ಪಹಲ್ಗಾಮ್‌ನಲ್ಲಿ ಶಂಕಿತ ಭಯೋತ್ಪಾದಕ ದಾಳಿಯಲ್ಲಿ ೨೫ ಪ್ರವಾಸಿಗರು, ೨ ವಿದೇಶಿಯರು ಸೇರಿ ೨೭ ಮಂದಿ ಸಾವಿಗೀಡಾಗಿದ್ದು, ೧೨ ಮಂದಿ ಗಾಯಗೊಂಡಿದ್ದಾರೆ. ಟಿಆರ್‌ಎಫ್‌ ದಾಳಿಯ ಹೊಣೆ ಹೊತ್ತು, ಪ್ರವಾಸಿ ಋತುವಿನಲ್ಲಿ ನಡೆದ ಈ ದಾಳಿ ಚಿಂತೆಗೀಡು ಮಾಡಿದೆ. ಲಷ್ಕರ್-ಎ-ತೈಬಾ ಶಾಖೆಯಾಗಿರುವ ಟಿಆರ್‌ಎಫ್, ೩೭೦ನೇ ವಿಧಿ ರದ್ದತಿಯ ನಂತರ ಹೊರಹೊಮ್ಮಿ, ಹಲವು ದಾಳಿಗಳನ್ನು ನಡೆಸಿದೆ.

ನವದೆಹಲಿ (ಏ.22): ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆ ಪ್ರದೇಶದಲ್ಲಿ ನಡೆದ ಶಂಕಿತ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 25 ಪ್ರವಾಸಿಗರು 2 ವಿದೇಶಿಯರು ಸಾವು ಕಂಡಿದ್ದಾರೆ.12 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. 'ಮಿನಿ-ಸ್ವಿಟ್ಜರ್ಲೆಂಡ್' ಎಂದು ಕರೆಯಲ್ಪಡುವ ಅನಂತನಾಗ್ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣದಲ್ಲಿ, ಪ್ರವಾಸಿ ಋತುವಿನ ಗರಿಷ್ಠ ಸಮಯದಲ್ಲಿ ಈ ಘಟನೆ ನಡೆದಿದೆ.

ಜಮ್ಮು ಮತ್ತು ಕಾಶ್ಮೀರ ಮೂಲದ ಭಯೋತ್ಪಾದಕ ಗುಂಪು ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರು ಹರಿದು ಬರುತ್ತಿರುವ ಮತ್ತು ಅಮರನಾಥ ಯಾತ್ರೆ ಜುಲೈನಲ್ಲಿ ಪ್ರಾರಂಭವಾಗಲಿರುವ ಸಮಯದಲ್ಲಿ ಈ ಘಟನೆ ನಡೆದಿದೆ.

ರೆಸಿಸ್ಟೆನ್ಸ್ ಫ್ರಂಟ್‌ ಬಗ್ಗೆ ಮಾಹಿತಿ: ರೆಸಿಸ್ಟೆನ್ಸ್ ಫ್ರಂಟ್ (TRF) ಲಷ್ಕರ್-ಎ-ತೈಬಾ (LeT) ನ ಒಂದು ಶಾಖೆಯಾಗಿದ್ದು, ಆಗಸ್ಟ್ 2019 ರಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಹೊರಹೊಮ್ಮಿದ ಸಂಘಟನೆ. 370 ನೇ ವಿಧಿಯ ರದ್ದಿತಿಯಾದ ಆರು ತಿಂಗಳೊಳಗೆ, ಲಷ್ಕರ್-ಎ-ತೈಬಾ (LeT) ಸೇರಿದಂತೆ ವಿವಿಧ ಬಣಗಳ ಉಗ್ರಗಾಮಿಗಳನ್ನು ಸಂಯೋಜಿಸುವ ಮೂಲಕ ಇದು ಭೌತಿಕ ಗುಂಪಾಗಿ ವಿಕಸನಗೊಂಡಿದೆ.

ಗೃಹ ಸಚಿವಾಲಯವು 2023 ರ ಜನವರಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ TRF ಮತ್ತು ಅದರ ಸಂಘಗಳನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. TRF "ಜಮ್ಮು ಮತ್ತು ಕಾಶ್ಮೀರದ ಜನರನ್ನು ಭಾರತೀಯ ರಾಜ್ಯದ ವಿರುದ್ಧ ಭಯೋತ್ಪಾದಕ ಸಂಘಟನೆಗಳಿಗೆ ಸೇರಲು ಪ್ರಚೋದಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮಾನಸಿಕ ಕಾರ್ಯಾಚರಣೆಗಳಲ್ಲಿ" ತೊಡಗಿಸಿಕೊಂಡಿದೆ ಎಂದು ಸಚಿವಾಲಯ ಹೇಳಿದೆ.

ಈ ಗುಂಪಿನ ಅತ್ಯಂತ ಪಾತಕಿ ಭಯೋತ್ಪಾದಕರಲ್ಲಿ ಸಾಜಿದ್ ಜಟ್, ಸಜ್ಜದ್ ಗುಲ್ ಮತ್ತು ಸಲೀಂ ರೆಹಮಾನಿ ಪ್ರಮುಖರಾಗಿದ್ದಾರೆ. ಇವರೆಲ್ಲರೂ ಎಲ್‌ಇಟಿ ಜೊತೆ ಸಂಬಂಧ ಹೊಂದಿದ್ದಾರೆ. ಪ್ರಾರಂಭದಿಂದಲೂ, ಲಷ್ಕರ್-ಎ-ತೈಬಾ (ಎಲ್‌ಇಟಿ) ಯ ಪ್ರತಿನಿಧಿ ಎಂದು ಪರಿಗಣಿಸಲಾದ ಟಿಆರ್‌ಎಫ್, ಪ್ರವಾಸಿಗರು, ಅಲ್ಪಸಂಖ್ಯಾತ ಕಾಶ್ಮೀರಿ ಪಂಡಿತರು ಮತ್ತು ಕಣಿವೆಯ ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದೆ.



ಗಂದೇರ್‌ಬಾಲ್ ಜಿಲ್ಲೆಯ ನಿರ್ಮಾಣ ಸ್ಥಳದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಏಳು ಜನರ ಸಾವಿಗೆ ಈ ಗುಂಪು ಕಾರಣವಾಗಿತ್ತು. ಬಲಿಯಾದವರಲ್ಲಿ ಕಾಶ್ಮೀರಿ ವೈದ್ಯರು, ಕಾರ್ಮಿಕರು ಮತ್ತು ಗುತ್ತಿಗೆದಾರ ಸೇರಿದ್ದಾರೆ.

'ಯಾರನ್ನೂ ಸುಮ್ಮನೆ ಬಿಡೋದಿಲ್ಲ..' ಪಹಲ್ಗಾಮ್‌ ಟೆರರಿಸ್ಟ್‌ಗಳಿಗೆ ಪ್ರಧಾನಿ ಮೋದಿ ಎಚ್ಚರಿಕೆ!