India Gate: ಸದಾ ಬಿಜೆಪಿಯಲ್ಲಿ ಟಿಕೆಟ್ ಗೊಂದಲ ಯಾಕೆ?: ಪ್ರಶಾಂತ್‌ ನಾತು

ಮೋದಿ ದಿಲ್ಲಿ ರಾಜಕಾರಣಕ್ಕೆ ಬಂದ ಮೇಲೆ ದೇಶದ ಯಾವುದೇ ರಾಜ್ಯದಲ್ಲಿ ದಿಲ್ಲಿ ವರಿಷ್ಠರು ಏನೇ ನಿರ್ಣಯ ತೆಗೆದುಕೊಂಡರೂ ಆಗದ ಗದ್ದಲ, ಗಲಾಟೆ ಕರ್ನಾಟಕದಲ್ಲಿ ಮಾತ್ರ ಭುಗಿಲೇಳುವುದು ಯಾಕೆ ಅನ್ನುವುದು ದಿಲ್ಲಿಯಲ್ಲಿ ಕುಳಿತ ನಾಯಕರಿಗೂ ಅರ್ಥವಾದಂತೆ ಕಾಣುತ್ತಿಲ್ಲ. ಅರ್ಥವಾಗಿದ್ದರೆ ಈ ಬಾರಿಯೂ ಟಿಕೆಟ್ ಹಂಚಿಕೆ ಗೊಂದಲಮಯ, ಬಂಡಾಯಪೂರ್ಣ ಆಗುತ್ತಿರಲಿಲ್ಲ. 

Why is there Always Ticket Confusion in BJP Says Prashant Natu grg

ಇಂಡಿಯಾ ಗೇಟ್‌

ಪ್ರಶಾಂತ್‌ ನಾತು, ಏಷ್ಯಾನೆಟ್‌ ಸುವರ್ಣ ನ್ಯೂಸ್‌

ಬೆಂಗಳೂರು(ಮಾ.29):  ರಾಜ್ಯ ಬಿಜೆಪಿಯಲ್ಲಿ ಟಿಕೆಟ್ ಘೋಷಣೆಯಾದ ಮೇಲೆ ಬಹುತೇಕ ಲಿಂಗಾಯತ ಬಾಹುಳ್ಯದ ಜಿಲ್ಲೆಗಳಲ್ಲಿ ಬೇಸರ, ಅಸಮಾಧಾನ, ಬಂಡಾಯಗಳು ಭುಗಿಲೆದ್ದಿವೆ. ಇದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದೂ ಕೂಡ ವಿಜಯೇಂದ್ರರ ಭವಿಷ್ಯವನ್ನು ನಿರ್ಧರಿಸಲಿದೆ. ಏಕೆಂದರೆ ಹಿಂದಿನ ಚುನಾವಣೆಯಲ್ಲಿ ಲಿಂಗಾಯತರ ಬೇಸರದಿಂದ ಆದ ನಷ್ಟ ಈ ಬಾರಿ ಆಗಬಾರದೆಂದೇ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ಮೋದಿ ದಿಲ್ಲಿ ರಾಜಕಾರಣಕ್ಕೆ ಬಂದ ಮೇಲೆ ದೇಶದ ಯಾವುದೇ ರಾಜ್ಯದಲ್ಲಿ ದಿಲ್ಲಿ ವರಿಷ್ಠರು ಏನೇ ನಿರ್ಣಯ ತೆಗೆದುಕೊಂಡರೂ ಆಗದ ಗದ್ದಲ, ಗಲಾಟೆ ಕರ್ನಾಟಕದಲ್ಲಿ ಮಾತ್ರ ಭುಗಿಲೇಳುವುದು ಯಾಕೆ ಅನ್ನುವುದು ದಿಲ್ಲಿಯಲ್ಲಿ ಕುಳಿತ ನಾಯಕರಿಗೂ ಅರ್ಥವಾದಂತೆ ಕಾಣುತ್ತಿಲ್ಲ. ಅರ್ಥವಾಗಿದ್ದರೆ ಈ ಬಾರಿಯೂ ಟಿಕೆಟ್ ಹಂಚಿಕೆ ಗೊಂದಲಮಯ, ಬಂಡಾಯಪೂರ್ಣ ಆಗುತ್ತಿರಲಿಲ್ಲ. ಬೇರೆ ರಾಜ್ಯಗಳಲ್ಲಿ ಬಿಜೆಪಿ ಸಣ್ಣ ಸಣ್ಣ ಜಾತಿ ಸಮೂಹಗಳ ನಾಯಕರನ್ನು ಒಳಗೊಂಡ ಕೇಡರ್ ಪಾರ್ಟಿ ಆದರೆ ಕರ್ನಾಟಕದಲ್ಲಿ ಬಲಾಢ್ಯ ಜಾತಿಗಳ ನಾಯಕರನ್ನು ಒಳಗೊಂಡ ರಾಜಕೀಯ ಪಕ್ಷ. ಹೀಗಾಗಿ ದಿಲ್ಲಿ ನಾಯಕರು ಏನೇ ನಿರ್ಧಾರ ತೆಗೆದುಕೊಂಡರು ಕೂಡ ಗೊಂದಲ ಇಲ್ಲಿ ಸಹಜದ ಪ್ರತಿಕ್ರಿಯೆ. 2018ರಲ್ಲಿ ನೋಡಿ, ಕೊನೆ ಕ್ಷಣದಲ್ಲಿ ವರುಣಾದಿಂದ ವಿಜಯೇಂದ್ರಗೆ ಟಿಕೆಟ್ ಇಲ್ಲ ಅಂದಾಗ ಗೊಂದಲ ಆಗಿ ಬಿಜೆಪಿ 104ಕ್ಕೆ ಸೀಮಿತವಾಯಿತು. 2019ರಲ್ಲಿ ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಮಧ್ಯರಾತ್ರಿಯಲ್ಲಿ ಟಿಕೆಟ್ ಇಲ್ಲ ಎಂದು ಹೇಳಿದ್ದು ರಾದ್ಧಾಂತಕ್ಕೆ ಕಾರಣವಾಯಿತು. ಇನ್ನು 2023ರಲ್ಲಿ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿಗೆ ಟಿಕೆಟ್ ನಿರಾಕರಣೆ ವಿನಾಕಾರಣ ಲಿಂಗಾಯತ ಮತಗಳು ಉಪಪಂಗಡಗಳಾಗಿ ಒಡೆಯುವಂತೆ ಮಾಡಿತು. ಈಗ 2024ರಲ್ಲಿ ಗೊಂದಲವಿರುವ ಜಾತಿಯ ಕ್ಷೇತ್ರಗಳಲ್ಲಿ ವಿರೋಧ ಇದ್ದರೂ ಟಿಕೆಟ್ ಕೊಟ್ಟು, ಆರ್‌ಎಸ್‌ಎಸ್ ಗಟ್ಟಿ ಇರುವ ಕ್ಷೇತ್ರಗಳಲ್ಲಿ ಮಾತ್ರ ಬದಲಾವಣೆಗೆ ಸಾಹಸ ಮಾಡಿರುವುದು ಬಿಜೆಪಿಯ ಮೂಲ ಹಿಂದುತ್ವವಾದಿ ನಾಯಕರನ್ನು ಹಾಗೂ ಮತದಾರರನ್ನು ಬೇಸರಕ್ಕೆ, ಅಸಮಾಧಾನಕ್ಕೆ ದೂಡಿದೆ.

ಇಂಡಿಯಾ ಕೂಟವನ್ನು ಕಟ್ಟಿದ್ಯಾಕೆ..! ಒಡೆದಿದ್ಯಾಕೆ..!

ಈ ನಿರ್ಣಯಗಳ ತರ್ಕ ಏನು?

ಇವತ್ತಿನ ಕಾಂಗ್ರೆಸ್ ಹೈಕಮಾಂಡ್‌ಗೂ ಮತ್ತು ಬಿಜೆಪಿ ವರಿಷ್ಠರಿಗೂ ಒಂದು ಮೂಲಭೂತ ವ್ಯತ್ಯಾಸವಿದೆ. ತಮ್ಮ ದೌರ್ಬಲ್ಯದ ಕಾರಣದಿಂದ ಕಾಂಗ್ರೆಸ್‌ನ ದಿಲ್ಲಿ ನಾಯಕರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಮತ್ತು ಖರ್ಗೆ ಬಣಗಳ ನಡುವೆ ಸಾಧ್ಯವಾದಷ್ಟು ಸಮನ್ವಯ ತರಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಬಲಾಢ್ಯ ಬಿಜೆಪಿ ವರಿಷ್ಠರು ಸ್ಥಳೀಯ ಅಭಿಪ್ರಾಯ ಕೂಡ ಆಲಿಸದೇ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ. 2023ರಲ್ಲಿ ಯಾಕೆ ಜಗದೀಶ್ ಶೆಟ್ಟರ್‌ಗೆ ಸ್ವಂತ ಕ್ಷೇತ್ರ ಹುಬ್ಬಳ್ಳಿಯಲ್ಲಿ ಟಿಕೆಟ್ ಕೊಡಲಿಲ್ಲ? ಈ ಬಾರಿ ಯಾಕೆ ಒಯ್ದು ಅವರಿಗೆ ಸಂಬಂಧವೇ ಇಲ್ಲದ ಬೆಳಗಾವಿ ಟಿಕೆಟ್ ಕೊಡಲಾಯಿತು ಎಂಬ ಪ್ರಶ್ನೆಗೆ ತರ್ಕಬದ್ಧ ಉತ್ತರಗಳೇ ಇಲ್ಲ. 2023ರಲ್ಲಿ ಇಲ್ಲಿನವರು ಬೇಡ ಬೇಡ ಎಂದರೂ ಕೂಡ ದೇವೇಗೌಡರ ಪಾರ್ಟಿ ಪ್ರಾಬಲ್ಯ ಇರುವ ಜಿಲ್ಲೆಗಳಲ್ಲಿ ಅಬ್ಬರದ ಪ್ರಚಾರ ನಡೆಸಿ ವೋಟು ಒಡೆದು ಕಾಂಗ್ರೆಸ್ ಗೆಲುವಿಗೆ ಕಾರಣರಾಗಿ, ಈಗ ನೀವು ಜೊತೆಗೆ ಹೋಗಿ ಎನ್ನುತ್ತಿರುವ ಬಿಜೆಪಿ ವರಿಷ್ಠರು ಇಲ್ಲಿಯವರೆಗೆ ಒಂದು ಸಭೆಯನ್ನು ಕುಮಾರಸ್ವಾಮಿ ಮತ್ತು ವಿಜಯೇಂದ್ರರನ್ನು ಎದುರು ಬದುರು ಕೂರಿಸಿ ನಡೆಸಿಲ್ಲ ಅನ್ನೋದು ಕೂಡ ವಾಸ್ತವ. ಒಂದು ವಿಚಿತ್ರ ಎಂದರೆ ರಾಜ್ಯದಲ್ಲಿ 30 ವರ್ಷ ರಾಜಕೀಯ ನಡೆಸಿರುವ ನಾಯಕರಿಗೆ ದಿಲ್ಲಿಯಲ್ಲಿ ಏನು ನಡೆಯುತ್ತಿದೆ? ಚಿಂತನೆ ಏನು? ನಿರ್ಣಯ ಏನಾಗಬಹುದು? ಎಂಬುದರ ಖಬರ್ ಇರೋದೇ ಇಲ್ಲ. ವಿಚಿತ್ರ ನೋಡಿ, ಗಣಿ ಹಗರಣದಲ್ಲಿ ಆರೋಪಿ ಆಗಿರುವ ಜನಾರ್ದನ ರೆಡ್ಡಿ 2023ರಲ್ಲಿ ದಿಲ್ಲಿಗೆ ಬೇಡವಾದವರು 2024ರಲ್ಲಿ ಬೇಕಾಗುತ್ತಾರೆ. ಅದೇ ಸಿ.ಟಿ.ರವಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ದಿಲ್ಲಿಗೆ ಬೇಕಾದವರು, ಈಗ ಒಂದು ಟಿಕೆಟ್ ಕೊಡೋಕೂ ಬೇಡವಾಗುತ್ತಾರೆ. ಇವೆಲ್ಲ ತರ್ಕವಿಲ್ಲದ ನಿರ್ಧಾರಗಳಲ್ಲವೇ?

ಯಡಿಯೂರಪ್ಪ, ವಿಜಯೇಂದ್ರ ಅವರ ಮಾತು ನಡೆದಿದ್ದೆಷ್ಟು?

ಒಂದು ಹಂತದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿದ್ದ ಬಿ.ಎಲ್.ಸಂತೋಷ್ ಅವರ ಪರಮಾಪ್ತ ಮೈಸೂರು ಸಂಸದ ಪ್ರತಾಪ್ ಸಿಂಹ ಮತ್ತು ನಳಿನ್‌ಕುಮಾರ ಕಟೀಲ್‌ ಅವರಿಗೆ ಟಿಕೆಟ್ ಕಟ್ ಮಾಡಿದಾಗ ಸಹಜವಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಹೇಳಿದ್ದೇ ತುಂಬಾ ನಡೆದಿದೆ ಎನ್ನುವ ಚರ್ಚೆ ಶುರುವಾಯಿತು. ಆದರೆ ಕ್ಷೇತ್ರವಾರು ಸೂಕ್ಷ್ಮವಾಗಿ ನೋಡಿದಾಗ ಬೆಳಗಾವಿಯಿಂದ ಜಗದೀಶ್ ಶೆಟ್ಟರ್, ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ, ಚಾಮರಾಜನಗರದಿಂದ ಬಾಲರಾಜ್, ದಾವಣಗೆರೆಯಿಂದ ಜಿ.ಎಮ್.ಸಿದ್ದೇಶ್ ಕುಟುಂಬಕ್ಕೆ ಹಟ ಹಿಡಿದು ಟಿಕೆಟ್ ಕೊಡಿಸಿದ್ದು ಬಿಟ್ಟರೆ ಉಳಿದ ಯಾವುದೇ ಅಭ್ಯರ್ಥಿಗಳು ಯಡಿಯೂರಪ್ಪ ಅವರದೇ ಶಿಷ್ಯರು ಅನ್ನುವಂಥವರಿಲ್ಲ. ಉದಾಹರಣೆಗೆ ಬೀದರ್‌ನಿಂದ ಭಗವಂತ ಖೂಬಾ ಮತ್ತು ಚಿಕ್ಕೋಡಿಯಿಂದ ಅಣ್ಣಾಸಾಹೇಬ್ ಜೊಲ್ಲೆ ವಿಷಯದಲ್ಲಿ ಯಡಿಯೂರಪ್ಪ ಹೇಳಿದ್ದನ್ನು ದಿಲ್ಲಿ ನಾಯಕರು ಕೇಳಿಲ್ಲ. ಹಾವೇರಿಯಲ್ಲಿ ಬೊಮ್ಮಾಯಿ ಅವರಿಗಿಂತ ಶೆಟ್ಟರ್‌ಗೆ ಟಿಕೆಟ್‌ ಕೊಡಬೇಕು ಎಂದು ಯಡಿಯೂರಪ್ಪ ಮನಸ್ಸಿನಲ್ಲಿತ್ತು. ಜೊತೆಗೆ ಉತ್ತರ ಕನ್ನಡದಲ್ಲಿ ಮಾಜಿ ಪತ್ರಕರ್ತ ಹರಿಪ್ರಕಾಶ್‌ ಕೋಣೆಮನೆ ಹೆಸರನ್ನು ವಿಜಯೇಂದ್ರ ಹೇಳಿದ್ದರೆ, ಯಡಿಯೂರಪ್ಪನವರು ಅನಂತ್ ಹೆಗಡೆಗೆ ಕೊಡಿ ಎಂದಿದ್ದರು. ಆದರೆ, ಅಮಿತ್ ಶಾ ಸ್ವತಃ ಬೊಮ್ಮಾಯಿ ಅವರನ್ನು ಮಾತನಾಡಿಸಿ ಟಿಕೆಟ್ ಕೊಟ್ಟರೆ, ಉತ್ತರಕನ್ನಡಕ್ಕೆ ಕಾಗೇರಿ ವಿಶ್ವೇಶ್ವರ ಹೆಗಡೆ ಹೆಸರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ದಾ ಅವರಿಂದ ಬಂತು ಎಂದು ಮೂಲಗಳು ಹೇಳುತ್ತಿವೆ. ಆಶ್ಚರ್ಯ ಎಂದರೆ ಆರ್‌ಎಸ್‌ಎಸ್‌ ಸರ ಸಹಕಾರ್ಯವಾಹ ಮುಕುಂದ ಅವರು ಉತ್ತರಕನ್ನಡಕ್ಕೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೆಸರು ಸೂಚಿಸಿದರೂ ಕೂಡ ಏನಕೇನ ಕಾರಣದಿಂದ ಒಪ್ಪಿಗೆ ಸಿಕ್ಕಿಲ್ಲ.

ಮೌನಕ್ಕೆ ಜಾರಿದ ಸಂತೋಷ್

2018ರಲ್ಲಿ ಅನಂತಕುಮಾರ್‌ ತೀರಿಕೊಂಡ ನಂತರದಿಂದ 2023ರ ವಿಧಾನಸಭಾ ಚುನಾವಣೆವರೆಗೆ ಕರ್ನಾಟಕದ ಯಾವುದೇ ನಿರ್ಣಯ ಮಾಡುವುದಿದ್ದರೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತು ಅಂತಿಮ ಅನ್ನುವ ಸ್ಥಿತಿ ಇತ್ತು. ಸಂತೋಷ್ ಅನೇಕ ಹೊಸ ಪ್ರಯೋಗಗಳನ್ನು ಮಾಡಿದರು ಕೂಡ ಯಾಕೋ ಏನೋ ಒಂದು ನಿರ್ಣಯ ರಾಜಕೀಯವಾಗಿ ಫಲ ಕೊಡಲಿಲ್ಲ. 2023ರಲ್ಲಿ ಶೆಟ್ಟರ್, ಈಶ್ವರಪ್ಪ, ರಘುಪತಿ ಭಟ್, ರಾಮದಾಸ್‌ ಟಿಕೆಟ್ ಬದಲಾವಣೆಯು ಮೋದಿ ತೆಗೆದುಕೊಂಡ ನಿರ್ಣಯವಾಗಿದ್ದರೂ ಆ ಕ್ಷೇತ್ರಗಳಲ್ಲಿ ಸಂತೋಷ್ ಆಪ್ತರಾದ ಟೆಂಗಿನಕಾಯಿ, ಶ್ರೀವತ್ಸ, ಯಶಪಾಲ್ ಸುವರ್ಣ ಟಿಕೆಟ್ ಪಡೆದಿದ್ದು ಎಲ್ಲದಕ್ಕೂ ಸಂತೋಷ್ ಕಾರಣ ಅನ್ನುವ ಚರ್ಚೆಗೆ ನಾಂದಿ ಹಾಡಿತು. ಸಂತೋಷ್ ತಮ್ಮ ವೀಟೊ ಪವರ್‌ ಉಪಯೋಗಿಸಿ ತೆಗೆದುಕೊಂಡ ನಿರ್ಣಯಗಳು ಫಲ ಕೊಡದೆ ಇದ್ದುದರಿಂದ ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಪೂರ್ತಿ ಮೌನದಿಂದ ಇದ್ದರು. ಮೋದಿ ಮತ್ತು ಅಮಿತ್ ಶಾ ಎದುರಿಗಿನ ಸಭೆಗಳಲ್ಲಿ ಇವರಿಗೆ ಟಿಕೆಟ್ ಕೊಡಿ ಅಂದಿಲ್ಲ, ಅವರಿಗೆ ಕೊಡಬೇಡಿ ಅಂದಿಲ್ಲ. ರಾಜಕಾರಣ ಯಾವತ್ತಿಗೂ ವಿಚಿತ್ರ ಬೊಂಬೆ ಆಟ ಬಿಡಿ, ಕೆಲವೊಮ್ಮೆ ಪೂರ್ತಿ ಸೂತ್ರವೇ ಕೈಯಲ್ಲಿ ಇರುತ್ತದೆ, ಇನ್ನು ಕೆಲವೊಮ್ಮೆ ಏನೂ ಇರುವುದಿಲ್ಲ.

ಯದುವೀರ್‌ ಹೆಸರು ಹೇಳಿದ್ದು ಮೋದಿ

4 ವರ್ಷಗಳ ಹಿಂದೆ ಒಂದು ವೇಳೆ ಸಿ.ಟಿ.ರವಿ ಅವರನ್ನು ದಿಲ್ಲಿಗೆ ಕಳುಹಿಸದೆ ಇಲ್ಲಿ ಬಿಜೆಪಿ ರಾಜ್ಯಧ್ಯಕ್ಷರನ್ನಾಗಿ ಮಾಡಿ ನಳಿನ್‌ರನ್ನು ಬೇರೆ ರಾಜ್ಯದ ಪ್ರಭಾರಿಯನ್ನಾಗಿ ಮಾಡಿದ್ದರೆ ಇವತ್ತು ಇಬ್ಬರೂ ವನವಾಸಕ್ಕೆ ಹೋಗುವ ಪ್ರಮೇಯ ಉದ್ಭವ ಆಗುತ್ತಿರಲಿಲ್ಲವೋ ಏನೋ! ಪೂರ್ತಿ ರಾಜ್ಯದ ಹಿಡಿತ ಕೈಗೆ ತೆಗೆದುಕೊಳ್ಳಲು ಹೋಗಿ ನಳಿನ್ ಕಟೀಲು ತಮ್ಮ ಕ್ಷೇತ್ರದಲ್ಲೇ ಅಪ್ರಸ್ತುತರಾಗಿದ್ದಾರೆ. ಸ್ವಯಂ ಕಲ್ಲಡ್ಕ ಪ್ರಭಾಕರ ಭಟ್ಟರು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್‌ ಬಳಿ ಕಟೀಲ್‌ಗೆ ಟಿಕೆಟ್ ಕೊಡೋದು ಬೇಡ ಅಂದಾಗ ಕಟೀಲ್‌ ಅವರ ಪೊಲಿಟಿಕಲ್ ಗಾಡ್‌ಫಾದರ್ ಬಿ.ಎಲ್.ಸಂತೋಷ್ ನಿರುತ್ತರ ಆಗಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. 2023ರಲ್ಲಿ ಪುತ್ತೂರಿನ ಟಿಕೆಟ್ ವಿಚಾರದಲ್ಲಿ ಸ್ವಲ್ಪ ಉದಾರವಾಗಿ ನಡೆದುಕೊಂಡಿದ್ದರೆ ಕಟೀಲ್‌ಗೆ ಈ ಸ್ಥಿತಿ ಬರುತ್ತಿರಲಿಲ್ಲವೇನೋ ಯಾರಿಗೆ ಗೊತ್ತು. ಇನ್ನು ಮೈಸೂರಿನ ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿದ ಕಾರಣಗಳ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಏನನ್ನೂ ಹೇಳುತ್ತಿಲ್ಲ. ಮೋದಿ ಮತ್ತು ಶಾ ಅವರೇ ತೆಗೆದುಕೊಂಡ ನಿರ್ಣಯ ಎಂದು ಇಲ್ಲಿನ ನಾಯಕರು ಬೊಟ್ಟು ಮಾಡುತ್ತಿದ್ದಾರೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಮೈಸೂರಿನ ವಿಚಾರ ಬಂದಾಗ ಮಾತ್ರ ಮೋದಿ ಸಾಹೇಬರು ‘ಮಹಾರಾಜ್ ಜಿ ಸೆ ಬಾತ್ ಕಿಯಾ ಹೈ ನಾ? ಕೊಯೀ ದಿಕ್ಕತ್‌ ನಹೀ ಹೋನಿ ಚಾಹಿಯೇ’ (ಮಹಾರಾಜರ ಜೊತೆ ಮಾತಾಡಿದ್ದೀರಿ ಅಲ್ಲವೇ? ಯಾವುದೇ ತೊಂದರೆಯಾಗಬಾರದು) ಎಂದು ಕೇಳಿದರಂತೆ. ಅಂದಹಾಗೆ ಯದುವೀರರನ್ನು ಚುನಾವಣೆಗೆ ನಿಲ್ಲಿಸಲು ಒಪ್ಪಿಸಿದ್ದು ಸ್ಥಳೀಯ ಆರ್‌ಎಸ್‌ಎಸ್ ಪ್ರಚಾರಕರಂತೆ! ಯದುವೀರರನ್ನು ಬಿಜೆಪಿ ಸಂಪರ್ಕಿಸಿದೆ ಎಂದು ಗೊತ್ತಾದ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಯದುವೀರರನ್ನು ಸಂಪರ್ಕಿಸಿದರೂ ಯಾವುದೇ ಉಪಯೋಗ ಆಗಿಲ್ಲ.

ಮಂದಿರ ಹೋರಾಟದ ಕಿಚ್ಚು ಹಚ್ಚಿದವರು: ಈ ಐದು ಮಂದಿ ಇಲ್ಲದಿದ್ದರೆ ಇಂದು ಅಯೋಧ್ಯೆಯಲ್ಲಿ ರಾಮಮಂದಿರ ಎದ್ದುನಿಲ್ಲುತ್ತಿರಲಿಲ್ಲ!

ಈಶ್ವರಪ್ಪ ಕಥೆ ಮುಂದೇನು?

ಯಾಕೋ ಏನೋ ಬೇರೆ ಕ್ಷೇತ್ರಗಳಲ್ಲಿ ಬಂಡಾಯ ಶಮನ ಮಾಡಲು ಹೆಣಗಾಡುತ್ತಿರುವ ಬಿಜೆಪಿ ನಾಯಕರು ಇನ್ನುಮುಂದೆ ಈಶ್ವರಪ್ಪನವರನ್ನು ಮಾತನಾಡಿಸುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಮೊನ್ನೆ ದಿಲ್ಲಿಯಲ್ಲಿ ಸಭೆ ಸೇರಿದಾಗ ಸ್ವತಃ ಅಮಿತ್ ಶಾ ಅವರೇ ಹೋಗಲಿ ಬಿಡಿ ಯಾರೂ ಮಾತನಾಡಿಸಬೇಡಿ, ಏನು ಮಾಡುತ್ತಾರೋ ಮಾಡಲಿ ಎಂದರಂತೆ. ರಾಜ್ಯಸಭೆಗೆ ರಾಜ್ಯ ನಾಯಕರು ಈಶ್ವರಪ್ಪ ಹೆಸರು ಕಳುಹಿಸಿದಾಗಲೂ ದಿಲ್ಲಿ ನಾಯಕರು ಬೇಡ ಅಂದಿದ್ದರಂತೆ. ಮೂಲಗಳು ಹೇಳುವ ಪ್ರಕಾರ ಸ್ವತಃ ಈಶ್ವರಪ್ಪ ಅವರೇ ನಿಲ್ಲುವುದಾದಲ್ಲಿ ಕೊಪ್ಪಳಕ್ಕೆ ಕೊಡೋಣ ಅನ್ನುವ ಪ್ರಸ್ತಾಪ ಬಂದಾಗ ಈಶ್ವರಪ್ಪ ಮಗನಿಗೆ ಹಾವೇರಿಯಲ್ಲಿ ಕೊಡಿ ಅಂದರಂತೆ. ಈಶ್ವರಪ್ಪ ಏಕಾಂಗಿಯಾಗಿ ಕುರುಬ ಸಮುದಾಯದ ಮತಗಳನ್ನು ಎಷ್ಟು ಗಳಿಸಬಲ್ಲರು, ಅವರ ಬೇಸರ ಕುರುಬರನ್ನು ಬಿಜೆಪಿಯಿಂದ ಎಷ್ಟು ದೂರ ಒಯ್ಯಲಿದೆ ಅನ್ನೋ ವಿಷಯ ಅವರು ಚುನಾವಣೆಗೆ ನಿಂತಿದ್ದೇ ಆದಲ್ಲಿ ಸ್ಪಷ್ಟ ಆಗಲಿದೆ.

ವಿಜಯೇಂದ್ರ ಅಗ್ನಿ ಪರೀಕ್ಷೆ

2023ರ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಬಣ ಅಸಮಾಧಾನಗೊಂಡಿತ್ತು. ಅದರ ಪರಿಣಾಮ, ಲಿಂಗಾಯತ ಸಮುದಾಯ 2008 ಮತ್ತು 2018ರಲ್ಲಿ ನಿಂತಂತೆ 2023ರಲ್ಲಿ ಬಿಜೆಪಿ ಪರ ನಿಲ್ಲಲಿಲ್ಲ ಅನ್ನೋದು ವಾಸ್ತವ. ಇದೇ ಕಾರಣದಿಂದಲೇ ಯಡಿಯೂರಪ್ಪ ಪುತ್ರ ವಿಜಯೇಂದ್ರರನ್ನು ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ನೇಮಿಸಿತು. ಈಗ ಟಿಕೆಟ್ ಘೋಷಣೆಯಾದ ಮೇಲೆ ಬಹುತೇಕ ಲಿಂಗಾಯತ ಬಾಹುಳ್ಯದ ಜಿಲ್ಲೆಗಳಲ್ಲಿ ಬೇಸರ, ಅಸಮಾಧಾನ, ಬಂಡಾಯಗಳು ಭುಗಿಲೆದ್ದಿವೆ. ಸೋಮಣ್ಣ ವಿರುದ್ಧ ಮಾಧುಸ್ವಾಮಿ, ಸಿದ್ದೇಶ್‌ ವಿರುದ್ಧ ರೇಣುಕಾಚಾರ್ಯ, ಬೊಮ್ಮಾಯಿ ವಿರುದ್ಧ ಸ್ಥಳೀಯ ನಾಯಕರು, ಪ್ರಹ್ಲಾದ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ, ಶೆಟ್ಟರ್‌ ವಿರುದ್ಧ ಕೋರೆ, ಕವಟಗಿಮಠ, ಡಾ.ಬಸವರಾಜ್ ವಿರುದ್ಧ ಕರಡಿ ಸಂಗಣ್ಣ, ಖೂಬಾ ವಿರುದ್ಧ ಸ್ಥಳೀಯ ಲಿಂಗಾಯತ ಶಾಸಕರು ತಿರುಗಿನಿಂತಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಉಪಜಾತಿ ಭಾವನೆ ಮೀರಿ ಲಿಂಗಾಯತರು ಬಿಜೆಪಿ ಹಿಂದೆ ಗಟ್ಟಿಯಾಗಿ ನಿಲ್ಲುತ್ತಾರೋ ಇಲ್ಲವೋ ಅನ್ನುವುದು ವಿಜಯೇಂದ್ರ ಭವಿಷ್ಯವನ್ನು ಕೂಡ ನಿರ್ಧರಿಸಲಿದೆ. ಇತಿಹಾಸವನ್ನು ನೋಡಿದಾಗ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ ಮತ್ತು ಯಡಿಯೂರಪ್ಪನವರ ಹಿಂದೆ ಒಂದಕ್ಕಿಂತ ಹೆಚ್ಚು ಬಾರಿ ಲಿಂಗಾಯತ ಸಮುದಾಯ ಒಟ್ಟಾಗಿ ನಿಂತಿತ್ತು. ತಂದೆ ಜೊತೆ ನಿಂತ ಹಾಗೇ ಲಿಂಗಾಯತರು ಮಗನ ಜೊತೆ ನಿಲ್ಲುತ್ತಾರಾ? ಇದೂ ಕೂಡ ಲೋಕಸಭಾ ಚುನಾವಣೆಯ ಕುತೂಹಲಗಳಲ್ಲಿ ಒಂದು.

Latest Videos
Follow Us:
Download App:
  • android
  • ios