ಉತ್ತರ ಪ್ರದೇಶದ ತರಕಾರಿ ಮಾರುವವನ ಖಾತೆಗೆ 172 ಕೋಟಿ ರೂ. ಜಮೆ: ಐಟಿ ಇಲಾಖೆ, ಪೊಲೀಸರಿಂದ ತನಿಖೆ
ವಿಜಯ್ ರಸ್ತೋಗಿ ಹೆಸರಿನಲ್ಲಿ 172.81 ಕೋಟಿ ರೂಪಾಯಿ ಬ್ಯಾಂಕ್ ಖಾತೆಗೆ ಜಮಾ ಆಗಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಇನ್ಸ್‌ಪೆಕ್ಟರ್ ಗಹ್ಮಾರ್ ಪವನ್ ಕುಮಾರ್ ಉಪಾಧ್ಯಾಯ ತಿಳಿಸಿದ್ದಾರೆ.
ಮುಂಬೈ (ಮಾರ್ಚ್ 8, 2023): ತರಕಾರಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗೆ ಬರೋಬ್ಬರಿ 172 ಕೋಟಿ ರೂ. ವರ್ಗಾವಣೆಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಕುರಿತಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತರಕಾರಿ ವ್ಯಾಪಾರಿಯನ್ನು (Vegetable Vendor) ಗಾಜಿಪುರ ಜಿಲ್ಲೆಯ ವಿಜಯ್ ರಸ್ತೋಗಿ ಎಂದು ಗುರುತಿಸಲಾಗಿದ್ದು, ತಮ್ಮ ಖಾತೆಯಲ್ಲಿ (Account) ಇಷ್ಟೊಂದು ಪ್ರಮಾಣದ ಹಣ (Money) ನೋಡಿ ಅವರು ಗಾಬರಿಗೊಂಡಿದ್ದಾರೆ. ಅಲ್ಲದೇ ತಮ್ಮ ಪಾನ್ (PAN) ನಂಬರ್ ಹಾಗೂ ಇತರ ಮಾಹಿತಿಯನ್ನು ಬಳಸಿಕೊಂಡು ಬೇರೆಯವರು ಖಾತೆ ತೆರೆದಿರಬಹುದು ಎಂದು ಆರೋಪಿಸಿದ್ದಾರೆ. ಇಷ್ಟೊಂದು ಪ್ರಮಾಣದ ಹಣ ವಿಜಯ್ ರಸ್ತೋಗಿ ಅವರ ಖಾತೆಗೆ ಹೇಗೆ ಜಮೆಯಾಯಿತು ಎಂಬುದರ ಕುರಿತಾಗಿ ಆದಾಯ ತೆರಿಗೆ ಇಲಾಖೆ (Income Tax Department) ಡಿಜಿಟಲ್ ಹಣ ವರ್ಗಾವಣೆ ಏಜೆನ್ಸಿಯನ್ನು (Digital Money Transfer Agency) ಪ್ರಶ್ನಿಸಿದ್ದು, ಅವರು ಸಹ ಈ ಖಾತೆ ವಿಜಯ್ ರಸ್ತೋಗಿಯದ್ದಲ್ಲ ಎಂದು ಹೇಳಿದ್ದಾರೆ. ಡಿಜಿಟಲ್ ವರ್ಗಾವಣೆಯಿಂದಾಗಿ ಈ ಪ್ರಮಾಣದ ಹಣ ವರ್ಗಾವಣೆಯಾಗಿರುವ ಸಾಧ್ಯತೆ ಇದೆ. ಹಾಗಾಗಿ ಈ ಕುರಿತು ಸೈಬರ್ ಸೆಲ್‌ನಿಂದಲೂ (Cyber Cell) ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು (Police Officer) ತಿಳಿಸಿದ್ದಾರೆ.
ಇದನ್ನು ಓದಿ: ಬಿಬಿಸಿ ತೆರಿಗೆ ವಂಚನೆ ಪತ್ತೆ; ಲೆಕ್ಕಪತ್ರಗಳಲ್ಲಿ ಭಾರಿ ಲೋಪದೋಷ : ಐಟಿ ಇಲಾಖೆ
ಆತಂಕದಲ್ಲಿ ತರಕಾರಿ ವ್ಯಾಪಾರಿ
ತರಕಾರಿ ವ್ಯಾಪಾರಿ ವಿಜಯ್ ರಸ್ತೋಗಿ ಖಾತೆಗೆ 172 ಕೋಟಿ ರೂ. (23 ಮಿಲಿಯನ್ ಅಮೆರಿಕ ಡಾಲರ್‌ಗೂ ಅಧಿಕ) ಹಣ ವರ್ಗಾವಣೆಯಾಗಿರುವ ಬಗ್ಗೆ ಉತ್ತರ ಪ್ರದೇಶ ಪೊಲೀಸರು ಸಹ ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಬೆಳಕಿಗೆ ಬಂದಾಗಿನಿಂದ ವಿಜಯ್ ರಸ್ತೋಗಿ ಹಾಗೂ ಕುಟುಂಬ ತೀವ್ರ ಒತ್ತಡದಲ್ಲಿದೆ ಎಂದು ತಿಳಿದುಬಂದಿದೆ. ಈ ಕುಟುಂಬವನ್ನು ಆದಾಯ ತೆರಿಗೆ ಇಲಾಖೆ ಹಾಗೂ ಪೊಲೀಸರು ಆಗಾಗ್ಗೆ ಭೇಟಿ ನೀಡುತ್ತಲೇ ಇದ್ದು, ಪ್ರಶ್ನೆ ಮಾಡ್ತಿದ್ದಾರೆ ಎಂದೂ ಹೇಳಲಾಗಿದೆ.
ಒಂದು ತಿಂಗಳ ಹಿಂದೆ ಐಟಿ ಅಧಿಕಾರಿಗಳು ವಿಜಯ್ ರಸ್ತೋಗಿ ಅವರ ಹೆಸರು ಸೇರಿದಂತೆ ಅಕ್ರಮ ಹಣ ವರ್ಗಾವಣೆಯ ಪಟ್ಟಿಯನ್ನು ಸ್ವೀಕರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ನಂತರ, ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನು ಸೈಬರ್ ಕ್ರೈಂ ಸೆಲ್‌ಗೆ ವರ್ಗಾಯಿಸಲಾಗಿದೆ.
ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರ ವಿವಾದ ಬೆನ್ನಲ್ಲೇ ಬಿಬಿಸಿಯ ದೆಹಲಿ, ಮುಂಬೈ ಕಚೇರಿಗೆ ಐಟಿ ಶಾಕ್..!
ವಿಜಯ್ ರಸ್ತೋಗಿ ಹೆಸರಿನಲ್ಲಿ 172.81 ಕೋಟಿ ರೂಪಾಯಿ ಬ್ಯಾಂಕ್ ಖಾತೆಗೆ ಜಮಾ ಆಗಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಇನ್ಸ್‌ಪೆಕ್ಟರ್ ಗಹ್ಮಾರ್ ಪವನ್ ಕುಮಾರ್ ಉಪಾಧ್ಯಾಯ ತಿಳಿಸಿದ್ದಾರೆ. ಘಟನೆಯ ಸುದ್ದಿ ಬಹಿರಂಗವಾದ ನಂತರ ಸ್ಥಳೀಯ ಮಾಧ್ಯಮಗಳು ಸಹ ವಿಜಯ್ ರಸ್ತೋಗಿ ಅವರ ಮನೆಗೆ ಭೇಟಿ ನೀಡಿವೆ. 172 ಕೋಟಿ ರೂ. ಜಮಾ ಆಗಿರುವ ಬ್ಯಾಂಕ್ ಖಾತೆಯ ಬಗ್ಗೆ ತನಗೆ ತಿಳಿದಿಲ್ಲ ಎಂದು ವಿಜಯ್ ರಸ್ತೋಗಿ ಹೇಳಿದರು, ಖಾತೆಯನ್ನು ತೆರೆಯಲು ಯಾರೋ ತನ್ನ ಪ್ಯಾನ್ ಕಾರ್ಡ್ ಮತ್ತು ಇತರ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ಸಾರ್ವಜನಿಕ ಮತ್ತು ಕಾನೂನು ಜಾರಿ ಸಂಸ್ಥೆಗಳು ಈ ಘಟನೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಿವೆ. ಇನ್ನು, ವಿಜಯ್ ರಸ್ತೋಗಿ ಯಾವುದೇ ಅಪರಾಧದಲ್ಲಿ ಭಾಗಿಯಾಗಿದ್ದಾರಾ ಅಥವಾ ವಂಚನೆಯ ಬಲಿಪಶುವಾಗಿದ್ದಾರಾ ಎಂಬುದರ ಬಗ್ಗೆಯೂ ತನಿಖೆಯಿಂದ ನಿರ್ಧರಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಆನ್‌ಲೈನ್ ಗೇಮ್‌ನಲ್ಲಿ ಗೆದ್ದ ಹಣಕ್ಕೆ ಶೇ.30 ತೆರಿಗೆ: ವಿದೇಶಿ ಪ್ರವಾಸ ಇನ್ಮುಂದೆ ದುಬಾರಿ