Asianet Suvarna News Asianet Suvarna News

'ಮುಸ್ಲಿಮರ ಘನತೆಯನ್ನು ಕಸಿಯುವುದು ಮಾತ್ರವೇ ಈಗಿನ ಗುರಿ..' ಮಥುರಾ ಸರ್ವೇಗೆ ಕಿಡಿಕಾರಿದ ಓವೈಸಿ!

ಅಯೋಧ್ಯೆ, ವಾರಣಾಸಿ ಬಳಿಕ ಮಥುರಾ ಕೃಷ್ಣಭೂಮಿಯ ಸರ್ವೇಗೂ ಅಲಹಾಬಾದ್‌ ಹೈಕೋರ್ಟ್‌ ಅಸ್ತು ಎಂದು ಹೇಳಿದೆ. ಇದರ ಬೆನ್ನಲ್ಲಿಯೇ ಇದರ ಸರ್ವೇಗೆ ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ಕಿಡಿಕಾರಿದ್ದಾರೆ.

Asaduddin Owaisi says Robbing Muslims of their dignity is the only goal now after Mathura survey Verdict san
Author
First Published Dec 14, 2023, 4:06 PM IST

ನವದೆಹಲಿ (ಡಿ.14): ದೇಶದ ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಮಥುರಾ ಕೃಷ್ಣಭೂಮಿ ವಿವಾದಕ್ಕೆ ಸಂಬಂಧಪಟ್ಟಂತೆ ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಹಿಂದುಗಳ ಪಕ್ಷಗಳ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ಮಥುರಾದ ಕೃಷ್ಣಜನ್ಮಭೂಮಿ ಆವರಣದಲ್ಲಿರುವ ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ಅನುಮತಿ ನೀಡಿದೆ. ಇದರ ಬೆನ್ನಲ್ಲಿಯೇ ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದು, ಮುಸ್ಲಿಮರ ಘನತೆಯನ್ನು ಕಸಿಯುವುದು ಮಾತ್ರವೇ ಈಗಿನ ಗುರಿತಯಾಗಿರುವಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ. ಅಲಹಾಬಾದ್ ಹೈಕೋರ್ಟ್ ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನದ ಪಕ್ಕದಲ್ಲಿರುವ ಶಾಹಿ ಈದ್ಗಾ ಸಂಕೀರ್ಣದ ಎಎಸ್‌ಐ ಸಮೀಕ್ಷೆಗೆ ಒಪ್ಪಿಗೆ ನೀಡಿದೆ. ಶಾಹಿ ಈದ್ಗಾ ಕಾಂಪ್ಲೆಕ್ಸ್‌ನ ಸರ್ವೆ ಮಾಡಲು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಅಡ್ವೊಕೇಟ್ ಕಮಿಷನರ್ ಅವರನ್ನು ನೇಮಿಸುವಂತೆ ಹಿಂದೂ ಕಡೆಯವರು ಒತ್ತಾಯಿಸಿದ್ದರು. ಇದನ್ನು ಹೈಕೋರ್ಟ್ ಒಪ್ಪಿಕೊಂಡಿದೆ. ಆದರೆ, ಎಎಸ್‌ಐ ದಿನಾಂಕ ಮತ್ತು ಅಡ್ವೊಕೇಟ್ ಕಮಿಷನರ್ ಯಾರು ಎಂಬ ನಿರ್ಧಾರವನ್ನು ಡಿಸೆಂಬರ್ 18 ರಂದು ತೆಗೆದುಕೊಳ್ಳಲಾಗುವುದು. ಈ ನಿರ್ಧಾರವನ್ನು ಹಿಂದೂ ಪಕ್ಷವು ದೊಡ್ಡ ವಿಜಯವೆಂದು ಪರಿಗಣಿಸಿದೆ.

ಕೋರ್ಟ್‌ ತೀರ್ಪು ಬಂದ ಬಳಿಕ ಪೂಜಾ ಸ್ಥಳಗಳ ಕಾಯಿದೆಯನ್ನು ಇದು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಅಸಾಸುದ್ದೀನ್‌ ಓವೈಸಿ ಟ್ವೀಟ್‌ ಮಾಡಿದ್ದು, ತಮ್ಮ ನಾಲ್ಕು ಅಂಶಗಳನ್ನು ಅದರಲ್ಲಿ ಪ್ರಕಟಿಸಿದ್ದಾರೆ. 'ಅಲಹಾಬಾದ್ ಹೈಕೋರ್ಟ್ ಮಥುರಾದ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಗೆ ಅನುಮತಿ ನೀಡಿದೆ. ಬಾಬರಿ ಮಸೀದಿ ತೀರ್ಪಿನ ನಂತರ, ಇಂಥ ತೀರ್ಪು ಸಂಘಪರಿವಾರದ ಕಿಡಿಗೇಡಿಗಳನ್ನು ಉತ್ತೇಜಿಸುತ್ತದೆ ಎಂದು ನಾನು ಹೇಳಿದ್ದೆ. ಪೂಜಾ ಸ್ಥಳಗಳ ಕಾಯಿದೆಯು ಅಂತಹ ದಾವೆಗಳನ್ನು ನಿಷೇಧಿಸುವ ಹೊರತಾಗಿಯೂ ಇದು ನಡೆದುಕೊಂಡು ಬಂದಿದೆ' ಎಂದು ಅವರು ಟ್ವೀಟ್‌ ಮಾಡಿದ್ದಾರೆ.

'ಮಥುರಾ ವಿವಾದವನ್ನು ಮಸೀದಿ ಸಮಿತಿ ಮತ್ತು ದೇವಸ್ಥಾನದ ಟ್ರಸ್ಟ್ ನಡುವಿನ ಪರಸ್ಪರ ಒಪ್ಪಿಗೆಯಿಂದ ದಶಕಗಳ ಹಿಂದೆ ಇತ್ಯರ್ಥಗೊಳಿಸಲಾಗಿದೆ. ಹೊಸ ಗುಂಪು ಈ ವಿವಾದಗಳನ್ನು ಮತ್ತೆ ಎಬ್ಬಿಸಿದೆ. ಅದು ಕಾಶಿ, ಮಥುರಾ ಅಥವಾ ಲಕ್ನೋದ ತಿಲೇ ವಾಲಿ ಮಸೀದಿಯಾಗಿರಲಿ, ಒಂದೇ ಗುಂಪು ಈ ಕುರಿತಾಗಿ ಕೋರ್ಟ್‌ನಲ್ಲಿ ಅರ್ಜಿಗಳನ್ನು ಹಾಕುತ್ತಿದೆ. ನ್ಯಾಯಾಲಯದ ಮುಂದೆ ಇತ್ಯರ್ಥವಾದ ಒಪ್ಪಂದವನ್ನು ಇಲ್ಲಿ ಓದಬಹುದು' ಎಂದು ಓವೈಸಿ ಒಪ್ಪಂದದ ಪ್ರತಿಯನ್ನೂ ಟ್ವೀಟ್‌ ಮಾಡಿದ್ದಾರೆ.

ಹಿಂದೂಗಳ ಹೋರಾಟಕ್ಕೆ ಮತ್ತೊಂದು ಗೆಲುವು, ಮಥುರಾ ಕೃಷ್ಣ ಭೂಮಿ ಸರ್ವೇಗೆ ಕೋರ್ಟ್ಅನುಮತಿ!

'ಪೂಜಾ ಸ್ಥಳಗಳ ಕಾಯಿದೆ ಇನ್ನೂ ಜಾರಿಯಲ್ಲಿರುವ ಕಾನೂನು. ಆದರೆ ಈ ಗುಂಪು ಕಾನೂನು ಮತ್ತು ನ್ಯಾಯಾಂಗ ಪ್ರಕ್ರಿಯೆಯನ್ನು ಲೇವಡಿ ಮಾಡಿದೆ. ಜನವರಿ 9 ರಂದು ಎಸ್‌ಸಿ ಈ ವಿಷಯವನ್ನು ಆಲಿಸಬೇಕಾಗಿತ್ತು, ಅಷ್ಟರ ಒಳಗಾಗಲೇ ಸಮೀಕ್ಷೆಗೆ ಆದೇಶಿಸಬೇಕಾದ ಆತುರವೇನಿದೆ?' ಎಂದು ಪ್ರಶ್ನೆ ಮಾಡಿದ್ದಾರೆ. 'ಒಂದು ಕಡೆ ನಿರಂತರವಾಗಿ ಮುಸ್ಲಿಮರನ್ನು ಗುರಿಯಾಗಿಸಲು ಆಸಕ್ತಿ ಹೊಂದಿರುವಾಗ ದಯವಿಟ್ಟು "ಕೊಡು ಮತ್ತು ತೆಗೆದುಕೊಳ್ಳಿ" ಎಂದು ಬೋಧಿಸಬೇಡಿ. ಇಲ್ಲಿ ಕಾನೂನು ಕೂಡ ಮುಖ್ಯವಾಗುತ್ತಿಲ್ಲ.. ಮುಸ್ಲಿಮರ ಘನತೆಯನ್ನು ಕಸಿದುಕೊಳ್ಳುವುದೊಂದೇ ಈಗ ಗುರಿಯಾಗಿದೆ' ಎಂದು ಓವೈಸಿ ಬರೆದಿದ್ದಾರೆ.

ಕೃಷ್ಣ ಜನ್ಮಭೂಮಿ ಮಥುರಾಗೆ ಭೇಟಿ ನೀಡಿ ಕೃಷ್ಣನ ದರ್ಶನ ಪಡೆದ ಪ್ರಧಾನಿ

Follow Us:
Download App:
  • android
  • ios