ಮಧ್ಯಪ್ರದೇಶದಲ್ಲಿ ಹುಲಿಯೊಂದು ಕಾಡುಹಂದಿಯನ್ನು ಬೆನ್ನಟ್ಟುತ್ತಿರುವಾಗ ಎರಡೂ ಬಾವಿಗೆ ಬಿದ್ದಿವೆ. ನಾಲ್ಕು ಗಂಟೆಗಳ ಕಾರ್ಯಾಚರಣೆಯ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಎರಡೂ ಪ್ರಾಣಿಗಳನ್ನು ರಕ್ಷಿಸಿದ್ದಾರೆ
ಪರಭಕ್ಷಕ ಪ್ರಾಣಿಗಳು ತನಗಿಂತ ದುರ್ಬಲವಾದ ಇತರ ಕಾಡು ಪ್ರಾಣಿಗಳನ್ನು ಬೇಟೆಯಾಡಿ ತಿನ್ನುವುದು ಆಹಾರ ಸರಪಳಿಯ ಭಾಗ ಎಂಬುದು ಎಲ್ಲರಿಗೂ ಗೊತ್ತು. ಅದೇ ರೀತಿ ಇಲ್ಲೊಂದು ಹುಲಿ ಕಾಡುಹಂದಿಯನ್ನು ಬೇಟೆಯಾಡಲು ಹೋಗಿದ್ದು ಎರಡೂ ಬಾವಿಯೊಂದಕ್ಕೆ ಬಿದ್ದಿವೆ. ಹುಲಿಯಿಂದ ಜೀವ ಉಳಿಸಿಕೊಳ್ಳಲು ಜೀವ ಬಿಟ್ಟು ಓಡಿದ ಕಾಡು ಹಂದಿ ಮುಂದೇನಿದೆ ಎಂಬುದನ್ನು ನೋಡದೇ ಓಡುವ ರಭಸದಲ್ಲಿ ಕೆರೆಗೆ ಬಿದ್ದಿದ್ದರೆ, ಇತ್ತ ಅದನ್ನು ಬೆನ್ನಟ್ಟಿಕೊಂಡು ಬಂದ ಹುಲಿಯೂ ಬಾವಿಗೆ ಬಿದ್ದಿದೆ. ಮಧ್ಯಪ್ರದೇಶದ ಸಿನೋಯ್‌ನ ಪೆಂಚ್ ನ್ಯಾಷನಲ್ ಪಾರ್ಕ್ ಸಮೀಪ ಈ ಘಟನೆ ನಡೆದಿದೆ. ಕೂಡಲೇ ಈ ವಿಚಾರ ಸಮೀಪದ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ಕೂಡಲೇ ಅವರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಕಾಡು ಹಂದಿಯನ್ನು ಓಡಿಸಿಕೊಂಡು ಹೋದ ಹುಲಿ, ಕಾಡುಹಂದಿ ಎರಡು ಒಂದೇ ಬಾವಿಗೆ ಬಿದ್ದಿವೆ. ಜಿಕುರೈ ಅರಣ್ಯ ಪ್ರದೇಶಕ್ಕೆ ಸೇರುವ ಪಿಪರಿಯಾ ಹರ್ದುಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಂಗಳವಾರ ಬೆಳಗ್ಗೆ ಈ ಬಾವಿಗೆ ನೀರು ಸೇದಲು ಬಂದ ಗ್ರಾಮಸ್ಥರಿಗೆ ಈ ಘಟನೆ ಬೆಳಕಿಗೆ ಬಂದಿದೆ. ಸುಮಾರು ಮೂರು ವರ್ಷ ವಯಸ್ಸಿನ ಹುಲಿ, ಹಂದಿಯನ್ನು ಬೆನ್ನಟ್ಟುತ್ತಿದ್ದಾಗ ಅವೆರಡೂ ಬಾವಿಯೊಳಗೆ ಬಿದ್ದವು ಎಂದು ಮೀಸಲು ಉಪ ನಿರ್ದೇಶಕ ರಜನೀಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಬಾವಿಗೆ ಬಿದ್ದ ಮೇಲೆ ಆಗಿದ್ದೇನು?
ಕಾಡು ಹಂದಿಯನ್ನು ಓಡಿಸಿಕೊಂಡು ಬಂದ ಹುಲಿ ಹಾಗೂ ಕಾಡುಹಂದಿ ಎರಡೂ ಬಾವಿಗೆ ಬಿದ್ದಿದ್ದರೂ, ಈಗ ಜೀವ ಉಳಿಸಿಕೊಳ್ಳುವ ಅನಿವಾರ್ಯತೆ ಹುಲಿಗೂ ಎದುರಾಗಿದ್ದರಿಂದ ಹುಲಿ ತನ್ನ ಬೇಟೆಯನ್ನು ಮರೆತು ಹಾಗೂ ಕಾಡುಹಂದಿ ಎರಡೂ ಯಾರಾದರು ತಮ್ಮಿಬ್ಬರನ್ನು ರಕ್ಷಿಸುವರೋ ಎಂದು ಗಂಟೆಗಟ್ಟಲೇ ನೀರಿನಲ್ಲಿ ಈಜಾಡುತ್ತಾ ಹೊರಬರಲು ಕಾದಿವೆ. ಎರಡೂ ಪ್ರಾಣಿಗಳಿಗೂ ಇಲ್ಲಿ ನೀರು ಅಪಾಯಕಾರಿಯಾಗಿದ್ದರಿಂದ ಎರಡೂ ಕೂಡ ತಮ್ಮ ಸಹಜ ವರ್ತನೆಗೆ ವಿರುದ್ಧವಾಗಿ ಒಟ್ಟಿಗೆ ವಿಶ್ರಾಂತಿ ಪಡೆಯುತ್ತಿದ್ದವು. ಹುಲಿ ತನ್ನ ಬೇಟೆಯನ್ನು ಮರೆತು ಮಾಡಿದ ತಪ್ಪಿಗಾಗಿ ಗಂಟೆಗಟ್ಟಲೇ ಕಾದಿದೆ.
ಇನ್ನು ಇವು ಬಾವಿಗೆ ಬಿದ್ದಿರುವ ವಿಚಾರವನ್ನು ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದರಿಂದ 4 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ ಅವೆರಡನ್ನು ರಕ್ಷಿಸಲಾಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಮದಿ ರಜನೀಶ್ ಕುಮಾರ್ ಸಿಂಗ್ ಹೇಳಿದ್ದಾರೆ. ಇವೆರಡು ಪ್ರಾಣಿಗಳು ಒಟ್ಟಿಗೆ ಇದ್ದಿದ್ದರಿಂದ ಈ ರಕ್ಷಣಾ ಕಾರ್ಯಾಚರಣೆ ಸ್ವಲ್ಪ ಕಷ್ಟಕರವಾಗಿತ್ತು ಎಂದು ಸಿಂಗ್ ಹೇಳಿದ್ದಾರೆ.
ಹಗ್ಗದ ಸಹಾಯದಿಂದ ಬಾವಿಗೆ ಹಲಗೆಯನ್ನು ಇಳಿಸಲಾಯ್ತು ಮತ್ತು ಹುಲಿ ಅದರ ಮೇಲೆ ಕುಳಿತಿತು. ನಂತರ ರಕ್ಷಣಾ ತಂಡವು ಹೈಡ್ರಾಲಿಕ್ ಕ್ರೇನ್ ಬಳಸಿ ಬಾವಿಯೊಳಗೆ ಪಂಜರವನ್ನು ಇರಿಸಿ ಹುಲಿಯನ್ನು ಸುರಕ್ಷಿತವಾಗಿ ಸೆರೆಹಿಡಿಯಿತು ಎಂದು ಅಧಿಕಾರಿ ವಿವರಿಸಿದರು. ಅದೇ ರೀತಿ ನಂತರ ಕಾಡುಹಂದಿಯನ್ನು ಕೂಡ ರಕ್ಷಿಸಲಾಯ್ತು ಎಂದು ಅವರು ಮಾಹಿತಿ ನೀಡಿದರು. ಎರಡು ಕಾಡು ಪ್ರಾಣಿಗಳನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಸುಮಾರು 60 ಸಿಬ್ಬಂದಿ ಭಾಗಿಯಾಗಿದ್ದಾರೆ. ರಕ್ಷಣೆಯ ನಂತರ ಸಾಗರ ಜಿಲ್ಲೆಯ ವೀರಾಂಗಣ ದುರ್ಗಾವತಿ ಹುಲಿ ಮೀಸಲು ಪ್ರದೇಶದ ನೌರದೇಹಿ ವನ್ಯಜೀವಿ ಅಭಯಾರಣ್ಯದಲ್ಲಿ ಹುಲಿಯನ್ನು ಬಿಡಲು ಮುಖ್ಯ ವನ್ಯಜೀವಿ ಸಂರಕ್ಷಣಾಧಿಕಾರಿ ನಿರ್ದೇಶನ ನೀಡಿದ್ದಾರೆ ಎಂದು ಅವರು ಸಿಂಗ್ ಮಾಹಿತಿ ನೀಡಿದರು.
