ನಾವು ಅದೆಷ್ಟೇ ಜಾಗರೂಕರಾಗಿದ್ದರೂ ಸಾವು ಎಂಬುವುದು ನಾವಂದುಕೊಳ್ಳದ ಸಮಯದಲ್ಲಿ ಬರುತ್ತದೆ ಎಂಬುವುದಕ್ಕೆ ತಮಿಳುನಾಡಿನಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ಹೌದು ಇಲ್ಲಿನ ಅಪಘಾತದ ವಿಡಿಯೋ ಒಂದು ಭಾರೀ ವೈರಲ್ ಆಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ.
ಚೆನ್ನೈ(ಜೂ.08): ತಮಿಳುನಾಡಿನಿಂದ ಶಾಕಿಂಗ್ ವಿಡಿಯೋ ಒಂದು ಬೆಳಕಿಗೆ ಬಂದಿದೆ. ಹೌದು ಸಾವು ಹೇಗೆ ಬೇಕಾದರೂ ಸಂಭವಿಸಬಹುದು ಎಂಬುವುದಕ್ಕೆ ಇದೊಂದು ಅತ್ಯುತ್ತಮ ನಿದರ್ಶನವಾಗಿದೆ. ಚಲಿಸುತ್ತಿದ್ದ ಟ್ರಕ್‌ನ ಟೈರ್ ಇದ್ದಕ್ಕಿದ್ದಂತೆ ಬೇರ್ಪಟ್ಟು ರಸ್ತೆಯಲ್ಲಿದ್ದ ವ್ಯಕ್ತಿಯ ಮೇಲೆ ಬಿದ್ದಿದೆ. ಗಾಯಗೊಂಡ 45 ವರ್ಷದ ವ್ಯಕ್ತಿ ಕೆಲ ಸಮಯದ ಬಳಿಕ ಆಸ್ಪತ್ರೆಯಲ್ಲಿ ನಿಧನರಾದರು. ಈ ಘಟನೆ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ನಡೆದಿದೆ. ಅಪಘಾತದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೃತರು ಆಟೋ ಚಾಲಕರಾಗಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಪಕ್ಕದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ 36 ಸೆಕೆಂಡ್ ವೀಡಿಯೋ ಬೆಚ್ಚಿ ಬೀಳಿಸುವಂತಿದೆ. ಒಂದೆಡೆ ರಸ್ತೆ ಬದಿಯಲ್ಲಿ ಸ್ಕೂಟಿ ನಿಂತಿದ್ದು, ಕೆಲವರು ತುಂಬಾ ಆರಾಮವಾಗಿ ರಸ್ತೆ ದಾಟುತ್ತಿದ್ದಾರೆ. ಅಷ್ಟರಲ್ಲಿ ಒಬ್ಬ ವ್ಯಕ್ತಿ ರಸ್ತೆಯ ಬದಿಯಲ್ಲಿ ಬಹಳ ಸರಾಗವಾಗಿ ಮುಂದೆ ಸಾಗುತ್ತಿದ್ದು, ಒಂದು ಕ್ಷಣ ನಿಂತಿದ್ದಾನೆ. ಈ ವೇಳೆ ಹಿಂದಿನಿಂದ ಟೈರ್ ಆತನೆಡೆ ತೂರಿ ಬಂದಿದೆ. ಚಲಿಸುತ್ತಿದ್ದ ಟ್ರಕ್‌ನಿಂದ ಈ ಟೈರ್ ಇದ್ದಕ್ಕಿದ್ದಂತೆ ಬೇರ್ಪಟ್ಟು ಆತನನ್ನು ಗುದ್ದಿದೆ. ಡಿಕ್ಕಿಯ ರಭಸ ಎಷ್ಟು ಅಪಾಯಕಾರಿಯಾಗಿತ್ತೆಂದರೆ ಆತ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.
ಅಪಘಾತದ ಕುರಿತು ಪೊಲೀಸರು ತನಿಖೆ
ಪೊಲೀಸ್ ಅಧಿಕಾರಿಗಳ ಪ್ರಕಾರ, ಮೃತರನ್ನು ತಮಿಳುನಾಡಿನ ಶ್ರೀಪೆರಂಬದೂರ್ ಪ್ರದೇಶದಲ್ಲಿ ಆಟೋ ರಿಕ್ಷಾ ಚಾಲಕ ಮುರಳಿ ಎಂದು ಗುರುತಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಘಟನೆ ಜೂನ್ 1 ರಂದು ನಡೆದಿದೆ. ಅಪಘಾತದ ನಂತರ ಮುರಳಿ ಅವರನ್ನು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪ್ರಸ್ತುತ, ಪೊಲೀಸರು ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಘಟನೆಯ ಬಗ್ಗೆ ಟ್ರಕ್ ಚಾಲಕನನ್ನು ವಿಚಾರಣೆ ನಡೆಸುತ್ತಿದ್ದಾರೆ.
ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಅಂಕಿಅಂಶಗಳು
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಬಿಡುಗಡೆ ಮಾಡಿದ ಹೊಸ ವರದಿಯ ಪ್ರಕಾರ, 2020 ರಲ್ಲಿ ತಮಿಳುನಾಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿವೆ. ಆದರೆ, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಸಾವು ನೋವು ಸಂಭವಿಸಿದೆ.