಲಿಯಲ್ಲಿ ಮೈತ್ರಿ ಮಾತುಕತೆ ಚಾಲ್ತಿಯಲ್ಲಿರುವಾಗಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದು ಮತ್ತು ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು, ನಮಗೆ ಮೈತ್ರಿಯ ಅನಿವಾರ್ಯತೆ ಇಲ್ಲ ಎಂಬ ಪರೋಕ್ಷ ಸಂದೇಶವನ್ನು ಎಸ್‌ಪಿ ರವಾನಿಸಿದಂತಿದೆ.