ಮಹಾರಾಷ್ಟ್ರದ 5 ಜಿಲ್ಲೇಲಿ ಲಾಕ್ಡೌನ್, ಕರ್ನಾಟಕಕ್ಕೆ ಇದು ಎಚ್ಚರಿಕೆ ಗಂಟೆ| 5 ಜಿಲ್ಲೆಗಳಲ್ಲಿ 1 ವಾರದ ಲಾಕ್‌ಡೌನ್ ಜಾರಿ| ರಾಜಕೀಯ, ಧಾರ್ಮಿಕ, ಸಾಮಾಜಿಕ ಕಾರ‍್ಯಕ್ರಮ ಬಂದ್| ಪುಣೆಯಲ್ಲಿ ಶಾಲಾ,ಕಾಲೇಜು ಬಂದ್, ರಾತ್ರಿ ಕರ್ಫ್ಯೂ| ಹೋಟೆಲ್, ಮಾರುಕಟ್ಟೆತೆರೆಯುವ ಅವಧಿ ಕಡಿತ| ಕಚೇರಿಗಳಲ್ಲಿ ಸೀಮಿತ ಸಂಖ್ಯೆಯಲ್ಲಿ ಸಿಬ್ಬಂದಿ ಹಾಜರಿ| ಸೋಂಕು ಹೆಚ್ಚಾದಲ್ಲಿ 12 ಗಂಟೆ ರಾತ್ರಿ ಕರ್ಫ್ಯೂ| ಸ್ಥಿತಿ ನಿಯಂತ್ರಣಕ್ಕೆ ಬರದಿದ್ದಲ್ಲಿ ರಾಜ್ಯವ್ಯಾಪಿ ಲಾಕ್ಡೌನ್: ಸಿಎಂ
ಮುಂಬೈ(ಫೆ.22):: ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಮತ್ತಷ್ಟುವ್ಯಾಪಕವಾಗತೊಡಗಿದ್ದು, ಅಮರಾವತಿ ಸೇರಿದಂತೆ ರಾಜ್ಯದ 5 ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕಾಗಿ ಸೀಮಿತ ಲಾಕ್ಡೌನ್ ಘೋಷಿಸಲಾಗಿದೆ. ಜೊತೆಗೆ ಮುಂದಿನ ಆದೇಶದವರೆಗೂ ರಾಜ್ಯಾದ್ಯಂತ ಎಲ್ಲಾ ರೀತಿಯ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸಭೆ, ಸಮಾರಂಭಗಳನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ ಲಾಕ್ಡೌನ್ ಹೊರತಾಗಿಯೂ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡುಬರದೇ ಇದ್ದಲ್ಲಿ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ಕಫä್ರ್ಯ ಹೇರುವ ಬಗ್ಗೆಯೂ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಮಹಾರಾಷ್ಟ್ರದ ಈ ಕ್ರಮವು ಪಕ್ಕದ ರಾಜ್ಯ ಕರ್ನಾಟಕ ಸೇರಿ ಅನೇಕ ರಾಜ್ಯಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಮಹಾರಾಷ್ಟ್ರ, ಕೇರಳ ರಾಜ್ಯಗಳಿಂದ ಹೆಚ್ಚು ಜನರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮ ಅನುಸರಿಸದೇ ಹೋದರೆ ಕರ್ನಾಟಕದಲ್ಲೂ ಕೂಡ ಲಾಕ್‌ಡೌನ್ ಹೇರುವ ಗಂಭೀರ ಪರಿಸ್ಥಿತಿ ಸೃಷ್ಟಿಆಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಮಹಾ ಸಾರಿಗೆಯಿಂದ ರಾಜ್ಯ ಸಾರಿಗೆ ನಿಗಮಕ್ಕೆ ಧಮ್ಕಿ
ಠಾಕ್ರೆ ಎಚ್ಚರಿಕೆ:
‘ಮಹಾರಾಷ್ಟ್ರದಲ್ಲಿ ಮತ್ತೆ ನಿತ್ಯ 7000 ಹೊಸ ಪ್ರಕರಣ ದಾಖಲಾಗುತ್ತಿರುವುದು ಗಂಭೀರ ವಿಷಯ. ಈ ಕಾರಣ ಎಲ್ಲ ಧಾರ್ಮಿಕ, ಸಾಮಾಜಿಕ, ರಾಜಕೀಯ ಸಭೆ ನಿಷೇಧಿಸಲಾಗಿದೆ’ ಎಂದಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ‘ಜನತೆ ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಮತ್ತೊಂದು ಲಾಕ್‌ಡೌನ್ ತಡೆಯಬೇಕು. ರಾಜ್ಯದಲ್ಲಿ ಸಾವಿರಾರು ಆರೋಗ್ಯ ಕಾರ್ಯಕರ್ತರು ತಮ್ಮ ಜೀವವನ್ನು ಪಣಕ್ಕಿಟ್ಟು ಸೋಂಕು ನಿಯಂತ್ರಿಸಿದ್ದಾರೆ. ಅವರ ಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳುವ ಹೊಣೆ ಜನರದ್ದು’ ಎಂದು ಮನವಿ ಮಾಡಿಕೊಂಡಿದ್ದಾರೆ. ‘ಈಗ ರಾಜ್ಯದಲ್ಲಿ ಕಾಣಿಸಿಕೊಂಡಿರುವುದು ಕೊರೋನಾ 2ನೇ ಅಲೆಯೇ ಎಂಬುದನ್ನು ನಿರ್ಧರಿಸಲು ಕನಿಷ್ಠ 8-15 ದಿನ ಬೇಕು. ಮುಂದಿನ ದಿನಗಳಲ್ಲೂ ಇದೇ ರೀತಿಯಲ್ಲಿ ಪ್ರಕರಣ ಏರಿಕೆಯಾದಲ್ಲಿ ಲಾಕ್ಡೌನ್ ಜಾರಿ ಅನಿವಾರ್ಯವಾಗಲಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
5 ಜಿಲ್ಲೆಗಳಲ್ಲಿ ಲಾಕ್ಡೌನ್:
ಅಮರಾವತಿ, ಅಕೋಲಾ, ವಾಶಿಂ, ಬುಲ್ಡಾನಾ ಮತ್ತು ಯವತ್ಮಾಳ್ ಜಿಲ್ಲೆಗಳಲ್ಲಿ ಸೋಮವಾರ ರಾತ್ರಿ 8 ಗಂಟೆಯಿಂದ ಜಾರಿಗೆ ಬರುವಂತೆ ಒಂದು ವಾರ ಕಾಲ ಲಾಕ್ಡೌನ್ ಜಾರಿಗೆ ನಿರ್ಧರಿಸಲಾಗಿದೆ. ಈ ಅವಧಿಯಲ್ಲಿ ಶಾಲಾ, ಕಾಲೇಜು ಸಂಪೂರ್ಣ ಬಂದ್ ಆಗಿರಲಿದೆ. ಮಾರುಕಟ್ಟೆಗಳು ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ತೆರೆದಿರಲಿವೆ. ಖಾಸಗಿ ಕಚೇರಿಗಳಲ್ಲಿ ಶೇ.15ರಷ್ಟುಸಿಬ್ಬಂದಿಗೆ ಹಾಜರಾಗಲು ಅವಕಾಶ ಕಲ್ಪಿಸಲಾಗುವುದು. ದೇಗುಲಗಳಿಗೆ ಒಮ್ಮೆಗೆ ಶೇ.10ರಷ್ಟುಮಾತ್ರ ಜನರಿಗೆ ಮತ್ತು ವಿವಾಹ ಕಾರ್ಯಕ್ರಮಗಳಿಗೆ ಗರಿಷ್ಠ 25 ಜನರಿಗೆ ಮಾತ್ರವೇ ಭಾಗಿಯಾಗಲು ಅವಕಾಶ ಇರಲಿದೆ. ಅಗತ್ಯ ಸೇವೆಗಳು ಎಂದಿನಂತೆ ಮುಂದುವರೆಯಲಿವೆ ಎಂದು ಅಮರಾವತಿ ಕಂದಾಯ ಜಿಲ್ಲೆಯ ಉಸ್ತುವಾರಿ ಸಚಿವೆ ಯಶೋಮತಿ ಠಾಕೂರ್ ಪ್ರಕಟಿಸಿದ್ದಾರೆ.
ಪುಣೆಯಲ್ಲಿ ನೈಟ್ ಕರ್ಫ್ಯೂ, ಅಮರಾವತಿ ಲಾಕ್‌ಡೌನ್; ಕೊರೋನಾ 2ನೇ ಅಲೆಗೆ ತತ್ತರಿಸಿದ ಮಹಾರಾಷ್ಟ್ರ!
ಪುಣೆಯಲ್ಲೂ ಕಠಿಣ ಕ್ರಮ:
ರಾಜ್ಯದ ದೊಡ್ಡ ನಗರಗಳ ಪೈಕಿ ಒಂದಾದ ಪುಣೆಯಲ್ಲಿ ಫೆ.28ರವರೆಗೂ ಶಾಲಾ-ಕಾಲೇಜು ಮುಚ್ಚಲು ನಿರ್ಧರಿಸಲಾಗಿದೆ. ಇನ್ನು ಹೋಟೆಲ್, ರೆಸ್ಟೋರೆಂಟ್ ಮತ್ತು ಮದುವೆ ಹಾಲ್‌ಗಳನ್ನು ರಾತ್ರಿ 11 ಗಂಟೆಯವರೆಗೆ ಮಾತ್ರವೇ ತೆರೆಯಲು ಅನುಮತಿ ನೀಡಲಾಗಿದೆ. ವಿವಾಹ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಗರಿಷ್ಠ 200 ಜನರ ಮಿತಿ ಹೇರಲಾಗಿದೆ. ರಾತ್ರಿ 11ರಿಂದ ಬೆಳಗಿನ 6 ಗಂಟೆಯವರೆಗೆ ತೀರಾ ಅಗತ್ಯವಿಲ್ಲದ ಹೊರತಾಗಿ ಜನರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ನಾಸಿಕ್‌ನಲ್ಲಿ ರಾತ್ರಿ ಕಫä್ರ್ಯ:
ನಾಸಿಕ್‌ನಲ್ಲೂ ತಕ್ಷಣದಿಂದ ಜಾರಿಗೆ ಬರುವಂತೆ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ರಾತ್ರಿ ಕಫä್ರ್ಯ ಜಾರಿಗೊಳಿಸಲಾಗಿದೆ.
4 ಸಚಿವರಿಗೆ ವಕ್ಕರಿಸಿದ ಕೊರೋನಾ ಮಹಾಮಾರಿ
ರಾಜ್ಯಾದ್ಯಂತ ವಿಸ್ತರಣೆ ಎಚ್ಚರಿಕೆ:
ಒಂದು ವೇಳೆ ಸೀಮಿತ ಲಾಕ್ಡೌನ್ ಹೊರತಾಗಿಯೂ ಸೋಂಕು ನಿಯಂತ್ರಣಕ್ಕೆ ಬಾರದೇ ಹೋದಲ್ಲಿ ಸೋಂಕು ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಸಂಜೆ 5ರಿಂದ ಬೆಳಗ್ಗೆ 5 ಗಂಟೆಯವರೆಗೆ 12 ಗಂಟೆಗಳ ಕಾಲ ರಾತ್ರಿ ಕಫä್ರ್ಯ ಜಾರಿ ಬಗ್ಗೆ, ಕೋವಿಡ್ ನಿಯಮ ಉಲ್ಲಂಘಿಸುವ ಕಲ್ಯಾಣ ಮಂಟಪಗಳಿಗೆ 1 ಲಕ್ಷ ರು.ವರೆಗೆ ದಂಡ ವಿಧಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮಹಾರಾಷ್ಟ್ರದ ಪರಿಹಾರ ಮತ್ತು ಪುನಾವಸತಿ ಖಾತೆ ಸಚಿವ ವಿಜಯ್ ವಡೆತ್ತಿವಾರ್ ಸುಳಿವು ನೀಡಿದ್ದಾರೆ.
ಕಫä್ರ್ಯ ಜಾರಿಯಲ್ಲಿರುವ ವೇಳೆ ಎಲ್ಲಾ ಕಲ್ಯಾಣ ಮಂಟಪಗಳು, ಮಾರುಕಟ್ಟೆ, ಸಿನಿಮಾ ಹಾಲ್ ಮತ್ತು ಜನಸಂದಣಿ ಇರುವ ಎಲ್ಲಾ ಪ್ರದೇಶಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಸಲಾಗುವುದು. ಜನರ ನಿರ್ಲಕ್ಷ್ಯ ಮತ್ತು ಕೋವಿಡ್ ನಿಯಮ ಉಲ್ಲಂಘನೆ ಕಾರಣಕ್ಕಾಗಿಯೇ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ ಎಂದು ವಡೆತ್ತಿವಾರ್ ದೂರಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 22, 2021, 9:00 AM IST