ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಎದೆನೋವು ಹಾಗೂ ಉಸಿರಾಟ ಸಮಸ್ಯೆಯಿಂದ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಸಿಸಿಯು ವಿಭಾಗದಲ್ಲಿ ಧನ್ಕರ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.
ನವದೆಹಲಿ(ಮಾ.09) ಭಾರತದ ಉಪರಾಷ್ಟ್ರಪತಿ, ತಮ್ಮ ಖಡಕ್ ಮಾತುಗಳು ಮೂಲಕ ಜನಪ್ರಿಯವಾಗಿರುವ ಜಗದೀಪ್ ಧನ್ಕರ್ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಧನ್ಕರ್ ಇಂದು ಮುಂಜಾನೆ ಎದೆನೋವಿನಿಂದ ಬಳಲಿದ್ದಾರೆ. ಇದೇ ವೇಳ ಉಸಿರಾಟದ ಸಮಸ್ಯೆಯೂ ಎದುರಾಗಿದೆ. ಜಗದೀಪ್ ಧನ್ಕರ್ ಆರೋಗ್ಯ ಕ್ಷೀಣಿಸುತ್ತಿದ್ದಂತೆ ತಕ್ಷಣವೇ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಏಮ್ಸ್ ಆಸ್ಪತ್ರೆಯ ಕಾರ್ಡಿಯಲಜಿ ವಿಭಗದ ಮುಖ್ಯಸ್ಥರಾದ ಡಾ.ರಾಜೀವ್ ನಾರಂಗ್ ನೇತೃತ್ವದ ತಂಡ ಧನ್ಕರ್‌ಗ ಚಿಕಿತ್ಸೆ ನೀಡುತ್ತಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಎದೆನೋವು ಹಾಗೂ ಉಸಿರಾಟದ ಸಮಸ್ಯೆ ತೀವ್ರವಾಗಿದ್ದ ಕಾರಣ ಜಗದೀಪ್ ಧನ್ಕರ್ ಅವರನ್ನು ಕ್ರಿಟಿಕಲ್ ಕೇರ್ ಯೂನಿಟ್(ಸಿಸಿಯು)ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಧನ್ಕರ್ ಆರೋಗ್ಯ ಸ್ಥಿರವಾಗಿದೆ. ಚಿಕಿತ್ಸೆ ಮುಂದುವರಿಸಲಾಗಿದೆ ಎಂದಿದ್ದಾರೆ. ಇಂದು ಬೆಳಗ್ಗೆ 2 ಗಂಟೆ ಸುಮಾರಿಗೆ ಧನ್ಕರ್ ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ.
ನ್ಯೂಕ್ಲಿಯರ್ ಶಕ್ತಿಗಿಂತ ಆಧ್ಯಾತ್ಮಿಕ ಶಕ್ತಿ ದೊಡ್ಡದು: ಉಪರಾಷ್ಟ್ರಪತಿ ಜಗದೀಪ ಧನಕರ್
73 ವರ್ಷದ ಜಗದೀಪ್ ಧನ್ಕರ್ ಆಸ್ಪತ್ರೆ ದಾಖಲಾಗುತ್ತಿದ್ದಂತೆ ಹಲವು ನಾಯಕರು ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಧನ್ಕರ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡದ ಜೊತೆ ಮೋದಿ ಮಾತುಕತೆ ನಡೆಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ನರೇಂದ್ರ ಮೋದಿ, ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಆರೋಗ್ಯ ವಿಚಾರಿಸಿದ್ದೇನೆ. ಜಗದೀಪ್ ಧನ್ಕರ್ ಉತ್ತಮ ಆರೋಗ್ಯಕ್ಕಾಗಿ ಹಾಗೂ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಜಗದೀಪ್ ಧನ್ಕರ್ ಮುಂದೆ ಕಾನೂನು, ಸಂಸತ್ತಿನ ಒಳಗೆ ನಡೆದುಕೊಳ್ಳಬೇಕಾದ ರೀತಿ, ಶಿಸ್ತಿನ ವಿಚಾರದಲ್ಲಿ ವಾದ ಮಾಡಲು ಸಾಧ್ಯವಿಲ್ಲ.. ಕಾರಣ ಮೂಲತಃ ಅಡ್ವೋಕೇಟ್ ಆಗಿರುವ ಧನ್ಕರ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಜನತಾ ದಳ ದಿಂದ ರಾಜಕೀಯ ಆರಂಭಿಸಿದ ಧನ್ಕರ್ ಬಳಿಕ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದರು. 2003ರಲ್ಲಿ ಜಗದೀಪ್ ಧನ್ಕರ್ ಬಿಜೆಪಿ ಪಕ್ಷ ಸೇರಿಕೊಂಡರು. 2008ರಲ್ಲಿ ಜಗದೀಪ್ ಧನ್ಕರ್, ವಿಧಾನಸಭಾ ಚುನಾವಣೆಗೆ ಬಿಜೆಪಿಯ ಪ್ರಚಾರ ಸಮಿತಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ 2016ರಲ್ಲಿ ಬಿಜೆಪಿ ಕಾನೂನು ಹಾಗೂ ವ್ಯವಹಾರ ಸಮಿತಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
2019ರಿಂದ 2022ರ ವರೆಗೆ ಪಶ್ಚಿಮ ಬಂಗಾಳದ ರಾಜ್ಯಪಾಲಾರಾಗಿ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ಜಗದೀಪ್ ಧನ್ಕರ್ ಅವರ ಕಾರ್ಯವೈಖರಿ ದೇಶವೇ ಮೆಚ್ಚಿಕೊಂಡಿತ್ತು. ಇದೇ ವೇಳೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಹಾಗೂ ಸರ್ಕಾರದ ವಿರುದ್ದ ಸಮರವನ್ನೇ ಸಾರಿದ್ದರು. ರಾಜ್ಯಪಾಲರು ಹಾಗೂ ಪಶ್ಚಿಮ ಬಂಗಾಳ ಸರ್ಕಾರ ನಡುವಿನ ತಿಕ್ಕಾಟ ಜೋರಾಗಿತ್ತು. 2022ರಲ್ಲಿ ಭಾರತದ ಉಪರಾಷ್ಟ್ರಪತಿಗಳಾಗಿ ಬಿಜೆಪಿ ದೊಡ್ಡ ಜವಬ್ದಾರಿ ನೀಡಿತು.
