ಕಾಕ್ರೋಚ್ ಹೋರಾಟದಲ್ಲಿ ಪ್ರಧಾನಿ ಮೋದಿ ತಾಯಿ ವಿರುದ್ಧ ಅವಾಚ್ಯ ಶಬ್ದ ಪ್ರಯೋಗಿಸಲಾಗಿತ್ತು. ಇದೀಗ ಕಾಂಗ್ರೆಸ್ ನಾಯಕ ಮೋದಿಯ ಸೀತೆ ಯಾರು ಎಂದು ಪ್ರಶ್ನಿಸುವ ಮೂಲಕ ರಾಮಾಯಣ ಎಳೆದುತಂದು ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ವದೆಹಲಿ (ಆ.02) ರಾಮಮಂದಿರ ದೇಣಿಗೆಯಲ್ಲಿ ನಡೆದಿರುವ ಅಕ್ರಮ ಮುಂದಿಟ್ಟುಕೊಂಡು ಕಾಂಗ್ರೆಸ್ ಕೇಂದ್ರ ಹಾಗೂ ಉತ್ತರ ಪ್ರದೇಶ ಬಿಜೆಪಿ ಸರ್ಕಾರವನ್ನು ಸತತವಾಗಿ ಪ್ರಶ್ನಿಸುತ್ತಿದೆ. ಇದರ ನಡುವೆ ಕಾಂಗ್ರೆಸ್ ನಾಯಕ ನಾಲಗೆ ಹರಿಬಿಟ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಮಂದಿರ ಪ್ರತಿಷ್ಠಾಪನೆಯಿಂದ ಮಾತು ಆರಂಭಿಸಿದ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ, ರಾಮನ ಸೀತೆ ಗೊತ್ತಲ್ಲ, ಆದರೆ ಮೋದಿಯ ಸೀತೆ ಯಾರು ಎಂದು ಪ್ರಶ್ನಿಸಿದ್ದಾರೆ. ರಾಜಕೀಯ ಟೀಕೆಯಲ್ಲಿ ಸೀತಾ ಮಾ ಹೆಸರು ಯಾಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ಇದು ಕಾಂಗ್ರೆಸ್ ನಾಯಕನ ಪೇಚಿಗೆ ಸಿಲುಕಿಸಿದೆ.

ಸೀತೆ ಇಲ್ಲದೆ ಪ್ರಧಾನಿ ಮೋದಿಯಿಂದ ಪ್ರತಿಷ್ಠಾಪನೆ

ರಾಮಮಂದಿರದ ಪ್ರಾಣಪ್ರತಿಷ್ಠೆಯಲ್ಲಿ ಲೋಪಗಳಾಗಿದೆ. ಪ್ರಧಾನಿ ನರೇಂದ್ರ ಮೋದಿ ಮಂದಿರ ಸಂಪೂರ್ಣಗೊಳ್ಳಳದೆ ಚುನಾವಣಾ ಕಾರಣಕ್ಕಾಗಿ ಉದ್ಘಾಟನೆ ಮಾಡಿದ್ದಾರೆ. ರಾಮಾಯಣದಲ್ಲಿ ರಾಮ ಅಶ್ವಮೇಧ ಯಜ್ಞದ ವೇಳೆ ಸೀತೆಯ ಮೂರ್ತಿ ಇಟ್ಟು ಪೂಜಾ ಕಾರ್ಯಗಳನ್ನು ನೆರವೇರಿಸಿದ್ದರು. ಹಿಂದೂ ಧಾರ್ಮಿಕ ಕಾರ್ಯಕ್ರಮ, ಪೂಜೆಗಳಲ್ಲಿ ಪತ್ನಿ ಜೊತೆ ಸೇರಿ ಧಾರ್ಮಿಕ ಅನುಷ್ಠಾನ ನೆರವೇರಿಸಬೇಕು. ಆದರೆ ಮೋದಿ ಪ್ರಾಣ ಪ್ರತಿಷ್ಠೆ ನೆರವೇರಿಸಿದ್ದು ಹೇಗೆ? ಮೋದಿಯ ಸೀತೆ ಯಾರು ಎಂದು ಪ್ರಮೋದ್ ತಿವಾರಿ ಹೇಳಿದ್ದಾರೆ.

ದೇಣಿಗೆ ಅಕ್ರಮ ಕುರಿತು ಗಂಭೀರ ತನಿಖೆಯಾಗಬೇಕು

ರಾಮಮಂದಿರದ ದೇಣಿಗೆ ವಿಚಾರವಾಗಿ ನಡೆದಿರುವ ಅಕ್ರಮಗಳನ್ನು ಎಸ್ಐಟಿ ಗಂಭೀರವಾಗಿ ತನಿಖೆ ನಡೆಸಬೇಕು. ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಯಬೇಕು. ಸಣ್ಣ ಹಣ ಪಡೆದುಕೊಂಡವರನ್ನು ಅರೆಸ್ಟ್ ಮಾಡಿ ದೊಡ್ಡ ಕುಳಗಳನ್ನು ಹೊರಗೆ ಬಿಟ್ಟಿದ್ದಾರೆ. ಯಾವುದೇ ಅಕ್ರಮ ನಡೆದಿಲ್ಲ ಎಂದಾದರೆ ಟ್ರಸ್ಟ್ ಪ್ರಮುಖರು ರಾಜೀನಾಮೆ ಕೊಟ್ಟಿದ್ದೇಕೆ? ಎಂದು ಪ್ರಮೋದ್ ತಿವಾರಿ ಪ್ರಶ್ನಿಸಿದ್ದಾರೆ.

ಪ್ರಮೋದ್ ತಿವಾರಿಯ ರಾಜಕೀಯ ಆರೋಪ, ಪ್ರತ್ಯಾರೋಪ, ಟೀಕೆಗಳಿಗೆ ಯಾವುದೇ ಅಭ್ಯಂತರವಿಲ್ಲ. ಆದರೆ ರಾಜಕೀಯ ಹೇಳಿಕೆಗಳಲ್ಲಿ ಸೀತಾ ಮಾತೆಯನ್ನು ಎಳೆದು ತಂದಿದ್ದು ಯಾಕೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಶ್ನಿಸಿದ್ದಾರೆ. ಮೋದಿಯನ್ನು ಪ್ರಶ್ನಿಸುವಾಗ ಸೀತಾ ಮಾತೆಯ ಹೆಸರೇಕೆ ಎಂದು ಪ್ರಶ್ನಿಸಿದ್ದಾರೆ. ಇತ್ತ ಬಿಜೆಪಿ ನಾಯಕರು ಪ್ರಮೋದ್ ತಿವಾರಿಗೆ ತಿರುಗೇಟು ನೀಡಿದ್ದಾರೆ. ಭಕ್ತರ ನಂಬಿಕೆಗೆ ಘಾಸಿಗೊಳಿಸುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡುತ್ತಲೇ ಬಂದಿದ್ದಾರೆ. ಇದೀಗ ತೀವ್ರಗೊಂಡಿದೆ ಎಂದು ಬಿಜೆಪಿ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಮೋದ್ ತಿವಾರಿ ವಿರುದ್ದ ಆಕ್ರೋಶ ತೀವ್ರಗೊಳ್ಳುತ್ತಿದೆ.