ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರದ ಬೆನ್ನಲ್ಲೇ ಕೇರಳದ ಮುನಂಬಂ ಗ್ರಾಮದ 50 ಜನರು ರಾಜೀವ್ ಚಂದ್ರಶೇಖರ್ ನೇತೃತ್ವದಲ್ಲಿ ಬಿಜೆಪಿ ಸೇರಿದ್ದಾರೆ. ಈ ಹಿಂದೆ ವಕ್ಫ್ ಮಂಡಳಿಯಿಂದ ತೊಂದರೆ ಅನುಭವಿಸಿದ್ದ ಗ್ರಾಮಸ್ಥರು, ತಿದ್ದುಪಡಿಯಿಂದ ಸಂತಸಗೊಂಡಿದ್ದಾರೆ.
ಕೊಚ್ಚಿ: ಸಂಸತ್ತಿನ ಉಭಯ ಸದನಗಳಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಬೆನ್ನಲ್ಲೇ, ಹಿಂದಿನ ವಕ್ಫ್ ಕಾನೂನಿನಿಂದ ತೊಂದರೆ ಅನುಭವಿಸಿದ್ದ ಕೇರಳದ ಮುನಂಬಂ ಗ್ರಾಮದ 50 ಮಂದಿ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾದರು.
ರಾಜೀವ್ ಚಂದ್ರಶೇಖರ್ ಮತ್ತು ಎನ್‌ಡಿಎ ಕೂಟದ ಇತರ ನಾಯಕರ ಸಮ್ಮುಖದಲ್ಲಿ ಮುನಂಬಂ ಗ್ರಾಮಸ್ಥರು ಬಿಜೆಪಿ ಸದಸ್ಯತ್ವ ಪಡೆದರು. ಅಧಿಕೃತ ದಾಖಲೆಗಳಿದ್ದರೂ ತಮ್ಮ ಭೂಮಿ ಅತಿಕ್ರಮಣಕ್ಕೆ ಮುಂದಾಗಿದ್ದ ಕೇರಳ ವಕ್ಫ್ ಮಂಡಳಿ ವಿರುದ್ಧ 174 ದಿನಗಳ ಮುನಂಬಂನ ಕ್ರೈಸ್ತ ಸಂತ್ರಸ್ತರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ತಿದ್ದುಪಡಿ ಬೆನ್ನಲ್ಲೇ ಗ್ರಾಮಸ್ಥರು ಪ್ರಧಾನಿಗೆ ಜೈಕಾರ ಕೂಗಿ ಸಂಭ್ರಮಿಸಿದ್ದರು. ಈ ಹಿಂದೆ ಕೂಡಾ ರಾಜೀವ್ ಚಂದ್ರಶೇಖರ್ ಸೇರಿದಂತೆ ಬಿಜೆಪಿ ನಾಯಕರು ಮುನಂಬಂಗೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.
ಬಿಲ್ ವಿರುದ್ಧ ದೇಶಾದ್ಯಂತ ಮುಸ್ಲಿಮರ ಶಕ್ತಿಪ್ರದರ್ಶನ
ವಕ್ಫ್ ತಿದ್ದುಪಡಿ ಮಸೂದೆಗೆ ಸಂಸತ್‌ನ ಅನುಮೋದನೆ ಸಿಕ್ಕಬೆನ್ನಲ್ಲೇ, ದೇಶವ್ಯಾಪಿ ಮುಸ್ಲಿಮರು ಬೀದಿಗಿಳಿದ ಪ್ರತಿಭಟನೆ ನಡೆಸಿದ್ದಾರೆ. ಚೆನ್ನೈ, ಅಹಮದಾಬಾದ್, ಕೋಲ್ಕತಾ, ಹೈದ್ರಾಬಾದ್, ಲಾತೂರ್ ಸೇರಿದಂತೆ ಹಲವು ನಗರಗಳಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ಪ್ರತಿಭಟನೆ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಕೋಲ್ಕತಾದಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ಮುಸ್ಲಿಮರು ಕಪ್ಪು ಬಟ್ಟೆ ಧರಿಸಿ, ವಕ್ಫ್ ಮಸೂದೆ ವಿರುದ್ಧ ಭಿತ್ತಿ ಪತ್ರಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತ ಪ್ರತಿಭಟಿಸಿದರು. ಹೈದರಾಬಾದ್‌ನಲ್ಲಿಯೂ ವಿರೋಧ ಜೋರಾಗಿಯೇ ಇತ್ತು. ಅಹಮದಾಬಾದ್‌ನಲ್ಲಿ ಪ್ರತಿಭಟನೆ ಮಾಡುತ್ತಿದ್ದ ಓವೈಸಿ ಅವರ ಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಸೇರಿ 40 ಜನರನ್ನು ಪೊಲೀಸರು ವಶಕ್ಕೆ ಪಡೆದರು.
ಇದನ್ನೂ ಓದಿ: ಸೇಂಟ್ ಮೇರಿಸ್ ಚರ್ಚ್‌ಗೆ ಕೇಂದ್ರ ಸಚಿವ ಸುರೇಶ್ ಗೋಪಿ ಭೇಟಿ: ವಕ್ಫ್ ಮಸೂದೆ ಬಗ್ಗೆ ಹೇಳಿದ್ದೇನು?
ಇತ್ತ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಟ, ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ಪ್ರತಿಭಟನೆಯನ್ನು ಮುನ್ನಡೆಸಿದರು. ಮಸೂದೆಯು ದೇಶದ ಜಾತ್ಯಾತೀತ ನಿಲುವಿಗೆ ವಿರುದ್ಧವಾಗಿದೆ. ಬಿಲ್ ಅಸಾಂವಿಧಾನಿಕ, ನಾವು ಇದನ್ನು ವಿರೋಧಿಸುತ್ತೇವೆ ಎಂದು ಘೋಷಣೆ ಕೂಗಿದರು. ಕೊಯಮತ್ತೂರು, ತಿರುಚಿರಾಪಲ್ಲಿಯಲ್ಲಿಯೂ ಪ್ರತಿಭಟನೆಗಳು ನಡೆದವು.
ಕಳೆದೆರಡು ವರ್ಷದಿಂದ ಹಿಂಸೆಗೆ ತುತ್ತಾಗಿರುವ ಮಣಿಪುರದಲ್ಲಿಯೂ ಪ್ರತಿಭಟನೆ ಹೆಚ್ಚಾಗಿತ್ತು. ರಾಜಧಾನಿ ಇಂಫಾಲ್‌ನಲ್ಲಿ ಸಂತೆಲ್ ಯುನೈಟೆಡ್ ಡೆವಲಪ್‌ಮೆಂಟ್ ಸಮಿತಿಯ 200ಕ್ಕೂ ಹೆಚ್ಚು ಸದಸ್ಯರು ಧರಣಿ ನಡೆಸುವ ಮೂಲಕ ವಿರೋಧವನ್ನು ವ್ಯಕ್ತಪಡಿಸಿ ವಾಪಾಸ್ ಪಡೆಯುವಂತೆ ಆಗ್ರಹಿಸಿದರು.
ಇದನ್ನೂ ಓದಿ: Breaking ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಅಣ್ಣಾಮಲೈ
