ನಟ ವಿಜಯ್ ಅವರ ಟಿವಿಕೆ ಪಕ್ಷವು ತಮಿಳುನಾಡು ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ, ಬಹುಮತದ ಕೊರತೆಯಿಂದಾಗಿ ಸರ್ಕಾರ ರಚಿಸಲು ಡಿಎಂಕೆ ಅಥವಾ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಚೆನ್ನೈ (ಮೇ.4): ವಿಜಯ ಅನ್ನೋದು ಅವರ ಹೆಸರಿನಲ್ಲೇ ಇದೆ. ಸೋಮವಾರ ಹೊರಬೀಳುತ್ತಿರುವ ಆರಂಭಿಕ ಟ್ರೆಂಡ್‌ಗಳ ಪ್ರಕಾರ, ನಟ-ರಾಜಕಾರಣಿ ವಿಜಯ್ ತಮಿಳುನಾಡಿನಲ್ಲಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ "ಅಸಾಧ್ಯವಾದುದನ್ನು" ಸಾಧ್ಯ ಮಾಡಿದ್ದಾರೆ. ಟಿವಿಕೆ ಪಕ್ಷವು "ಯಾರ ಬೆಂಬಲವೂ ಇಲ್ಲದೆ" ಸರ್ಕಾರ ರಚಿಸುವ ವಿಶ್ವಾಸ ಹೊಂದಿದ್ದರೂ, 234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾದ 118 ರ ಗಡಿಯನ್ನು ದಾಟುವುದು ಅನುಮಾನ ಎನ್ನಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರಚಿಸಲು ವಿಜಯ್‌ಗೆ ಮಿತ್ರಪಕ್ಷಗಳ ಬೆಂಬಲ ಅನಿವಾರ್ಯವಾಗಬಹುದು.
ಈಗಾಗಲೇ ವಿಜಯ್ ಪಕ್ಷದ ನಾಯಕರು ಡಿಎಂಕೆ ಜೊತೆಯಲ್ಲಿರುವ ಸಣ್ಣ ಸಣ್ಣ ಮಿತ್ರ ಪಕ್ಷಗಳು ಹಾಗೂ ಎಐಡಿಎಂಕೆಯಲ್ಲಿರುವ ನಾಯಕರೊಂದಿಗೆ ಮಾತನಾಡಲು ಆರಂಭಿಸಿದ್ದಾರೆ. ಟಿವಿಕೆ ಪಕ್ಷದಲ್ಲಿ ಈಗಾಗಲೇ ಎಐಡಿಎಂಕೆಯ ಸಾಕಷ್ಟು ನಾಯಕರು ಇರುವ ಕಾರಣ, ಎಐಡಿಎಂಕೆ ಪಕ್ಷದಿಂದ ಕೆಲವು ನಾಯಕರ ಬೆಂಬಲದೊಂದಿಗೆ ಸ್ವತಂತ್ರ ಸರ್ಕಾರ ರಚಿಸುವ ಇರಾದೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೆರವು ಪಡೆಯುವ ಉದ್ದೇಶವು ಅವರಲ್ಲಿರುವ ಸಾಧ್ಯತೆ ಇದೆ.
ಚುನಾವಣಾ ಪೂರ್ವದಲ್ಲಿ, ಟಿವಿಕೆ ಪಕ್ಷವು ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮತ್ತು ಡಿಎಂಕೆ ಎರಡರೊಂದಿಗೂ ಮೈತ್ರಿಯನ್ನು ಸ್ಪಷ್ಟವಾಗಿ ನಿರಾಕರಿಸಿತ್ತು. ಭ್ರಷ್ಟ ದ್ರಾವಿಡ ರಾಜಕಾರಣದಿಂದ ಮುಕ್ತಿ ನೀಡುವುದಾಗಿ ಪ್ರಚಾರ ಮಾಡಿತ್ತು. ಆದರೂ, ಬಹುಮತ ಪಡೆಯಲು ಸಣ್ಣ ದ್ರಾವಿಡ ಪಕ್ಷಗಳ ಬೆಂಬಲ ಇವರಿಗೆ ಬೇಕಾಗಬಹುದು. ಏನೇ ಇರಲಿ, ಈ 'ವಿಜಯ್ ಅಲೆ' ತಮಿಳುನಾಡು ರಾಜಕೀಯದಲ್ಲಿ ಒಂದು ಮಹತ್ವದ ಕ್ಷಣವಂತೂ ಹೌದು. ತಮಿಳುನಾಡಿಗೆ ಎಂಜಿಆರ್ ಅಂತಹ ಸಿನಿಮಾ ತಾರೆಗಳನ್ನು ಆಯ್ಕೆ ಮಾಡಿದ ದೀರ್ಘ ಇತಿಹಾಸವಿದೆ. ಆದರೆ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರಂತಹ ದಿಗ್ಗಜರು ತಮ್ಮ ಅಭಿಮಾನಿಗಳನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದರು. ಆದರೆ ವಿಜಯ್ ತಮ್ಮ ರ್‍ಯಾಲಿಗಳಲ್ಲಿ ಭಾರಿ ಜನಸಂದಣಿಯನ್ನು, ವಿಶೇಷವಾಗಿ ಯುವಕರು ಮತ್ತು ನಗರ ಪ್ರದೇಶದ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯ್ ಪರವಾಗಿ ಯಾವುದು ಕೆಲಸ ಮಾಡಿದೆ ಎಂದು ಈಗಲೇ ಅಳೆಯುವುದು ಕಷ್ಟವಾದರೂ, ಡಿಎಂಕೆಗೆ ಹೋಗಬೇಕಿದ್ದ ದಲಿತ ಮತ್ತು ಅಲ್ಪಸಂಖ್ಯಾತ ಕ್ರಿಶ್ಚಿಯನ್ ಮತಗಳ ದೊಡ್ಡ ಪಾಲನ್ನು ಅವರು ಸೆಳೆದಿದ್ದಾರೆ ಅನ್ನೋದು ಕಾಣುತ್ತದೆ. ಅಲ್ಲದೆ, ವೆಳ್ಳಾಲರ್ ಸಮುದಾಯಕ್ಕೆ ಸೇರಿದ ವಿಜಯ್, ಆಡಳಿತ ವಿರೋಧಿ ಮತಗಳ ಲಾಭವನ್ನು ಪಡೆದಿದ್ದಾರೆ. ಈ ಮತಗಳು ಒಂದು ವೇಳೆ ವಿಜಯ್ ಇಲ್ಲದಿದ್ದರೆ ಎಐಎಡಿಎಂಕೆ ಪಾಲಾಗುತ್ತಿದ್ದವು. ಆದರೆ ದೊಡ್ಡ ಪ್ರಶ್ನೆಯೆಂದರೆ, ತಾವು ಯಾರ ವಿರುದ್ಧ ಪ್ರಚಾರ ಮಾಡಿದ್ದಾರೋ ಅದೇ ದ್ರಾವಿಡ ಪಕ್ಷಗಳೊಂದಿಗೆ ವಿಜಯ್ ಕೈಜೋಡಿಸುತ್ತಾರೆಯೇ ಅನ್ನೋದು..
ತಮಿಳುನಾಡು ಫಲಿತಾಂಶ: ವಿಜಯ್ ಮುಂದಿರುವ ಆಯ್ಕೆಗಳು
ಸನ್ನಿವೇಶ 1: ವಿಜಯ್ ಅವರು ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳಬಹುದು. ಈ ಹಿಂದೆ ಎಐಎಡಿಎಂಕೆ ಚುನಾವಣಾ ಪೂರ್ವ ಮೈತ್ರಿಗಾಗಿ ಟಿವಿಕೆಯನ್ನು ಆಹ್ವಾನಿಸಿತ್ತು. ಆದರೆ, ಅರ್ಧಕ್ಕೂ ಹೆಚ್ಚು ಸೀಟುಗಳ ಬೇಡಿಕೆ ಮತ್ತು ವಿಜಯ್ ಅವರನ್ನೇ ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂಬ ಟಿವಿಕೆ ಷರತ್ತಿನಿಂದಾಗಿ ಮಾತುಕತೆ ವಿಫಲವಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಎಐಎಡಿಎಂಕೆ ವಿಜಯ್ ಜೊತೆ ಕೈಜೋಡಿಸಲು ಸಿದ್ಧವಿರಬಹುದು.
51 ವರ್ಷದ ವಿಜಯ್ ಅವರು ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಜೊತೆ ಕೈಜೋಡಿಸುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ ಪ್ರಚಾರದ ವೇಳೆ ಅವರು ಡಿಎಂಕೆ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದರು. ಡಿಎಂಕೆ ಟಿವಿಕೆಯ "ರಾಜಕೀಯ ಶತ್ರು" ಮತ್ತು ಬಿಜೆಪಿ "ವೈಚಾರಿಕ ಶತ್ರು" ಎಂದು ವಿಜಯ್ ಸ್ಪಷ್ಟವಾಗಿ ಹೇಳಿದ್ದರು. ಅಷ್ಟೇ ಅಲ್ಲದೆ, ಡಿಎಂಕೆ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ, ಸೋತ ನಂತರ ಭ್ರಷ್ಟಾಚಾರ ಪ್ರಕರಣಗಳಿಂದ ಬಚಾವಾಗಲು ಸ್ಟಾಲಿನ್ ಪ್ರಧಾನಿ ಮೋದಿ ಪಾದಕ್ಕೆ ಬೀಳುತ್ತಾರೆ ಎಂದೂ ಆರೋಪಿಸಿದ್ದರು.
ಸನ್ನಿವೇಶ 2: ಮೇಲೆ ತಿಳಿಸಿದಂತೆ, ವಿಜಯ್ ಬಿಜೆಪಿಯನ್ನು ತನ್ನ "ವೈಚಾರಿಕ ಶತ್ರು" ಎಂದು ಕರೆದಿದ್ದಾರೆ. ಆದ್ದರಿಂದ, ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳಬೇಕಾದರೆ ಮೊದಲು ಬಿಜೆಪಿಯನ್ನು ಕೈಬಿಡುವಂತೆ ಅವರು ಷರತ್ತು ಹಾಕಬಹುದು. ಆದರೆ ಎಐಎಡಿಎಂಕೆಯ ಚದುರಿದ ಬಣಗಳನ್ನು ಒಂದುಗೂಡಿಸಲು ಶ್ರಮಿಸಿದ ಬಿಜೆಪಿಯನ್ನು ಬಿಡುವುದು ಎಐಎಡಿಎಂಕೆಗೆ ಅಷ್ಟು ಸುಲಭವಲ್ಲ.


