ನವದೆಹಲಿ(ಡಿ.26): ಒಂದೆಡೆ ಕೊರೋನಾ ಲಸಿಕೆ ಪಡೆಯಲು ಜನರು ಚಾತಕಪಕ್ಷಿಯಂತೆ ಕಾಯುತ್ತಿದ್ದರೆ, ಈ ಲಸಿಕೆಯ ಬಗ್ಗೆ ಕೆಲವು ಮುಸ್ಲಿಂ ಧಾರ್ಮಿಕ ಪಂಡಿತರ ಆಕ್ಷೇಪಗಳು ಮುಂದುವರಿದಿವೆ.

ಈ ಲಸಿಕೆ ಪಡೆಯಬೇಕೋ ಬೇಡವೋ ಎಂಬ ಬಗ್ಗೆ ಫತ್ವಾ ಹೊರಡಿಸುವವರೆಗೆ ಮುಸ್ಲಿಮರು ಕಾಯಬೇಕು ಎಂದು ಈ ಧರ್ಮದ ಪರಮೋಚ್ಚ ಧಾರ್ಮಿಕ ಸಂಸ್ಥೆಗಳಲ್ಲಿ ಒಂದಾದ ಉತ್ತರ ಪ್ರದೇಶದ ‘ದಾರುಲ್‌ ಉಲೂಂ ದೇವಬಂದ್‌’ನ ಮೌಲ್ವಿಯೊಬ್ಬರು ಹೇಳಿದ್ದಾರೆ.

ದೇಶದಲ್ಲಿ ಸತತ 8ನೇ ದಿನವೂ 25000ಕ್ಕಿಂತ ಕಡಿಮೆ ಕೊರೋನಾ

‘ಚೀನಾ ಅಭಿವೃದ್ಧಿಪಡಿಸಿರುವ ಲಸಿಕೆಯಲ್ಲಿ ಹಂದಿ ಮಾಂಸದ ಅಂಶವಿದೆ. ಹೀಗಾಗಿ ಅದನ್ನು ಪಡೆಯಬಾರದು. ಲಸಿಕೆಯ ಅಂಶವನ್ನು ಮೋದಿ ಸರ್ಕಾರ ಬಹಿರಂಗಪಡಿಸಬೇಕು’ ಎಂದು ಗುರುವಾರ ಮುಂಬೈನ ರಝಾ ಅಕಾಡೆಮಿ ವಿದ್ವಾಂಸರು ಹೇಳಿದ್ದರು.

ಶುಕ್ರವಾರ ಇದಕ್ಕೆ ಪೂರಕವಾಗಿ ಹೇಳಿಕೆ ನೀಡಿರುವ ದಾರುಲ್‌ ಉಲೂಂನ ಮೌಲ್ವಿ, ‘ಲಸಿಕೆಯಲ್ಲಿ ಯಾವ ಅಂಶವಿದೆ ಹಾಗೂ ಈ ಅಂಶಗಳ ಸೇವನೆಗೆ ಇಸ್ಲಾಂನಲ್ಲಿ ಅನುಮತಿ ಇದೆಯೇ ಎಂಬುದನ್ನು ಮುಸ್ಲಿಮರು ತಪಾಸಿಸಬೇಕು. ಲಸಿಕೆ ಮುಸ್ಲಿಮರಿಗೆ ಸುರಕ್ಷಿತವೇ ಎಂಬುದನ್ನು ದಾರುಲ್‌ನ ಫತ್ವಾ ವಿಭಾಗದ ಮುಖ್ಯಸ್ಥರು ನಿರ್ಧರಿಸಲಿದ್ದಾರೆ’ ಎಂದಿದ್ದಾರೆ.

2020 ಹಿನ್ನೋಟ : ವರ್ಷವಿಡಿ ಕೊರೊನಾ ಕಾಟ

ಲಸಿಕೆ ಸುರಕ್ಷಿತವಾಗಿಡಲು ಜಿಲೆಟಿನ್‌ ಎಂಬ ಹಂದಿ ಮಾಂಸದ ಅಂಶವನ್ನು ಸೇರಿಸಿರುತ್ತಾರೆ. ಹೀಗಾಗಿ ಈ ವಿವಾದ ಸೃಷ್ಟಿಯಾಗಿದೆ. ಆದರೆ ಲಖನೌ ಈದ್ಗಾ ಇಮಾಂ ಮೌಲಾನಾ ಖಾಲಿದ್‌ ರಶೀದ್‌ ಫರಂಗಿ ಮಹಾಲಿ ಅವರು ಈ ಹೇಳಿಕೆಗಳನ್ನು ತಿರಸ್ಕರಿಸಿದ್ದಾರೆ. ‘ವದಂತಿಗಳಿಗೆ ಕಿವಿಗೊಡದೇ ಎಲ್ಲ ಮುಸ್ಲಿಮರು ಲಸಿಕೆ ತೆಗೆದುಕೊಳ್ಳಬೇಕು’ ಎಂದು ಕರೆ ನೀಡಿದ್ದಾರೆ. ಲಸಿಕೆ ವಿರೋಧಿಸಿರುವ ಮುಸ್ಲಿಂ ಪಂಡಿತರ ಹೇಳಿಕೆಗೆ ಬಿಜೆಪಿ ಕೂಡ ವಿರೋಧ ವ್ಯಕ್ತಪಡಿಸಿದೆ.