Aero India: ಏನೇನು ನೋಡಬಹುದು? ಟಿಕೆಟ್‌ಗೆ ದುಡ್ಡು ಕೊಡಬೇಕಾ?

ಕಳೆದ ಬಾರಿ 64 ವಿಮಾನಗಳು ವೈಮಾನಿಕ ಪ್ರದರ್ಶನ ನೀಡಿದ್ದವು. ಈ ಬಾರಿ ಸಾರಂಗ್‌, ಸೂರ್ಯಕಿರಣ್‌ ವೈಮಾನಿಕ ಪ್ರದರ್ಶನ ತಂಡ, ಸುಖೋಯ್‌, ರಫೇಲ್‌, ತೇಜಸ್‌ ಸೇರಿದಂತೆ ಒಟ್ಟು 67 ವಿಮಾನಗಳು ಪ್ರದರ್ಶನ ನೀಡಲಿವೆ. ಉಳಿದಂತೆ ಸ್ಟ್ಯಾಟಿಕ್‌ ಡಿಸ್‌ಪ್ಲೇಯಲ್ಲಿ 36 ವಿಮಾನಗಳು ಪ್ರದರ್ಶನಗೊಳ್ಳಲಿವೆ.

What can be seen if you visit aero India show Yelahanka Bengaluru Feb 13 to 17th

- ರವಿಶಂಕರ್ ಭಟ್, ಕನ್ನಡ ಪ್ರಭ

ನಮ್ದೇ ತೇಜಸ್, ಫ್ರೆಂಚರಿಂದ ಖರೀದಿಸಿದ ರಫೇಲ್, ರಷ್ಯಾದಿಂದ ತಂದ ಸುಖೋಯ್, ಅಮೆರಿಕ ಮೂಲದ ಫಾಲ್ಕನ್-21, ಸ್ವೀಡನ್ನಲ್ಲಿ ತಯಾರಾದ ಗ್ರಿಪೆನ್‌ನಂತಹ ಎದೆ ನಡುಗಿಸುವ ಬಲಾಢ್ಯರ ಶಕ್ತಿ-ಕೌಶಲ್ಯ ಪ್ರದರ್ಶನ... ಓಬಿರಾಯನ ಕಾಲದ ಅಮೆರಿಕನಿರ್ಮಿತ ಡಕೋಟ ಡಿಸಿ-3, ಟಿ-6 ಹಾರ್ವರ್ಡ್‌ಗಳ ತಣ್ಣನೆಯ ಹಾರಾಟ... ಸರಕು ಸಾಗಣೆಯ ದೈತ್ಯ ಸಿ-17 ಗ್ಲೋಬ್‌ಮಾಸ್ಟರ್‌ನ ಅಗಾಧತೆಯ ಪರಿಚಯ... ಸ್ವದೇಶೀ ಎಲ್‌ಸಿಎಚ್-ಎಲ್‌ಯುಎಚ್ ಹೆಲಿಕಾಪ್ಟರುಗಳ ತೊನೆದಾಟ... ನವಿಲಿನ ರೂಪ ತಳೆದ "ಸಾರಂಗ್" ಎಎಲ್‌ಎಚ್ ಹೆಲಿಕಾಪ್ಟರುಗಳು, ಬ್ರಿಟಿಷ್ ನಿರ್ಮಿತ ಹಾಕ್‌ಗಳಿಂದ ಕೂಡಿದ "ಸೂರ್ಯಕಿರಣ್"ಗಳ ರೋಮಾಂಚಕ ಸಾಹಸ...
ಇವಿಷ್ಟು "ಏರೋ ಇಂಡಿಯಾ" ಎಂಬ ದ್ವೈವಾರ್ಷಿಕ ವೈಮಾನಿಕ ಸಮ್ಮೇಳನದಲ್ಲಿ ಕಾಣ ಸಿಗುವ ಲೋಹದ ಹಕ್ಕಿಗಳ ಪ್ರದರ್ಶನದ ಮುಖ್ಯಾಂಶಗಳು. ಮಾನವನಾಗಿ ಹುಟ್ಟಿದ ಮೇಲೆ ಸಾಯೋದ್ರೊಳಗೆ ಒಮ್ಮೆ ಜೋಗದ ಗುಂಡಿ ನೋಡ್ತೀವೋ ಇಲ್ವೋ, ಇದನ್ನಂತೂ‌ ನೋಡದೆ ಇದ್ದರೆ ದೊಡ್ಡ ನಷ್ಟ; ಹಾಗಂದುಕೊಂಡು ಹೋಗುವವರಿಗಾಗಿ ಇಲ್ಲೊಂದಿಷ್ಟು ಕಿರುಮಾಹಿತಿ.

ಬೆಂಗಳೂರಲ್ಲಿ ಮಾತ್ರ
ವಿಶಾಲ ಭಾರತದಲ್ಲಿ ಇಂತಹ ವೈಮಾನಿಕ ಪ್ರದರ್ಶನ ನಡೆಯುವುದು ನಮ್ಮದೇ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ. ಅದೂ ಎರಡು ವರ್ಷಕ್ಕೊಮ್ಮೆ. 1996ರಲ್ಲಿ ಆರಂಭವಾದ ವೈಮಾನಿಕ ಸಮ್ಮೇಳನದ 14ನೇ ಆವೃತ್ತಿ ನಾಳೆಯಿಂದ (ಫೆ.13) ಶುಕ್ರವಾರದ ವರೆಗೆ (ಫೆ.17) ನಡೆಯಲಿದೆ.

ಬೆಂಗಳೂರು ಏರ್ ಶೋ 2023 ಉದ್ಘಾಟಿಸಿದ ಮೋದಿ

ಪ್ರವೇಶ ಉಚಿತವಾ?
ಅಲ್ಲ. ಅದಕ್ಕೆ ಶುಲ್ಕ‌ ಇದೆ. ಬರಿಯ ವೈಮಾನಿಕ ಪ್ರದರ್ಶನ ವೀಕ್ಷಿಸುವುದಾದರೆ ಒಬ್ಬರಿಗೆ ₹1000. ವೈಮಾನಿಕ ಪ್ರದರ್ಶನ ಜೊತೆಗೆ ವಸ್ತು ಪ್ರದರ್ಶನ ಮಳಿಗೆಗಳಿಗೂ ಭೇಟಿ ನೀಡುವವರಿಗೆ ₹2500. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ

ಎಷ್ಟು ಹೊತ್ತಿಗೆ ಹೋಗಬೇಕು?
ನಿತ್ಯ ಎರಡು ಪ್ರದರ್ಶನ. ಬೆಳಗ್ಗೆ 9.30-12 ಹಾಗೂ ಮಧ್ಯಾಹ್ನ 2-5. ಆದರೆ, ಪ್ರದರ್ಶನ ಸ್ಥಳಕ್ಕೆ ಹೋಗುವುದೇ ಹರಸಾಹಸ. ಕಿಕ್ಕಿರಿದ ವಾಹನದಟ್ಟಣೆ, ಕಿರಿದಾದ ರಸ್ತೆಗಳಿಂದಾಗಿ ಗಮ್ಯ ತಲುಪುವುದು ಅಂದಾಜಿಸಿದ್ದಕ್ಕಿಂತ ವಿಳಂಬವಾಗುವ ಸಾಧ್ಯತೆ ಹೆಚ್ಚು. ಹಾಗಾಗಿ, ಗೂಗಲ್ ನಂಬದೆ ನಿಮ್ಮದೇ ಅಂದಾಜು ಮಾಡಿಕೊಳ್ಳುವುದು ಉತ್ತಮ. ಉದಾಹರಣೆಗೆ, ಕೋರಮಂಗಲದಿಂದ ಹೋಗುತ್ತೀರಿ ಎಂದಿಟ್ಟುಕೊಳ್ಳಿ. ಬೆಳಗ್ಗೆಯ ಪ್ರದರ್ಶನಕ್ಕಾದರೆ 6 ಗಂಟೆಗೇ ಹೊರಡುವುದು ಒಳ್ಳೆಯದು.

ಹೋಗೋದು ಹೇಗೆ? ಪಾರ್ಕಿಂಗ್ ಇದೆಯಾ?
ನಗರದ ವಿವಿಧೆಡೆಯಿಂದ ಬಿಎಂಟಿಸಿ ಬಸ್ ಇವೆ. ದರ ₹30-₹45. ಸಮಯಾವಕಾಶ ಇದ್ದರೆ ಇದೇ ಅತ್ಯುತ್ತಮ. ಕಾರು/ಬೈಕು ಓಡಿಸುವ, ಪಾರ್ಕ್ ಮಾಡುವ ತಲೆಬಿಸಿ ಇಲ್ಲ. ಕಾರು/ಬೈಕಲ್ಲಿ ಹೋಗುವುದಾದರೆ ಪ್ರದರ್ಶನ ಕೇಂದ್ರದ ಹೊರಭಾಗದಲ್ಲಿ ವಾಹನ ನಿಲುಗಡೆ ಸ್ಥಳ ಇದೆ. ಆದರೆ, ಅಲ್ಲಿ ನೆರಳು ಇತ್ಯಾದಿ ಅನುಕೂಲವೇನಿಲ್ಲ. ವಿಪರೀತ ಧೂಳು. ಜೊತೆಗೆ ರಣಬಿಸಿಲು. ಕಾರಾದರೆ ವಿಂಡ್‌ಶೀಲ್ಡು, ಬೈಕಾದರೆ ಸೀಟು ಒರೆಸಲು ತಪ್ಪದೆ ಬಟ್ಟೆ ಒಯ್ಯಿರಿ.

ಏರ್ ಶೋನಲ್ಲಿ ಅಮೆರಿಕದ ನಿಯೋಗ ಭಾಗಿ

ಏನೇನು ಒಯ್ಯಬೇಕು?
ಆಹಾರ ಪದಾರ್ಥ ಒಳಬಿಡುವುದಿಲ್ಲ. ಹರಿದ/ಚೂಪಾದ ಲೋಹಕ್ಕೆ ನಿರ್ಬಂಧ. ಹೆಚ್ಚು ಕಮ್ಮಿ ಏರ್‌ಪೋರ್ಟ್ ಅಥವಾ ಸಿನಿಮಾ ಮಲ್ಟಿಪ್ಲೆಕ್ಸ್‌ಗಳಲ್ಲಿ ಕಂಡುಬರುವ ಮಾದರಿಯ ನಿಯಮ. ಒಳಗಿನ ಆಹಾರ ಕೇಂದ್ರಗಳಲ್ಲಿ ಖರೀದಿಸಲು ಜೇಬು ಗಟ್ಟಿ ಬೇಕು. ಹಾಗಾಗಿ, ಕಾರಲ್ಲಿ‌ ಹೋಗುವುದಾದರೆ ಒಂದಿಷ್ಟು ತಿನಿಸುಗಳನ್ನು ಒಯ್ಯಿರಿ. ಕಾರಲ್ಲೇ ಕೂತು ಸೇವಿಸಿ. ಧೂಳು ಅಲರ್ಜಿ ಇರುವವರು ಮಾಸ್ಕ್ ಒಯ್ಯುವುದು ಉತ್ತಮ. ಬಿಸಿಲಿಂದ ರಕ್ಷಣೆಗೆ ಕ್ಯಾಪ್ ಇಟ್ಕೊಳ್ಳಿ. ಇಲ್ಲದಿದ್ದರೆ ವಾಪಸ್ ಬರುವಾಗ ಮುಖವು ಸುಟ್ಟ ಬದನೆಕಾಯಿ ಥರ ಆದೀತು. ಎಲ್ಲಕ್ಕಿಂತ ಮುಖ್ಯವಾಗಿ ಗುರುತಿನ ಚೀಟಿ ಇತ್ಯಾದಿ ಅಗತ್ಯ ದಾಖಲೆಗಳನ್ನು ಒಯ್ಯಿರಿ. ಇಲ್ಲವಾದಲ್ಲಿ ಗೇಟು ನೋಡಿ ಮರಳಬೇಕಾದೀತು.

Latest Videos
Follow Us:
Download App:
  • android
  • ios