Asianet Suvarna News Asianet Suvarna News

ಕಾರಿಗೆ ಒರಗಿದ ಎಂದು ಬಾಲಕನ ಒದ್ದು ಓಡಿಸಿದ ಮಾಲೀಕ: ಆಘಾತಕಾರಿ ವಿಡಿಯೋ ವೈರಲ್

ಬಾಲಕನೋರ್ವ ತನ್ನ ಕಾರಿಗೆ ಒರಗಿದ ಎಂದು ಕಾರಿನ ಮಾಲೀಕ, ಬಾಲಕನಿಗೆ ಒದ್ದು ದೂರ ಓಡಿಸಿದ ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದೆ. ಈ ಆಘಾತಕಾರಿ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Viral Video Car Owner kicking on chest of 6 year old boy for Leaning On his Car in Kerala Akb
Author
First Published Nov 4, 2022, 4:58 PM IST

ತಿರುವನಂತಪುರ: ಬಾಲಕನೋರ್ವ ತನ್ನ ಕಾರಿಗೆ ಒರಗಿದ ಎಂದು ಕಾರಿನ ಮಾಲೀಕ, ಬಾಲಕನಿಗೆ ಒದ್ದು ದೂರ ಓಡಿಸಿದ ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದೆ. ಈ ಆಘಾತಕಾರಿ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾರು ಚಾಲಕನ ವರ್ತನೆ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಕಾರೊಂದು ರಸ್ತೆಯ ಬದಿಯಲ್ಲಿ ನಿಂತಿದ್ದು, ಈ ವೇಳೆ ಪುಟ್ಟ ಬಾಲಕನೋರ್ವ ರಸ್ತೆ ಬದಿ ನಿಂತಿದ್ದ ಕಾರಿಗೆ ಒರಗಿದ್ದಾನೆ. ಈ ವೇಳೆ ಕಾರಿನಿಂದ ಇಳಿದು ಬಂದ ಕಾರಿನ ಮಾಲೀಕ ಬಾಲಕನಿಗೆ ನಿಂದಿಸಿ ಆತನ ಎದೆಗೆ ಕಾಲಿನಿಂದ ಒದ್ದಿದ್ದಾನೆ. ಈ ವೇಳ ಬಾಲಕ ಸುಮ್ಮನಾಗಿದ್ದು, ಕಾರಿನಿಂದ ದೂರ ಹೋಗಿ ನಿಂತಿದ್ದಾನೆ. ಈ ಬಾಲಕ ರಾಜಸ್ಥಾನದಿಂದ (Rajasthan) ಕೆಲಸ ಅರಸಿ ಕೇರಳಕ್ಕೆ ಬಂದಿರುವ ಕುಟುಂಬವೊಂದಕ್ಕೆ ಸೇರಿದವನಾಗಿದ್ದ. 

ಈ ಘಟನೆಯನ್ನು ನೋಡಿದ ಸ್ಥಳೀಯರು ಕೂಡಲೇ ಕಾರಿನತ್ತ (car) ಆಗಮಿಸಿದ್ದು, ಕಾರು ಮಾಲೀಕನನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ ಪ್ರಶ್ನಿಸಿದವರಿಗೆ ಏನೇನೋ ಸಬೂಬು ಹೇಳಿ ಕಾರು ಚಾಲಕ ಅಲ್ಲಿಂದ ಕಾರಿನೊಂದಿಗೆ ಕಾಲ್ಕಿತ್ತಿದ್ದಾನೆ. ಈ ದೃಶ್ಯ ಅಲ್ಲಿನ ಅಂಗಡಿಯೊಂದರಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಸಿಸಿಟಿವಿ ದೃಶ್ಯಾವಳಿಯನ್ನು (CCTV Footage) ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೊನ್ಯಂಪಲಂ ನಿವಾಸಿ ಶಿಹ್ಸಾದ್‌ ಎಂಬುವವನನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. 

ಈ ಘಟನೆ ನಡೆಯುವ ವೇಳೆ ಪ್ರತ್ಯಕ್ಷದರ್ಶಿಯಾಗಿದ್ದ ಯುವ ವಕೀಲನೋರ್ವ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ. ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿತ್ತು. ನಂತರ ಪೊಲೀಸರು ಆರೋಪಿ ಶಿಹ್ಸಾದ್‌ನನ್ನು (Shihshad) ಠಾಣೆಗೆ ಕರೆಸಿದ್ದಾರೆ. ಆದರೆ ನಂತರ ಆತನನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಇದು ಸ್ಥಳೀಯರನ್ನು ಕೆರಳಿಸಿತು. ಅಲ್ಲದೇ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿ ಸ್ಥಳೀಯ ನ್ಯೂಸ್ ಚಾನಲ್‌ಗಳಲ್ಲಿಯೂ ಈ ಬಗ್ಗೆ ಸುದ್ದಿ ಪ್ರಸಾರವಾಗಿತ್ತು. ಅಲ್ಲದೇ ಆರೋಪಿಯನ್ನು ಬಿಟ್ಟು ಕಳುಹಿಸಿದ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿತ್ತು.

ಹೊಸ ಕಿಯಾ ಸೆಲ್ಟೋಸ್‌ನಲ್ಲಿ ದೋಷ: ಬೇಸತ್ತು ವಾಹನಕ್ಕೆ ಬೆಂಕಿ ಇಟ್ಟ ಮಾಲೀಕರು

ಈ ಹಿನ್ನೆಲೆ ಪೊಲೀಸರು ಶುಕ್ರವಾರ ಬೆಳಗ್ಗೆ ಆತನನ್ನು ಮತ್ತೆ ಕಸ್ಟಡಿಗೆ ಪಡೆದಿದ್ದಾರೆ. ಈ ಬಗ್ಗೆ ಕೇರಳ ವಿಧಾನಸಭೆಯ ಸಭಾಪತಿ ಹಾಗೂ ತಲಸ್ಸೇರಿ ಶಾಸಕ (Thalassery MLA) ಎ.ಎನ್ ಶಂಶೀರ್ (AN Shamseer) ಅವರು ಪ್ರತಿಕ್ರಿಯಿಸಿದ್ದು, ಆರೋಪಿಯ ವಿರುದ್ಧ ಕೇಸು ದಾಖಲಿಸಲಾಗಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಅಲ್ಲದೇ ರಾಜ್ಯ ಶಿಕ್ಷಣ ಸಚಿವ ಸಿವನ್‌ಕುಟ್ಟಿ ಈ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಮಾನವೀಯತೆಯನ್ನು (humanity) ಅಂಗಡಿಯಿಂದ ಪಡೆಯಲು ಸಾಧ್ಯವಿಲ್ಲ. ಆರು ವರ್ಷದ ಕಂದನನ್ನು ಹೀಗೆ ಎದೆಗೆ ಒದ್ದು ಓಡಿಸಿದ ಅವನೆಂಥಾ ಕ್ರೂರಿ, ಆತನ ವಿರುದ್ಧ ಎಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ಇಂತಹ ಘಟನೆಗಳು ಯಾವತ್ತೂ ಮರುಕಳಿಸಬಾರದು ಎಂದು ಸಚಿವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ (Facebook post)ಹೇಳಿಕೊಂಡಿದ್ದಾರೆ. 

ಕಾರು ಡಿಕ್ಕಿ ಹೊಡೆದ ರಭಸಕ್ಕೆ ದೂರ ಚಿಮ್ಮಿದ ಮಹಿಳೆ: ಅಪಘಾತದ ದೃಶ್ಯ ವೈರಲ್

Follow Us:
Download App:
  • android
  • ios