ವಿಪ್ರೋ ಕಂಪನಿಯ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಸಹೋದ್ಯೋಗಿಯಿಂದ ಧಾರ್ಮಿಕ ಕಿರುಕುಳ ಮತ್ತು ಬಲವಂತದ ಮತಾಂತರ ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ. ದೂರು ನೀಡಿದರೂ ಕ್ರಮ ಕೈಗೊಳ್ಳದೆ, ತನ್ನಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ಅವರು ದೂರಿದ್ದಾರೆ.

ಪುಣೆ (ಜೂ.4): ಪ್ರಮುಖ ಐಟಿ ದೈತ್ಯ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಬಳಿಕ, ಈಗ ಮತ್ತೊಂದು ಪ್ರಖ್ಯಾತ ಐಟಿ ಕಂಪನಿಯಾದ ವಿಪ್ರೋ ಟೆಕ್ನಾಲಜೀಸ್‌ನಲ್ಲಿ (Wipro Technologies) ಧಾರ್ಮಿಕ ಕಿರುಕುಳ, ತಾರತಮ್ಯ ಹಾಗೂ ಬಲವಂತದ ಮತಾಂತರಕ್ಕೆ ಯತ್ನಿಸಿರುವ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಂಪನಿಯ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ತನ್ನ ಮೇಲೆ ನಡೆದ ಧಾರ್ಮಿಕ ದೌರ್ಜನ್ಯ ಹಾಗೂ ಬಲವಂತವಾಗಿ ರಾಜೀನಾಮೆ ಕೊಡಿಸಿರುವ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಿಂದೂ ಜನಜಾಗೃತಿ ಸಮಿತಿಯು ಪುಣೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತೆ ತನಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ತಾವು ಪುಣೆಯ ಹಿಂಜವಾಡಿ ಐಟಿ ಪಾರ್ಕ್‌ನಲ್ಲಿರುವ ವಿಪ್ರೋ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಈ ಘಟನೆಗಳು ನಡೆದಿವೆ ಎಂದು ಅವರು ವಿವರಿಸಿದ್ದಾರೆ. ಈ ಸಂಬಂಧ ಸದ್ಯ ಪುಣೆಯ ಹಿಂಜವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜೊತೆಗೆ ಸಂತ್ರಸ್ತೆಯ ಪರ ವಕೀಲರು ಕಂಪನಿಗೆ ಲೀಗಲ್‌ ನೋಟಿಸ್ ಜಾರಿ ಮಾಡಿದ್ದು, ₹50 ಲಕ್ಷ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.

ಇಸ್ಲಾಂ ಧರ್ಮ ಸೇರಿದರೆ ವಿದೇಶಕ್ಕೆ ಹೋಗುವ ಅವಕಾಶ: ಸಂತ್ರಸ್ತೆಯ ಗಂಭೀರ ಆರೋಪ

ಸಂತ್ರಸ್ಥೆ ಮಹಿಳಾ ನೌಕರಳ ಪ್ರಕಾರ, ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಆಕೆಯ ಸಹೋದ್ಯೋಗಿ ಮಹಿಳೆಯೊಬ್ಬಳು ನಿರಂತರವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಡ ಹೇರುತ್ತಿದ್ದಳು. ಆ ಮುಸ್ಲಿಂ ಸಹೋದ್ಯೋಗಿ ಮಹಿಳೆ ಈಕೆಯ ವೈಯಕ್ತಿಕ ಜೀವನದಲ್ಲಿ ಪದೇ ಪದೇ ಹಸ್ತಕ್ಷೇಪ ಮಾಡುತ್ತಿದ್ದಳು ಮತ್ತು ಹಿಂದೂ ಧರ್ಮವನ್ನು ತೊರೆಯುವಂತೆ ಬಲವಂತ ಮಾಡುತ್ತಿದ್ದಳು. ಇಸ್ಲಾಂ ಧರ್ಮವನ್ನು ಅಪ್ಪಿಕೊಂಡು ಮುಸ್ಲಿಂ ಪುರುಷನೊಂದಿಗೆ ದೈಹಿಕ ಅಥವಾ ವೈವಾಹಿಕ ಸಂಬಂಧವನ್ನು ಬೆಳೆಸುವಂತೆ ಆಕೆ ಸತತವಾಗಿ ಒತ್ತಾಯಿಸುತ್ತಿದ್ದಳು.

ಹಿಂದೂ ಧರ್ಮ ಬಿಟ್ಟು ಇಸ್ಲಾಂಗೆ ಮತಾಂತರಗೊಂಡರೆ ನಿನ್ನ ಜೀವನ ಸುಧಾರಿಸುತ್ತದೆ ಮತ್ತು ಕಂಪನಿಯ ವತಿಯಿಂದ ವಿದೇಶಕ್ಕೆ ಹೋಗಲು ಉತ್ತಮ ಅವಕಾಶಗಳು ಸಿಗುತ್ತವೆ ಎಂದು ಆಕೆಗೆ ಆಮಿಷ ಒಡ್ಡಲಾಗಿತ್ತು ಎಂದಿದ್ದಾರೆ.

10 ತಿಂಗಳ ಕಾಲ ಕಿರುಕುಳ; ದೂರು ನೀಡಿದರೂ ಉಲ್ಟಾ ಕ್ರಮ ಕೈಗೊಂಡ ವಿಪ್ರೋ!

ತಮ್ಮದೇ ಕಚೇರಿಯಲ್ಲಿ ಸುಮಾರು 10 ತಿಂಗಳ ಕಾಲ ಧಾರ್ಮಿಕ ಕಿರುಕುಳವನ್ನು ಸಹಿಸಿಕೊಂಡಿದ್ದಾಗಿ ಸಂತ್ರಸ್ತೆ ಆರೋಪಿಸಿದ್ದಾರೆ. ಈ ಇಡೀ ವಿಷಯವನ್ನು ಕಂಪನಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ, ಮತಾಂತರಕ್ಕೆ ಯತ್ನಿಸಿದ ಮಹಿಳೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬದಲಾಗಿ, ಕಂಪನಿಯ ಒಂಬುಡ್ಸ್‌ಮನ್ ಸಮಿತಿಯಲ್ಲಿ (Ombuds Committee) ದೂರು ನೀಡಿದ ಮಹಿಳೆಯ ವಿರುದ್ಧವೇ ದೂರನ್ನು ದಾಖಲಿಸಲಾಯಿತು.

ತದನಂತರ, ಆಗಸ್ಟ್ 2025 ರಲ್ಲಿ ನಡೆದ ಕಂಪನಿಯ ಸಿರೀಸ್‌ ಟೀಮ್ ಮೀಟಿಂಗ್ ಒಂದಕ್ಕೆ ಸಂತ್ರಸ್ತೆಯನ್ನು ಕರೆಯಿಸಿ, ಆಕೆಯ ಮೇಲೆ ತೀವ್ರ ಮಾನಸಿಕ ಒತ್ತಡ ಹೇರಿ ಬಲವಂತವಾಗಿ ರಾಜೀನಾಮೆ ಬರೆಸಿಕೊಳ್ಳಲಾಯಿತು. ತನ್ನ ಕಡೆಯ ವಾದ ಅಥವಾ ವಿವರಣೆಯನ್ನು ನೀಡಲು ಕಂಪನಿಯು ಯಾವುದೇ ಅವಕಾಶ ನೀಡಲಿಲ್ಲ ಎಂದು ಸಂತ್ರಸ್ತೆ ಆಕ್ರೋಶ ಹೊರಹಾಕಿದ್ದಾರೆ.

ನಾಸಿಕ್‌ನ ಐಟಿ ಕಂಪನಿಯಲ್ಲೂ ಹಿಂದೂ ಮಹಿಳೆಯರಿಗೆ ಲೈಂಗಿಕ, ಧಾರ್ಮಿಕ ದೌರ್ಜನ್ಯ!

ಇದೇ ರೀತಿಯ ಮತ್ತೊಂದು ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಬಹುರಾಷ್ಟ್ರೀಯ (MNC) ಐಟಿ ಕಂಪನಿಯೊಂದರಲ್ಲಿ ವರದಿಯಾಗಿದೆ. ಅಲ್ಲಿನ ಹಿಂದೂ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿರುವುದು ಹಾಗೂ ಬಲವಂತದ ಧಾರ್ಮಿಕ ಮತಾಂತರಕ್ಕೆ ಯತ್ನಿಸಿರುವ ಪ್ರಕರಣ ಮುನ್ನೆಲೆಗೆ ಬಂದಿದೆ.

ನಾಸಿಕ್ ಕಚೇರಿಯ ಒಳಗಡೆ ಹಿಂದೂ ನೌಕರರಿಗೆ ಇಸ್ಲಾಮಿಕ್ ಪ್ರಾರ್ಥನೆಗಳನ್ನು (ನಮಾಜ್) ಕಡ್ಡಾಯವಾಗಿ ಮಾಡುವಂತೆ ಒತ್ತಡ ಹೇರಲಾಗುತ್ತಿತ್ತು ಮತ್ತು ಹಿಂದೂ ದೇವತೆಗಳನ್ನು ಅತ್ಯಂತ ಕೀಳಾಗಿ ನಿಂದಿಸಲಾಗುತ್ತಿತ್ತು ಎಂದು ಸಂತ್ರಸ್ತೆಯರು ಆರೋಪಿಸಿದ್ದಾರೆ. ಈ ಕುರಿತು ಕಳೆದ ನಾಲ್ಕು ವರ್ಷಗಳಿಂದ ಅಲ್ಲಿನ ಹೆಚ್‌ಆರ್ (HR) ಮ್ಯಾನೇಜರ್‌ಗೆ ಸತತವಾಗಿ ಲಿಖಿತ ದೂರುಗಳನ್ನು ನೀಡುತ್ತಾ ಬಂದಿದ್ದರೂ, ಮ್ಯಾನೇಜ್‌ಮೆಂಟ್ ಪ್ರತಿ ಬಾರಿಯೂ ದೂರನ್ನು ಕಸದ ಬುಟ್ಟಿಗೆ ಹಾಕಿ ನಿರ್ಲಕ್ಷ್ಯ ವಹಿಸಿತ್ತು ಎಂದು ನಾಸಿಕ್ ಐಟಿ ನೌಕರರು ಗಂಭೀರ ದೂರನ್ನು ಹೊರಿಸಿದ್ದಾರೆ.