ನವದೆಹಲಿ(ಮೇ.22): ಇತ್ತ ದೇಶದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರಿಸುತ್ತಿದ್ದರೆ, ಅತ್ತ ಸೋಶಿಯಲ್ ಮೀಡಿಯಾದಲ್ಲಿ SOS ಅಲರ್ಟ್, ಅಗತ್ಯವಿರುವವರಿಗೆ ಸಹಾಯ ಮಾಡಲು ದಾನ ಮಾಡುವ ಪೋಸ್ಟ್‌ಗಳು ಹರಿದಾಡುತ್ತಿವೆ. ಇಂತಹ ವಿಷಮ ಸ್ಥಿತಿಯಲ್ಲಿ ಅನೇಕ ಮಂದಿ ಮಾನವೀಯತೆ ಮೆರೆದು ಜನರ ಮನ ಗೆದ್ದಿದ್ದಾರೆ. ಗೊತ್ತು, ಪರಿಚಯ ಇಲ್ಲದೇ ಇರುವವರಿಗೆ ನೆರವು ನೀಡಲು ಅನೇಕ ಮಂದಿ ಮುಂದಾಗಿದ್ದಾರೆ. ಆದರೀಗ ಇವೆಲ್ಲದರ ನಡುವೆ ಗೃಹಿಣಿಯೊಬ್ಬರು ಆಕ್ಸಿಜನ್ ಸಪೋರ್ಟ್‌ ಜೊತೆ ಅಡುಗೆ ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಬಾರೀ ಚರ್ಚೆ ಹುಟ್ಟು ಹಾಕಿದೆ. 

ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ವೇಗವಾಗಿ ವೈರಲ್ ಆಗುತ್ತಿರುವ ಈ ಫೋಟೋದಲ್ಲಿ, ಮಹಿಳೆಯೊಬ್ಬರು ತಾನು ಖುದ್ದು ಆಕ್ಸಿಜನ್ ಕಾನ್ಸಂಟ್ರೇಟರ್ ಸಹಾಯದಿಂದ ಉಸಿರಾಡುತ್ತಿದ್ದರೂ, ಅಡುಗೆ ಕೋಣೆಯಲ್ಲಿ ನಿಂತು ಊಟ ತಯಾರಿಸುವುದರಲ್ಲಿ ತಲ್ಲೀನರಾಗಿರುವ ದೃಶ್ಯವಿದೆ. ಈ ಫೋಟೋಗೆ ನಿಸ್ವಾರ್ಥ ಪ್ರೀತಿ ಅಂದರೆ ತಾಯಿ. ಆಕೆ ತನ್ನ ಕರ್ತವ್ಯದಿಂದ ರಜೆ ಪಡೆಯುವುದಿಲ್ಲ ಎಂಬ ತಲೆಬರಹ ನೀಡಲಾಗಿದೆ.

ಈ ಫೋಟೋ ಮೂಲ ಯಾವುದೆಂಬ ಸ್ಪಷ್ಟನೆ ಇನ್ನೂ ಸಿಕ್ಕಿಲ್ಲ, ಹೀಗಿರುವಾಗಲೇ ಈ ಫೋಟೋ ಬಗೆಗಿನ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಳ್ಳಲಾರಂಭಿಸಿವೆ. ಹೀಗಿದ್ದರೂ ಇದು ಮಹಿಳೆ, ತಾಯಿ ಹಾಗೂ ಅವರ ಕರ್ತವ್ಯದ ಬಗ್ಗೆ ಬಹುದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ.

ಆಕ್ಸಿಜನ್ ಇದ್ದು ಗ್ಯಾಸ್‌ ಸ್ಟವ್‌ ಬಳಿ ಸುಳಿದಾಡುವುದು ಬಹುದೊಡ್ಡ ಅಪಾಯವಾಗಿರುವುದರಿಂದ ಅನೇಕ ಮಂದಿ ಈ ಫೋಟೋ ಬಗೆಗಿನ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಈ ಫೋಟೋ ಮೂಲಕ ಮಾತೃತ್ವವನ್ನು ವೈಭವೀಕರಿಸಲಾಗಿದ್ದು, ಇದು ಸರಿಯಲ್ಲ ಎಂದಿದ್ದಾರೆ. ಈ ನಡುವೆಯೂ ಅನೇಕ ಮಂದಿ ಖುದ್ದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ತಾಯಂದಿರು ಅನಾರೋಗ್ಯಕ್ಕೀಡಾದಾಗ ತಮ್ಮ ಬಗ್ಗೆ ಯೋಚಿಸಿ ಎಂದು ಅವರನ್ನು ಓಲೈಸುವುದು ಅದೆಷ್ಟು ಕಷ್ಟ ಎಂಬುವುದನ್ನು ಹೇಳಿದ್ದಾರೆ.