ನ್ಯೂಯಾರ್ಕ್(ಸೆ.28): ಅಭಿವೃದ್ಧಿ ಪಡಿಸುವ ಕೊರೋನಾ ಲಸಿಕೆ ಉತ್ಪಾದನೆ ಹಾಗೂ ಹಂಚಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೋರಿರುವ ಬದ್ಧತೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಶನಿವಾರ ವಿಶ್ವಸಂಸ್ಥೆಯ 75ನೇ ಸಾಮಾನ್ಯ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ್ದ ಪ್ರಧಾನಿ, ಭಾರತದ ಲಸಿಕೆ ಉತ್ಪಾದನೆ ಹಾಗೂ ಹಂಚಿಕೆ ಸಾಮರ್ಥ್ಯವನ್ನು ಈ ಸಂಕಷ್ಟದ ಸಮಯದಲ್ಲಿ ಮನುಕುಲದ ಒಳಿತಿಗಾಗಿ ಬಳಕೆ ಮಾಡುತ್ತೇವೆ. ಇದು ವಿಶ್ವದಲ್ಲಿ ಅತೀ ಹೆಚ್ಚು ಲಸಿಕೆ ಉತ್ಪಾದನಾ ಸಾಮರ್ಥ್ಯವುಳ್ಳ ದೇಶದ ಪ್ರಧಾನಿಯಾಗಿ ನಿಮಗೆ ಭರವಸೆ ನೀಡುತ್ತೇನೆ ಎಂದು ಹೇಳಿದ್ದರು.

ಇದಕ್ಕೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್‌ ಅಧಾನೋಮ್‌ ಗೇಬ್ರಿಯೇಸಸ್‌, ನಿಮ್ಮ ಬದ್ಧತೆಗೆ ಧನ್ಯವಾದಗಳು. ಒಳ್ಳೆಯ ಕಾರಣಕ್ಕೆ ನಮ್ಮ ಶಕ್ತಿ ಹಾಗೂ ಸಂಪನ್ಮೂಲವನ್ನು ಒಟ್ಟಿಗೆ ಬಳಕೆ ಮಾಡಿದರೆ ಮಾತ್ರ ಕೋವಿಡ್‌-19 ನಿಂದ ಗೆಲ್ಲಬಹುದು ಎಂದು ಹೇಳಿದ್ದಾರೆ.