ರಾಹುಲ್ ಗಾಂಧಿ ವಿರುದ್ಧ ತೀರ್ಪಿತ್ತ ಜಡ್ಜ್ ನಾಲಿಗೆ ಕಟ್: ಕಾಂಗ್ರೆಸ್ ನಾಯಕ ಬೆದರಿಕೆ
ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರಿಗೆ 2 ವರ್ಷಗಳ ಕಾಲ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ನಾಲಿಗೆ ಕತ್ತರಿಸುವುದಾಗಿ ತಮಿಳುನಾಡು ದಿಂಡಿಗಲ್‌ನ ಕಾಂಗ್ರೆಸ್ ನಾಯಕ ಮಣಿಕಂಠನ್ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಣಿಕಂಠನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೋದಿ ಉಪನಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 23ರಂದು ಸೂರತ್ ನ್ಯಾಯಾಲಯದ ನ್ಯಾಯಾಧೀಶರು ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ವಿಧಿಸಿದ್ದರು.
ಚೆನ್ನೈ (ಏಪ್ರಿಲ್ 8, 2023): ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರಿಗೆ ನಾಲಿಗೆ ಕಡಿಯುತ್ತೇನೆ ಎಂದು ಕಾಂಗ್ರೆಸ್ ನಾಯಕ ಬೆದರಿಕೆ ಹಾಕಿದ್ದಾರೆ. 2019 ರ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಧೀಶರ ನಾಲಿಗೆಯನ್ನು ಪಕ್ಷ ಅಧಿಕಾರಕ್ಕೆ ಬಂದಾಗ ಕತ್ತರಿಸುವುದಾಗಿ ತಮಿಳುನಾಡಿನ ಕಾಂಗ್ರೆಸ್ ನಾಯಕರೊಬ್ಬರು ಬೆದರಿಕೆ ಹಾಕಿದ್ದಾರೆ. ಇಂತಹ ಹೇಳಿಕೆ ನೀಡಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್‌ನ ಎಸ್‌ಸಿ/ಎಸ್‌ಟಿ ವಿಭಾಗವು ತಮಿಳುನಾಡಿನ ದಿಂಡಿಗಲ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಅನರ್ಹತೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ಪಕ್ಷದ ಜಿಲ್ಲಾ ಮುಖ್ಯಸ್ಥ ಮಣಿಕಂಠನ್ “ಮಾರ್ಚ್ 23 ರಂದು ಸೂರತ್ ನ್ಯಾಯಾಲಯದ ನ್ಯಾಯಾಧೀಶರು ನಮ್ಮ ನಾಯಕ ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ನೀಡಿದ್ದಾರೆ. ನ್ಯಾಯಾಧೀಶ ಎಚ್. ವರ್ಮಾ ಅವರೆ ಕೇಳಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ನಾವು ನಿಮ್ಮ ನಾಲಿಗೆಯನ್ನು ಕತ್ತರಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಹಾಗೂ, ಅವರಿಗೆ ಜೈಲು ಶಿಕ್ಷೆ ವಿಧಿಸಲು ನೀವ್ಯಾರು ಎಂದೂ ಪ್ರಶ್ನೆ ಮಾಡಿದ್ದಾರೆ.
ಇದನ್ನು ಓದಿ: ಸೂರತ್ ಕೋರ್ಟ್‌ನಲ್ಲಿ ಕೈ ಶಕ್ತಿ ಪ್ರದರ್ಶನ: ನ್ಯಾಯಾಲಯಕ್ಕೆ ಒತ್ತಡ ಹೇರುವ ಬಾಲಿಶ ಪ್ರಯತ್ನ ಎಂದ ಬಿಜೆಪಿ
ಮಣಿಕಂಠನ್ ವಿರುದ್ಧ ಮೂರು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ದಿಂಡಿಗಲ್ ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ. ರ‍್ಯಾಲಿಯಲ್ಲಿ ಮೋದಿ ಉಪನಾಮ ಹೇಳಿಕೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕಳೆದ ತಿಂಗಳು ಶಿಕ್ಷೆ ವಿಧಿಸಲಾಗಿದೆ. ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಅವರ ದೋಷಾರೋಪಣೆಯ ನಂತರ, ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು.
ಬಿಜೆಪಿ ತಿರುಗೇಟು
ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಮಣಿಕಂಠನ್ ಅವರ ಹೇಳಿಕೆಗಳ ಬಗ್ಗೆ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡರು ಮತ್ತು "ನ್ಯಾಯಾಂಗಕ್ಕೆ ಬೆದರಿಕೆ ಹಾಕುವ ಪಕ್ಷಗಳಿಗೆ" ನ್ಯಾಯಾಲಯಗಳು ರಾಹುಲ್ ಗಾಂಧಿಯನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದೂ ಹೇಳಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದ ನಂತರ ರಾಹುಲ್ ಗಾಂಧಿ ವಿರುದ್ಧ ತೀರ್ಪು ನೀಡಿದ ನ್ಯಾಯಾಧೀಶರ ನಾಲಿಗೆಯನ್ನು ಕತ್ತರಿಸುತ್ತೇವೆ ಎಂದು ತಮಿಳುನಾಡು ಕಾಂಗ್ರೆಸ್ ನಾಯಕ ಹೇಳುತ್ತಾರೆ. ನ್ಯಾಯಾಂಗಕ್ಕೆ ಬೆದರಿಕೆ ಹಾಕುತ್ತಿರುವ ಅವರ ಪಕ್ಷದ ವ್ಯಕ್ತಿಗಳಿಗೆ ನ್ಯಾಯಾಲಯಗಳು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ರಾಹುಲ್ ಗಾಂಧಿಯನ್ನು ಹೊಣೆಗಾರರನ್ನಾಗಿ ಮಾಡುತ್ತವೆಯೇ?" ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: 2 ವರ್ಷ ಜೈಲು ಶಿಕ್ಷೆ ಪ್ರಶ್ನಿಸಿ ಇಂದು ರಾಹುಲ್ ಗಾಂಧಿ ಮೇಲ್ಮನವಿ: ಸೂರತ್ ಸೆಶನ್ಸ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ
ರಾಹುಲ್ ಗಾಂಧಿಗೆ ಶಿಕ್ಷೆ ಹಾಗೂ ನಂತರ ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದ ನಂತರ ಇದು ಪ್ರತಿಪಕ್ಷಗಳ ನಡುವೆ ಭಾರಿ ಆಕ್ರೋಶವನ್ನು ಉಂಟುಮಾಡಿದೆ. ಹಲವಾರು ಪಕ್ಷಗಳು ರಾಹುಲ್ ಗಾಂಧಿಯವರ ಬೆಂಬಲಕ್ಕೆ ಬಂದಿವೆ. ಇನ್ನೊಂದೆಡೆ, ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ತನ್ನ ನಾಯಕನಿಗೆ ಶಿಕ್ಷೆ ಮತ್ತು ಸಂಸತ್ತಿನಿಂದ ಅನರ್ಹತೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳನ್ನು ಆಯೋಜಿಸುತ್ತಿದೆ.
ಇದನ್ನೂ ಓದಿ: ಶಿಕ್ಷೆ ಪ್ರಶ್ನಿಸಲು ರಾಹುಲ್ ಗಾಂಧಿ ರೆಡಿ: ಮೋದಿ ಉಪನಾಮ ಟೀಕೆ ಕೇಸಲ್ಲಿ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಲು ಸಿದ್ಧತೆ