ಜನವರಿ 22ಕ್ಕೆ ರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ಈಗಾಗಲೇ ಅಸಾದುದ್ದೀನ್ ಒವೈಸಿ ರಾಮ ಮಂದಿರ ವಿಚಾರದಲ್ಲಿ ಕಿಡಿ ಕಾರುತ್ತಲೇ ಬಂದಿದ್ದಾರೆ. ಇದೀಗ ಮುಸ್ಲಿಂ ಸಮುದಾಯಕ್ಕೆ ಮಹತ್ವದ ಕರೆ ನೀಡಿದ್ದಾರೆ.
ಹೈದರಾಬಾದ್(ಜ.02) ನಮ್ಮ ಕಣ್ಣ ಮುಂದೆ ಮಸೀದಿಯನ್ನು ಕಳೆದುಕೊಂಡಿದ್ದೇವೆ. ನಿಮಗೆ ನೋವಾಗುತ್ತಿಲ್ಲವೇ? ಇದೀಗ ಕೆಲ ಮಸೀದಿಗಳನ್ನು ಟಾರ್ಗೆಟ್ ಮಾಡಲಾಗಿದೆ. ಮಸೀದಿಗಳನ್ನು ಉಳಿಸಿಕೊಳ್ಳಬೇಕಾದ ಮಹತ್ತರ ಜವಾಬ್ದಾರಿ ಮುಸ್ಲಿಂ ಯುವ ಸಮೂಹಕ್ಕಿದೆ.ಈಗಲೇ ಎಚ್ಚೆತ್ತುಕೊಳ್ಳಿ, ಒಗ್ಗಟ್ಟಾಗಿದ್ದರೆ ಮಾತ್ರ ಸಾಧ್ಯ ಎಂದು ಎಐಎಂಐಎಂ ಪಕ್ಷದ ಮುಖಂಡ ಅಸಾದುದ್ದೀನ್ ಒವೈಸಿ ಕರೆ ನೀಡಿದ್ದಾರೆ. ರಾಮ ಮಂದಿರ ಉದ್ಘಾಟನೆ ಸಂಭ್ರಮದ ಬೆನ್ನಲ್ಲೇ ಮುಸ್ಲಿಂ ಯುವ ಸಮುದಾಯವನ್ನು ಒವೈಸಿ ಎಚ್ಚರಿಸಿದ್ದಾರೆ.
ಬಾಬ್ರಿ ಮಸೀದಿಯನ್ನು ನಮ್ಮಿಂದ ಕಿತ್ತುಕೊಳ್ಳಲಾಗಿದೆ. ಕಳೆದ 500 ವರ್ಷಗಳಿಂದ ಬಾಬ್ರಿ ಮಸೀದಿ ಅಂದರೆ ಈಗ ರಾಮ ಮಂದಿರ ಕಟ್ಟಿರುವ ಸ್ಥಳದಲ್ಲಿ ಖುರಾನ್ ಪಠಣ ನಡೆಯುತ್ತಿತ್ತು. 500 ವರ್ಷಗಳಿಂದ ಖುರಾನ್ ಪಠಿಸುತ್ತಿದ್ದ ಮಸೀದಿ ಇದೀಗ ನಮ್ಮ ಬಳಿ ಇಲ್ಲ. ಮುಸ್ಲಿಂ ಯುವಕರೆ, ನಮ್ಮ ಮಸೀದಿ ಜಾಗದಲ್ಲಿ ಇದೀಗ ಏನು ನಿರ್ಮಾಣವಾಗಿದೆ ಅನ್ನೋದು ನಿಮಗೆ ಗೊತ್ತಿದೆ. ಇದು ನಿಮಗೆ ನೋವಾಗುತ್ತಿಲ್ಲವೇ? ಎಂದು ಒವೈಸಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
'ಮುಸ್ಲಿಮರ ಘನತೆಯನ್ನು ಕಸಿಯುವುದು ಮಾತ್ರವೇ ಈಗಿನ ಗುರಿ..' ಮಥುರಾ ಸರ್ವೇಗೆ ಕಿಡಿಕಾರಿದ ಓವೈಸಿ!
ಭವಾನಿ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಒವೈಸಿ, ರಾಮ ಮಂದಿರ ನಿರ್ಮಾಣ ಮಾತ್ರವಲ್ಲ, ಇತರ ಕೆಲ ಮಸೀದಿಗಳನ್ನು ಟಾರ್ಗೆಟ್ ಮಾಡಲಾಗಿದೆ. ಈ ಪೈಕಿ ದೆಹಲಯ ಸುನ್ಹೇರಿ ಮಸೀದಿಯೂ ಸೇರಿಕೊಂಡಿದೆ. ಸತತ ಹೋರಾಟ, ಪರಿಶ್ರಮದಿಂದ ನಾವು ಈ ಸ್ಥಾನದಲ್ಲಿ ನಿಂತಿದ್ದೇವೆ.ಆದರೆ ನಾವು ಒಗ್ಗಟ್ಟಾಗಿ ಹೋರಾಡದಿದ್ದರೆ ಯಾವುದು ಉಳಿಯುವುದಿಲ್ಲ. ಮುಸ್ಲಿಂ ಯುವಕರೇ ಸದಾ ಎಚ್ಚರಿಕೆಯಿಂದ ಇರಬೇಕು, ಸಂಘಟಿತರಾಗಬೇಕು ಎಂದು ಒವೈಸಿ ಕರೆ ನೀಡಿದ್ದಾರೆ.
ಇತ್ತೀಚೆಗೆ ಮಥುರಾ ಶ್ರೀ ಕೃಷ್ಣ ಮಂದಿರ ಆವರಣದಲ್ಲಿರುವ ಈದ್ಗಾ ಮಸೀದಿ ಸರ್ವೇ ಕಾರ್ಯಕ್ಕೆ ಕೋರ್ಟ್ ಅನುಮತಿ ನೀಡಿತ್ತು. ಇದು ಹಲವರು ಮುಸ್ಲಿಂ ಮುಖಂಡರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವೇಳೆ ಪ್ರತಿಕ್ರಿಯಿಸಿದ ಒವೈಸಿ, ಈಗನ ಬಿಜೆಪಿ ಸರ್ಕಾರಕ್ಕೆ ಮುಸ್ಲಿಮರ ಘನತೆಯನ್ನು ಕಸಿಯುತ್ತಿದೆ. ಸರ್ವೆ ಪೂಜಾ ಸ್ಥಳ ಕಾಯ್ದೆಗೆ ವಿರುದ್ಧವಾಗಿದೆ. ಇದಕ್ಕ ಅವಕಾಶ ನೀಡಬಾರದು ಎಂದು ಒವೈಸಿ ಒತ್ತಾಯಿಸಿದ್ದರು.
ಒವೈಸಿ ಪೊಲೀಸ್ ಬೆದರಿಕೆ ಪ್ರಕರಣ ಅಸ್ಸಾಂನಲ್ಲಾಗಿದ್ರೆ ಐದೇ ನಿಮಿಷದಲ್ಲಿ ಸೆಟ್ಲ್; ಸಿಎಂ ಹಿಮಂತ ಎಚ್ಚರಿಕೆ!
ಇತ್ತೀಚೆಗೆ ಕರ್ನಾಟಕ ಸರ್ಕಾರ ಹಿಜಾಬ್ ನಿಷೇಧ ಹಿಂಪಡೆಯುವ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿತ್ತು. ವಿವಾದ ಬಳಿಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದರು. ಹಿಜಾಬ್ ನಿಷೇಧವನ್ನು ಹಿಂಪಡೆಯಲು ಹಿಂಜರಿಯುವ ಅಗತ್ಯವೇನಿದೆ ಎಂದು ಒವೈಸಿ ಪ್ರಶ್ನಿಸಿದ್ದರು.
