ಮಿಸ್ತ್ರಿ ಕೇಸ್ ಗೆದ್ದ ಟಾಟಾ ಸಮೂಹ: ರತನ್ ಟಾಟಾಗೆ ದೊಡ್ಡ ಜಯ!
ಮಿಸ್ತ್ರಿ ಕೇಸ್ ಗೆದ್ದ ಟಾಟಾ ಸಮೂಹ| ರತನ್ ಟಾಟಾಗೆ ದೊಡ್ಡ ಜಯ| ಟಾಟಾ ಸಮೂಹಕ್ಕೆ ದೊಡ್ಡ ಜಯ|
ನವದೆಹಲಿ(ಮಾ.27): ಸುಪ್ರೀಂ ಕೋರ್ಟ್‌ನಲ್ಲಿ ಟಾಟಾ ಸಮೂಹಕ್ಕೆ ಮಂಗಳವಾರ ಮಹತ್ವದ ಜಯ ಲಭಿಸಿದೆ. ಸೈರಸ್ ಮಿಸ್ತ್ರಿ ವಜಾ ಅಸಿಂಧುಗೊಳಿಸಿ, ಅವರನ್ನು ಸಮೂಹದ ಕಾರ್ಯನಿರ್ವಾಹಕ ಅಧ್ಯಕ್ಷ ಎಂದು ನೇಮಕ ಮಾಡಿದ್ದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ಪ್ರಾಧಿಕಾರದ (ಎನ್‌ಸಿಎಲ್‌ಎಟಿ) ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಮಿಸ್ತ್ರಿ ನೇಮಕ ಆದೇಶ ಪ್ರಶ್ನಿಸಿ ಟಾಟಾ ಸಮೂಹ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ಪೀಠ, ಈ ಸಂಬಂಧ ಮಿಸ್ತ್ರಿ ಹಾಗೂ ಶಾಪೂರ್ಜಿ ಪಲ್ಲೋನ್‌ಜಿ (ಎಸ್‌ಪಿ) ಸಮೂಹ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು.
2012ರಲ್ಲಿ ಮಿಸ್ತ್ರಿ ಅವರು ಟಾಟಾ ಸಮೂಹದ ಮುಖ್ಯಸ್ಥರಾಗಿ ನೇಮಕವಾಗಿದ್ದರು. ಆದರೆ ಒಳ ಸಂಘರ್ಷದ ಕಾರಣ 2016ರಲ್ಲಿ ಮಿಸ್ತ್ರಿ ಅವರನ್ನು ಅಧ್ಯಕ್ಷ ಹುದ್ದೆಯಿಂದ ವಜಾ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಟಾಟಾ ಸಮೂಹದ ಪಾಲುದಾರನಾಗಿದ್ದ ಎಸ್‌ಪಿ ಸಮೂಹವು ಎನ್‌ಸಿಎಲ್‌ಎಟಿ ಮೆಟ್ಟಿಲೇರಿತ್ತು. ಇದರ ವಿಚಾರಣೆ ನಡೆಸಿದ್ದ ಎನ್‌ಸಿಎಲ್‌ಎಟಿ, ಮಿಸ್ತ್ರಿ ವಜಾ ರದ್ದುಗೊಳಿಸಿ ಅವರನ್ನು ಪುನಃ ಅಧ್ಯಕ್ಷ ಸ್ಥಾನಕ್ಕೆ ನೇಮಿಸಬೇಕು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಸಿದ್ದ ಟಾಟಾ ಸಮೂಹ ‘ಮಿಸ್ತ್ರಿ ವಜಾ ಅಧಿಕಾರ ನನಗಿದೆ’ ಎಂದು ವಾದಿಸಿತ್ತು. ಈ ನಡುವೆ, 2020ರ ಜ.10ರಂದು ಸುಪ್ರೀಂ ಕೋರ್ಟು ಮಿಸ್ತ್ರಿ ನೇಮಕ ಆದೇಶಕ್ಕೆ ತಡೆ ನೀಡಿತ್ತು. ಈಗ ಟಾಟಾ ಸಮೂಹದ ವಾದ ಮನ್ನಿಸಿ ಅಂತಿಮ ತೀರ್ಪು ಪ್ರಕಟಿಸಿದೆ.