ವೇದಾಂತ ಅಧ್ಯಕ್ಷ ಅನಿಲ್ ಅಗರ್ವಾಲ್ ಅವರು ತಮ್ಮ ಮಗ ಅಗ್ನಿವೇಶ್ (49) ಅಮೆರಿಕದಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಘೋಷಿಸಿದ್ದಾರೆ. ಇದು ತಮ್ಮ ಜೀವನದ ಅತ್ಯಂತ ಕರಾಳ ದಿನ ಎಂದು ಕರೆದಿದ್ದಾರೆ. 

ಬೆಂಗಳೂರು (ಜ.7): ದೇಶದ ಅತ್ಯಂತ ಪ್ರಮುಖ ಮೈನಿಂಗ್‌ ಕಂಪನಿ ವೇದಾಂತ ಗ್ರೂಪ್‌ನ ಅಧ್ಯಕ್ಷ ಅನಿಲ್ ಅಗರ್ವಾಲ್ ಮಂಗಳವಾರ ತಮ್ಮ ಮಗ ಅಗ್ನಿವೇಶ್ ನಿಧನವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಇದೇ ವೇಳೆ ಈ ದಿನ ತಮ್ಮ ಜೀವನದ ಅತ್ಯಂತ ಕರಾಳ ದಿನ ಎಂದು ಕರೆದಿದ್ದಾರೆ. ಅಗ್ನಿವೇಶ್‌ ಅಗರ್ವಾಲ್, ಅನಿಲ್‌ ಅಗರ್ವಾಲ್ ಅವರ ಏಕೈಕ ಪುತ್ರ. ಇವರಿಗೆ ಪ್ರಿಯಾ ಅಗರ್ವಾಲ್ ಹೆಸರಿನ ಪುತ್ರಿಯೂ ಇದ್ದಾರೆ. 49 ವರ್ಷದ ಅಗ್ನಿವೇಶ್‌ ಅಗರ್ವಾಲ್‌, ಇತ್ತೀಚೆಗೆ ಸ್ಕೀಯಿಂಗ್‌ ಅಪಘಾತಕ್ಕೆ ಒಳಗಾದ ನಂತರ ನ್ಯೂಯಾರ್ಕ್‌ನ ಮೌಂಟ್‌ ಸಿನಾಯ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ಮಂಗಳವಾರ ದಿಢೀರ್‌ ಕಾರ್ಡಿಯಾಕ್‌ ಅರೆಸ್ಟ್‌ ಆಗಿದ್ದರಿಂದ ಸಾವು ಕಂಡಿದ್ದಾರೆ.

"ತನ್ನ ಮಗುವಿಗೆ ವಿದಾಯ ಹೇಳಬೇಕಾದ ಪೋಷಕರ ನೋವನ್ನು ಯಾವುದೇ ಪದಗಳಿಂದ ವಿವರಿಸಲು ಸಾಧ್ಯವಿಲ್ಲ" ಎಂದು ಅಗರ್ವಾಲ್ ಬರೆದಿದ್ದಾರೆ. "ಒಬ್ಬ ಮಗ ತನ್ನ ತಂದೆಯ ಮುಂದೆ ಬಿಟ್ಟು ಸಾವು ಕಾಣಬಾರದು. ಈ ನಷ್ಟವು ನಾವು ಇನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ರೀತಿಯಲ್ಲಿ ನಮ್ಮನ್ನು ಛಿದ್ರಗೊಳಿಸಿದೆ' ಎಂದು ನೋವಿನಲ್ಲಿ ಬರೆದುಕೊಂಡಿದ್ದಾರೆ.

1976 ಜೂನ್ 3 ರಂದು ಪಾಟ್ನಾದಲ್ಲಿ ಜನಿಸಿದ ಅಗ್ನಿವೇಶ್ ಅಗರ್ವಾಲ್‌ ಮಧ್ಯಮ ವರ್ಗದ ಬಿಹಾರಿ ಕುಟುಂಬದಲ್ಲಿ ಬೆಳೆದರು, ಅಜ್ಮೀರ್‌ನ ಮೇಯೊ ಕಾಲೇಜಿನಲ್ಲಿ ಅಧ್ಯಯನ ಮಾಡಿದ ಬಳಿಕ ಫುಜೈರಾ ಗೋಲ್ಡ್ ಅನ್ನು ಸ್ಥಾಪಿಸಿದರು ಮತ್ತು ನಂತರ ಹಿಂದೂಸ್ತಾನ್ ಜಿಂಕ್‌ನ ಅಧ್ಯಕ್ಷರಾದರು. ಅವರ ಸಾಧನೆಗಳ ಹೊರತಾಗಿಯೂ ತಮ್ಮ ಮಗ "ಸರಳವಾಗಿ, ಆಳವಾದ ಮಾನವೀಯ ಗುಣಗಳನ್ನು ಹೊಂದಿದ್ದ ವ್ಯಕ್ತಿಯಾಗಿ ಬೆಳೆದಿದ್ದ' ಎಂದು ಹೇಳಿದ್ದಾರೆ.

ಇನ್ನು ಮುಂದೆ ಇನ್ನಷ್ಟು ಸರಳವಾಗಿ ಬದುಕುತ್ತೇನೆ

"ನನಗೆ ಅವನು ಕೇವಲ ನನ್ನ ಮಗನಲ್ಲ. ಅವನು ನನ್ನ ಸ್ನೇಹಿತ. ನನ್ನ ಹೆಮ್ಮೆ. ನನ್ನ ಪ್ರಪಂಚ" ಎಂದು ಅಗರ್ವಾಲ್ ಬರೆದಿದ್ದಾರೆ. ಅಗ್ನಿವೇಶ್ ಸ್ವಾವಲಂಬಿ ಭಾರತದಲ್ಲಿ ನಂಬಿಕೆ ಇಟ್ಟಿದ್ದರು ಮತ್ತು ಸಮಾಜಕ್ಕೆ ಮರಳಿ ನೀಡುವ ಕನಸನ್ನು ಹಂಚಿಕೊಂಡಿದ್ದರು ಎಂದು ಅವರು ಹೇಳಿದರು. "ನಾವು ಗಳಿಸುವುದರಲ್ಲಿ 75% ಕ್ಕಿಂತ ಹೆಚ್ಚು ಹಣವನ್ನು ಮರಳಿ ನೀಡುವುದಾಗಿ ನಾನು ಅಗ್ನಿಗೆ ಭರವಸೆ ನೀಡಿದ್ದೆ. ಇಂದು, ನಾನು ಆ ಭರವಸೆಯನ್ನು ಅಪ್‌ಡೇಟ್‌ ಮಾಡುತ್ತೇನೆ ಮತ್ತು ಇನ್ನೂ ಸರಳ ಜೀವನವನ್ನು ನಡೆಸಲು ಸಂಕಲ್ಪ ಮಾಡುತ್ತೇನೆ," ಎಂದು ಅವರು ಹೇಳಿದರು.

"ಬೇಟಾ, ನೀನು ನಮ್ಮ ಹೃದಯಗಳಲ್ಲಿ, ನಮ್ಮ ಕೆಲಸದಲ್ಲಿ ಮತ್ತು ನೀವು ಸ್ಪರ್ಶಿಸಿದ ಪ್ರತಿಯೊಂದು ಜೀವನದಲ್ಲಿಯೂ ಬದುಕುತ್ತೀರಿ. ನಾನು ನಿನ್ನ ಬೆಳಕನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ" ಎಂದು ಅಗರ್ವಾಲ್ ಭಾವುಕವಾಗಿ ಬರೆದುಕೊಂಡಿದ್ದಾರೆ.

Scroll to load tweet…