ಪ.ಬಂಗಾಳ, ಅಸ್ಸಾಂ, ತ್ರಿಪುರಾ ಭಾರತದ ಈ ಮೂರು ರಾಜ್ಯಗಳು ನಮ್ಮವು; ವಿವಾದ ಸೃಷ್ಟಿಸಿದ ಬಾಂಗ್ಲಾದೇಶ!
ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಸಲಹೆಗಾರ ಮಹ್ಫುಜ್ ಆಲಂ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಗಳು ಬಾಂಗ್ಲಾದೇಶದ ಭಾಗ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದೇ ವೇಳೆ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ 2200ಕ್ಕೂ ಹೆಚ್ಚು ದಾಳಿಗಳಾಗಿವೆ ಎಂದು ಭಾರತ ಸರ್ಕಾರ ಮಾಹಿತಿ ನೀಡಿದೆ.
ನವದೆಹಲಿ (ಡಿ.21): ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರ ಆಪ್ತ ಸಹಾಯಕ ಮತ್ತು ಮಧ್ಯಂತರ ಸರ್ಕಾರದ ಸಲಹೆಗಾರ ಮಹ್ಫುಜ್ ಆಲಂ ಅವರು ‘ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಗಳು ‘ಬಾಂಗ್ಲಾದೇಶದ ಭಾಗ’ ಎಂದು ಹೇಳಿ ವಿವಾದವನ್ನು ಹುಟ್ಟುಹಾಕಿದ್ದಾರೆ. ಇದಲ್ಲದೆ, ‘ಬಾಂಗ್ಲಾದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಕಾರಣವಾದ ದಂಗೆಗೆ ಭಾರತ ಮಾನ್ಯತೆ ನೀಡಬೇಕು’ ಎಂದೂ ಕರೆ ನೀಡಿದ್ದಾರೆ.
ಫೇಸ್‌ಬುಕ್‌ನಲ್ಲಿ ಅವರು ಇದನ್ನು ಬರೆದು ನಂತರ ಡಿಲೀಟ್ ಮಾಡಿದ್ದಾರೆ. ಆದಾಗ್ಯೂ ಅವರ ಈ ಹೇಳಿಕೆ ಭಾರತವನ್ನು ಕೆರಳಿಸಿದೆ. ಈ ಕುರಿತು ಮಾತನಾಡಿರುವ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್, ‘ಬಾಂಗ್ಲಾದೇಶದ ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಸಾರ್ವಜನಿಕವಾಗಿ ಇಂತಹ ಹೇಳಿಕೆ ಕೊಡುವಾಗ ಗಮನವಿರಲಿ. ಭಾರತವು ಬಾಂಗ್ಲಾದ ಮಧ್ಯಂತರ ಸರ್ಕಾರ ಹಾಗೂ ಅಲ್ಲಿನ ಜನರೊಂದಿಗೆ ಸಂಬಂಧ ವೃದ್ಧಿಗೆ ಮುಂದಾಗುತ್ತಿರುವ ಹೊತ್ತಿನಲ್ಲಿ, ಜವಾಬ್ದಾರಿಯುತ ಹೇಳಿಕೆ ಕೊಡುವುದು ಅಗತ್ಯ’ ಎಂದು ಬುದ್ಧಿವಾದ ಹೇಳಿದ್ದಾರೆ. ಅಲ್ಲದೆ, ‘ಈ ಕುರಿತ ಪೋಸ್ಟ್ ಅನ್ನು ತೆಗೆದುಹಾಕಲಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ’ ಎಂದೂ ಸ್ಪಷ್ಟನೆ ನೀಡಿದ್ದಾರೆ.
ವಿಮೋಚನೆ ಕುರಿತ ಮೋದಿ ಹೇಳಿಕೆಗೆ ಬಾಂಗ್ಲಾ ಟಾಂಗ್: ಭಾರತದ ಗೆಲುವೆಂಬ ಪ್ರಧಾನಿ ಹೇಳಿಕೆಗೆ ಕಿಡಿ
ಬಾಂಗ್ಲಾ ಹಿಂದೂಗಳ ಮೇಲೆ 2200ಕ್ಕೂ ಅಧಿಕ ದಾಳಿ
ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳು ಹಾಗೂ ಇತರೆ ಅಲ್ಪಸಂಖ್ಯಾತರ ಮೇಲೆ ಈ ವರ್ಷದ ಆರಂಭದಿಂದ ಡಿ.8ರ ವರೆಗೆ 2,200ಕ್ಕೂ ಅಧಿಕ ದಾಳಿಗಳು ನಡೆದಿವೆ ಎಂದು ಭಾರತ ಸರ್ಕಾರ ಮಾಹಿತಿ ನೀಡಿದೆ. ಜತೆಗೆ, ಅವರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ನಿರೀಕ್ಷೆಯನ್ನೂ ವ್ಯಕ್ತಪಡಿಸಿದೆ.
ಈ ಕುರಿತು ವಿದೇಶಾಂಗ ಇಲಾಖೆಯ ರಾಜ್ಯಸಚಿವ ಕೀರ್ತಿ ವರ್ಧನ್ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದು, ವಿವಿಧ ದೇಶಗಳಲ್ಲಿನ ಹಿಂದೂಗಳ ದಾಳಿ ಬಗ್ಗೆ ಕೂಡ ಮಾಹಿತಿ ನೀಡಿದ್ದಾರೆ.
ಕಷ್ಟದಿಂದ ಕಾಪಾಡಿದ್ದಕ್ಕೆ ಬೆನ್ನಿಗೆ ಚೂರಿ ಹಾಕಿದ ದೇಶ; 16 ಡಿಸಂಬರ್ 1971.. ಭಾರತ ಸೃಷ್ಟಿಸಿತ್ತು ವಿಜಯ ಚರಿತ್ರೆ!
‘ಈ ವರ್ಷದ ಅಕ್ಟೋಬರ್ ವರೆಗೆ ಪಾಕಿಸ್ತಾನದ ಹಿಂದೂಗಳು ಹಾಗೂ ಅಲ್ಪಸಂಖ್ಯಾತರ ಮೇಲೆ 122 ದಾಳಿಗಳಾಗಿವೆ. 2022ರಲ್ಲಿ ದಾಳಿಗಳ ಸಂಖ್ಯೆ ಪಾಕ್‌ನಲ್ಲಿ 241 ಹಾಗೂ ಬಾಂಗ್ಲಾದಲ್ಲಿ 47 ಇತ್ತು. 2023ರಲ್ಲಿ ಪಾಕಿಸ್ತಾನದಲ್ಲಿ 103 ಹಾಗೂ ಬಾಂಗ್ಲಾದಲ್ಲಿ 302 ದಾಳಿಗಳು ವರದಿಯಾಗಿವೆ’ ಎಂದು ಅಲ್ಪಸಂಖ್ಯಾತ ಹಾಗೂ ಮಾನವ ಹಕ್ಕು ಸಂಘಟನೆಯ ಅಂಕಿಅಂಶಗಳನ್ನಾಧರಿಸಿ ಮಾಹಿತಿ ನೀಡಿದ್ದಾರೆ.ಇದೇ ವೇಳೆ, ಇವೆರಡು ದೇಶಗಳನ್ನು ಹೊರತುಪಡಿಸಿ ಅನ್ಯ ನೆರೆರಾಷ್ಟ್ರಗಳಲ್ಲಿ ಹಿಂದೂ ಹಾಗೂ ಅಲ್ಪಸಂಖ್ಯಾತರ ಮೇಲೆ ಶೂನ್ಯ ದಾಳಿಗಳಾಗಿವೆ ಎಂದಿದ್ದಾರೆ.
ಇದೇ ವೇಳೆ, ಬಾಂಗ್ಲಾ ಸರ್ಕಾರದೆದುರು ಕಳವಳ ವ್ಯಕ್ತಪಡಿಸಿರುವ ಭಾರತ, ಹಿಂದೂ ಹಾಗೂ ಅನ್ಯ ಅಲ್ಪಸಂಖ್ಯಾತರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ ಎಂದು ಸಚಿವರು ಹೇಳಿದ್ದಾರೆ.