ಬುರ್ಕಾದಲ್ಲಿ 18 ಲಕ್ಷದ ಚಿನ್ನ ಪೋಣಿಸಿ ಕಳ್ಳಸಾಗಣೆ: ಹೈದರಾಬಾದ್ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳೆ
- ಬುರ್ಕಾದಲ್ಲಿತ್ತು 18 ಲಕ್ಷ ಮೌಲ್ಯದ ಚಿನ್ನದ ಮಣಿ
- ಬುರ್ಕಾದ ಡಿಸೈನ್ ಒಳಗೆ ಪೋಣಿಸಿದ್ದ ಬಂಗಾರ
- ಹೈದರಾಬಾದ್ ಏರ್‌ಪೋರ್ಟ್‌ನಲ್ಲಿ ತಪಾಸಣೆ ವೇಳೆ ಬಯಲು
ಹೈದರಾಬಾದ್(ಮಾ.1): ಬುರ್ಖಾದ ಮೇಲೆ ಡಿಸೈನ್‌ನಂತೆ ಹೊಳೆಯುವ ರೋಡಿಯಂ ಲೇಪಿತ ಮಣಿಗಳ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಿ ತಂದಿದ್ದ ಮಹಿಳೆಯೊಬ್ಬರು ಹೈದರಾಬಾದ್ ಏರ್‌ಪೋರ್ಟ್‌ನಲ್ಲಿ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದು, ಅವರ ಬುರ್ಕಾದಲ್ಲಿದ್ದ 18 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಮಣಿಗಳನ್ನು ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಮಹಿಳೆ ಫೆ. 27 ರಂದು ದುಬೈನಿಂದ ಹೈದರಾಬಾದ್‌ಗೆ ಆಗಮಿಸಿದ್ದರು.
ಇತ್ತೀಚಿನ ದಿನಗಳಲ್ಲಿ, ಚಿನ್ನ ಮತ್ತು ಮಾದಕವಸ್ತು ಕಳ್ಳಸಾಗಣೆದಾರರು ಭಾರಿ ಸೃಜನಶೀಲತೆಯನ್ನು ತೋರುತ್ತಿದ್ದಾರೆ. ಕಳ್ಳಸಾಗಣೆಗೆ ಎಂತಹದೇ ತಂತ್ರ ತೋರಿದರು ನಮ್ಮ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಏರ್‌ಪೋರ್ಟ್‌ನಲ್ಲಿ ಖದೀಮರು ಸಿಕ್ಕಿ ಬೀಳುವುದು ಸಾಮಾನ್ಯವಾಗಿದೆ. ಆದಾಗ್ಯೂ ಬುದ್ದಿ ಕಲಿಯದ ಕೆಲವರು ಹೊಸ ತಂತ್ರಗಳನ್ನು ಪ್ರಯೋಗಿಸುತ್ತಲೆ ಇರುತ್ತಾರೆ. ಹಾಗೆಯೇ ತೆಲಂಗಾಣದ ( Telangana) ಹೈದರಾಬಾದ್‌ನ (Hyderabad) ಶಂಶಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(Shamshabad International Airport) ಕಸ್ಟಮ್ಸ್ ಅಧಿಕಾರಿಗಳು ಸುಮಾರು 18 ಲಕ್ಷ ರೂಪಾಯಿ ಮೌಲ್ಯದ, 350 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಈ ಚಿನ್ನವನ್ನು ಬುರ್ಖಾದಲ್ಲಿರುವ ಡಿಸೈನ್‌ನಂತೆ ಮಣಿಗಳ ರೂಪದಲ್ಲಿ ಹೊಲಿಯಲಾಗಿತ್ತು. ಫೆಬ್ರವರಿ 26 ರಂದು ದುಬೈನಿಂದ ಬಂದ ಮಹಿಳೆಯೊಬ್ಬರು ಬುರ್ಖಾದ ಮೇಲೆ ರೋಡಿಯಂ ಲೇಪಿತ ಮಣಿಗಳ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದರು.
ನಂಬಲರ್ಹವಾದ ಸುಳಿವಿನ ಮೇರೆಗೆ ಏರ್‌ಪೋರ್ಟ್‌ನ ಕಸ್ಟಮ್ ಅಧಿಕಾರಿಗಳು ಮಹಿಳೆಯನ್ನು ಪ್ರಶ್ನಿಸಿ ಆಕೆಯ ಲಗೇಜ್ ಅನ್ನು ಪರಿಶೀಲಿಸಿದರು. ನಂತರ ಆಕೆಯ ಬುರ್ಖಾವನ್ನು ತೆಗೆದು ಅದರಲ್ಲಿ ಜೋಡಿಸಿದ್ದ ಸಣ್ಣ ಚಿನ್ನದ ಮಣಿಗಳನ್ನು ಹೊರತೆಗೆದಿದ್ದಾರೆ. ಬುರ್ಖಾದಿಂದ ಚಿನ್ನವನ್ನು ಹೊರ ತೆಗೆಯುತ್ತಿರುವ ವಿಡಿಯೋವನ್ನು ಹೈದರಾಬಾದ್ ಏರ್‌ಪೋರ್ಟ್‌ನ ಕಸ್ಟಮ್ಸ್ ಇಲಾಖೆಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಅರ್ಧ ಕೆಜಿ ಚಿನ್ನ ಸಾಗಿಸೋಕೆ ಎನೇಲ್ಲಾ ಟ್ರಿಕ್ಸ್ : ಎಲ್ಲೆಲ್ಲಾ ಇಟ್ಕೊಂಡಿದ್ದ..?
'27.02.2022 ರಂದು, ಹೈದರಾಬಾದ್ ಕಸ್ಟಮ್ಸ್ , ಫ್ಲೈಟ್ ನಂ.ಎಫ್‌ಜೆಡ್( FZ-439) ಮೂಲಕ ದುಬೈನಿಂದ ಬಂದ ಪ್ರಯಾಣಿಕರೊಬ್ಬರ ವಿರುದ್ಧ 350.00 ಗ್ರಾಂ ತೂಕದ 18.18 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಪ್ರಕರಣವನ್ನು ದಾಖಲಿಸಿದೆ. ಮಣಿಗಳ ರೂಪದಲ್ಲಿ ಈ ಚಿನ್ನವನ್ನು ಅವರು ಬುರ್ಖಾದಲ್ಲಿ ಬಚ್ಚಿಟ್ಟಿದ್ದರು' ಎಂದು ಬರೆಯಲಾಗಿದೆ.
100 ಕೋಟಿ ಚಿನ್ನ ಸ್ಮಗ್ಲಿಂಗ್: ಜ್ಯುವೆಲ್ಲರಿ ವರ್ತಕನ ಮಗ ಸೆರೆ!
ಈ ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಈಗಾಗಲೇ ಅನೇಕ ಬಾರಿ, ಭಾರತದಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳುವಾಗ ಅಥವಾ ಅಲ್ಲಿಂದ ವಾಪಸ್ ಭಾರತಕ್ಕೆ ಬರುವ ವೇಳೆ ಹಲವಾರು ಪ್ರಯಾಣಿಕರು ಅಕ್ರಮ ವಸ್ತುಗಳನ್ನು ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದಿದ್ದಾರೆ. ಪ್ರಪಂಚದಾದ್ಯಂತ ಕಳ್ಳಸಾಗಾಣಿಕೆದಾರರು ಮಾದಕ ದ್ರವ್ಯಗಳು ಮತ್ತು ಮಾದಕ ದ್ರವ್ಯಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಅನನ್ಯ ಮತ್ತು ವಿಲಕ್ಷಣವಾದ ಮಾರ್ಗಗಳನ್ನು ಹೇಗೆ ಅಳವಡಿಸಿಕೊಳ್ಳುತ್ತಾರೆ ಎಂಬುದಕ್ಕೆ ಈ ಪ್ರಕರಣ ಮತ್ತೊಂದು ಉದಾಹರಣೆಯಾಗಿದೆ.