Asianet Suvarna News Asianet Suvarna News

ಬೆಲೆ ಹೆಚ್ಚಿರುವ LPG Cylinder, ಎಣ್ಣೆ, ಬೇಳೆ ಪ್ಯಾಕೆಟ್‌ ಮೇಲೆ ಮೋದಿ ಫೋಟೋ ಹಾಕುತ್ತೇವೆ: ತೆಲಂಗಾಣ ಸಿಎಂ ಪುತ್ರಿ

ಕೇಂದ್ರ ಸರ್ಕಾರದಿಂದ ಆಗುತ್ತಿರುವ ಬೆಲೆ ಏರಿಕೆಯ ವಿರುದ್ಧ ತೆಲಂಗಾಣ ಸಿಎಂ ಪುತ್ರಿ ಕವಿತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೋದಿ ಫೋಟೋಗಳನ್ನು ಪಡಿತರ ಅಂಗಡಿಗಳಲ್ಲಿ ಏಕೆ ಬಳಸುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದ ನಿರ್ಮಲಾ ಸೀತಾರಾಮನ್‌ ವಿರುದ್ಧವೂ ವ್ಯಂಗ್ಯವಾಡಿದ್ದಾರೆ. 

will put pm photo on gas cylinder petrol diessel stations says telangana cm daughter kavitha ash
Author
First Published Sep 7, 2022, 7:34 PM IST

ತೆಲಂಗಾಣದ (Telangana) ಪಡಿತರ ಅಂಗಡಿಗಳಲ್ಲಿ (Ration Shops) ಪ್ರಧಾನಿ  ನರೇಂದ್ರ ಮೋದಿಯವರ ಫೋಟೋ ಏಕೆ ಹಾಕಿಲ್ಲ, ಈಗಲೇ ಫೋಟೋ ಹಾಕಿ ಎಂದು ಕೇಳಿ ಇತ್ತೀಚೆಗೆ ವಿವಾದಕ್ಕೆ ಗುರಿಯಾಗಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ, ತೆಲಂಗಾಣ ಎಂಎಲ್‌ಸಿ ಕೆ. ಕವಿತಾ ಬುಧವಾರ ವಾಗ್ದಾಳಿ ನಡೆಸಿದ್ದಾರೆ. "ಸೀತಾರಾಮನ್ ಜೀ, ನೀವು ಪ್ರಧಾನಿಯವರ ಫೋಟೋಗಳನ್ನು ಹಾಕಬೇಕೆಂದು ಬಯಸಿದರೆ, ನಾವು ಖಂಡಿತವಾಗಿಯೂ ಹಾಗೆ ಮಾಡುತ್ತೇವೆ. ಆದರೆ, ಕೇಂದ್ರ ಬಿಜೆಪಿ ಸರ್ಕಾರದ ಆಡಳಿತದಲ್ಲಿ ದುಬಾರಿಯಾದ ವಸ್ತುಗಳ ಮೇಲೆ ತಮ್ಮ ಪಕ್ಷವು ಪ್ರಧಾನಿ ಮೋದಿಯವರ ಫೋಟೋಗಳನ್ನು ಹಾಕುತ್ತದೆ ಎಂದು ಹೈದರಾಬಾದ್‌ನಲ್ಲಿ ತೆಲಂಗಾಣ ಸಿಎಂ ಪುತ್ರಿ ಟೀಕೆ ಮಾಡಿದ್ದು, ಪರೋಕ್ಷವಾಗಿ ಬೆಲೆ ಏರಿಕೆಯ (Price Rise) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ಯಾಸ್ ಸಿಲಿಂಡರ್ (Gas Cylinder), ಯೂರಿಯಾ ಪ್ಯಾಕೆಟ್ (Urea Packet), ಪೆಟ್ರೋಲ್ (Petrol), ಡೀಸೆಲ್ (Diesel) ಸ್ಟೇಷನ್‌ಗಳಲ್ಲಿ, ಎಣ್ಣೆ ಮತ್ತು ಬೇಳೆ ಪ್ಯಾಕ್‌ ಮೇಲೆ ಹಾಕುತ್ತೇವೆ, ಎಲ್ಲೆಲ್ಲಿ ವೆಚ್ಚ ಹೆಚ್ಚುತ್ತಿದೆಯೋ ಅಲ್ಲೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಹಾಕುತ್ತೇವೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಬಿಜೆಪಿ ಬಡವರ ಹಕ್ಕುಗಳನ್ನು ಕಸಿಯುತ್ತಿದೆ ಎಂದೂ ಆರೋಪಿಸಿದರು. 

Telangana ಪಡಿತರ ಕೇಂದ್ರದಲ್ಲಿ ಮೋದಿ ಫೋಟೋ ನಾಪತ್ತೆ: ನಿರ್ಮಲಾ ಸೀತಾರಾಮನ್‌ ಗರಂ

ಕೆಸಿಆರ್ ಸರ್ಕಾರದ ಪ್ರಮುಖ ಯೋಜನೆಯಡಿ ಫಲಾನುಭವಿಗಳಿಗೆ ಪಿಂಚಣಿ ವಿತರಿಸಿದ ಆಸರಾ ಯೋಜನೆಯ ಪಿಂಚಣಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ತೆಲಂಗಾಣದಲ್ಲಿ ಇತ್ತೀಚೆಗೆ ನಡೆದ ನಿರ್ಮಲಾ ಸೀತಾರಾಮನ್‌ ವಿವಾದದ ಬಗ್ಗೆ ಮಾತನಾಡಿದರು. ಹಾಗೂ, ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ವಾಗ್ದಾಳಿ ನಡೆಸಿದರು. "ಅವರು ಬಂದಿದ್ದು ಒಳ್ಳೆಯದು, ಅತಿಥಿಗಳನ್ನು ಸ್ವೀಕರಿಸಲು ನಮಗೆ ಸಂತೋಷವಾಗಿದೆ. ಆದರೆ ಅವರು ಪಡಿತರ ಅಂಗಡಿಗೆ ಹೋಗಿ ಪ್ರಧಾನಿ ಮೋದಿಯವರ ಫೋಟೋ ಹಾಕದಿರುವ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಜಗಳವಾಡಿದರು," ಎಂದು ಟಿಆರ್‌ಎಸ್ ಎಂಎಲ್‌ಸಿ ಕವಿತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅಲ್ಲದೆ,  ಪ್ರಧಾನಿಯ ಫೋಟೋಗಳನ್ನು ರೇಷನ್‌ ಅಂಗಡಿಗಳ ಹೊರಗೆ ಎಂದಿಗೂ ಇರಿಸಲಾಗಿಲ್ಲ’’ ಎಂದೂ ತೆಲಂಗಾಣ ಸಿಎಂ ಪುತ್ರಿ ಹೇಳಿಕೊಂಡಿದ್ದಾರೆ. "ನೆಹರೂ ಕಾಲದಲ್ಲಿ ಇರಲಿಲ್ಲ, ಮನಮೋಹನ್ ಸಿಂಗ್ ಅಥವಾ ವಾಜಪೇಯಿ ಅವರ ಚಿತ್ರಗಳನ್ನು ಯಾರೂ ಹಾಕಿರಲಿಲ್ಲ" ಎಂದೂ ಕವಿತಾ ಹೇಳಿದ್ದಾರೆ. ನ್ಯಾಯಬೆಲೆ ಅಂಗಡಿಗಳ ಮೂಲಕ ಸರಬರಾಜಾಗುವ ಅಕ್ಕಿಯಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲು ಎಷ್ಟು ಎಂಬುದಕ್ಕೆ ಉತ್ತರ ನೀಡಲು ಸಾಧ್ಯವಾಗದ ಜಿಲ್ಲಾಧಿಕಾರಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಛೀಮಾರಿ ಹಾಕಿದ್ದರು. ಬೀರ್ಕೂರಿನ ಪಡಿತರ ಅಂಗಡಿಯೊಂದರ ಪರಿಶೀಲನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಏಕೆ ಕಾಣೆಯಾಗಿದೆ ಎಂದು ಕೇಂದ್ರ ಸಚಿವರು ಜಿಲ್ಲಾಧಿಕಾರಿಯನ್ನು ಕೇಳಿದ್ದರು.
 
ಈ ಮಧ್ಯೆ, ಟಿಆರ್‌ಎಸ್ ಇತ್ತೀಚೆಗೆ ವಿಡಿಯೋವೊಂದನ್ನು ಟ್ವೀಟ್ ಮಾಡಿತ್ತು. ಇದರಲ್ಲಿ, ಕೆಲವು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಮತ್ತು ಪ್ರಧಾನಿ ಮೋದಿಯವರ ಫೋಟೋವನ್ನು ಅಂಟಿಸಲಾಗಿತ್ತು. ಈ ಮೂಲಕ ಬೆಲೆ ಏರಿಕೆಯ ವಿರುದ್ಧ ನೇರವಾಗಿಯೇ ಟಿಆರ್‌ಎಸ್‌ ಆಕ್ರೋಶ ವ್ಯಕ್ತಪಡಿಸಿದಂತಿತ್ತು. 

ನರೇಂದ್ರ ಮೋದಿಯನ್ನು ಗೋಲ್‌ಮಾಲ್‌ ಪ್ರಧಾನಿ ಎಂದ ತೆಲಂಗಾಣ ಸಿಎಂ

ನ್ಯಾಯಬೆಲೆ ಪಡಿತರ ಅಂಗಡಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಹಾಕದ ತೆಲಂಗಾಣದ ಕಾಮರೆಡ್ಡಿ ಜಿಲ್ಲಾಧಿಕಾರಿ ಜಿತೇಶ್ ಪಾಟೀಲ್ ಅವರನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿದ್ದರು. ನ್ಯಾಯಬೆಲೆ ಅಂಗಡಿಗಳ ಮೂಲಕ (Fair Price Shops) (ಎಫ್‌ಪಿಎಸ್) ಸರಬರಾಜು ಮಾಡುವ ಅಕ್ಕಿಯಲ್ಲಿ (Rice) ಕೇಂದ್ರ ಮತ್ತು ರಾಜ್ಯಗಳ ಪಾಲು ಎಷ್ಟು ಎಂದು ವಿವರಿಸಲು ಅವರು ಅಧಿಕಾರಿಯನ್ನು ಕೇಳಿದರು. ಬಿಜೆಪಿಯ ‘ಲೋಕಸಭಾ ಪ್ರವಾಸ ಯೋಜನೆ’ಯ ಭಾಗವಾಗಿ ಜಹೀರಾಬಾದ್ ಸಂಸದೀಯ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ನಿರ್ಮಲಾ ಸೀತಾರಾಮನ್, ರಾಜ್ಯದಲ್ಲಿ ಫಲಾನುಭವಿಗಳಿಗೆ 1 ರೂಪಾಯಿಗೆ ಮಾರಾಟವಾಗುತ್ತಿರುವ ಸಬ್ಸಿಡಿ ಅಕ್ಕಿಯಲ್ಲಿ ಕೇಂದ್ರವು ಸಿಂಹ ಪಾಲು ಹೊಂದಿದೆ ಎಂದೂ ಹೇಳಿದ್ದಾರೆ.

Follow Us:
Download App:
  • android
  • ios