ಅಮೇಜಾನ್‌ನಲ್ಲಿ ಎಕ್ಸ್‌ಬಾಕ್ಸ್ ಆರ್ಡರ್ ಮಾಡಿದ ದಂಪತಿಗೆ ಪಾರ್ಸೆಲ್ ಜೊತೆ 'ನಾಗರಹಾವು' ಫ್ರೀ!
ಬೆಂಗಳೂರು ದಂಪತಿ ಅಮೇಜಾನ್‌ನಿಂದ ತಾವು ಆರ್ಡರ್ ಮಾಡಿದ ಪಾರ್ಸೆಲ್ ತೆರೆಯಲು ಹೋದಾಗ ಬುಸ್ ಎಂದು ಹೊರಳಾಡಿತ್ತು ನಾಗರಹಾವು! ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.
ಈಗೀಗ ಅಮೇಜಾನ್ ಕಾಡಿನಿಂದಲೂ ಡೆಲಿವರಿ ಆರಂಭಿಸಿದೆಯಾ? ಪಾರ್ಸೆಲ್‌ನಲ್ಲಿ ಹಾವು, ಚೇಳು, ಹುಳ ಹುಪ್ಪಟೆ ಆರ್ಡರ್ ಮಾಡಬಹುದಾ? ಹೀಗೊಂದು ಅನುಮಾನ ಹುಟ್ಟೋಕೆ ಕಾರಣ ವೈರಲ್ ಆಗಿರುವ ವಿಡಿಯೋ.
ಅಮೇಜಾನ್‌ನಲ್ಲಿ ಎಕ್ಸ್ ಬಾಕ್ಸ್ ಆರ್ಡರ್ ಮಾಡಿದ್ದ ಬೆಂಗಳೂರಿನ ದಂಪತಿಗೆ ಪಾರ್ಸೆಲ್ ಜೊತೆ ನಾಗರಹಾವೂ ಹೋಂ ಡೆಲಿವರಿ ಆಗಿದೆ! ಜೋಡಿಯ ಪುಣ್ಯಕ್ಕೆ ಹಾವು ಪ್ಯಾಕೇಜಿಂಗ್ ಟೇಪ್‌ಗೆ ಅಂಟಿಕೊಂಡಿದ್ದರಿಂದ ಅದರಿಂದ ಹೊರ ಬರಲಾಗದೆ ಅಲ್ಲಿಯೇ ಒದ್ದಾಡುತ್ತಿತ್ತು.
ಈ ಜೋಡಿ ಘಟನೆಯ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ನಾವು 2 ದಿನಗಳ ಹಿಂದೆ ಅಮೆಜಾನ್‌ನಿಂದ ಎಕ್ಸ್‌ಬಾಕ್ಸ್ ನಿಯಂತ್ರಕವನ್ನು ಆರ್ಡರ್ ಮಾಡಿದ್ದೇವೆ ಮತ್ತು ಪ್ಯಾಕೇಜ್‌ನಲ್ಲಿ ಜೀವಂತ ಹಾವನ್ನು ಸ್ವೀಕರಿಸಿದ್ದೇವೆ. ಪ್ಯಾಕೇಜ್ ಅನ್ನು ನೇರವಾಗಿ ವಿತರಣಾ ಪಾಲುದಾರರು ನಮಗೆ ಹಸ್ತಾಂತರಿಸಿದ್ದಾರೆ (ಹೊರಗೆ ಬಿಟ್ಟಿಲ್ಲ) ನಾವು ಸರ್ಜಾಪುರ ರಸ್ತೆಯಲ್ಲಿ ವಾಸಿಸುತ್ತಿದ್ದೇವೆ ಮತ್ತು ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದೇವೆ. ಜೊತೆಗೆ ನಾವು ಅದಕ್ಕೆ ಪ್ರತ್ಯಕ್ಷದರ್ಶಿಗಳನ್ನು ಹೊಂದಿದ್ದೇವೆ' ಎಂದು ಅವರು ಬರೆದಿದ್ದಾರೆ.
ಕನ್ನಡದ ಖ್ಯಾತ ಸಾಹಿತಿಯ ಮರಿ ಮೊಮ್ಮಗಳು ಅದಿತಿ ರಾವ್ ಹೈದರಿ; ಸರ್‌ನೇಮ್‌ಗಳ ವೈಶಿಷ್ಠ್ಯತೆಯೇನು?
'ಅದೃಷ್ಟವಶಾತ್, ಅದು (ಹಾವು) ಪ್ಯಾಕೇಜಿಂಗ್ ಟೇಪ್‌ಗೆ ಅಂಟಿಕೊಂಡಿತ್ತು ಮತ್ತು ನಮ್ಮ ಮನೆ ಅಥವಾ ಅಪಾರ್ಟ್ಮೆಂಟ್ನಲ್ಲಿ ಯಾರಿಗೂ ಹಾನಿ ಮಾಡಲಿಲ್ಲ. ಅಪಾಯದ ಹೊರತಾಗಿಯೂ, Amazon ನ ಗ್ರಾಹಕ ಬೆಂಬಲವು ನಮ್ಮನ್ನು 2 ಗಂಟೆಗಳ ಕಾಲ ಕಾಯಿಸಿತು. ಹೀಗಾಗಿ, ಪರಿಸ್ಥಿತಿಯನ್ನು ನಾವೇ ನಿಭಾಯಿಸಿದೆವು,' ಎಂದು ಜೋಡಿ ತಮಗೆದುರಾದ ಅಪಾಯ ಹಾಗೂ ಅಮೇಜಾನ್‌ನ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದ್ದಾರೆ.
ಹಣ ಮರುಪಾವತಿ
ಈ ಘಟನೆಯ ಬಳಿಕ ಅಮೇಜಾನ್ ದಂಪತಿಗೆ ಪಾರ್ಸೆಲ್ ಹಣವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಿದೆ. ಆದರೆ, ವಿಷಪೂರಿತ ಹಾವಿನೊಂದಿಗೆ ಅವರ ಜೀವವನ್ನು ಅಪಾಯಕ್ಕೆ ತಂದೊಡ್ಡಿದ್ದಕ್ಕಾಗಿ ಅಮೇಜಾನ್‌ನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಕನಿಷ್ಠಪಕ್ಷ ಅಧಿಕೃತವಾಗಿ ಕ್ಷಮೆಯಾಚನೆ ಇಲ್ಲ. 'ಇದು ಸ್ಪಷ್ಟವಾಗಿ ಅಮೆಜಾನ್‌ನ ನಿರ್ಲಕ್ಷ್ಯ ಮತ್ತು ಅವರ ಕಳಪೆ ಸಾರಿಗೆ/ಗೋದಾಮಿನ ನೈರ್ಮಲ್ಯ ಮತ್ತು ಮೇಲ್ವಿಚಾರಣೆಯಿಂದ ಉಂಟಾದ ಸುರಕ್ಷತಾ ಉಲ್ಲಂಘನೆಯಾಗಿದೆ. ಹೊಣೆಗಾರಿಕೆ ಎಲ್ಲಿದೆ? ಸುರಕ್ಷತೆಯಲ್ಲಿ ಅಂತಹ ಗಂಭೀರ ಲೋಪವೇ?' ಎಂದು ದಂಪತಿ ಪ್ರಶ್ನಿಸಿದ್ದಾರೆ.
ಅಮೇಜಾನ್ ಪ್ರತಿಕ್ರಿಯೆ
ವೀಡಿಯೊಗೆ ಪ್ರತಿಕ್ರಿಯೆಯಾಗಿ, ಅಮೆಜಾನ್ ಟ್ವೀಟ್ ಮಾಡಿದ್ದು, 'ಅಮೆಜಾನ್ ಆರ್ಡರ್‌ನಲ್ಲಿ ನೀವು ಹೊಂದಿರುವ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ಇದನ್ನು ಪರಿಶೀಲಿಸಲು ನಾವು ಬಯಸುತ್ತೇವೆ. ದಯವಿಟ್ಟು ಅಗತ್ಯವಿರುವ ವಿವರಗಳನ್ನು ಇಲ್ಲಿ ಹಂಚಿಕೊಳ್ಳಿ ಮತ್ತು ನಮ್ಮ ತಂಡವು ನವೀಕರಣದೊಂದಿಗೆ ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತದೆ,' ಎಂದಿದೆ.
ಅಂಬಾನಿ ಮಹಿಳೆಯರ ಕೈಗೆ ಮೆಹಂದಿ ಹಾಕೋ ವೀಣಾ ಚಾರ್ಜ್ ಮಾಡೋದೆಷ್ಟು?
ಹಾವನ್ನು ಸುರಕ್ಷಿತವಾಗಿ ಸಾರ್ವಜನಿಕರ ಕೈಗೆ ಸಿಗದಂತೆ ಕಾಡಿಗೆ ಬಿಡಲಾಗಿದೆ.
ದಂಪತಿ ಹಂಚಿಕೊಂಡ ಹಾವಿನ ವಿಡಿಯೋ ವೈರಲ್ ಆಗಿದ್ದು, ಹಲವರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. 'ಇತ್ತೀಚೆಗೆ ಅನ್ಲೈನ್ ಡೆಲಿವರಿಗಳ ಮೇಲೆ ನಂಬಿಕೆಯೇ ಹೋಗಿದೆ' ಎಂದೊಬ್ಬರು ಹೇಳಿದ್ದರೆ, 'ಎಕ್ಸ್ ಬಾಕ್ಸ್ ಆರ್ಡರ್ ಮಾಡಿದವರಿಗೆ ಬುಸ್ ಬಾಕ್ಸ್ ಬಂತು' ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.