ಪನ್ನಾ ಹುಲಿ ಸಂರಕ್ಷಿತಾರಣ್ಯದ 100 ವರ್ಷದ ಹಿರಿಯ ಆನೆ ವತ್ಸಲಾ ಇಹಲೋಕ ತ್ಯಜಿಸಿದೆ. ತನ್ನ ಕಿರಿಯರಿಗೆ ಪ್ರೀತಿಯ ಅಜ್ಜಿಯಾಗಿದ್ದ ವತ್ಸಲಾ ಹಲವು ಆನೆ ಮರಿಗಳನ್ನು ಪೋಷಿಸಿದ್ದಳು.
ಪನ್ನಾ: ಒಂದು ಶತಮಾನಕ್ಕೂ ಅಧಿಕ ಕಾಲ ವೈಭವೋಪೇತವಾಗಿ ಬದುಕಿದ ಏಷ್ಯಾದ ಅತ್ಯಂತ ಹಿರಿಯ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಆನೆ ವತ್ಸಲಾ ಕಡೆಗೂ ತನ್ನ ಬದುಕಿನ ಯಾತ್ರೆ ಮುಗಿಸಿ ಇಹಲೋಕಕ್ಕೆ ಜಾರಿದೆ. 100ಕ್ಕೂ ಅಧಿಕ ವರ್ಷದ ಈ ಆನೆ ವತ್ಸಲಾ ಮಧ್ಯ ಪ್ರದೇಶದ ಪನ್ನಾ ಹುಲಿ ಸಂರಕ್ಷಿತಾರಣ್ಯದ ಹಿನೌಟಾ ಪ್ರದೇಶದಲ್ಲಿ ತನ್ನ ಕೊನೆಯುಸಿರೆಳೆದಿದೆ.
ಪನ್ನಾ ಅರಣ್ಯ ಪ್ರದೇಶದಲ್ಲಿ ತನ್ನ ಕಿರಿಯರಿಗೆ ಪ್ರೀತಿಯ ಅಜ್ಜಿ ಎನಿಸಿಕೊಂಡಿದ್ದ ವತ್ಸಲಾ ಹಲವು ಆನೆಗಳ ಮರಿಗಳನ್ನು ತನ್ನ ಮಕ್ಕಳಂತೆ ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಳು. ಪನ್ನಾ ಹುಲಿ ಸಂರಕ್ಷಿತಾರಣ್ಯದ ಹಿನೌಟಾ ಪ್ರದೇಶದ ಖೈರಯ್ಯ ನಾಲಾ ಬಳಿ ನಿನ್ನೆ ಮಧ್ಯಾಹ್ನದ ಹೊತ್ತಿಗೆ ವತ್ಸಲಾ ಸಾವನ್ನಪ್ಪಿದೆ ಎಂದು ಅಲ್ಲಿನ ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ವತ್ಸಲಾಳ ಮುಂಭಾಗದ ಕಾಲುಬೆರಳಿನ ಉಗುರು ಮುರಿದಿತ್ತು. ಹೀಗಾಗಿ ಅದು ವಿಶ್ರಾಂತಿಯಲ್ಲಿತ್ತು. ಅದಕ್ಕೆ ಹೆಚ್ಚು ದೂರ ಚಲಿಸುವುದಕ್ಕೆ ಆಗುತ್ತಿರಲಿಲ್ಲ. ಆಕೆಗೆ ಅನಾರೋಗ್ಯವಿದ್ದ ಕಾರಣ ವಿಶೇಷ ಗಂಜಿ ಊಟ ನೀಡಲಾಗುತ್ತಿತ್ತು. ಪಶುವೈದ್ಯರಿಂದ ವತ್ಸಲಾಗೆ ಆರೋಗ್ಯ ತಪಾಸಣೆ ಸೇರಿದಂತೆ ದೈನಂದಿನ ಆರೈಕೆಯ ಹೊರತಾಗಿಯೂ, ವಯಸ್ಸಾಗಿದ್ದರಿಂದ ವತ್ಸಲಾ ಆನೆಯ ಆರೋಗ್ಯ ಸ್ಥಿತಿ ದಿನೇ ದಿನೇ ಹದಗೆಡುತ್ತಾ ಬಂದಿತ್ತು. ಇದರ ನಡುವೆ ಅದು ದೃಷ್ಟಿಯನ್ನು ಕೂಡ ಕಳೆದುಕೊಂಡಿತ್ತು. ಹೀಗಾಗಿ ಅದಕ್ಕೆ ಇತರ ಆನೆಗಳ ಜೊತೆ ತಿರುಗಾಡುವುದಕ್ಕೂ ಆಗುತ್ತಿರಲಿಲ್ಲ. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ವತ್ಸಲಾಗೆ ಪ್ರತಿದಿನ ನಾಲಾದಲ್ಲಿ ಸ್ನಾನ ಮಾಡಲು ಸಹಾಯ ಮಾಡುತ್ತಿದ್ದರು ಮತ್ತು ಅವಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದರು.
ಆನೆ ವತ್ಸಲಾ ಸಾವು ಆಕೆಯ ಲಕ್ಷಾಂತರ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಈ ಬಗ್ಗೆ ಎಕ್ಸ್‌ನಲ್ಲಿ ಟ್ವಿಟ್ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಾರೆ. ವತ್ಸಲಾ ನಮ್ಮ ಕಾಡುಗಳ ಮೌನ ರಕ್ಷಕಿ, ಆಕೆ ಹಲವು ಪೀಳಿಗೆಗಳಿಗೆ ಒಡನಾಡಿ ಮತ್ತು ಮಧ್ಯಪ್ರದೇಶದ ನೈಸರ್ಗಿಕ ಪರಂಪರೆಯ ಜೀವಂತ ಲಾಂಛನ ಎಂದು ಸಿಂ ಮೋಹನ್ ಯಾದವ್ ಬಣ್ಣಿಸಿದ್ದಾರೆ. ಹಾಗೆಯೇ ಪನ್ನಾದ ಅರಣ್ಯ ಅಧಿಕಾರಿಗಳು ಮತ್ತು ಮೀಸಲು ಸಿಬ್ಬಂದಿ ಕೂಡ ವತ್ಸಲಾಳ ಸಾವಿಗೆ ಶೋಕ ವ್ಯಕ್ತಪಡಿಸಿದ್ದು, ಆಕೆಯ ಅಂತ್ಯಕ್ರಿಯೆಯನ್ನು ಗೌರವದಿಂದ ನೆರವೇರಿಸಿದ್ದಾರೆ.
ಕೇರಳದ ನರ್ಮದಾಪುರದಲ್ಲಿ ಜನಿಸಿದ ವತ್ಸಲಾಳನ್ನು 1970ರ ಸಮಯದಲ್ಲಿ ಮಧ್ಯಪ್ರದೇಶದ ಬೋರಿ ರಕ್ಷಿತಾರಣ್ಯಕ್ಕೆ ಕರೆತರಲಾಗಿತ್ತು. ಮರ ಉರುಳಿಸುವ ಕೆಲಸಗಳಿಗಾಗಿ ಆಕೆಯನ್ನು ಬಳಸಲಾಗುತ್ತಿತ್ತು. ದಶಕಗಳ ಕಾಲದ ಆಕೆಯ ಕಠಿಣ ಕೆಲಸ ಆಕೆಯ ದೇಹವನ್ನು ಬಹಳ ಗಟ್ಟಿಯಾಗಿಸಿತ್ತು. ಆದರೆ ಆಕೆಯ ಶಕ್ತಿ ಮಾತ್ರ ಮಾತ್ರ ಕಳೆಗುಂದಲಿಲ್ಲ. 1992ರಲ್ಲಿ ಆಕೆಯನ್ನು ಪನ್ನಾಗೆ ಕರೆತರಲಾಯ್ತು. 2003ರಲ್ಲಿ ಆಕೆ ನಿವೃತ್ತಿ ಹೊಂದುವವರೆಗೂ ಆಕೆ ಪ್ರವಾಸಿಗರಿಗೆ ಸಫಾರಿ ನೀಡುತ್ತಿದ್ದಳು. ಪ್ರವಾಸಿಗರ ನೆಚ್ಚಿನ ಆನೆ ಎನಿಸಿದ್ದಳು.
ಆದರೆ ತನ್ನ ನಿವೃತ್ತಿಯ ನಂತರ ಆಕೆ ಅಕ್ಷರಶಃ ತನ್ನ ಕುಟುಂಬದ ಹಿರಿಯಜ್ಜಿಯಂತೆ, ಚಿಕಿತ್ಸೆ ಮಾಡುವ ನರ್ಸ್ ಅಂತೆ ಆಕೆ ಕೆಲಸ ಮಾಡುತ್ತಿದ್ದಳು. 2001ರಲ್ಲಿ ಈಕೆ ತನ್ನ ಕ್ಯಾಂಪ್‌ಗೆ ಬಂದ ಪುಟ್ಟ ಮರಿ ಮೋಹನಕಾಳಿಯನ್ನು ಸಾಕುವುದಕ್ಕೆ ಶುರು ಮಾಡಿದಳು. ಆಕೆಯೊಂದಿಗೆ ವತ್ಸಲಾ ಆಟವಾಡುತ್ತಿದ್ದಳು. ಆಕೆಗೆ ಮಾರ್ಗದರ್ಶನ ನೀಡುತ್ತಿದ್ದಳು, ಮುಂದೆ ಇದೇ ಸಂಸ್ಕೃತಿಯನ್ನು ಅಲ್ಲಿ ಹುಟ್ಟುವ ಪ್ರತಿ ಮರಿಗೂ ಆಕೆ ಕಲಿಸುತ್ತಿದ್ದಳು.
ಆಕೆ ಕನಿಷ್ಟ 32 ಮರಿಗಳನ್ನು ಸಾಕುವುದಕ್ಕೆ ಸಹಾಯ ಮಾಡಿದ್ದಾಳೆ ಎಂದು ಹೇಳುತ್ತಾರೆ ಪನ್ನಾದ ಅರಣ್ಯ ರಕ್ಷಕರು. ತನ್ನ ಹಿಂಡಿನ ಪ್ರತಿ ಆನೆ ಮರಿ ಹಾಕುವ ಸಮಯದಲ್ಲಿ ಆಕೆ ಅಲ್ಲಿ ಹಾಜರಿರುತ್ತಿದ್ದಳು. ಅಲ್ಲದೇ ಮರಿಗಳನ್ನು ಸಮೀಪದಲ್ಲಿದ್ದುಕೊಂಡು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಳು ಎಂದು ಅವರು ಹೇಳುತ್ತಾರೆ. ಆದರೆ ಈಗ ವತ್ಸಲಾ ಇಹದ ಯಾತ್ರೆ ಮುಗಿಸಿದ್ದು, ಚಿರನಿದ್ರೆಗೆ ಜಾರಿದ್ದಾಳೆ
