ಒವೈಸಿ ಪೊಲೀಸ್ ಬೆದರಿಕೆ ಪ್ರಕರಣ ಅಸ್ಸಾಂನಲ್ಲಾಗಿದ್ರೆ ಐದೇ ನಿಮಿಷದಲ್ಲಿ ಸೆಟ್ಲ್; ಸಿಎಂ ಹಿಮಂತ ಎಚ್ಚರಿಕೆ!
ಒವೈಸಿ ಈ ರೀತಿಯ ಪರಾಕ್ರಮ ಅಸ್ಸಾಂನಲ್ಲಿ ತೋರಿಸಿದ್ದರೆ, ಐದೇ ನಿಮಿಷದಲ್ಲಿ ನಾವು ಸೆಟ್ಲ್ ಮಾಡುತ್ತಿದ್ದೇವು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ನೇರವಾಗಿ AIMIM ನಾಯಕ ಅಕ್ಬರುದ್ದೀನ್ ಒವೈಸಿಗೆ ಎಚ್ಚರಿಕೆ ನೀಡಿದ್ದಾರೆ.
ಹೈದರಾಬಾದ್(ನ.22) AIMIM ನಾಯಕ, ಅಸಾದುದ್ದೀನ್ ಒವೈಸಿ ಸಹೋದರ ಅಕ್ಬರುದ್ದೀನ್ ಒವೈಸಿ ಪೊಲೀಸ್ ಅಧಿಕಾರಿಗೆ ಹಾಕಿದ ಬೆದರಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ನನ್ನನ್ನು ತಡೆಯಲು ಯಾರೂ ಹುಟ್ಟಿಲ್ಲ. ಒಂದು ಸಿಗ್ನಲ್ ನೀಡಿದರೆ ನೀವೆಲ್ಲಾ ಇಲ್ಲಿಂದ ಓಡಿ ಹೋಗಬೇಕಾಗುತ್ತದೆ ಎಂದು ನೇರವಾಗಿ ಪೊಲೀಸ್ ಅಧಿಕಾರಿಗೆ ಅಕ್ಬರುದ್ದೀನ್ ಒವೈಸಿ ಬೆದರಿಕೆ ಹಾಕಿದ ವಿಡಿಯೋ ಭಾರಿ ವೈರಲ್ ಆಗಿದೆ. ಈ ಕುರಿತು ತೆಲಂಗಾಣದ ಗೋಲ್ಕೊಂಡಾ ಬಳಿ ಪ್ರತಿಕ್ರಿಯೆ ನೀಡಿದ ಅಸ್ಸಾಂ ಮುಖ್ಯಮಂತ್ರಿ ಅಕ್ಬರುದ್ದೀನ್ ಒವೈಸಿ, ಇದೇ ಬೆದರಿಕೆ ಅಸ್ಸಾಂನಲ್ಲಿ ಹಾಕಿದ್ದರೆ ಐದೇ ನಿಮಿಷದಲ್ಲಿ ನಾವು ಇತ್ಯರ್ಥ ಮಾಡುತ್ತಿದ್ದೇವು ಎಂದು ಎಚ್ಚರಿಕೆ ನೀಡಿದ್ದಾರೆ.
ನಾವು ಐದೇ ನಿಮಿಷ, ನಮ್ಮ ಅಸ್ಸಾಂ ಪೊಲೀಸರು ಸ್ಥಳದಲ್ಲೇ ರಿಸಲ್ಟ್ ಕೊಟ್ಟುಬಿಡುತ್ತಿದ್ದರು. ಆದರೆ ತೆಲಂಗಾಣದಲ್ಲಿ ತುಷ್ಠೀಕರಣದ ರಾಜಕಾರಣದಿಂದ ಈ ರೀತಿಯ ಹೇಳಿಕೆಗಳು ಬರುತ್ತಿದೆ. ಈ ತುಷ್ಠೀಕರಣ ರಾಜಕೀಯದಿಂದ ತೆಲಂಗಾಣದ ಪೊಲೀಸರು ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ. ಇತ್ತ ರಾಜಕೀಯ ನಾಯಕರು ಏನೂ ಮಾಡಲ್ಲ. ಬಿಆರ್‌ಎಸ್, ಕಾಂಗ್ರೆಸ್ ಈ ಘಟನೆ ಕುರಿತು ತುಟಿಬಿಚ್ಚುತ್ತಿಲ್ಲ. ಎಲ್ಲರಿಗೂ ಸ್ವಾತಂತ್ರ್ಯವಿದೆ. ವಿಡಿಯೋ ಎಲ್ಲರೂ ನೋಡಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದರೆ ಸಾಮಾನ್ಯ ಜನರ ಪಾಡೇನು? ಚುನಾವಣೆ ಸಮೀಪದಲ್ಲಿ ಈ ರೀತಿ ಜನರನ್ನು ಬೆದರಿಸುವ ತಂತ್ರ ನಡೆಯುತ್ತಿದೆ. ಅಕ್ಬರುದ್ದೀನ್ ಒವೈಸಿ ಅವರಿಗೆ ಚುನಾವಣೆ ಉಮೇದುವಾರಿಕೆಯನ್ನೇ ರದ್ದು ಮಾಡಬೇಕು ಎಂದು ಹಿಮಂತ್ ಬಿಸ್ವಾ ಶರ್ಮಾ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
'ನನ್ನ ಮಾತನ್ನು ನಿಲ್ಸೋ ಗಂಡ್ಸು ಹುಟ್ಟೇ ಇಲ್ಲ..' ಪೊಲೀಸ್ ಅಧಿಕಾರಿಗೆ ಓವೈಸಿ ಸಹೋದರನ ಬೆದರಿಕೆ!
ಹೈದರಾಬಾದ್‌ನ ಚಂದ್ರಯಾಂಗುಟದಲ್ಲಿನ ಚುನಾವಣಾ ಪ್ರಚಾರದ ವೇಳೆ ಅಕ್ಬರುದ್ದೀನ್ ಒವೈಸಿ ಪೊಲೀಸ್ ಅಧಿಕಾರಿಗೆ ಧಮ್ಕಿ ಹಾಕಿ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಚುನಾವಣಾ ಆಯೋಗದ ನಿಯಮದ ಪ್ರಕಾರ ಸಮಯ ಮೀರಿದ ಕಾರಣ ಪೊಲೀಸ್ ಅಧಿಕಾರಿ ಒವೈಸಿ ಭಾಷಣ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಇದರಿಂದ ಕೆರಳಿದ ಅಕ್ಬರುದ್ದೀನ್ ಒವೈಸಿ, ಇಲ್ಲಿಂದ ತಕ್ಷಣವೇ ಕದಲಿ ಎಂದು ಭಾಷಣ ಮಾಡುತ್ತಿದ್ದ ಒವೈಸಿ ನೇರವಾಗಿ ಪೊಲೀಸ್ ಅಧಿಕಾರಿ ಬಳಿ ತೆರಳಿದ್ದಾರೆ.
ಬುಲೆಟ್ ಹಾಗೂ ಚೂರಿಯಿಂದ ನಾನು ದುರ್ಬಲನಾಗಿದ್ದೇನೆ ಎಂದು ಭಾವಿಸಿದ್ದೀರಾ? ನನ್ನಲ್ಲಿ ಇನ್ನು ಶಕ್ತಿ ಇದೆ.ನನ್ನನ್ನು ತಡೆಯುವ ಶಕ್ತಿ ಇಲ್ಲಿ ಯಾವ ತಾಯಿ ಮಗನಿಗೂ ಇಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಅಕ್ಬರುದ್ದೀನ್ ಒವೈಸಿ ಬೆದರಿಕೆಗೆ ಬಿಜೆಪಿ ನಾಯಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಮಹಿಳಾ ಮೀಸಲು ವಿಧೇಯಕದ ಪರ ಮತ ಹಾಕಲು ಇಬ್ಬರು ಸಂಸದರು ನಿರಾಕರಿಸಿದ್ದೇಕೆ?