* ಬೇಸಿಗೆಯ ದಿನ, ಉಷ್ಣ ಮಾರುತದ ಪರಿಣಾಮ ದೇಶಾದ್ಯಂತ ವಿದ್ಯುತ್ ಬೇಡಿಕೆ * 10.77 ಗಿಗಾ ವ್ಯಾಟ್‌ಗೆ ತಲುಪಿದ ಕೊರತೆ* ಬೇಡಿಕೆಯಷ್ಟುಪೂರೈಕೆ ಇಲ್ಲದೆಯೇ ಸಮಸ್ಯೆ
ನವದೆಹಲಿ(ಮೇ.02): ಬೇಸಿಗೆಯ ದಿನ, ಉಷ್ಣ ಮಾರುತದ ಪರಿಣಾಮ ದೇಶಾದ್ಯಂತ ವಿದ್ಯುತ್ ಬೇಡಿಕೆ ಸಾರ್ವಕಾಲಿಕ ಗರಿಷ್ಠ ತಲುಪಿದ್ದು, ಇದೇ ವೇಳೆ ಕಲ್ಲಿದ್ದಲು ಕೊರತೆ ಕಾರಣ ವಿದ್ಯುತ್ ಉತ್ಪಾದನೆ ಕುಸಿತ ಕಂಡಿದ್ದು, ಬೇಡಿಕೆ ಮತ್ತು ಪೂರೈಕೆ ನಡುವಿನ ವ್ಯತ್ಯಾಸ ಸಾರ್ವಕಾಲಿಕ ಗರಿಷ್ಠ ಪ್ರಮಾಣ ತಲುಪಿದೆ.
ಕಳೆದ ಭಾನುವಾರ ದೇಶದಲ್ಲಿ ಬೇಡಿಕೆ ಮತ್ತು ಪೂರೈಕೆ ನಡುವಿನ ವ್ಯತ್ಯಾಸ 2.64 ಗಿಗಾವ್ಯಾಟ್ ಇದ್ದರೆ, ಸೋಮವಾರ ಅದು 5.24 ಗಿಗಾವ್ಯಾಟ್‌ಗೆ, ಮಂಗಳವಾರ 10.29 ಗಿಗಾವ್ಯಾಟ್, ಗುರುವಾರ 10.77 ಗಿಗಾವ್ಯಾಟ್‌ಗೆ ತಲುಪುವ ಮೂಲಕ ಸಾರ್ವಕಾಲಿಕ ಗರಿಷ್ಠ ಪ್ರಮಾಣ ತಲುಪಿದೆ. ಆದರೆ ಶುಕ್ರವಾರದಂದು ಉತ್ಪಾದನಾ ಘಟಕಗಳು ಸಾರ್ವಕಾಲಿಕ ಗರಿಷ್ಠ 207.11 ಗಿಗಾ ವ್ಯಾಟ್ ವಿದ್ಯುತ್ ಪೂರೈಕೆ ಮಾಡಿದ್ದರಿಂದ ವಿದ್ಯುತ್ ಕೊರತೆ ಶುಕ್ರವಾರ 8.12 ಗಿಗಾ ವ್ಯಾಟ್‌ಗೆ ಇಳಿಕೆ ಕಂಡಿದೆ.
ಕಾರಣ ಏನು?:
ದೇಶದೆಲ್ಲೆಡೆ ಭಾರೀ ಉಷ್ಣಾಂಶವಿರುವ ಕಾರಣ ಜನರ ವಿದ್ಯುತ್ ಬಳಕೆ ಹೆಚ್ಚಾಗಿದೆ. ಆದರೆ ಉತ್ಪಾದನೆ ಕಡಿತ, ಜಾಗತಿಕ ಮಟ್ಟದಲ್ಲಿ ದರ ಏರಿಕೆ ಕಾರಣ ಕಲ್ಲಿದ್ದಲು ಪೂರೈಕೆ ಕಡಿಮೆಯಾಗಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಗರಿಷ್ಠ ಪ್ರಮಾಣದ ಉತ್ಪಾದನೆ ಸಾಧ್ಯವಾಗದೇ ಕೊರತೆ ಎದುರಾಗಿದೆ.
ಕಲ್ಲಿದ್ದಲು ಕೊರತೆಯಿಲ್ಲ, 10 ದಿನಕ್ಕಾಗುವಷ್ಟುಇದೆ: ಜೋಶಿ
ದೇಶದಲ್ಲಿ ಕಲ್ಲಿದ್ದಲು ಸಮಸ್ಯೆಯಾಗಲ್ಲ. 10 ದಿನಗಳಿಗಾಗುವಷ್ಟುಕಲ್ಲಿದ್ದಲು ದಾಸ್ತಾನಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ದೇಶದ ಥರ್ಮಲ್ ಪವರ್ ಪ್ಲಾಂಟ್‌ಗಳಲ್ಲಿ 21.55 ಮಿಲಿಯನ್ ಟನ್ ಕಲ್ಲಿದ್ದಲು ದಾಸ್ತಾನಿದೆ. ಕೋಲ್ ಕಂಪನಿಗಳಲ್ಲಿ 72.05 ಮಿಲಿಯನ್ ಟನ್ ಕಲ್ಲಿದ್ದಲು ಸಂಗ್ರಹವಿದೆ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ ಎಂದರು.
ಈ ತಿಂಗಳು ಅನಿರೀಕ್ಷಿತವಾಗಿ ಬಿಸಿಲು ಹೆಚ್ಚಿದ್ದು, ವಿದ್ಯುತ್‌ಗೆ ಅತಿ ಹೆಚ್ಚು ಬೇಡಿಕೆ ಉಂಟಾಗಿದೆ. ದೇಶದ ಕೈಗಾರಿಕೆಗಳು ಸಹ ಪುಟಿದೆದ್ದಿವೆ. ಹೀಗಾಗಿ ಒಮ್ಮೇಲೆ ವಿದ್ಯುತ್‌ಗೆ ಬೇಡಿಕೆ ಹೆಚ್ಚಿದೆ. ದೂರದೂರದ ಪವರ್ ಪ್ಲಾಂಟ್‌ಗಳಲ್ಲಿ ಹತ್ತು ದಿನಕ್ಕಾಗುವಷ್ಟುಕಲ್ಲಿದ್ದಲು ಸಂಗ್ರಹವಿದೆ ಎಂದು ಹೇಳಿದರು.
10 ದಿನಗಳ ನಂತರ ದೇಶ ಸಂಪೂರ್ಣ ಕತ್ತಲಾಗುತ್ತದೆ ಎನ್ನುವ ರೀತಿಯಲ್ಲಿ ಕೆಲವರು ಮಾತನಾಡುತ್ತಿದ್ದಾರೆ. ಅದು ಸರಿಯಲ್ಲ. ಕೇಂದ್ರ ಸರ್ಕಾರ ನಿರಂತರವಾಗಿ ಪ್ರತಿದಿನ 1.07 ಮಿಲಿಯನ್ ಟನ್ ಕಲ್ಲಿದ್ದಲು ಪೂರೈಕೆ ಮಾಡುತ್ತಿದೆ. ಬೇಡಿಕೆ ಒಮ್ಮೇಲೆ ಹೆಚ್ಚಾಗಿದ್ದರಿಂದ ಸಾಗಾಟ ಮಾಡಲು ರೈಲ್ವೆ ಇಲಾಖೆ ಸಹ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಖಾಲಿಯಾದಷ್ಟುಕಲ್ಲಿದ್ದಲನ್ನು ನಿರಂತರವಾಗಿ ತುಂಬಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಕಲ್ಲಿದ್ದಲಿನ ಸಮಸ್ಯೆಯಾಗದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಯಾರೂ ಗಾಬರಿ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
