ಅಂಗಡಿಯ ಬೀಗ ಒಡೆದು ಕೇರಳಿಗರನ್ನು ಒಗ್ಗೂಡಿಸಿತು ಈ ಗುಬ್ಬಿ! ಅಬ್ಬಾ ಎನ್ನೋ ಘಟನೆ ಇದು

Synopsis
ಗುಬ್ಬಿಯೊಂದು ಕೇರಳದ ಜನರನ್ನು ಒಗ್ಗೂಡಿಸುವ ಮೂಲಕ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಸಾರಿದೆ. ಖುದ್ದು ನ್ಯಾಯಾಧೀಶರೇ ಹೈಕೋರ್ಟ್ ಸಲಹೆ ಕೇಳುವಂತೆ ಮಾಡಿದೆ ಈ ಗುಬ್ಬಿ!
ಕೇರಳದ ಉಲಿಕ್ಕಲ್ ಕೋರ್ಟ್‌ನಲ್ಲಿ ಕುತೂಹಲದ ಕೇಸೊಂದು ದಾಖಲಾಗಿತ್ತು. ಅದು ಅಂಗಡಿಯೊಳಗೆ ಸಿಕ್ಕಿಬಿದ್ದ ಗುಬ್ಬಿ ರಕ್ಷಣೆಗಾಗಿ ನಡೆದ ವಿಚಾರಣೆ. ಅಷ್ಟಕ್ಕೂ ಆಗಿದ್ದೇನೆಂದರೆ, ಕೋರ್ಟ್ ಆದೇಶದ ಮೇರೆಗೆ ಕಣ್ಣೂರಿನಲ್ಲಿ ಇರುವ ಬಟ್ಟೆ ಅಂಗಡಿಯೊಂದನ್ನು ಮುಚ್ಚಲಾಗಿತ್ತು. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶದ ಮೇಲೆ ಈ ಅಂಗಡಿಗೆ ಬೀಗಮುದ್ರೆ ಹಾಕಲಾಗಿತ್ತು. ಆಸ್ತಿ ವಿವಾದದಿಂದಾಗಿ ಆರು ತಿಂಗಳಿಗೂ ಹೆಚ್ಚು ಕಾಲ ಲಾಕ್ ಆಗಿತ್ತು ಈ ಅಂಗಡಿ. ಆದರೆ ಪಾಪ ಗುಬ್ಬಚ್ಚಿಗೇನು ಗೊತ್ತು ಇದು? ಕಿರಿದಾದ ಪೈಪ್ ರಂಧ್ರದ ಮೂಲಕ ಒಳಗೆ ಹಾರಿ ಬಂದು ಬಿಟ್ಟಿತು. ಆದರೆ ಹೊರಬರಲು ದಾರಿ ಕಂಡುಕೊಳ್ಳಲಾಗದೇ ವಿಲವಿಲ ಒದ್ದಾಡಿತು.
ಮೂರು ದಿನಗಳವರೆಗೆ ಅಲ್ಲಿಯೇ ಒದ್ದಾಡಿತು ಗುಬ್ಬಚ್ಚಿ. ಆದರೆ ಅದರ ಅದೃಷ್ಟ ಚೆನ್ನಾಗಿತ್ತು. ಮಾನವೀಯತೆ ಇನ್ನೂ ಜೀವಂತ ಆಗಿದೆ ಎನ್ನುವುದಕ್ಕೂ ಇದು ಸಾಕ್ಷಿಯಾಯಿತು. ದಾರಿಹೋಕರು, ಆಟೋ ಚಾಲಕರು ಈ ಗುಬ್ಬಚ್ಚಿ ಹೊರಗೆ ಬರಲು ಪರಡಾಡುವುದುನ್ನು ನೋಡಿದರು. ಅದನ್ನು ಹೊರಕ್ಕೆ ತರಲು ಯಾವುದೇ ಮಾರ್ಗ ಇರಲಿಲ್ಲ. ಕೊನೆಗೆ ಅದೇ ಪೈಪ್ ರಂಧ್ರದ ಮೂಲಕ ಅದಕ್ಕೆ ಅಕ್ಕಿ ಕಾಳುಗಳು ಮತ್ತು ನೀರಿನ ಹನಿಗಳನ್ನು ತಿನ್ನಿಸಿದರು. ಇದರಿಂದ ಗುಬ್ಬಿ ಬದುಕಿ ಉಳಿಯಲು ಸಹಾಯವಾಯಿತು.
ಮನೆಗೆ ತಂದ ಟೊಮ್ಯಾಟೋ ಗರ್ಭಿಣಿ: ವೈರಲ್ ವಿಡಿಯೋ ನೋಡಿ ಫ್ರಿಜ್ ಬಳಿ ಓಡ್ತಿರೋ ಮಹಿಳೆಯರು!
ಮುನೀರ್ ಮತ್ತು ಫಿರೋಜ್ ಎಂಬ ಇಬ್ಬರು ವ್ಯಾಪಾರಿಗಳ ನಡುವಿನ ವಿವಾದದ ನಡುವೆ ಅಂಗಡಿಗೆ ಬೀಗ ಜಡಿಯಲಾಗಿತ್ತು. ಕೊನೆಗೆ ಹೇಗಾದರೂ ಈ ಗುಬ್ಬಿಮರಿಯನ್ನು ರಕ್ಷಿಸಲು ಕೆಲವರು ಅಂಗಡಿ ಮಾಲೀಕರನ್ನು ಕೋರಿಕೊಂಡರು. ಆದರೆ ಕೋರ್ಟ್ ಆದೇಶ ಇರುವ ಹಿನ್ನೆಲೆಯಲ್ಲಿ, ಅದು ಅಸಂಭವ ಎಂದು ತಿಳಿಯಿತು. ಕೋರ್ಟ್ ಆದೇಶವನ್ನು ಮೀರುವಂತೆ ಇರಲಿಲ್ಲ. ಕೊನೆಗೆ ಜಿಲ್ಲಾಧಿಕಾರಿಗಳಿಗೆ ಈ ವಿಷಯವನ್ನು ಮುಟ್ಟಿಸಲು ಜನರು ಚಿಂತನೆ ನಡೆಸಿದರು. ಆದರೆ ಅದು ಕೂಡ ಸಾಧ್ಯವಾಗಿರಲಿಲ್ಲ. ಕೊನೆಯ ಹಂತವಾಗಿ ಈ ಗುಬ್ಬಿಯ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಯಿತು. ಅಲ್ಲಿಯ ಜಿಲ್ಲಾಧಿಕಾರಿಗಳಿಗೆ ತಲುಪುವವರೆಗೂ ಅದನ್ನು ಶೇರ್ ಮಾಡಲಾಯಿತು.
ಕೊನೆಗೂ ಈ ವಿಡಿಯೋ ಜಿಲ್ಲಾಧಿಕಾರಿ ಗಮನಕ್ಕೆ ಬಂದಿತು. ಜಿಲ್ಲಾಧಿಕಾರಿ ಅರುಣ್ ಕೆ ವಿಜಯನ್ ಅವರು ಕಾನೂನು ಚೌಕಟ್ಟಿನೊಳಗೆ ಪರಿಹಾರಗಳನ್ನು ಅನ್ವೇಷಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಂತರ ಈ ವಿಷಯವು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಟಿ. ನಿಸಾರ್ ಅಹಮ್ಮದ್ ಅವರ ಗಮನಕ್ಕೆ ಬಂದು ಅವರು ಕೇರಳ ಹೈಕೋರ್ಟ್‌ನಿಂದ ಸಲಹೆ ಪಡೆದರು. ಕೊನೆಗೆ ಆಸ್ತಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಗುಬ್ಬಿಯ ಸಲುವಾಗಿ ನಡೆಸಿ, ಅಂಗಡಿ ಮುದ್ರೆಯನ್ನು ತೆಗೆಯಲು ಆದೇಶಿಸಿದರು. ಕೊನೆಗೆ ಅಂಗಡಿ ಮುದ್ರೆ ತೆಗೆದು ಗುಬ್ಬಿಯನ್ನು ಬಿಡುಗಡೆಗೊಳಿಸಲಾಯಿತು. "ಇದು ಒಂದು ಸಣ್ಣ ವಿಷಯವೆಂದು ತೋರುತ್ತದೆ, ಆದರೆ ಇದು ಬಹಳಷ್ಟು ಅರ್ಥಪೂರ್ಣವಾಗಿದೆ" ಎಂದು ನ್ಯಾಯಾಧೀಶ ಅಹಮ್ಮದ್ ವರದಿಗಾರರಿಗೆ ತಿಳಿಸಿದರು. "ಕಾನೂನುಗಳನ್ನು ಜೀವವನ್ನು ರಕ್ಷಿಸಲು ರಚಿಸಲಾಗಿದೆ, ಅದನ್ನು ನಿರ್ಬಂಧಿಸಲು ಅಲ್ಲ. ಮಾನವನಾಗಿರಲಿ ಅಥವಾ ಪ್ರಾಣಿಯಾಗಿರಲಿ, ಪ್ರತಿಯೊಂದು ಜೀವವೂ ಮುಖ್ಯವಾಗಿದೆ ಎಂದರು.
ಗರ್ಭದಲ್ಲಿರೋ ಮಗುವಿನ ಚಲನಚಲನ ಪರೀಕ್ಷೆಗೆ ಕಿತ್ತಳೆ ಜ್ಯೂಸ್! ಖ್ಯಾತ ವೈದ್ಯರು ಹೇಳೋದೇನು ಕೇಳಿ..