ನವದೆಹಲಿ(ಜ.25): ಮತದಾರರ ಫೋಟೋ ಗುರುತಿನ ಚೀಟಿ (ಎಪಿಕ್‌)ಯ ಡಿಜಿಟಲ್‌ ಆವೃತ್ತಿಯನ್ನು ಕೇಂದ್ರ ಚುನಾವಣಾ ಆಯೋಗ ರಾಷ್ಟ್ರೀಯ ಮತದಾರರ ದಿನವಾದ ಸೋಮವಾರ ಲೋಕಾರ್ಪಣೆಗೊಳಿಸಲಿದೆ.

ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್‌ ಅವರು ಐವರು ನವಮತದಾರರಿಗೆ ಇ- ಎಪಿಕ್‌ಗಳನ್ನು ವಿತರಿಸುವ ಮೂಲಕ ಇದಕ್ಕೆ ಚಾಲನೆ ನೀಡಲಿದ್ದಾರೆ. ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಕೊಳ್ಳಲು ನವೆಂಬರ್‌, ಡಿಸೆಂಬರ್‌ನಲ್ಲಿ ಮೊಬೈಲ್‌ ಸಂಖ್ಯೆ ಸಮೇತ ಫಾಮ್‌ರ್‍ ಸಂಖ್ಯೆ 6 ಸಲ್ಲಿಸಿರುವವರು ಸೋಮವಾರದಿಂದ ಜ.31ರವರೆಗೆ ಹಾಗೂ ಮತದಾರರ ಚೀಟಿಯಲ್ಲಿ ಹೆಸರು ಹೊಂದಿರುವ, ಮೊಬೈಲ್‌ ಸಂಖ್ಯೆ ನೋಂದಣಿ ಮಾಡಿಸಿರುವ ಮತದಾರರು ಫೆ.1ರಿಂದ ಡಿಜಿಟಲ್‌ ವೋಟರ್‌ ಐಡಿಯನ್ನು ಪಡೆಯಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಆಯೋಗದ ವೆಬ್‌ಸೈಟ್‌ಗಳಾದ voterportal.eci.gov.in ಹಾಗೂ nvsp.in ಮತ್ತು ಮತದಾರರ ಸಹಾಯವಾಣಿ ಆ್ಯಪ್‌ ಮೂಲಕ ಡಿಜಿಟಲ್‌ ವೋಟರ್‌ ಐಡಿಯನ್ನು ಡೋನ್‌ಲೋಡ್‌ ಮಾಡಿಕೊಳ್ಳಬಹುದು.

ಇದು ಪಿಡಿಎಫ್‌ ರೂಪದಲ್ಲಿ ಲಭ್ಯವಿದ್ದು, ತಿರುಚಲು ಆಗುವುದಿಲ್ಲ. ಡಿಜಿಲಾಕರ್‌ ಆ್ಯಪ್‌ನಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ಬೇಕೆಂದಾಗ ಕಂಪ್ಯೂಟರ್‌ ಸಹಾಯದಿಂದ ಪ್ರಿಂಟ್‌ ತೆಗೆದುಕೊಳ್ಳಬಹುದು.

ಡಿಜಿಟಲ್‌ ವೋಟರ್‌ ಐಡಿಯಲ್ಲಿ ಎರಡು ಕ್ಯುಆರ್‌ ಕೋಡ್‌ಗಳು ಇರುತ್ತವೆ. ಎರಡರಲ್ಲೂ ಮತದಾರರಿಗೆ ಸಂಬಂಧಿಸಿದ ವಿವರಗಳು ಲಭ್ಯವಿರುತ್ತವೆ. ಏಪ್ರಿಲ್‌- ಮೇನಲ್ಲಿ ನಡೆಯಬೇಕಿರುವ ಪಂಚರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ದೇಶಾದ್ಯಂತ ಡಿಜಿಟಲ್‌ ಎಪಿಕ್‌ ಲಭ್ಯವಿರುತ್ತದೆ ಎಂದು ಮೂಲಗಳು ತಿಳಿಸಿವೆ.