ಹಿಂದುಗಳು ವಿಶಾಲ ಹೃದಯಿಗಳು, ರಾಮ-ಸೀತೆಯ ನಾಡಲ್ಲಿ ಹುಟ್ಟಿದ್ದಕ್ಕೆ ನನಗೆ ಹೆಮ್ಮೆ ಇದೆ: ಜಾವೇದ್ ಅಖ್ತರ್
Javed Akhtar ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಾವೇದ್ ಅಖ್ತರ್, ಭಾರತದಲ್ಲಿ ಪ್ರಜಾಪ್ರಭುತ್ವ ಉಳಿದಿರುವುದು ಹಿಂದೂಗಳಿಂದಲೇ ಎಂದು ಹೇಳಿದ್ದಾರೆ. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯ ವಿಚಾರದಲ್ಲಿ ನಾವು ಕುಸಿಯುತ್ತಿದ್ದೇವೆ ಎಂದೂ ಎಚ್ಚರಿಸಿದ್ದಾರೆ.

ಮುಂಬೈ (ನ.10): ಉದಾರವಾದಿ ಮತ್ತು ಪ್ರಗತಿಪರ ಚಿಂತನೆಗಳಿಗೆ ಹೆಸರಾದ ಹಿರಿಯ ಸಾಹಿತಿ ಜಾವೇದ್ ಅಖ್ತರ್, ಹಿಂದೂ ಸಮುದಾಯವನ್ನು ಅಪಾರವಾಗಿ ಶ್ಲಾಘಿಸಿದ್ದಾರೆ. "ಭಾರತದಲ್ಲಿ ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯದಿಂದಾಗಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ' ಎಂದು ಹೇಳಿದ್ದಾರೆ. ಮುಂಬೈನಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹಿರಿಯ ಕವಿ ಈ ಮಾತು ಹೇಳಿದ್ದಾರೆ. ಸಮಾಜದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಬಗ್ಗೆಯೂ ಅಖ್ತರ್ ಕಳವಳ ವ್ಯಕ್ತಪಡಿಸಿದರು. ಕೆಲವು ಅಸಹಿಷ್ಣು ವ್ಯಕ್ತಿಗಳು ಹಿಂದಿನಿಂದಲೂ ಇದ್ದರು. ಆದರೆ, ಹಿಂದೂಗಳು ಒಂದು ಸಮುದಾಯವಾಗಿ, ಸಾಮಾನ್ಯವಾಗಿ ಪರೋಪಕಾರಿ ಮತ್ತು ಮುಕ್ತ ಹೃದಯದ ಅದ್ಭುತ ಗುಣವನ್ನು ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಗುಣವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಅದಲ್ಲದೆ, ಇತರರು ಪ್ರದರ್ಶನ ಮಾಡತ್ತಿರುವ ಅಸಹಿಷ್ಣುತೆಯನ್ನು ಅಳವಡಿಸಿಕೊಳ್ಳಬಾರದು. ಇದಲ್ಲದೆ, ಭಾರತೀಯರಾಗಿರುವ ಇತರ ಧರ್ಮದವರು, ಹಿಂದೂಗಳ ಜೀವನ ವಿಧಾನದಿಂದ ಕಲಿತಿದ್ದಾರೆ ಮತ್ತು ಅದನ್ನು ಯಾರೂ ಬಿಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ರಾಮ ಮತ್ತು ಸೀತೆಯ ನಾಡಿನಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ: ತನ್ನನ್ನು ನಾಸ್ತಿಕ ಎಂದು ಕರೆದುಕೊಳ್ಳುವ ಜಾವೇದ್ ಅಖ್ತರ್, ಭಗವಾನ್ ರಾಮ ಮತ್ತು ಸೀತಾ ದೇವಿಯ ನಾಡಿನಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ. ಇದಲ್ಲದೆ, ಸಮಾರಂಭದಲ್ಲಿ 'ಜೈ ಸಿಯಾ ರಾಮ್' ಘೋಷಣೆ ಕೂಗಿದ ಅವರು 'ರಾಮಾಯಣ ಭಾರತದ ಸಾಂಸ್ಕೃತಿಕ ಪರಂಪರೆ' ಎಂದು ಹೇಳಿದರು. ಬಾಲಿವುಡ್ ಕಲ್ಟ್ ಸಿನಿಮಾ 'ಶೋಲೆ'ಯ ಉದಾಹರಣೆಯನ್ನೂ ಅವರು ಈ ವೇಳೆ ಉಲ್ಲೇಖಿಸಿದರು. ಚಿತ್ರ ಇಂದು ಬಿಡುಗಡೆಯಾದರೆ, ದೇವಾಲಯದೊಳಗೆ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಅವರು ಆಡಿರುವ ಸಂಭಾಷಣೆಯ ಬಗ್ಗೆ ಭಾರಿ ವಿವಾದ ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಈ ವೇಳೆ ವೇದಿಕೆಯಲ್ಲಿ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಕೂಡ ಉಪಸ್ಥಿತರಿದ್ದರು. ಇಬ್ಬರೂ ಹಿರಿಯ ಚಿತ್ರ ಕಲಾವಿದರು ಒಂದೇ ವೇದಿಕೆ ಹಂಚಿಕೊಳ್ಳದೇ ಹಲವು ವರ್ಷಗಳೇ ಕಳೆದಿದ್ದವು. ಈ ವೇಳೆ ಜಾವೇದ್ ಅಖ್ತರ್ ಹಾಗೂ ಸಲೀಂ ಖಾನ್ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ ಎನ್ನುವುದು ಕೂಡ ಸುದ್ದಿಯಾಗಿತ್ತು. ಸಲೀಂ ಖಾನ್ ಹಾಗೂ ಜಾವೇದ್ ಜೋಡಿಯೇ ಶೋಲೆ ಚಿತ್ರಕ್ಕೆ ಚಿತ್ರಕಥೆಯನ್ನು ಬರೆದಿತ್ತು.
ಇಂದು ಮಾಡುವ ಸಿನಿಮಾಗಳನ್ನು ಇಡೀ ಕುಟುಂಬದ ಜೊತೆ ಕುಳಿತು ನೋಡೋದಕ್ಕೆ ಸಾಧ್ಯವೇ ಇಲ್ಲ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕುಸಿಯುತ್ತಿದೆ ಎನ್ನುವುದನ್ನು ನಾನು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ.
ಮುಂಬೈ ದಾಳಿಯ ಬಗ್ಗೆ ಜಾವೇದ್ ಅಖ್ತರ್ ಕಾಮೆಂಟ್ಸ್‌ಗೆ ವಾಸಿಂ ಅಕ್ರಂ ಪ್ರತಿಕ್ರಿಯೆ!
ಮೊದಲೆಲ್ಲಾ ಕೆಲವು ಮಂದಿ ಅಸಹಿಷ್ಣುಗಳಾಗಿದ್ದರು. ಆದರೆ, ಹಿಂದುಗಳು ಆ ರೀತಿಯಲ್ಲ. ವಿಶಾಲ ಹೃದಯವನ್ನು ಹೊಂದಿರುವ ಹಿಂದುಗಳು ಕೂಡ ಸಂಕುಚಿತರಾದರೆ, ಇತರ ವ್ಯಕ್ತಿಗಳಂತೆ ಆದರೆ ಕಷ್ಟವಾಗಲಿದೆ. ಇದಾಗಬಾರದು. ನಿಮ್ಮ ಮೌಲ್ಯಗಳನ್ನು ನೋಡಿಯೇ ಭಾರತೀಯರು ಕಲಿತುಕೊಂಡಿದ್ದಾರೆ. ಹಾಗೇನಾದರೂ ನಾವು ಭಾರತವನ್ನು ತೊರೆದರೇ ಇಡೀ ಏಷ್ಯಾದಲ್ಲಿ ಇಂಥ ಒಂದು ಪ್ರಜಾಪ್ರಭುತ್ವ ರಾಷ್ಟ್ರವನ್ನು ನಾವು ನೋಡಲು ಸಾಧ್ಯವೇ ಇಲ್ಲ. ಯಾರು ಬೇಕಾದರೂ ಏನು ಬೇಕಾದರೂ ಇಲ್ಲಿ ಯೋಚನೆ ಮಾಡಬಹುದು. ಇದೇ ಪ್ರಜಾಪ್ರಭುತ್ವ. ಮೂರ್ತಿ ಪೂಜೆ ಮಾಡುವವನೂ ಹಿಂದೂ, ಮಾಡದವನೂ ಕೂಡ ಹಿಂದು. ಒಂದೇ ದೇವರನ್ನು ಪೂಜಿಸುವವನೂ ಕೂಡ ಹಿಂದು. ಇನ್ನೊಬ್ಬ 32 ಕೋಟಿ ದೇವರನ್ನು ಪೂಜಿಸುತ್ತಾನೆ ಎಂದರೆ ಆತ ಕೂಡ ಹಿಂದು. ತಾನು ಯಾವುದೇ ದೇವರನ್ನು ಪೂಜೆ ಮಾಡೋದಿಲ್ಲ ಎನ್ನುವವನೂ ಕೂಡ ಹಿಂದೂ. ಇದೇ ಹಿಂದೂ ಸಂಸ್ಕೃತಿ ನಮಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನೀಡಿದೆ. ಇದರಿಂದಾಗಿಯೇ ನಾವು ಇಲ್ಲಿ ಬದುಕಿದ್ದೇವೆ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ.
ಮಹಿಳೆಗೂ ಒಂದಕ್ಕಿಂತ ಹೆಚ್ಚು ಮದುವೆಯಾಗೋ ಹಕ್ಕು ಕೊಡಿ: ಮುಸಲ್ಮಾನ ವೈಯಕ್ತಿಕ ಕಾನೂನು ವಿರುದ್ಧ ಜಾವೇದ್ ಅಖ್ತರ್ ಕಿಡಿ