ಕನ್ನಡ ಪ್ರೇಮ ಮೆರೆದ ಬೆಂಗಳೂರು ಆಟೋ ಚಾಲಕ: ಹಿಂದಿ ಮಾತನಾಡುವಂತೆ ಒತ್ತಾಯಿಸಿದ ಯುವತಿಗೆ ತರಾಟೆ
ಮ್ಮ ತಾಯ್ನಾಡು ಕರ್ನಾಟಕ ಆಗಿದ್ದು, ಕನ್ನಡದಲ್ಲಿಯೇ ಮಾತನಾಡುತ್ತೇವೆ ಎಂದು ಹಿಂದಿ ಮಾತನಾಡುವಂತೆ ಒತ್ತಾಯಿಸಿದ ಯುವತಿಗೆ ಆಟೋ ಚಾಲಕ ತರಾಟೆಗೆ ತೆಗೆದುಕೊಂಡು ಭಾಷಾ ಪ್ರೇಮ ಮೆರೆದಿರುವ ವೀಡಿಯೋ ವೈರಲ್ ಆಗಿದೆ.
ಬೆಂಗಳೂರು (ಮಾ.13): ಬೆಂಗಳೂರಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದೆ. ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯಲ್ಲ. ನಮ್ಮ ತಾಯ್ನಾಡು ಕರ್ನಾಟಕ ಆಗಿದ್ದು, ಕನ್ನಡದಲ್ಲಿಯೇ ಮಾತನಾಡುತ್ತೇವೆ ಎಂದು ಹಿಂದಿ ಮಾತನಾಡುವಂತೆ ಒತ್ತಾಯಿಸಿದ ಯುವತಿಗೆ ಆಟೋ ಚಾಲಕ ತರಾಟೆಗೆ ತೆಗೆದುಕೊಂಡು ಭಾಷಾ ಪ್ರೇಮ ಮೆರೆದಿರುವ ವೀಡಿಯೋ ವೈರಲ್ ಆಗಿದೆ.
ಹೌದು, ಕನ್ನಡ ನಾಡು, ನುಡಿ, ಭಾಷೆಯನ್ನು ಬೀದಿ ಬೀದಿಗಳಲ್ಲಿ ಪ್ರಚಾರ ಮಾಡಿ ಉಳಿಸಿ ಬೆಳೆಸುತ್ತಿರುವವರಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಎಂದರೆ ಆಟೋ ಡ್ರೈವರ್‌ಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಕಾರಣ, ಬಹುತೇಕ ಆಟೋ ಡ್ರೈವರ್‌ಗಳು ಎಲ್ಲ ಹಿಂದಿ, ಇಂಗ್ಲೀಷ್, ತಮಿಳು, ತೆಲುಗು, ಉರ್ದು ಹಾಗೂ ಇತರೆ ಭಾಷೆಗಳನ್ನು ಬಲ್ಲವರಾಗಿದ್ದರೂ ಅವರು ಮೊದಲು ವ್ಯವಹರಿಸುವಾಗ ಮೊದಲು ಕನ್ನಡ ಭಾಷೆಯನ್ನು ಬಳಕೆ ಮಾಡುತ್ತಾರೆ. ಇನ್ನು ಕೆಲವೊಮ್ಮೆ ಪ್ರಯಾಣಿಕರ ವೇಷ ಭೂಷಣವನ್ನು ನೋಡಿ ಉತ್ತರ ಭಾರತದ ರಾಜ್ಯದವರಾದರೆ ಹಿಂದಿ, ಬುರ್ಖಾ ಧರಿಸಿದ್ದರೆ ಉರ್ದು ಮಾತನಾಡುವುದನ್ನು ನೋಡಿದ್ದೇವೆ.
Bengaluru News: ಹೀಗೂ ಉಂಟು..! ಪತ್ನಿ ತಡವಾಗಿ ಏಳ್ತಾಳೆ ಎಂದು ಪತಿಯಿಂದ ಪೊಲೀಸರಿಗೆ ದೂರು
ಹಿಂದಿಯಲ್ಲಿಯೇ ಮಾತನಾಡುವಂತೆ ಯುವತಿ ಒತ್ತಾಯ: ಆದರೆ, ಇಲ್ಲೊಬ್ಬ ಮಹಿಳೆ ಆಟೋಗೆ ಹತ್ತಿದ ಕೂಡಲೇ ಆಟೋ ಡ್ರೈವರ್‌ನೊಂದಿಗೆ ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ಮಾತನಾಡುತ್ತಾ ವ್ಯವಹಾರ ನಡೆಸಿದ್ದಾರೆ. ಆಗ ಕನ್ನಡದಲ್ಲಿಯೇ ಮಾತನಾಡಿದ ಆಟೋ ಡ್ರೈವರ್ ಪ್ರಯಾಣಿಕ ಮಹಿಳೆಯೂ ಕೂಡ ಕನ್ನಡದಲ್ಲಿಯೇ ಮಾತನಾಡಲು ಪ್ರೇರಣೆ ಆಗುವಂತೆ ಅವರ ಭಾಷೆಯನ್ನು ಅರ್ಥೈಸಿಕೊಂಡು ಕನ್ನಡದಲ್ಲಿಯೇ ಪ್ರತ್ಯುತ್ತರ ನೀಡುತ್ತಾ ಮಾತು ಮುಂದುವರೆಸಿದ್ದಾನೆ. ಆದರೆ, ಆಟೋ ಚಾಲಕನ ಬಗ್ಗೆ ಇಂಗ್ಲೀಷ್‌ನಲ್ಲಿ ಬೈಯಲು ಆರಂಭಿಸಿ ಭಾರತದಲ್ಲಿರುವ ನೀವು ಹಿಂದಿಯಲ್ಲಿ ಮಾತನಾಡಬೇಕು ಎಂದು ಒತ್ತಾಯ ಮಾಡಿದ್ದಾಳೆ.
ಸಿಟ್ಟಿಗೆದ್ದ ಆಟೋ ಡ್ರೈವರ್‌ನಿಂದ ಇಂಗ್ಲೀಷ್‌ನಲ್ಲಿ ತರಾಟೆ: ಇನ್ನು ಕರ್ನಾಟಕಕ್ಕೆ ಬಂದು ಕನ್ನಡದಲ್ಲಿ ಮಾತನಾಡಿದಿದ್ದರೂ ಹಿಂದಿಯಲ್ಲಿ ಮಾತನಾಡುವಂತೆ ಹೇಳಿದ ಯುವತಿಗೆ ಇಂಗ್ಲೀಷ್ ಭಾಷೆಯಲ್ಲಿಯೇ ಮಾತನಾಡುತ್ತಾ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಯಾಕೆ ಕನ್ನಡವನ್ನು ಮಾತನಾಡುವುದಿಲ್ಲ. ಉತ್ತರ ಭಾರತದ ನೀವು ದುಡಿದು ತಿನ್ನಲು ಭಿಕ್ಷುಕರಂತೆ ಬಂದಿದ್ದೀರಿ. ಇದು ನಮ್ಮ ಭೂಮಿ ಆಗಿದ್ದು, ಇದು ನಿಮ್ಮ ಭೂಮಿಯಲ್ಲ. ನಾವು ಯಾಕೆ ನಮ್ಮ ತಾಯ್ನಾಡಿನಲ್ಲಿ ಹಿಂದಿಯನ್ನು ಮಾತನಾಡಬೇಕು ಎಂದು ತರಾಟೆ ತೆಗೆದುಕೊಂಡಿದ್ದಾರೆ. ಇದನ್ನು ಸಹಿಸದೇ ಯುವತಿ ಆಟೋದಿಂದ ಇಳಿದು ಹೋಗಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್: ಕರ್ನಾಟಕದಲ್ಲಿ ಭಾಷೆ ವಿಚಾರಕ್ಕೆ ಆಟೋ ಚಾಲಕ ಹಾಗೂ ಪ್ರಯಾಣಿಕರ ಮಧ್ಯೆ ಜಟಾಪಟಿ ನಡೆದಿರುವ ವಿಡಿಯೋ ಇದೀಗ ಇನ್‌ಸ್ಟಾಗ್ರಾಮ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕನ್ನಡ ಇಲ್ಲಿನ ಸ್ಥಳೀಯ ಭಾಷೆಯಾಗಿದ್ದು, ಕನ್ನಡದಲ್ಲೇ ಮಾತನಾಡಬೇಕೆಂದು ಆಟೋ ಚಾಲಕ ಯುವತಿಯೊಬ್ಬಳ ಮೇಲೆ ಹರಿಹಾಯ್ದಿದ್ದಾನೆ. ಆದರೆ ಯುವತಿ ಅದಕ್ಕೆ ಸಮ್ಮತಿಸಿಲ್ಲ. ನಾನೇಕೆ ಕನ್ನಡದಲ್ಲಿ ಮಾತನಾಡಬೇಕೆಂದು ಜಗಳಕ್ಕಿಳಿದಿದ್ದಾಳೆ. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಬೆಂಗಳೂರಲ್ಲಿ ಕನ್ನಡೇತರರಿಗೆ ತಾರತಮ್ಯ ಮಾಡಲಾಗುತ್ತಿದೆಯೇ ಎಂಬ ಸವಾಲುಗಳು ಮರುಜೀವ ಪಡೆದುಕೊಂಡಿವೆ. ಸಾರ್ವಜನಿಕ ವಾಹನಗಳಲ್ಲಿ ಸಂಚಾರ ಮಾಡುವುದು, ಸ್ಥಳೀಯರೊಂದಿಗೆ ಸಂಭಾಷಿಸುವುದು ಕನ್ನಡೇತರರಿಗೆ ಕಷ್ಟವಾಗುತ್ತಿದೆ ಎಂಬ ಚರ್ಚೆಗಳು ಕೂಡ ಶುರುವಾಗಿವೆ.
Bengaluru Crime: ಹೆಂಡತಿಯನ್ನು ಮಂಚಕ್ಕೆ ಕರೆದವನ ತಲೆಯನ್ನೇ ಸೀಳಿದ ಗಂಡ: ಕುಡಿದ ಅಮಲಿನಲ್ಲಿ ಕೊಲೆಯಾದ ಯುವಕ
ಸ್ಥಳೀಯ ಭಾಷೆ ಕುರಿತ ವಾದ-ವಿವಾದಗಳು ಹೊಸದೇನಲ್ಲ: ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡ್ತಿದೆ ಅನ್ನೋ ಆರೋಪವೂ ಇದೆ. ಬೇರೆ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದವರು ಅವರದ್ದೇ ಭಾಷೆಯಲ್ಲಿ ಸ್ಥಳೀಯರೊಂದಿಗೆ ಸಂಭಾಷಿಸುತ್ತಾರೆ. ಎಷ್ಟೋ ಬಾರಿ ಇದೇ ವಿಚಾರಕ್ಕೆ ಜಗಳಗಳೂ ನಡೆಯುವುದುಂಟು. ಬೆಂಗಳೂರು ದೇಶದ ಪ್ರತಿಷ್ಠಿತ ನಗರಗಳಲ್ಲೊಂದು. ಟೆಕ್ ಹಬ್ ಎಂದೇ ಖ್ಯಾತಿಯಾಗಿರುವ ಸಿಟಿ. ಆದರೂ ಇಂತಹ ಕಾರಣಗಳಿಗೆ ಆಗಾಗ ವಿವಾದಗಳು ಭುಗಿಲೇಳುತ್ತಲೇ ಇರುತ್ತವೆ. ಈಗಲೂ ಕೂಡ ಅಂಥದ್ದೇ ಘಟನೆ ನಡೆದಿದ್ದು, ಕನ್ನಡ ಭಾಷಾ ಪ್ರೇಮಿಗಳು ಆಟೋ ಡ್ರೈವರ್‌ನ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.