ಪಾರ್ಶ್ವವಾಯು ಪೀಡಿತ ಪತಿಯನ್ನು ಬೆನ್ನ ಮೇಲೆ ಹೊತ್ತು 150 ಕಿ.ಮೀ. ಕನ್ವರ್‌ಯಾತ್ರೆ ಸಾಗಿದ ಮಹಿಳೆ. ಪತಿಯ ಖುಷಿಗಾಗಿ, ಆರೋಗ್ಯಕ್ಕಾಗಿ ಭಕ್ತಿಯಿಂದ ಪಾದಯಾತ್ರೆ ಕೈಗೊಂಡ ಪತ್ನಿ.
ಇತ್ತೀಚೆಗೆ ಪತ್ನಿಯನ್ನು ಪತಿ, ಪತಿಯನ್ನು ಪತ್ನಿ ಕೊಲೆ ಮಾಡುತ್ತಿರುವ ಹಲವು ಪ್ರಕರಣಗಳು ಪ್ರತಿದಿನವೂ ವರದಿಯಾಗುತ್ತಲೇ ಇದೆ. ಕೆಲ ವರ್ಷಗಳಿಗೆ ಹಿಂದೆ ಪತ್ನಿಯರೇ ಪತಿಯ ಕ್ರೌರ್ಯಕ್ಕೆ ಬಲಿಯಾಗುತ್ತಿದ್ದ ಪ್ರಕರಣಗಳು ಹೆಚ್ಚಿದ್ದವು. ಆದರೆ ಇತ್ತೀಚೆಗೆ ಕೆಲ ಹೆಣ್ಣು ಮಕ್ಕಳು ವಿವಾಹ ನಿಶ್ಚಿತಾರ್ಥವಾದ ನಂತರ, ಮದುವೆಯಾಗಿ ಕೆಲ ದಿನಗಳ ನಂತರ ಅಥವಾ ಮದುವೆಯಾಗಿ ಮಧುಚಂದ್ರಕ್ಕೆ ಹೋದ ಸಮಯದಲ್ಲಿ ಪತಿಯ ಹತ್ಯೆಗೆ ಮೂಹೂರ್ತವಿಟ್ಟ ಪ್ರಕರಣಗಳು ಆಗಾಗ ವರದಿಯಾಗುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರಗಳ ಬಗ್ಗೆ ಭಾರಿ ಚರ್ಚೆಯಾಗುತ್ತಿದ್ದು, ಅನೇಕ ಯುವಕರು ಮದುವೆಯಾಗುವುದಕ್ಕೆ ಹೆದರುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಈ ಪ್ರಪಂಚದಲ್ಲಿ ಸಂಭಾವಿತ ಪತ್ನಿಯರು, ಪತಿಯೇ ಪರದೈವ ಎಂದು ಬದುಕುತ್ತಿರುವ ಹೆಣ್ಣು ಮಕ್ಕಳು, ಪತಿಗಾಗಿ ಕಿಡ್ನಿ ದಾನ ಮಾಡಿದ ಮಹಿಳೆಯರು ಇದ್ದಾರೆ ಎಂಬುದು ಕೂಡ ಅಷ್ಟೇ ಸತ್ಯ. ಅದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ.
ಹೌದು ಪ್ರಸ್ತುತ ಉತ್ತರ ಭಾರತದಲ್ಲಿ ಕನ್ವರಿಯಾತ್ರೆ ಬಹಳ ಜೋರಾಗಿ ಸಾಗುತ್ತಿದೆ. ಶಿವಭಕ್ತರು ಪಾದಯಾತ್ರೆಯ ಮೂಲಕ ತೆರಳಿ ಹರಿದ್ವಾರ ಗಂಗೋತ್ರಿ ಮುಂತಾದ ಪುಣ್ಯ ಕ್ಷೇತ್ರಗಳಿಂದ ಗಂಗೆಯ ಬಿಂದಿಗೆಯಲ್ಲಿ ತುಂಬಿ ತಂದು ಶಿವನಿಗೆ ಅಭಿಷೇಕ ಮಾಡುತ್ತಿದ್ದಾರೆ. ಈ ಕನ್ವರಿಯಾತ್ರೆಯಲ್ಲಿ ದೇಶದ ಮೂಲೆ ಮೂಲೆಯ ಲಕ್ಷಾಂತರ ಜನ ಭಕ್ತರು ಭಾಗಿಯಾಗುತ್ತಿದ್ದಾರೆ. ಆದರೆ ರೀತಿ ಇಲ್ಲೊಂದು ಕಡೆ ಪತ್ನಿಯೊಬ್ಬಳು ತನ್ನ ಅನಾರೋಗ್ಯಪೀಡಿತ, ಕೈಕಾಲುಗಳ ಸ್ವಾಧೀನವಿಲ್ಲದ ಪತಿಯನ್ನು ಬೆನ್ನಮೇಲೆ ಪುಟ್ಟ ಮಗುವನ್ನು ಎತ್ತಿಕೊಂಡಂತೆ ಎತ್ತಿಕೊಂಡು ಕನ್ವರಿಯಾತ್ರೆಗೆ ಕರೆದುಕೊಂಡು ಬಂದಿದ್ದು, ಮನಕಲುಕುವಂತಿದೆ.
ಉತ್ತರ ಭಾರತದಲ್ಲಿ ಈಗ ಶ್ರಾವಣ(ಸಾವನ್ ಮಾಸ) ಈ ಸಮಯದಲ್ಲಿ ಶಿವಭಕ್ತರು ಕನ್ವರ್‌ಯಾತ್ರೆ ಸಾಗುತ್ತಿದ್ದಾರೆ. ಅದೇ ರೀತಿ ಉತ್ತರ ಪ್ರದೇಶದ ಮುಜಾಫರ್‌ಪುರನಗರದ ಮಹಿಳೆಯೊಬ್ಬರು ತಮ್ಮ ಪಾರ್ಶವಾಯುವಿಗೊಳಗಾಗಿ ಕಾಲಿನ ಸ್ವಾಧೀನ ಕಳೆದುಕೊಂಡ ಪತಿಯನ್ನು ಬೆನ್ನಮೇಲೆ ಕೂರಿಸಿಕೊಂಡು ಸುಮಾರು 150 ಕಿಲೋ ಮೀಟರ್ ಬರೀಗಾಗಲಲ್ಲಿ ನಡೆದಿದ್ದಾರೆ.
ತನ್ನ ಈ ತ್ಯಾಗ ಪರಿಶ್ರಮಕ್ಕೆ ಕರಗಿಯಾದರೂ ಭಗವಂತ ತನ್ನ ಪತಿಯನ್ನು ಅನಾರೋಗ್ಯದಿಂದ ರಕ್ಷಿಸಿ ಹುಷಾರು ಮಾಡುತ್ತಾನೆ ಎಂಬ ನಂಬಿಕೆಯಲ್ಲಿ ಈ ಗೃಹಿಣಿ ಈ ಕಠಿಣ ಪಾದಯಾತ್ರೆಯನ್ನು ಕೈಗೊಂಡಿದ್ದಾಳೆ. ಈಕೆಯ ಈ ಕಠಿಣ ಪಯಣವನ್ನು ಯಾರೋ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. ಅನೇಕರು ಈ ಮಹಿಳೆಯನ್ನು ನೋಡಿ ಭಾವುಕರಾಗಿದ್ದು, ಆಕೆಯ ಪತಿ ಶೀಘ್ರವೇ ಹುಷಾರಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ವೈರಲ್ ಆದ ಪೋಸ್ಟ್ ಪ್ರಕಾರ, ಆಶಾ ಎಂಬ ಮಹಿಳೆ ತನ್ನ ಪಾರ್ಶ್ವವಾಯು ಸಮಸ್ಯೆಗೊಳಗಾದ ಪತಿ ಸಚಿನ್ ಎಂಬಾತನನ್ನು ಬೆನ್ನ ಮೇಲೆ ಹೊತ್ತುಕೊಂಡು 150 ಕಿಲೋ ಮೀಟರ್ ಕ್ರಮಿಸಿದ್ದಾಳೆ. ಆಕೆ ಹರಿದ್ವಾರದಿಂದ ಮೋದಿನಗರದವರೆಗೆ ಬರಿಗಾಲಲ್ಲಿ ಸಾಗಿದ್ದು, ತನ್ನ ಪತಿ ಒಂದು ದಿನ ಮತ್ತೆ ಮೊದಲಿನಂತೆ ನಡೆಯಬೇಕೆಂಬುದು ತನ್ನ ಏಕೈಕ ಆಸೆ ಎಂದು ಹೇಳಿದ್ದಾರೆ. ಅವರ ಇಬ್ಬರು ಚಿಕ್ಕ ಮಕ್ಕಳು ಕೂಡ ಅವರೊಂದಿಗೆ ಬಂದಿದ್ದು, ಈ ಪುಟ್ಟ ಕುಟುಂಬದ ದೃಢಸಂಕಲ್ಪವು ನೋಡುಗರನ್ನು ಭಾವುಕರನ್ನಾಗಿಸಿದೆ. ಅನೇಕರು ಇವರಿಗೆ ಬೆಂಬಲ ಸೂಚಿಸಿದ್ದಾರೆ.
ವರದಿಗಳ ಪ್ರಕಾರ ಆಶಾ ಮತ್ತು ಅವರ ಪತಿ ಸಚಿನ್ ಗಾಜಿಯಾಬಾದ್‌ನ ಮೋದಿನಗರದ ಬಖರ್ವಾ ಗ್ರಾಮದ ನಿವಾಸಿಗಳು. ಸಚಿನ್ 13 ವರ್ಷಗಳ ಕಾಲ ಪ್ರತಿ ವರ್ಷವೂ ಕಾಲ್ನಡಿಗೆಯಲ್ಲಿ ಸಾಗುತ್ತಾ ಕನ್ವರ್ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ ಕಳೆದ ವರ್ಷ ಅವರ ಬೆನ್ನುಹುರಿಯ ಗಾಯದಿಂದಾಗಿ ಅವರು ಪಾರ್ಶ್ವವಾಯುವಿಗೆ ಒಳಗಾದರು. ಹೀಗಾಗಿ ಈ ವರ್ಷ ಅವರಿಗೆ ಕನ್ವರ್‌ಯಾತ್ರೆಯಲ್ಲಿ ಸಾಗುವುದಕ್ಕೆ ಸಾಧ್ಯವಾಗಲಿಲ್ಲ. ಆದರೆ ಅವರ ಗಟ್ಟಿಗಿತ್ತಿ ಪತ್ನಿ ಅವರನ್ನು ಎದೆಗುಂದಲು ಬಿಡಲಿಲ್ಲ, ಪಾರ್ಶ್ವವಾಯು ಪೀಡಿತ ಗಂಡನನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಅವರು ಕನ್ವರ್‌ಯಾತ್ರೆ ಸಾಗಿದ್ದು, ಅವರಲ್ಲಿ ಅಪಾರ ಪ್ರೀತಿ ಮತ್ತು ಭಕ್ತಿ ಎರಡರ ಸಮಾಗಮ ಕಾಣಿಸಿತು.
ಕಟ್ಟಿಕೊಂಡ ಪತ್ನಿಯೇ ಗಂಡನ ಕತೆ ಮುಗಿಸುತ್ತಿರುವ ಈ ಕಾಲಘಟ್ಟದಲ್ಲಿ ಪತಿಯ ಖುಷಿಗಾಗಿ ಎಲ್ಲವನ್ನು ತ್ಯಾಗ ಮಾಡುವ ಇಂತಹ ಪತ್ನಿಯರು ಇದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಈ ಘಟನೆ.
