ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯದ ನತದೃಷ್ಟ ಕ್ರಿಕೆಟಿಗರಿವರು..!
ಬೆಂಗಳೂರು: ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಇದೀಗ 15 ಆಟಗಾರರನ್ನೊಳಗೊಂಡ ಭಾರತ ತಂಡ ಪ್ರಕಟವಾಗಿದೆ. ರೋಹಿತ್ ಶರ್ಮಾ ನಾಯಕರಾಗಿದ್ದು, ಹಾರ್ದಿಕ್ ಪಾಂಡ್ಯ ಉಪನಾಯಕರಾಗಿ ನೇಮಕವಾಗಿದ್ದಾರೆ. ಆದರೆ ಟಿ20 ವಿಶ್ವಕಪ್ ಟೂರ್ನಿಗೆ ಸ್ಥಾನ ಪಡೆಯುವ ಸಾಮರ್ಥ್ಯ ಹೊಂದಿದ್ದ ಈ ಕ್ರಿಕೆಟಿಗರಿಗೆ ನಿರಾಸೆ ಎದುರಾಗಿದೆ. ಅಷ್ಟಕ್ಕೂ ಯಾರವರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಮುಂಬರುವ ಜೂನ್ 01ರಿಂದ ಜೂನ್ 29ರ ವರೆಗೆ ನಡೆಯಲಿದ್ದು, ಈ ಚುಟುಕು ಕ್ರಿಕೆಟ್ ಮಹಾಸಂಗ್ರಾಮಕ್ಕೆ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಜಂಟಿ ಆತಿಥ್ಯ ವಹಿಸಿದೆ.
ಈ ಬಾರಿ ಶತಾಯಗತಾಯ ಐಸಿಸಿ ಟಿ20 ವಿಶ್ವಕಪ್ ಗೆಲ್ಲಲು ರೋಹಿತ್ ಶರ್ಮಾ ಪಡೆ ರೆಡಿಯಾಗಿದೆ. ಇದೀಗ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಸಾಕಷ್ಟು ಅಳೆದು ತೂಗಿ ತಂಡವನ್ನು ಆಯ್ಕೆ ಮಾಡಿದೆ.
ಆದರೆ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಕೆಲ ಆಟಗಾರರು ಇದೀಗ ಟಿ20 ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಯಾರವರು ಎನ್ನುವುದನ್ನು ನೋಡೋಣ ಬನ್ನಿ
1. ಕೆ ಎಲ್ ರಾಹುಲ್:
ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ಕೆ ಎಲ್ ರಾಹುಲ್, ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಬ್ಯಾಟರ್ ಆಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
2. ಶ್ರೇಯಸ್ ಅಯ್ಯರ್
ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ನಂಬಿಗಸ್ಥ ಬ್ಯಾಟರ್ ಶ್ರೇಯಸ್ ಅಯ್ಯರ್, ಏಕದಿನ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಆದರೆ ಶ್ರೇಯಸ್ ಅಯ್ಯರ್ ಟೈಮ್ ಕೈಕೊಟ್ಟಿದ್ದರಿಂದ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿಲ್ಲ.
3. ತಿಲಕ್ ವರ್ಮಾ:
ಯುವ ಎಡಗೈ ಪ್ರತಿಭಾನ್ವಿತ ಬ್ಯಾಟರ್ ತಿಲಕ್ ವರ್ಮಾ, ಭಾರತ ಪರ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಿದ್ದೂ ತಿಲಕ್ ಅವರನ್ನು ಆಯ್ಕೆ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ಒಲವು ತೋರಿಲ್ಲ.
4. ದಿನೇಶ್ ಕಾರ್ತಿಕ್:
ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್, ಆರ್‌ಸಿಬಿ ಪರ ಐಪಿಎಲ್‌ನಲ್ಲಿ ಅದ್ಭುತ ಮ್ಯಾಚ್ ಫಿನಿಶಿಂಗ್ ಮೂಲಕ ಮಿಂಚುತ್ತಿದ್ದು, ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ ಡಿಕೆಗೆ ಆಯ್ಕೆ ಸಮಿತಿ ಶಾಕ್ ಕೊಟ್ಟಿದೆ.
5. ಶುಭ್‌ಮನ್ ಗಿಲ್:
ಟೀಂ ಇಂಡಿಯಾ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್, 15 ಆಟಗಾರರ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಆದರೆ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಒಂದು ವೇಳೆ ಆಟಗಾರರು ಗಾಯಗೊಂಡರೆ ಅಥವಾ ಅನಿವಾರ್ಯ ಪರಿಸ್ಥಿತಿ ಇದ್ದರೆ ಗಿಲ್ ಭಾರತ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.
6. ಋತುರಾಜ್ ಗಾಯಕ್ವಾಡ್:
ಸಿಎಸ್‌ಕೆ ತಂಡದ ಯುವ ನಾಯಕ ಗಾಯಕ್ವಾಡ್, ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸದ್ಯ ಎರಡನೇ ಗರಿಷ್ಠ ರನ್ ಸರದಾರರಾಗಿದ್ದು, ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ವಿಶ್ವಾಸದಲ್ಲಿದ್ದರು. ಗಾಯಕ್ವಾಡ್‌ಗೂ ಆಯ್ಕೆ ಸಮಿತಿ ಶಾಕ್ ನೀಡಿದೆ.
7. ರಿಂಕು ಸಿಂಗ್:
ಕಳೆದ ಒಂದು ವರ್ಷದಲ್ಲಿ ಭಾರತ ಹಾಗೂ ಐಪಿಎಲ್‌ನಲ್ಲಿ ಕೆಕೆಆರ್ ಪರ ಅದ್ಭುತ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿರುವ ರಿಂಕುಗೂ ನಿರಾಸೆ ಎದುರಾಗಿದೆ. ರಿಂಕು ಸದ್ಯ ಮೀಸಲು ಆಟಗಾರನಾಗಿದ್ದಾರೆ.