Asianet Suvarna News Asianet Suvarna News

Cyrus Mistry Death: ಖ್ಯಾತ ವೈದ್ಯೆ ಚಲಾಯಿಸುತ್ತಿದ್ದ ಕಾರು; ಸೀಟ್ ಬೆಲ್ಟ್ ಧರಿಸಿರಲಿಲ್ಲ ಸೈರಸ್‌ ಮಿಸ್ತ್ರಿ..!

ಟಾಟಾ ಸನ್ಸ್‌ ಮಾಜಿ ಅಧ್ಯಕ್ಷ ಸೈರಸ್‌ ಮಿಸ್ತ್ರಿ ಕಾರು ಅಪಘಾತದಲ್ಲಿ ಬಲಿಯಾಗಿದ್ದಾರೆ. ಕಾರನ್ನು ಖ್ಯಾತ ವೈದ್ಯೆಯೊಬ್ಬರು ಚಲಾಯಿಸುತ್ತಿದ್ದರು. ಹಾಗೆ, ಹೆಚ್ಚು ವೇಗವಾಗಿ ಕಾರು ಚಾಯಿಸಿದ್ದೇ ಈ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. 

well known doctor was driving car cyrus mistry was not wearing seat belt says police ash
Author
First Published Sep 5, 2022, 10:25 AM IST

ಟಾಟಾ ಸನ್ಸ್‌ (Tata Sons) ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಪ್ರಯಾಣಿಸುತ್ತಿದ್ದ ಐಷಾರಾಮಿ ಕಾರು (Luxury Car) ಡಿವೈಡರ್‌ಗೆ ಡಿಕ್ಕಿ ಹೊಡೆದು ಸೈರಸ್‌ ಮಿಸ್ತ್ರಿ ಮತ್ತು ಜಹಾಂಗೀರ್ ಪಂಡೋಳೆ ಅವರು ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಕಾರಿನ, ಹಿಂದಿನ ಸೀಟಿನಲ್ಲಿ ಕುಳಿತಿದ್ದ ಸೈರಸ್‌ ಮಿಸ್ತ್ರಿ ಮತ್ತು ಜಹಾಂಗೀರ್ ಪಂಡೋಳೆ - ಇಬ್ಬರೂ ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ಪ್ರಾಥಮಿಕ ಪೊಲೀಸ್ ತನಿಖೆಯಿಂದ (Preliminary Police Inquiry) ತಿಳಿದುಬಂದಿದೆ. ಇದರ ಜತೆಗೆ, ಪಾಲ್ಘರ್‌ನ ಚರೋಟಿ ಚೆಕ್ ಪೋಸ್ಟ್ ದಾಟಿದ ನಂತರ ಕಾರು ಕೇವಲ 9 ನಿಮಿಷಗಳಲ್ಲಿ 20 ಕಿ.ಮೀ. ಪ್ರಯಾಣ ಮಾಡಿದೆ. ಮಧ್ಯಾಹ್ನ 2.21ರ ಸುಮಾರಿಗೆ ಚೆಕ್‌ಪಾಯಿಂಟ್‌ನಲ್ಲಿ ಸೆರೆಹಿಡಿಯಲಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚೆಕ್ ಪೋಸ್ಟ್‌ನಿಂದ 20 ಕಿಮೀ ದೂರದಲ್ಲಿರುವ ಸೂರ್ಯ ನದಿಯ ಸೇತುವೆಯ ಮೇಲೆ ಮರ್ಸಿಡಿಸ್ 2.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದೂ ವರದಿಯಾಗಿದೆ. ಈ ದೂರವನ್ನು ಕಾರು ಕೇವಲ 9 ನಿಮಿಷಗಳಲ್ಲಿ ಕ್ರಮಿಸಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ವರದಿ ತಿಳಿಸಿದೆ. ಚಾಲಕಿ ಅನಾಹಿತಾ ಪಂಡೋಳೆ ಅವರು ಓವರ್‌ಟೇಕ್‌ (OverTake) ಮಾಡಲು ಹೋದಾಗ ಸಂಭವಿಸಿದ ದೋಷವೇ ಇದಕ್ಕೆ ಕಾರಣ ಎನ್ನಲಾಗಿದೆ. 

ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟಾಟಾ ಸಮೂಹದ ಮಾಜಿ ಮುಖ್ಯಸ್ಥ ಸೈರಸ್‌ ಮಿಸ್ತ್ರಿ (54) ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಮಿಸ್ತ್ರಿ ಅವರ ಹಠಾತ್‌ ಸಾವು ದೇಶದ ಉದ್ಯಮ ಲೋಕದಲ್ಲಿ ತಲ್ಲಣ ಉಂಟು ಮಾಡಿದೆ. ಮಿಸ್ತ್ರಿ ಜತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇತರ ಮೂವರ ಪೈಕಿ ಅವರ ಆಪ್ತ ಜಹಾಂಗೀರ್‌ ಪಂಡೋಳೆ ಎಂಬುವವರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರಾದ ಡಾ. ಅನಾಹಿತಾ ಪಂಡೋಳೆ ಹಾಗೂ ಡಾರಿಯಸ್‌ ಪಂಡೋಳೆ ಅವರು ಗಾಯಗೊಂಡಿದ್ದಾರೆ. ಡಾರಿಯಸ್‌ ಪಂಡೋಳೆ ಅವರು ಸೈರಸ್‌ ಮಿಸ್ತ್ರಿ ಟಾಟಾ ಅಧ್ಯಕ್ಷರಾಗಿದ್ದಾಗ ಆ ಸಮೂಹದಲ್ಲೇ ಸ್ವತಂತ್ರ ನಿರ್ದೇಶಕರಾಗಿದ್ದರು.

Cyrus Mistry Death ಅಪಘಾತದಲ್ಲಿ ಟಾಟಾ ಸನ್ಸ್‌ ಮಾಜಿ ಚೇರ್ಮನ್‌ ಸಾವು!

ಇದರ ನಡುವೆಯೇ ಇದು ಸಹಜ ಅಪಘಾತವೇ ಅಥವಾ ಷಡ್ಯಂತ್ರವೇನಾದರೂ ಇತ್ತೇ ಎಂಬ ಊಹಾಪೋಹಗಳು ಆರಂಭವಾಗಿವೆ. ಹೀಗಾಗಿ ಅಪಘಾತ ಪ್ರಕರಣದ ಉನ್ನತ ಮಟ್ಟದ ಉನ್ನತ ತನಿಖೆಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ದೇವೇಂದ್ರ ಫಡ್ನವೀಸ್‌ ಆದೇಶಿಸಿದ್ದಾರೆ. ಮಹಾರಾಷ್ಟ್ರದ ಪೊಲೀಸ್‌ ಮಹಾನಿರ್ದೇಶಕರಿಗೆ ಪ್ರಕರಣದ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚಿಸಲಾಗಿದೆ. ಮಿಸ್ತ್ರಿ ಸಾವಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಧನಕರ್‌, ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಗಣ್ಯರು ಹಾಗೂ ಉದ್ಯಮಿಗಳು ಆಘಾತ ವ್ಯಕ್ತಪಡಿಸಿದ್ದಾರೆ.

ಆಗಿದ್ದೇನು..?:

ಅಹಮದಾಬಾದ್‌ನಿಂದ ಮುಂಬೈಗೆ ಮಿಸ್ತ್ರಿ ಹಾಗೂ ಇತರರು ಮರ್ಸಿಡೀಸ್‌ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರನ್ನು ಡಾ. ಅನಾಹಿತಾ ಪಂಡೋಳೆ ಚಲಾಯಿಸುತ್ತಿದ್ದರು. ಮುಂಬೈನಿಂದ 120 ಕಿ.ಮೀ. ದೂರದ ಪಾಲ್ಘರ್‌ ಜಿಲ್ಲೆಯಲ್ಲಿ ಮಧ್ಯಾಹ್ನ 3.15 ಕ್ಕೆ ಸೂರಾರ‍ಯ ನದಿಯ ಮೇಲಿನ ಸೇತುವೆ ಮೇಲೆ ಕಾರು ಸಾಗುತ್ತಿತ್ತು. ಆಗ ಎಡಗಡೆಯಿಂದ ಓವರ್‌ಟೇಕ್‌ ಮಾಡಲು ಹೋದಾಗ ಕಾರಿನ ಚಾಲಕಿ ನಿಯಂತ್ರಣ ಕಳೆದುಕೊಂಡಿದ್ದಾಳೆ. ಆಗ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ನಂತರ ರಸ್ತೆ ಪಕ್ಕದ ಗೋಡೆಗೆ ಗುದ್ದಿದೆ. ಇದರಿಂದಲೇ ಅಪಘಾತ ಸಂಭವಿಸಿದೆ ಎಂಬಂತೆ ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಮಿಸ್ತ್ರಿ ಕೇಸ್‌ ಗೆದ್ದ ಟಾಟಾ ಸಮೂಹ: ರತನ್‌ ಟಾಟಾಗೆ ದೊಡ್ಡ ಜಯ!

ಕಾರು ಅತಿಯಾದ ವೇಗದಲ್ಲಿ ಸಾಗುತ್ತಿತ್ತು. ಹೀಗಾಗಿ ಡಿಕ್ಕಿ ಹೊಡೆದು ಏರ್‌ಬ್ಯಾಗ್‌ ಓಪನ್‌ ಆದರೂ ಅವುಗಳಿಂದ ಸಂಪೂರ್ಣ ರಕ್ಷಣೆ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಚಾಲಕಿ ಡಾ. ಅನಾಹಿತಾ ಹಾಗೂ ಡಾರಿಯಸ್‌ ಮುಂಭಾಗದಲ್ಲಿದ್ದು, ಸೀಟ್‌ಬೆಲ್ಟ್‌ ಧರಿಸಿದ್ದರು. ಸೈರಸ್‌ ಹಾಗೂ ಜಹಾಂಗೀರ್‌ ಅವರು ಹಿಂಬದಿಯಲ್ಲಿದ್ದರು. ಆದರೆ ಕಾರಿನ ಮುಂಭಾಗ ಮಾತ್ರ ಜಜ್ಜಿದ್ದು ಹಿಂಭಾಗಕ್ಕೆ ಯಾವುದೇ ಹಾನಿ ಆಗಿಲ್ಲ. ಇದನ್ನು ಕೂಡ ಪೊಲೀಸರು ತನಿಖೆ ವೇಳೆ ಗಮನಿಸುತ್ತಿದ್ದಾರೆ. ಗಾಯಾಳು ಡಾ. ಅನಾಹಿತಾ ಪಂಡೋಳೆ ಹಾಗೂ ಡಾರಿಯಸ್‌ ಪಂಡೋಳೆ ಅವರನ್ನು ಗುಜರಾತ್‌ನ ವಾಪಿಯಲ್ಲಿರುವ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

Follow Us:
Download App:
  • android
  • ios