Asianet Suvarna News Asianet Suvarna News

ಮಂದಿರ ಹೋರಾಟದ ಕಿಚ್ಚು ಹಚ್ಚಿದವರು: ಈ ಐದು ಮಂದಿ ಇಲ್ಲದಿದ್ದರೆ ಇಂದು ಅಯೋಧ್ಯೆಯಲ್ಲಿ ರಾಮಮಂದಿರ ಎದ್ದುನಿಲ್ಲುತ್ತಿರಲಿಲ್ಲ!

ನನಗಿನ್ನೂ ಚೆನ್ನಾಗಿ ನೆನಪಿದೆ. 1989-90ರ ದಿನಗಳು. ನಾನು 4ನೇ ಕ್ಲಾಸು ಇರಬಹುದು. ಹುಬ್ಬಳ್ಳಿಯಲ್ಲಿ ಗಲ್ಲಿಗಲ್ಲಿಗಳಲ್ಲಿ ಇಟ್ಟಿಗೆಗಳನ್ನು ತಲೆ ಮೇಲೆ ಇಟ್ಟುಕೊಂಡು ಮೆರವಣಿಗೆ. ರಾಮ ಭಜನೆ, ‘ರಾಮಲಲಾ ಹಮ್ ಆಯೇಂಗೆ ಮಂದಿರ ವಹೀ ಬನಾಯೇಂಗೆ’ ಎಂಬ ಘೋಷಣೆಗಳು. 

prashant natu column india gate without these five the ram mandir would not have been built in ayodhya gvd
Author
First Published Jan 21, 2024, 8:03 AM IST

ಪ್ರಶಾಂತ್‌ ನಾತು, ರಾಜಕೀಯ ವಿಶ್ಲೇಷಕ

ನನಗಿನ್ನೂ ಚೆನ್ನಾಗಿ ನೆನಪಿದೆ. 1989-90ರ ದಿನಗಳು. ನಾನು 4ನೇ ಕ್ಲಾಸು ಇರಬಹುದು. ಹುಬ್ಬಳ್ಳಿಯಲ್ಲಿ ಗಲ್ಲಿಗಲ್ಲಿಗಳಲ್ಲಿ ಇಟ್ಟಿಗೆಗಳನ್ನು ತಲೆ ಮೇಲೆ ಇಟ್ಟುಕೊಂಡು ಮೆರವಣಿಗೆ. ರಾಮ ಭಜನೆ, ‘ರಾಮಲಲಾ ಹಮ್ ಆಯೇಂಗೆ ಮಂದಿರ ವಹೀ ಬನಾಯೇಂಗೆ’ ಎಂಬ ಘೋಷಣೆಗಳು. ನಂತರ ಯಾರಾದರೂ ಒಬ್ಬರು ವಿಎಚ್ಎಸ್ ಪ್ಲೇಯರ್ ಇರುವವರ ಮನೆಯಲ್ಲಿ ಜೈನ ಟಿವಿ ಅಯೋಧ್ಯೆಯಿಂದ ಕಳುಹಿಸಿದ ವಿಡಿಯೋ ದೃಶ್ಯಗಳನ್ನು ಸಾಮೂಹಿಕವಾಗಿ ನೋಡುವುದು. ಅದರಲ್ಲಿ ಅಶೋಕ್ ಸಿಂಘಾಲ್‌, ಸಾದ್ವಿ ಋತುಂಬರಾ, ಉಮಾ ಭಾರತಿ ಭಾಷಣಗಳು. ಕೊನೆಗೆ ಮಂದಿರಕ್ಕಾಗಿ ಸವ್ವಾ ರುಪಾಯಿ ದಕ್ಷಿಣೆ ಸಂಗ್ರಹ. ಒಟ್ಟಾರೆ 1947ರಲ್ಲಿ ದೇಶ ವಿಭಜನೆ ನಂತರದ ಹಿಂಸಾಚಾರದಿಂದ ಶುರುವಾಗಿದ್ದ ಹಿಂದೂಗಳ ತಳಮಳ 1989ರಲ್ಲಿ ಪರಾಕಾಷ್ಠೆಗೆ ತಲುಪಿತ್ತು. ಸ್ವತಂತ್ರ ಭಾರತದ ಇತಿಹಾಸದಲ್ಲಿ 20ನೇ ಶತಮಾನದಲ್ಲಿ ನಡೆದದ್ದು ಎರಡು ಪ್ರಮುಖ ಆಂದೋಲನಗಳು. ಮೊದಲನೆಯದು ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟ. 

ಅದರಲ್ಲಿ ಬಲಪಂಥಿಯ ಆರ್‌ಎಸ್‌ಎಸ್‌ನಿಂದ ಹಿಡಿದು ಸಮಾಜವಾದಿಗಳು, ಕಮ್ಯುನಿಷ್ಟರು, ಹಳೆಯ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರೆ ನಾಯಕತ್ವವನ್ನು ಜಯಪ್ರಕಾಶ ನಾರಾಯಣ ವಹಿಸಿದ್ದರು. ತುರ್ತು ಪರಿಸ್ಥಿತಿ ವಿರುದ್ಧದ ಆಂದೋಲನ ಕಾಂಗ್ರೆಸ್ಸೇತರ ಪಕ್ಷಗಳಿಗೆ ಅಧಿಕಾರ ತಂದುಕೊಟ್ಟಿತು. ಅದೇ ರೀತಿ ರಾಮ ಮಂದಿರ ಆಂದೋಲನದ ಮೂಲಕ ಸಂಘ ಪರಿವಾರ ಸೃಷ್ಟಿಸಿದ ಹಿಂದೂ ತಳಮಳ ಬಿಜೆಪಿಗೆ ಒಂದು ಗಟ್ಟಿ ವೋಟ್ ಬ್ಯಾಂಕ್ ಸೃಷ್ಟಿಸಿತು. ದೇಶದಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಲು ಸಮಾಜವಾದಿಗಳಿಗೆ ಹಾಗೂ ಎಡ ಪಾರ್ಟಿಗಳಿಗೆ ಸಾಧ್ಯ ಆಗಲಿಲ್ಲ. ಆದರೆ ಅದು ಬಿಜೆಪಿಗೆ ಸಾಧ್ಯ ಆದದ್ದು ಎರಡು ಕಾರಣಗಳಿಂದ. 1 ರಾಮ ಮಂದಿರ ಹೋರಾಟ. 2 ಸಂಘ ಪರಿವಾರದ ಗಟ್ಟಿ ಸಂಘಟನೆಯ ಬಲ.

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಪಕ್ಷಗಳಲ್ಲಿ ಭಾರೀ ಫೈಟ್‌!

ಇವತ್ತು ರಾಮ ಆಯೇಂಗೆ ಆಯೇಂಗೆ ರಾಮ ಆಯೇಂಗೆ ಅನ್ನುವ ರೀತಿಯಲ್ಲಿ ಹಬ್ಬದ ವಾತಾವರಣವಿದೆ. ಎಲ್ಲೆಂದರಲ್ಲಿ ಅಯೋಧ್ಯೆಗೆ ಹೋಗಿ ಜನ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ, ಹಾಡುತ್ತಿದ್ದಾರೆ, ಕುಣಿಯುತ್ತಿದ್ದಾರೆ. ಆದರೆ 1985ರಲ್ಲಿ ಮಂದಿರದ ಹೋರಾಟವನ್ನು ಸಂಘ ಪರಿವಾರ ಕೈಗೆತ್ತಿಕೊಂಡಾಗ ಜನತೆಯ ಬೆಂಬಲ, ಸಾಧು ಸಂತರ ಬೆಂಬಲ, ಹಣಕಾಸಿನ ಬೆಂಬಲ ಅಷ್ಟೊಂದು ಇರಲಿಲ್ಲ. ಅದನ್ನು ಸಾಧ್ಯ ಮಾಡಿ ತೋರಿಸಿದ್ದು ಅಶೋಕ್ ಸಿಂಘಲ್, ಭಾವುರಾವ್ ದೇವರಸ್, ಮೋರೋಪಂತ ಪಿಂಗಳೆ, ಲಾಲಕೃಷ್ಣ ಅಡ್ವಾಣಿ ಮತ್ತು ಕಲ್ಯಾಣ ಸಿಂಗ್ ತರಹದ ಗಟ್ಟಿ ನಾಯಕರು.

1. ಅಶೋಕ ಸಿಂಘಲ್: ಇವತ್ತು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಆಗುತ್ತಿದೆ ಅಂದರೆ ಅದಕ್ಕೆ ಮುಖ್ಯ ಕಾರಣ ವಿಶ್ವ ಹಿಂದೂ ಪರಿಷತ್ತಿನ ಅಶೋಕ ಸಿಂಘಲ್. ಆಗ್ರಾದ ಶ್ರೀಮಂತ ಕುಟುಂಬದವರು. ಬನಾರಸ ಹಿಂದೂ ವಿಶ್ವವಿದ್ಯಾಲಯದಿಂದ ಮೆಟಲರ್ಜಿಯಲ್ಲಿ ಇಂಜಿನಿಯರಿಂಗ್ ಮುಗಿಸಿದ ನಂತರ ವಿದೇಶದಲ್ಲಿ ಶಿಕ್ಷಣ ಪಡೆಯಲು ಹೊರಟಿದ್ದರು. ಇನ್ನೇನು ವಿಮಾನ ನಿಲ್ದಾಣಕ್ಕೆ ಹೋಗಿ ವಿದೇಶಕ್ಕೆ ಹೊರಡಬೇಕು ಎನ್ನುವಾಗ ಅವರಿಗೆ ನನ್ನ ಅವಶ್ಯಕತೆ ಹಿಂದೂ ಸಮಾಜಕ್ಕಿದೆ ಎಂದು ಅನ್ನಿಸಿ ಮನೆ ಬಿಟ್ಟು ಸಂಘ ಪ್ರಚಾರಕರಾದರು. 1981ರಲ್ಲಿ ವಿಎಚ್‌ಪಿ ಏಕಾತ್ಮತಾ ಯಾತ್ರೆ 3 ಲಕ್ಷ ಹಳ್ಳಿಗಳಲ್ಲಿ ಗಂಗಾ ಪೂಜೆ ನಡೆಸಿದ ನಂತರವೇ ‘ಹಿಂದುತ್ವ’ ಅನ್ನುವ ಶಬ್ದ ಚರ್ಚೆ ಆಗತೊಡಗಿತು. ಅದನ್ನು ಯೋಜಿಸಿದ್ದೇ ಅಶೋಕ್ ಸಿಂಘಲ್. 

1985ರಲ್ಲಿ ದಿಲ್ಲಿಯ ವಿಜ್ಞಾನ ಭವನದಲ್ಲಿ ಧರ್ಮ ಸಂಸತ್ ನಡೆಸಿ ಎಂದೂ ಒಂದೇ ವೇದಿಕೆಗೆ ಬಾರದ ಮಠದ ಪೀಠಗಳನ್ನು ಒಂದು ಕಡೆ ಸೇರಿಸಿ ಮಂದಿರ ಹೋರಾಟವನ್ನು ಪುನರಪಿ ಶುರು ಮಾಡಿದ್ದು ಅವರೇ. ಹೀಗಾಗಿಯೇ ಪೇಜಾವರ ಶ್ರೀಗಳು, ಮಹಾಂತ ನೃತ್ಯಗೋಪಾಲ ದಾಸ್‌, ದಿಗಂಬರ ಅಖಾಡಾದ ರಾಮಚಂದ್ರ ಪರಮಹಂಸ, ಗೋರಖಪುರದ ಮಹಾಂತ ಅವೈದ್ಯನಾಥ ಹೀಗೆ ಸಂತ ಸಮಾಜ ವಿಎಚ್‌ಪಿ ಜೊತೆ ಬರಲು ಒಪ್ಪಿಕೊಂಡಿತು. 1989ರಲ್ಲಿ ಕೆಲ ಮೇಲು ಜಾತಿಯ ಸ್ವಾಮೀಜಿಗಳು ವಿರೋಧ ಮಾಡಿದರೂ ಕೂಡ ಕಾಮೇಶ್ವರ ಚೌಪಾಲ ಅನ್ನುವ ದಲಿತ ವ್ಯಕ್ತಿಯ ಕೈಯಲ್ಲಿ ಮಂದಿರದ ಶೀಲಾನ್ಯಾಸ ನಡೆಸುವುದರ ಮೂಲಕ ಪೂರ್ತಿ ಮಂದಿರ ಹೋರಾಟಕ್ಕೆ ಒಂದು ಸಾಮಾಜಿಕ ಸಮರಸತೆಯ ಆಯಾಮ ನೀಡಿದವರು. 

ಹಾಗೆಂದು ಸಿಂಘಲ್ ಬರೀ ಹಿಂದೆ ನಿಂತು ಯೋಜನೆ ರೂಪಿಸಿದವರಲ್ಲ.  1990ರ ಕರಸೇವೆ ಸಂಧರ್ಭದಲ್ಲಿ ಪೋಲೀಸರ ಮೊದಲ ಏಟು ತಿಂದು ತಲೆ ಒಡೆದರೂ ಕೂಡ ಬ್ಯಾಂಡೇಜ್ ಸುತ್ತಿಕೊಂಡು ಅಲ್ಲೇ ನಿಂತು ನೇತೃತ್ವ ಕೊಟ್ಟಿದ್ದರು. ಸಿಂಘಲ್‌ರ ವೈಚಾರಿಕ ಪ್ರಖರತೆ ಮತ್ತು ಹಿಂದೂ ಸಮಾಜದ ಬಗೆಗಿನ ಅವರ ಪ್ರಾಮಾಣಿಕ ಕಾಳಜಿಯ ಕಾರಣದಿಂದ ರಾಜೀವ್ ಗಾಂಧಿ, ಅರುಣ ನೆಹರು, ವಿ.ಪಿ.ಸಿಂಗ್, ಚಂದ್ರಶೇಖರ್, ಕರಣ ಸಿಂಗ್, ನೇಪಾಲದ ರಾಜ ಬೀರೇಂದ್ರ, ಪಿ.ವಿ.ನರಸಿಂಹ ರಾವ್ ಕೂಡ ಏನೇ ವಿಷಯ ಇದ್ದರೂ ಕರೆದು ಅಭಿಪ್ರಾಯ ಕೇಳುತ್ತಿದ್ದರು. ಆದರೆ ಎಂದಿಗೂ ಸಿಂಘಲ್ ಯಾರೊಂದಿಗೂ ಮಂದಿರದ ವಿಷಯ ಬಂದಾಗ ರಾಜಿ ಮಾಡಿಕೊಂಡವರಲ್ಲ. 

ಅದು ಎಲ್ಲಿವರೆಗೆ ಅಂದರೆ ಪ್ರಧಾನಿ ಆಗಿದ್ದಾಗ ಮಂದಿರಕ್ಕಾಗಿ ಏನೂ ಮಾಡಲಿಲ್ಲ ಎಂದು ಅಟಲ್ ಬಿಹಾರಿ ವಾಜಪೇಯಿ ಜೊತೆ ಕೂಡ ನೇರವಾಗಿ ಜಗಳ ಆಡಿ ಮಾತು ಬಿಟ್ಟಿದ್ದರು. 2015ರಲ್ಲಿ ತನ್ನ 85ನೇ ವಯಸ್ಸಿನಲ್ಲಿ ಅನಾರೋಗ್ಯಪೀಡಿತರಾಗಿದ್ದಾಗ ಲಾಲಕೃಷ್ಣ ಅಡ್ವಾಣಿ ನೋಡಲು ಹೋಗಿದ್ದರಂತೆ. ನಾನು ಇರುತ್ತೇನೆ, ಮಂದಿರ ನಿರ್ಮಾಣ ಆಗಿ ಮೂರ್ತಿ ನೋಡುವವರೆಗೆ ನನಗೆ ಏನೂ ಆಗುವುದಿಲ್ಲ ಎಂದು ಹೇಳಿದ ಕೆಲ ದಿನಗಳಲ್ಲಿ ಅಶೋಕ ಸಿಂಘಲ್ ವಿಧಿವಶರಾದರು. ಅಯೋಧ್ಯೆಯ ಸಂತ, ಮಾಜಿ ಕೇಂದ್ರ ಸಚಿವ ರಾಮವಿಲಾಸ ವೇದಾಂತಿ ಪ್ರಕಾರ ‘ಒಮ್ಮೆ ಯುಪಿಯಲ್ಲಿ ಸಂತ ಸಮಾಜದ ಸಭೆಯಲ್ಲಿ ಯೋಗಿ ಆದಿತ್ಯನಾಥರ ಕಡೆ ನೋಡಿದ ಅಶೋಕ ಸಿಂಘಲ್ ಈ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿ ಆದಾಗ ಮಂದಿರ ನಿರ್ಮಾಣ ಶುರು ಆಗುತ್ತದೆ’ ಎಂದು ಹೇಳಿದ್ದರಂತೆ.

2. ಮೋರೋಪಂತ ಪಿಂಗಳೆ: ಇವತ್ತು ಹಿಂದುತ್ವ, ಮಂದಿರ ಎಂದು ಭಾಷಣ ಮಾಡುವ ಅನೇಕರಿಗೆ ಪ್ರಚಾರಕ ಪಿಂಗಳೆ ಯಾರು ಎಂದು ಕೂಡ ಗೊತ್ತಿರಲಿಕ್ಕಿಲ್ಲ. ಆದರೆ ಪಿಂಗಳೆ ಅವರಿಂದಲೇ ಬರೀ ಸಂತ ಸಮಾಜದ ಧಾರ್ಮಿಕ ಹೋರಾಟವಾಗಿ ಉಳಿಯಬಹುದಾಗಿದ್ದ ರಾಮ ಮಂದಿರ ಆಂದೋಲನಕ್ಕೆ ಒಂದು ಸಾಮಾಜಿಕ ಮತ್ತು ರಾಜಕೀಯ ಸ್ವರೂಪ ದೊರೆಯಿತು. ಹಳ್ಳಿ ಹಳ್ಳಿಗಳಿಂದ ಗಲ್ಲಿ ಗಲ್ಲಿಗಳಿಂದ ರಾಮ ಮಂದಿರ ಕಟ್ಟಲು ಇಟ್ಟಿಗೆಗಳು ಮತ್ತು ಸವ್ವಾ ರುಪಾಯಿ ದೇಣಿಗೆ ಸಂಗ್ರಹಿಸಬೇಕು ಅನ್ನುವ ಯೋಚನೆ ಬಂದಿದ್ದೇ ಪಿಂಗಳೆ ಅವರಿಗೆ. ಡಾ.ಹೆಡಗೇವಾರ ಮತ್ತು ಗುರೂಜಿ ಗೋಲ್ವಳ್ಕರ್ ಕಾಲದ ಸ್ವಯಂ ಸೇವಕರಾಗಿದ್ದ ಪಿಂಗಳೆ ದಿಲ್ಲಿಯ ಝಾಂಡೇವಾಲಾ ಸಂಘ ಕಾರ್ಯಲಯದಲ್ಲಿ ಕುಳಿತು ರಾಮ ಮಂದಿರ ಹೋರಾಟವನ್ನು ಸರ್ವಸ್ಪರ್ಶಿ ಆಗಿ ರೂಪಿಸುವುದು ಹೇಗೆ ಎಂಬ ಯೋಜನೆ ರೂಪಿಸಿ, ಸಿಂಘಲ್‌ಗೆ ಮತ್ತು ವಿಎಚ್‌ಪಿಗೆ ಮಾರ್ಗದರ್ಶನ ಮಾಡುತ್ತಿದ್ದರು.

3 ಭಾವುರಾವ ದೇವರಸ: ಭಾರತದ ರಾಜಕಾರಣದಲ್ಲಿ ಬಿಜೆಪಿ ಇವತ್ತು ಮಧ್ಯ ಬಿಂದು ಆಗಿ ರೂಪುಗೊಂಡಿದೆ ಎಂದರೆ ಇದಕ್ಕೆ ಕಾರಣ ಆಗಿನ ಸರಸಂಘ ಚಾಲಕ ಬಾಳಾಸಾಹೇಬ್ ದೇವರಸರ ಸಹೋದರ, ಸ್ವತಃ ಪ್ರಚಾರಕರಾಗಿ ಬಿಜೆಪಿಗೆ ಮಾರ್ಗದರ್ಶನ ಮಾಡುತ್ತಿದ್ದ ಭಾವುರಾವ್ ದೇವರಸ. ಬಹುತೇಕ 80ರಿಂದ 90ರ ದಶಕದ ಕಮಂಡಲ, ಮಂಡಲ ಮತ್ತು ಮಾರುಕಟ್ಟೆಗಳ ತಳಮಳವನ್ನು ಅರ್ಥ ಮಾಡಿಕೊಂಡು ರಣತಂತ್ರ ರೂಪಿಸುತ್ತಿದ್ದವರು ಭಾವುರಾವ್‌. 1977ರಲ್ಲಿ ಜನಸಂಘವು ಸಮಾಜವಾದಿಗಳ ಜೊತೆ ಸೇರಿಕೊಂಡು ಜನತಾ ಪಾರ್ಟಿ ಆಗದಿದ್ದರೆ ಇಂದಿರಾ ಗಾಂಧಿಯನ್ನು ಸೋಲಿಸಲು ಆಗುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದೇ ದೇವರಸ. 

ಅಟಲ್, ಅಡ್ವಾಣಿಗೆ ಅದು ತುಂಬಾ ಇಷ್ಟ ಇರಲಿಲ್ಲ. 1989ರಲ್ಲಿ ಬಿಜೆಪಿ ಮಂದಿರ ಹೋರಾಟಕ್ಕೆ ಧುಮುಕಬೇಕು ಎಂದು ದೇವರಸರು ಗೋವಿಂದಾಚಾರ್ಯರಿಗೆ ಹೇಳಿದಾಗ ಅಟಲ್‌ ಒಪ್ಪಲಿಲ್ಲ, ಜಸ್ವಂತ ಸಿಂಗ್ ಸಿಟ್ಟಿನಿಂದ ಪಾಲಂಪುರ ಕಾರ್ಯಕಾರಿಣಿಯಿಂದ ಎದ್ದುಹೋಗಿದ್ದರು. ಆದರೆ ಬಿಜೆಪಿ ಕಾರ್ಯಕಾರಿಣಿ ನಿರ್ಣಯ ಮಾಡಿತು. 1990ರಲ್ಲಿ ಬಿಜೆಪಿ ರಾಮರಥ ಯಾತ್ರೆಗೆ ಹೋಗಬೇಕು ಎಂದು ದೇವರಸರು ಗೋವಿಂದಾಚಾರ್ಯರ ಕಡೆಯಿಂದ ಹೇಳಿಸಿದಾಗ ಅಟಲ್ ‘ಈ ನೌಟಂಕಿ ನಾನು ಮಾಡುವುದಿಲ್ಲ’ ಎಂದರು. ಕೊನೆಗೆ ಅಡ್ವಾಣಿ ಒಬ್ಬರೇ ನಡೆಸಿದ ಯಾತ್ರೆ ಭಾರತದ ರಾಜಕೀಯದ ದಿಕ್ಕು ದಿಶೆಯನ್ನೇ ಬದಲಿಸಿತು.

4. ಲಾಲಕೃಷ್ಣ ಅಡ್ವಾಣಿ: ಅಡ್ವಾಣಿ ಕರಾಚಿಯಲ್ಲಿ ಆಂಗ್ಲ ಶಿಕ್ಷಣ ಪಡೆದು ಸಂಘದ ಸಂಪರ್ಕಕ್ಕೆ ಬಂದವರು. ಆದರೆ ದೇಶ ವಿಭಜನೆ ಆದಾಗ ಅವರ ಸಿಂಧಿ ತಂದೆ ಬರಿಗೈಯಲ್ಲಿ ಭಾರತಕ್ಕೆ ಓಡಿಬಂದವರು. ರಾಜಸ್ಥಾನದ ಅಲ್ವರನ್ನಲ್ಲಿ ಪ್ರಚಾರಕ ಆಗಿದ್ದ ಅಡ್ವಾಣಿ ಅವರನ್ನು ಶ್ಯಾಮಪ್ರಸಾದ ಮುಖರ್ಜಿ ನಿಧನದ ನಂತರ ಸಂಘ ಅಟಲ್ ಬಿಹಾರಿ ವಾಜಪೇಯಿಗೆ ಆಪ್ತ ಕಾರ್ಯದರ್ಶಿ ಆಗಿ ಕೆಲಸ ಮಾಡಲು ಕಳುಹಿಸಿತು. ಅಟಲ್ ಎಷ್ಟೇ ತಮ್ಮ ಜನಪ್ರಿಯರಿದ್ದರೂ ಕೂಡ ಬಿಜೆಪಿ ಸಂಘಟನೆಯನ್ನು ವಿಸ್ತಾರ ಮಾಡಿ ಹೊಸ ಪ್ರತಿಭೆಗಳನ್ನು ಹುಡುಕಿ ತಂದು ಪಾರ್ಟಿ ಕಟ್ಟಿದ ಶ್ರೇಯಸ್ಸು ಅಡ್ವಾಣಿಗೆ ಸಲ್ಲುತ್ತದೆ. 

ಅಟಲ್, ವಿಜಯರಾಜೆ ಸಿಂಧಿಯಾ, ಸಿಕಂದರ್ ಬಕ್ತ, ಜಸ್ವಂತ ಸಿಂಗ್ ಹೀಗೆ ಯಾರು ಕೂಡ ರಥಯಾತ್ರೆಗೆ ಮುಂದೆ ಬರದೇ ಇದ್ದಾಗ ನಾನು ಹೋಗುತ್ತೇನೆ ಎಂದು ಹೊರಟಿದ್ದು ಅಡ್ವಾಣಿ. ಅವರು ಮಂದಿರ ಹೋರಾಟದಲ್ಲಿ ಭಾಗಿ ಆಗದೇ ಇದ್ದರೆ ಬಿಜೆಪಿ ಇವತ್ತು ಉತ್ತರ ಭಾರತದ ಬ್ರಾಹ್ಮಣ, ಬನಿಯ ಪಾರ್ಟಿ ಆಗಿ ಉಳಿಯುತ್ತಿತ್ತು ಅಷ್ಟೆ. ಆದರೆ ರಥಯಾತ್ರೆ ನಂತರ ಎಷ್ಟು ಜನಪ್ರಿಯತೆ ಇದ್ದರೂ ಕೂಡ ಅಟಲ್‌ಜಿ ನನಗಿಂತ ಸೀನಿಯರ್, ಅವರು ಮೊದಲು ಪ್ರಧಾನಿ ಆಗಬೇಕು ಎಂದು ಆರ್‌ಎಸ್‌ಎಸ್ ಅನ್ನು ಕೂಡ ಕೇಳದೆ 1995ರಲ್ಲಿ ವಾಜಪೇಯಿ ಪ್ರಧಾನಿ ಅಭ್ಯರ್ಥಿ ಎಂದು ಸೂಚಿಸಿದ್ದು ಅಡ್ವಾಣಿ. ವಿಪರ್ಯಾಸ ನೋಡಿ 1996ರಲ್ಲಿ ಹಿಂದುತ್ವವಾದಿ ಅನ್ನುವ ಕಾರಣದಿಂದ ಅಡ್ವಾಣಿ ಹೆಸರು ಸಮ್ಮಿಶ್ರದ ಯುಗದಲ್ಲಿ ಹಿಂದೆ ಹೋಯಿತು. ಅದೇ ಪ್ರಖರ ಹಿಂದುತ್ವವಾದಿ, ಖಡಕ್ ವ್ಯಕ್ತಿತ್ವ ಅನ್ನುವ ಕಾರಣದಿಂದ ಮೋದಿ ಹೆಸರು 2013ರಲ್ಲಿ ಮುಂದೆ ಬಂತು.

5.ಕಲ್ಯಾಣ ಸಿಂಗ್: ಒಂದು ರೀತಿಯಲ್ಲಿ ಸಮಾಜವಾದಿಗಳು, ಅದರಲ್ಲೂ ಲೋಹಿಯಾವಾದಿಗಳು ಶುರುಮಾಡಿದ ಮಂಡಲ ಹೋರಾಟಕ್ಕೆ ಬಿಜೆಪಿ ಮತ್ತು ಆರೆಸ್ಸೆಸ್‌ ಕೊಟ್ಟ ಉತ್ತರವೇ ಹಿಂದುಳಿದ ಲೋಧ್ ಸಮುದಾಯಕ್ಕೆ ಕಲ್ಯಾಣ ಸಿಂಗ್. 1965ರಲ್ಲಿ ಚೌಧರಿ ಚರಣ ಸಿಂಗರು ನಾನಾಜಿ ದೇಶಮುಖ್‌ ಬಳಿ ಹೋಗಿ ಚಂದ್ರಭಾನು ಗುಪ್ತರನ್ನೇ ಕಾಂಗ್ರೆಸ್ ಮುಖ್ಯಮಂತ್ರಿ ಮಾಡುತ್ತದೆ, ನಾನು ಯಾವಾಗ ಮುಖ್ಯಮಂತ್ರಿ ಆಗುವುದು ಎಂದು ಕೇಳಿದಾಗ ನಾನಾಜಿ ‘ಜನಸಂಘ 100 ಸೀಟು ತಲುಪಿದಾಗ ನೀವೇ ಮುಖ್ಯಮಂತ್ರಿ’ ಎಂದು ಹೇಳುತ್ತಾರೆ.1967ರಲ್ಲಿಯೇ ಜನಸಂಘ 100 ತಲುಪುತ್ತದೆ. 

ಚರಣ ಸಿಂಗ್ ಕಾಂಗ್ರೆಸ್ ಒಡೆದು ಬಂದು ಜನಸಂಘದೊಂದಿಗೆ ಸರ್ಕಾರ ರಚಿಸುತ್ತಾರೆ. ಆದರೆ 1969ರಲ್ಲಿ ಜನಸಂಘವನ್ನೇ ಒಡೆದು ಆಪೋಶನ ತೆಗೆದುಕೊಳ್ಳುತ್ತಾರೆ. ಆಗ ನಾನಾಜಿಗೆ ಕಲ್ಯಾಣ ಸಿಂಗ್ ತರಹದ ಹಿಂದುಳಿದ ನಾಯಕನನ್ನು ಬೆಳೆಸಿದರೆ ಮಾತ್ರ ಜನಸಂಘಕ್ಕೊಂದು ಯಾದವೇತರ ಹಿಂದುಳಿದ ವೋಟ್ ಬ್ಯಾಂಕ್ ದೊರೆಯುತ್ತದೆ, ಇಲ್ಲದೇ ಹೋದರೆ ಬ್ರಾಹ್ಮಣ, ಬನಿಯಾ, ಠಾಕೂರ್‌ ವೋಟ್ ಬ್ಯಾಂಕ್‌ನಿಂದ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದು ಅರ್ಥ ಆಗಿರುತ್ತದೆ. ಕಲ್ಯಾಣ ಸಿಂಗ್ ಅಲಿಘಡದವರು. ಅಲ್ಲಿನ ಅತ್ರೋಲಿಯಾ ತಾಲೂಕಿನ ಆರೆಸ್ಸೆಸ್‌ ಕಾರ್ಯವಾಹ ಆಗಿದ್ದವರು. ನರೇಂದ್ರ ಮೋದಿಗೆ ಪ್ರಿನ್ಸಿಪಲ್ ಸೆಕ್ರೆಟರಿ ಆಗಿದ್ದ ನೃಪೇಂದ್ರ ಮಿಶ್ರಾ ಕಲ್ಯಾಣ ಸಿಂಗ್‌ರಿಗೆ ಕೂಡ ಕಾರ್ಯದರ್ಶಿ ಆಗಿದ್ದವರು. 

ಲೋಕಸಭಾ ಚುನಾವಣೆ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ವೈಯಕ್ತಿಕ ಅಭಿಪ್ರಾಯ ಸಂಗ್ರಹ: ಸುರ್ಜೇವಾಲಾ

ಅವರು ಹೇಳುವ ಪ್ರಕಾರ ಕಲ್ಯಾಣ ಸಿಂಗ್ ಎಷ್ಟು ಪ್ರಾಮಾಣಿಕರಾಗಿದ್ದರೆಂದರೆ ಮಗ ರಾಜವೀರ ಒಮ್ಮೆ ಸರ್ಕಾರಿ ಕಾರು ಬಳಸಿದ್ದರು ಎಂದು ಗೊತ್ತಾದ ಕೂಡಲೇ ಸರ್ಕಾರಿ ಮನೆಯಿಂದಲೇ ಹೊರಹಾಕಿದ್ದರು.1992ರಲ್ಲಿ ಮುಖ್ಯಮಂತ್ರಿ ಆಗಿದ್ದ ಕಲ್ಯಾಣ ಸಿಂಗ್ ಬಿಟ್ಟು ಬೇರೆ ಯಾರೇ ಆಗಿದ್ದರೂ ರಾಜೀನಾಮೆ ಕೊಟ್ಟು ಮನೆಗೆ ಹೋಗುತ್ತಿದ್ದರು. ಆದರೆ ಕಲ್ಯಾಣ ಸಿಂಗ್ ಸುಪ್ರೀಂಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟು ಅಧಿಕಾರ ಕಳೆದುಕೊಂಡರು. ಅಷ್ಟೇ ಅಲ್ಲ, ಕೇಸು ಹಾಕಿಸಿಕೊಂಡು ಕೋರ್ಟು ಕಚೇರಿ ಅಲೆದಾಡಿದರು. ಮರಳಿ ಬಿಜೆಪಿಯೊಳಗೆ ಕಲ್ಯಾಣ ಸಿಂಗ್ ವಿರುದ್ಧ ಮಸಲತ್ತು ಶುರುವಾಗಿ ಪಾರ್ಟಿಯಿಂದಲೇ ಹೊರಹೋಗಬೇಕಾಯಿತು. ಅರ್ಥ ಇಷ್ಟೆ, ಕಲ್ಯಾಣ ಸಿಂಗರಿಗೆ ಅಯೋಧ್ಯೆ ವಿವಾದದಿಂದ ಏನೂ ಲಾಭ ಆಗಲಿಲ್ಲ. ಆದರೆ ಎಂದೂ ಕಲ್ಯಾಣ ಸಿಂಗ್ 1992ರ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಲಿಲ್ಲ.

Follow Us:
Download App:
  • android
  • ios