ರಾಜ್ಯದ ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ಅನುಮತಿ ಪಡೆಯದೆ ಉದ್ದೇಶಪೂರ್ವಕವಾಗಿಯೇ ಬಿಜೆಪಿಯು ರಾಮನವಮಿ ಮೆರವಣಿಗೆ ನಡೆಸುತ್ತಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಖೆಜುರಿ: ರಾಜ್ಯದ ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ಅನುಮತಿ ಪಡೆಯದೆ ಉದ್ದೇಶಪೂರ್ವಕವಾಗಿಯೇ ಬಿಜೆಪಿಯು ರಾಮನವಮಿ ಮೆರವಣಿಗೆ ನಡೆಸುತ್ತಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಹೂಗ್ಲಿ ಜಿಲ್ಲೆಯ ರಿಶ್ರಾ ಮತ್ತು ಸೆರಾಂಪೂರ್‌ಗಳಲ್ಲಿ ರಾಮನವಮಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಬೆನ್ನಲ್ಲೇ ಮಮತಾ ಈ ಆರೋಪ ಮಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಮನವಮಿ ಮೆರವಣಿಗೆ 5 ದಿನಗಳ ಕಾಲ ಏಕೆ ನಡೆಯುತ್ತದೆ. ಆಚರಣೆಯ ಒಂದು ದಿನ ನೀವು ಅಂತಹ ಹಲವಾರು ಮೆರವಣಿಗೆಯನ್ನು ಆಯೋಜಿಸಿ ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ನಿಮ್ಮೊಂದಿಗೆ ಶಸ್ತ್ರಾಸ್ತ್ರ ಕೊಂಡೊಯ್ಯಬೇಡಿ ಎಂದಿದ್ದಾರೆ. ಅಲ್ಲದೇ ಅವರು (ಬಿಜೆಪಿ) ಉದ್ದೇಶಪೂರ್ವಕವಾಗಿಯೇ ಅನುಮತಿಯಿಲ್ಲದೆ ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ರಾಮನವಮಿ ಮೆರವಣಿಗೆ ಮಾಡುತ್ತಿದ್ದಾರೆ. ರಿಶ್ರಾದಲ್ಲಿ ಜನ ಶಸ್ತ್ರಾಸ್ತ್ರಗಳೊಂದಿಗೆ ಕಂಡುಬಂದಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಬಂಗಾಳದಲ್ಲಿ ಮತ್ತೆ ಹಿಂಸಾಚಾರ: 45 ಮಂದಿ ಬಂಧನ, ನಿಷೇಧಾಜ್ಞೆ ಜಾರಿ; ಘಟನೆಗೆ ಬಿಜೆಪಿ ಕಾರಣ ಎಂದ ದೀದಿ

ಹಿಂಸಾಪೀಡಿತ ಬಂಗಾಳ ಶಾಂತ

ರಾಮನವಮಿ ಆಚರಣೆ ವೇಳೆ ದುಷ್ಕರ್ಮಿಗಳ ಕಲ್ಲು ತೂರಾಟ, ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಪಶ್ಚಿಮ ಬಂಗಾಳದ (West Bengal) ಹೂಗ್ಲಿ ಜಿಲ್ಲೆಯ ರಿಶ್ರಾ (Rishra) ಮತ್ತು ಸ್ರೆರಾಂಪೋರ್‌ನಲ್ಲಿ (Srerampore) ಸೋಮವಾರ ಶಾಂತಿ ನೆಲೆಸಿದೆ. ಆದರೆ ಮುಂಜಾಗ್ರತಾ ಕ್ರಮವಾಗಿ ಹೂಗ್ಲಿ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ನಿಷೇಧಾಜ್ಞೆ ಮುಂದುವರೆಸಲಾಗಿದ್ದು, ಭಾನುವಾರ ರಾತ್ರಿಯಿಡೀ ಇಂಟರ್ನೆಟ್‌ ಸ್ಥಗಿತಗೊಳಿಸಲಾಗಿತ್ತು. ಈ ನಡುವೆ ಗಲಭೆ ಪೀಡಿತ ರಿಶ್ರಾಗೆ ಸೋಮವಾರ ಭೇಟಿ ನೀಡಲು ಮುಂದಾದ ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್‌ ಅವರನ್ನು ಪೊಲೀಸರು ತಡೆದಿದ್ದಾರೆ. ಪೊಲೀಸರ ಈ ಕ್ರಮವನ್ನು ಬಿಜೆಪಿ ಕಟುವಾಗಿ ಟೀಕಿಸಿದೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸುಕಾಂತ, ನಾವು ಬಿಜೆಪಿಗರು ಎಂದು ಇಲ್ಲಿಗೆ ಭೇಟಿ ನೀಡಲು ನಮ್ಮನ್ನು ಬಿಡುತ್ತಿಲ್ಲ. ಈ ಪ್ರದೇಶಗಳಲ್ಲಿ ಟಿಎಂಸಿ ನಾಯಕರು ಆರಾಮಾಗಿ ಓಡಾಡಿಕೊಂಡಿದ್ದಾರೆ. ನಿಷೇಧಾಜ್ಞೆ ಇದೆ ಎಂದು ಗಾಯಗೊಂಡ ನಮ್ಮ ಪಕ್ಷದ ಕಾರ್ಯಕರ್ತರನ್ನು ನೋಡಲು ನಮಗೆ ಅನುಮತಿ ನೀಡುತ್ತಿಲ್ಲ. ಸತ್ಯ ಹೊರಬರದಂತೆ ತಡೆಯಲಾಗುತ್ತಿದೆ. ಇದೊಂದು ಪೂರ್ವ ನಿಯೋಜಿತ ಗಲಭೆಯಾಗಿದೆ. ಪರಿಸ್ಥಿತಿ ನಿಯಂತ್ರಿಸುವಲ್ಲಿ ರಾಜ್ಯ ಪೊಲೀಸ್‌ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪರೋಕ್ಷವಾಗಿ ಮಮತಾ ಸರ್ಕಾರವನ್ನು ಟೀಕಿಸಿದ್ದಾರೆ.

ರಾಷ್ಟ್ರಧ್ವಜಕ್ಕೆ ಅವಮಾನ: ಮಮತಾ ಬ್ಯಾನರ್ಜಿ ವಿರುದ್ಧ ತನಿಖೆಗೆ ಕೋರ್ಟ್‌ ಆದೇಶ

ಆದರೆ ಇದೊಂದು ಬಿಜೆಪಿಯ ಪೂರ್ವ ನಿಯೋಜಿತ ಗಲಭೆಯಾಗಿದ್ದು ಕೋಮುಗಲಭೆ ಮೂಲಕ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಯೋಜನೆಯಾಗಿದೆ ಎಂದು ಟಿಎಂಸಿ ಆರೋಪಿಸಿದೆ.

ಜಾರ್ಖಂಡ್‌ನಲ್ಲಿ ಹನುಮ ಮೂರ್ತಿ ಧ್ವಂಸ

ಜಾರ್ಖಂಡ್‌ನ (Jharkhand) ಸಾಹಿಬ್‌ಜಂಗ್‌ನ ನಗರದ ಪಟೇಲ್‌ ಚೌಕ್‌ (Patel Chowk) ಎಂಬಲ್ಲಿದ್ದ ಸಣ್ಣ ದೇವಾಲಯವೊಂದರ ಹನುಮಂತ (Lord Hanuman) ದೇವರ ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ. ಸೋಮವಾರ ಮುಂಜಾನೆ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ದೇವಾಲಯವೊಂದರ ಮರದ ಅಡಿಯಲ್ಲಿದ್ದ 1.5 ಅಡಿ ಎತ್ತರದ ಹನುಮನ ವಿಗ್ರಹವನ್ನು ವ್ಯಕ್ತಿಯೋರ್ವ ಸೋಮವಾರ ಬೆಳಗಿನ 2.30 ರ ಸುಮಾರಿಗೆ ಧ್ವಂಸಗೊಳಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಂಧಿತ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯದಲ್ಲಿ ರಾಮನವಮಿ ವೇಳೆ ಹಿಂಸಾಚಾರದ ಬೆನ್ನಲ್ಲೇ ಈ ಘಟನೆ ನಡೆದಿದೆ.