ಮುಂಬೈನ ಲೋಕಲ್ ರೈಲಿನಲ್ಲಿ ವಿಶೇಷಚೇತನರಿಗೆ ಮೀಸಲಾದ ಬೋಗಿಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಹಿಳೆಯೊಬ್ಬರು ಹಲ್ಲೆ ನಡೆಸಿದ್ದಾರೆ
ಮುಂಬೈ: ವಿಶೇಷ ಚೇತನರಿಗೆ ಮೀಸಲಾದ ರೈಲ್ವೆ ಬೋಗಿಯಲ್ಲಿ ಸಾಮಾನ್ಯ ಪ್ರಯಾಣಿರು ಪ್ರಯಾಣಿಸುವುದೇ ಅಪರಾಧ. ಹೀಗಿರುವಾಗ ಒಂದು ತಪ್ಪು ಸಾಲದು ಎಂಬಂತೆ ಮಹಿಳೆಯೊಬ್ಬಳು ಅಲ್ಲಿದ್ದ ವೃದ್ಧ ವಿಶೇಷಚೇತನ ವ್ಯಕ್ತಿಯ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿದ ಆಘಾತಾರಿ ಘಟನೆ ಮುಂಬೈನಲ್ಲಿ ನಡೆದಿದೆ. ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಕೆ ವಿಶೇಷಚೇತನ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಲ್ಲದೇ ಕೆಟ್ಟ ಪದಗಳಿಂದ ಅವರನ್ನು ನಿಂದಿಸಿದ್ದಾಳೆ. ಮುಂಬೈನ ಲೋಕಲ್ ರೈಲಿನಲ್ಲಿ ಈ ಘಟನೆ ನಡೆದಿದೆ.
ವಿಶೇಷ ಚೇತನ ವ್ಯಕ್ತಿಯಾಗಿರುವ ಉಮೇಶ್ ಪಾಟೀಲ್ ಹಲ್ಲೆಗೊಳಗಾದವರು. ವಿಶೇಷಚೇತನರಿಗೆ ಮೀಸಲಾಗಿದ್ದ ಬೋಗಿಯಲ್ಲೇ ಈ ಘಟನೆ ನಡೆದಿದೆ. ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಉಮೇಶ್ ಪಾಟೇಲ್ ಅವರು ರೈಲಿನ ಕಿಟಕಿ ಬಳಿ ನಿಂತಿದ್ದಾರೆ. ಈ ವೇಳೆ ಅವರ ಬಳಿ ಬಂದ ಮಹಿಳೆಯೊಬ್ಬರು ಅವರ ಮೇಲೆ ಹಲ್ಲೆ ಮಾಡಿ ಕೆಟ್ಟ ಭಾಷೆಯಲ್ಲಿ ಬೈದಿದ್ದಾರೆ. ಈ ವೇಳೆ ಮಹಿಳೆಯ ಪತಿ ಬಂದು ಆಕೆಯನ್ನು ಅಲ್ಲಿಂದ ಎಳೆದೊಯ್ದಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಉಮೇಶ್ ಪಾಟೀಲ್ ಅವರನ್ನು ಮಾಧ್ಯಮಗಳು ಸಂಪರ್ಕಿಸಿದ್ದು, ಈ ವೇಳೆ ಮಾತನಾಡಿದ ಅವರು, ಮಹಿಳೆ ವಿಶೇಷಚೇತನ ಕಂಪಾರ್ಟ್‌ಮೆಂಟ್‌ನ ಬಾಗಿಲಲ್ಲೇ ಕುಳಿತಿದ್ದರು. ಈ ವೇಳೆ ರೈಲು ಡೊಂಬಿವಿಲಿ ತಲುಪುತ್ತಿದ್ದಂತೆ ನಾನು ಆಕೆಗೆ ಎದ್ದು ನಿಲ್ಲುವಂತೆ ಹೇಳಿದೆ. ಆಕೆ ಎದ್ದು ನಿಂತರೇ ಇತರರು ಅಲ್ಲಿ ನಿಲ್ಲಬಹುದು ಎಂಬ ಉದ್ದೇಶದಿಂದ ಹೇಳಿದೆ. ಆದರೆ ಆಕೆ ಹಾಗೂ ಆಕೆಯ ಗಂಡ ನನ್ನ ಜೊತೆ ವಾದ ಮಾಡಿದರು. ನನ್ನ ಹಾಗೂ ನನ್ನ ಜೊತೆ ಆಕ್ಷೇಪ ವ್ಯಕ್ತಪಡಿಸಿದ ಇನ್ನೊಬ್ಬರ ಮೇಲೂ ಅವರು ಕೆಟ್ಟ ಪದ ಬಳಕೆ ಮಾಡಿದರು.
ತಾನು ಗರ್ಭಿಣಿ ಎಂದು ಹೇಳುವ ಮೂಲಕ ಆ ಮಹಿಳೆ ಬಾಗಿಲಿನ ಬಳಿ ಕುಳಿತುಕೊಂಡಿದ್ದನ್ನು ಸಮರ್ಥಿಸಿಕೊಂಡರು. ಈ ವೇಳೆ ಮಾತಿನ ಮೇಲೆ ನಿಗಾ ಇಡುವಂತೆ ಹೇಳಿದಾಗ, ನನ್ನ ಮಾತುಗಳನ್ನೇ ತಿರುವಿದ ಆಕೆ ನಾನು ಆಕೆಯ ಚಾರಿತ್ರ್ಯದ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿದಳು. ಅಲ್ಲದೇ ಆಕ್ರಮಣಕಾರಿಯಾಗಿ ಹಲ್ಲೆ ಮಾಡಿದಳು. ಅವಳು ನನ್ನ ಮೇಲೆ ಉಗುರುಗಳಿಂದ ಪರಚಿ ಅವಾಚ್ಯ ಶಬ್ದಗಳಿಂದ ನಿಂದಿಸಿದಳು. ಬರೀ ಇಷ್ಟೇ ಅಲ್ಲ ರೈಲಿನ ತುರ್ತು ಸರಪಳಿಯನ್ನು ಸಹ ಎಳೆದು, ಕಂಪಾರ್ಟ್‌ಮೆಂಟ್‌ನಲ್ಲಿ ಭೀತಿ ಮೂಡಿಸಿದಳು. ಕೊನೆಗೆ ಅವಳ ಪತಿ ಅವಳನ್ನು ದೂರ ಎಳೆದುಕೊಂಡು ಹೋದ ಆಕೆಯ ವರ್ತನೆಯಿಂದ ನಾನು ಬೆಚ್ಚಿಬಿದ್ದೆ ಎಂದು ಪಾಟೀಲ್ ಹೇಳಿದರು.
ಅಂಬರ್ನಾಥ್ ನಿವಾಸಿಯಾದ ಪಾಟೀಲ್ ಸೇವ್ರಿಯಲ್ಲಿ ಕೆಲಸ ಮಾಡುತ್ತಾರೆ. ತಮ್ಮ ಕೆಲಸವು ಸುಲಭವಾಗಿ ರಜೆ ತೆಗೆದುಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಈ ಕಾರಣಕ್ಕೆ ನಾನು ಪೊಲೀಸ್ ಠಾಣೆಗಳ ಸುತ್ತಲೂ ಓಡಾಡಲು ಸಾಧ್ಯವಿಲ್ಲ. ನಾನು ಮುಗ್ಧ ವ್ಯಕ್ತಿ. ಹೀಗಾಗಿ ನಾನು ಪ್ರತೀಕಾರ ತೀರಿಸಿಕೊಳ್ಳಲೂ ಇಲ್ಲ. ನಾನು ಎಂದಿಗೂ ಮಹಿಳೆಯರೊಂದಿಗೆ ಕೆಟ್ಟದಾಗಿ ವರ್ತಿಸಿಲ್ಲ, ಆದರೂ ನನ್ನದಲ್ಲದ ತಪ್ಪಿಗೆ ಸಾರ್ವಜನಿಕವಾಗಿ ನನ್ನ ಮೇಲೆ ಹಲ್ಲೆ ನಡೆಸಲಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವೀಡಿಯೋ ವೈರಲ್ ಆಗುತ್ತಿದ್ದಂತೆ ಡೊಂಬಿವ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP)ತನ್ನನ್ನು ಸಂಪರ್ಕಿಸಿ ದೂರು ದಾಖಲಿಸುವಂತೆ ಕೇಳಿಕೊಂಡಿದ್ದಾರೆ ಆದರೆ ತಾನು CSMT GRP ಅನ್ನು ಸಂಪರ್ಕಿಸುವುದಾಗಿ ಹೇಳಿದ್ದಾಗಿ ಪಾಟೀಲ್ ಹೇಳಿದರು ಎಂದು ವರದಿಯಾಗಿದೆ. ಆದರೆ, ಇಲ್ಲಿಯವರೆಗೆ, ಡೊಂಬಿವ್ಲಿ ಅಥವಾ CSMT GRP ಗೆ ಪಾಟೀಲ್ ಅವರಿಂದ ಔಪಚಾರಿಕ ದೂರು ಬಂದಿಲ್ಲ.
ಮುಂಬೈ ಲೋಕಲ್ ರೈಲಿನಲ್ಲಿ ಕಳೆದ ಮೇ ತಿಂಗಳ ಆರಂಭದಲ್ಲಿಯೂ ಇದೇ ರೀತಿಯ ಘಟನೆ ವರದಿಯಾಗಿತ್ತು. ಸ್ಥಳೀಯ ರೈಲಿನಲ್ಲಿ ಅಂಗವಿಕಲ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮುಂಬ್ರಾದ 40 ವರ್ಷದ ಪ್ಲಂಬರ್ ಒಬ್ಬನನ್ನು ಬಂಧಿಸಲಾಗಿತ್ತು. ಆರೋಪಿ ಮೊಹಮ್ಮದ್ ಇಸ್ಮಾಯಿಲ್ ಹಸನ್ ಅಲಿ ಬೇಗ್ ನನ್ನು ಮೇ 21 ರಂದು ಬಂಧಿಸಿ ಸಿಎಸ್‌ಎಂಟಿ ರೈಲ್ವೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿತು.
